Latest

ಶಿಕ್ಷಣ ಕ್ಷೇತ್ರಕ್ಕೆ ವಾಸ್ತವದ ಚಿಕಿತ್ಸೆ; ಅಮೂಲಾಗ್ರ ಬದಲಾವಣೆಯ ನಿರೀಕ್ಷೆಯಲ್ಲಿ

ಪ್ರಗತಿವಾಹಿನಿ ವಿಶೇಷ:

ಮಾನವನ ಜೀವನದಲ್ಲಿ ಶಿಕ್ಷಣದ ಪಾತ್ರ ಅತೀ ಮುಖ್ಯವಾದುದು. ಅದಿಲ್ಲದೇ ಜೀವನದಲ್ಲಿ ಹಲವಾರು ಸಂದರ್ಭಗಳನ್ನು ಎದುರಿಸುವುದು ಕಷ್ಟಕರವಾಗುತ್ತದೆ. ನಮ್ಮ ಸುತ್ತ ಮುತ್ತಲು ಏನು ನಡೆಯುತ್ತಿದೆ ? ಹೇಗೆ ಸಂದರ್ಭವನ್ನು ಅರ್ಥೈಸಿಕೊಳ್ಳ ಬೇಕು ಮತ್ತು ನಿಭಾಯಿಸಬೇಕು?ಎಂಬುದು ತೋಚುವುದಿಲ್ಲ. “Knowledge is power” ಎಂಬ ಮಾತು ಅಕ್ಷರಶಃ ಸತ್ಯ. ಜ್ಞಾನ /ತಿಳಿವಳಿಕೆಯ ಕೊರತೆಯಿದ್ದಲ್ಲಿ, ಎಲ್ಲೋ ಒಂದೆಡೆ ಸೋತಂತೆ ಅನಿಸುತ್ತದೆ. ಇದು ಕಲ್ಪನೆಯಲ್ಲ. ಕೆಲವು ವಿಷಯಗಳಲ್ಲಿ ಮಾಹಿತಿ ಕೊರತೆ ಉಂಟಾದಾಗ, ತಳಮಳ, ತಲ್ಲಣಗಳ ಮಡುವಲ್ಲಿ ಬಿದ್ದು ನರಳಿದ ಅನುಭವ, ಓದಿಕೊಂಡ ನಿಮಗೂ ಆಗಿಲ್ಲವೆಂದಲ್ಲ. ಅಂದ ಮೇಲೆ ಇತ್ತ ಬುದ್ದಿವಂತರೂ ಅಲ್ಲದ, ಅತ್ತ ವಿದ್ಯಾವಂತರಲ್ಲದ ಜನರ ಸ್ಥಿತಿ ಹೇಗಾಗಬೇಡ ?

ಯಾಕೆ ಇಷ್ಟೆಲ್ಲ ಹೇಳಬೇಕಾಯಿತೆಂದರೆ, ಅಜ್ಞಾನ ಬಹಳಷ್ಟು ವ್ಯಕ್ತಿಗಳ ಜೀವನದಲ್ಲಿ ಹಿಂಬೀಳುವಿಕೆಗೆ ಕಾರಣವಾಗುತ್ತದೆ. ಹಾಗೆಂದ ಮಾತ್ರಕ್ಕೆ ಏನೂ ಓದಲು ಬಾರದವರು ಜೀವನದಲ್ಲಿ ಯಶಸ್ಸು ಸಾಧಿಸಿಲ್ಲವೇ ? ಎಂದು ಕೇಳಬಹುದು. ಅಲ್ಲಿ ಅವನ ಬುದ್ದಿವಂತಿಕೆ ಕೆಲಸ ಮಾಡಿದೆ. ಮತ್ತೂ ಬೇರೆಯವರ ಮೇಲೆ ಓದಲು, ಬರೆಯಲು, ತಿಳಿದುಕೊಳ್ಳಲು ಅವಲಂಬನೆಯಗಲೇ ಬೇಕಲ್ಲ! ಅಲ್ಲವೇ ?

ಈಗ ಹೇಳ ಹೊರಟ ವಿಚಾರ ಶಿಕ್ಷಣ ಕ್ಷೇತ್ರ ಎಷ್ಟು ಜಾಳು ಜಾಳಾಗಿದೆ ಎಂದರೆ ನೀವು ನಂಬಲಿಕ್ಕಿಲ್ಲ. ಇಂದು ಮಕ್ಕಳಲ್ಲಿ ಜ್ಞಾನದ ಕೊರತೆ ತೀವ್ರವಾಗಿ ಕಾಡುತ್ತಿದೆ. ಇಂದಿನ ಶಿಕ್ಷಣ ಪದ್ದತಿ ಅಂಕಗಳಾಧಾರಿತವಾಗಿದೆ. ಕಲಿಕೆಯ ಗುಣಮಟ್ಟ ಮತ್ತು ಉದ್ದೇಶಗಳು ಹೊತ್ತಿಗೆಯಲ್ಲೇ ಉಳಿದುಕೊಂಡಿವೆ. ಮೌಖಿಕ ಮತ್ತು ಬರೆಹದಲ್ಲಿ ಮಕ್ಕಳು ಸಮತೋಲನೆ ಕಾಯ್ದುಕೊಳ್ಳಲಾಗುತ್ತಿಲ್ಲ. ಇದನ್ನು ಹೇಳಲು ದುಃಖವಾಗುತ್ತದೆ.

ಶ್ರಮ ರಹಿತ ದಾರಿಯ ಅನ್ವೇಷಣೆ :

ಮಕ್ಕಳಿಗೆ ಸುಲಭ ಮಾದರಿಯನ್ನೊಂದು ರೂಪಿಸಿದ್ದಾರೆ. ಅನುತ್ತೀರ್ಣವಾಗುವ ವಿದ್ಯಾರ್ಥಿಗಳನ್ನು ತಿದ್ದಲಾಗದೇ, ಸಹಜವಾಗಿ ನೂರಕ್ಕೆ ಕಡಿಮೆ ಎಂದರೂ 50 ಅಂಕಗಳು ಬರುವಂತಹ ಪದ್ದತಿಯನ್ನು ಅಳವಡಿಸಿರುವುದು ಖೇದಕರ ಸಂಗತಿಯೇ ? ಅದರಲ್ಲಿ ಮೌಖಿಕ ಮತ್ತು ಬರೆವಣಿಗೆ.
ಪ್ರಶ್ನೆ ಪತ್ರಿಕೆ ಸಿದ್ದಪಡಿಸುವಾಗಲೇ ಸರಳೀಕೃತ ಪ್ರಶ್ನೆ ಪತ್ರಿಕೆಗೆ ಸೂಚನೆ ಕೊಡಲಾಗುತ್ತದೆ. ಇಲ್ಲವಾದಲ್ಲಿ, ಕಡಿಮೆ ಸಾಧನೆ ಕಂಡು ಬರುತ್ತದೆಂಬ ಭಯ ! ಅನುತ್ತೀರ್ಣವಾದರೆ ಮತ್ತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಲ್ಲ ಎಂಬುದು ತಲೆನೋವು ! ಕೇವಲ ಅಂಕಗಳಿಗೆ ಸೀಮಿತವಾಗಿದೆ ಇಂದಿನ ಶಿಕ್ಷಣ.

ಪ್ರೌಢಶಾಲೆಗಳಲ್ಲಿ F A 1. 2. 3. 4 ಇದನ್ನು ಕಂಪ್ಯೂಟರ್ ಗಳ ಸಹಾಯದಿಂದ ಚಿತ್ರಗಳನ್ನು ಮತ್ತುಮಾಹಿತಿಯನ್ನು ಯಥಾವತ್ತಾಗಿ ಬರೆಸುವುದು. S A 1 2 3 4 ಎಂದು ಸರಳ ಪ್ರಶ್ನೆ ಪತ್ರಿಕೆ ಮಾಡಿ, ಹೆಚ್ಚು ಅಂಕ ತೋರಿಸುವುದು. ಪಾಲಕರು ಖುಷ್ ಆದರೆ ಮುಗಿಯಿತು. ಇದೇ ಗುಣ ಮಟ್ಟವೇ ? ಹಾಗೆಂದು ಎಲ್ಲಾ ಶಾಲೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತಿಲ್ಲ. ಪ್ರಾಮಾಣಿಕರಿಗೆ ಕೃತಜ್ಞತೆಗಳು. ಹಣ ಮಾಡಲೆಂದೇ ಎದ್ದ ನಾಯಿಕೊಡೆಗಳಂತಾದ ಅನುದಾನ ರಹಿತ ಎಷ್ಟೋ ಶಾಲೆಗಳು, ಎಷ್ಟೋ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಇದೇ ದಾರಿಯಲ್ಲಿವೆ.
ಯಾರನ್ನೇ ಕೇಳಿ ನೋಡಿ ಶೇ 80 ರಿಂದ 90 ರ ವರೆಗೆ ಅಂಕ ಪಡೆದವರು ಸಿಗುತ್ತಾರೆ. ಮಗ್ಗಿ, ಸಂಧಿ, ಸಮಾಸ, ಸರಳ ಲೆಕ್ಕಗಳು, ಆಂಗ್ಲ ವ್ಯಾಕರಣ, ಪಾಠದೊಳಗಿನ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಬಿಟ್ಟರೆ ‘ಥಂಡಾ’ ಹೊಡೆಯುವ ವಿದ್ಯಾರ್ಥಿಗಳು, ಹೇಗೆ ಇಷ್ಟು ಅಂಕಗಳನ್ನು ಪಡೆದರು ಮತ್ತು ಪಡೆಯುತ್ತಾರೆ ?

ಶಿಕ್ಷಣದಲ್ಲಿ ನಾವು ಸಾಧಿಸಿದ್ದೇವೆ ಎಂದು ತೋರಿಸಿ ಕೊಡುವ ಸಲುವಾಗಿ, ಇಡೀ ಶಿಕ್ಷಣ ರಂಗವನ್ನು ಕಳೆದ ಎರೆಡು ದಶಕಗಳಿಂದ ಹಾಳು ಮಾಡಿದ ಸರ್ಕಾರಗಳಿಗೆ ಪಶ್ಚಾತ್ತಾಪವಿಲ್ಲ. ಸಿ ಬಿ ಎಸ್ ಇ ಮಾದರಿಯನ್ನು ಅನುಕರಣೆ ಮಾಡಲೂ ಸಮರ್ಥವಾಗಿಲ್ಲ. ಓದುವುದು ಸಮಾಧಾನಕರವಾದರೆ, ಬರೆವಣಿಗೆ ಕಲೆಯು ಕುಂಠಿತವಾಗಿದೆ. ಕಾರಣ ಕಂಠಪಾಠ ಮಾಡಿದ ಉತ್ತರಗಳು. ಸ್ವಂತ ಬರೆದರೆ ಎಷ್ಟೋ ಶಾಲೆಗಳಲ್ಲಿ ಶಿಕ್ಷಕರು ಸಹಿಸುವುದಿಲ್ಲ. ತಾವು ಬರೆಸಿದಂತೆಯೇ ಬರೆಯಬೇಕೆಂಬ ಮೌಖಿಕ ಆದೇಶವಿದೆ. ವಿವರಿಸಿ,ಚರ್ಚಿಸಿ,ವಿಮರ್ಶಿಸಿ, ತರ್ಕಿಸಿ,ನಿರ್ಧರಿಸಿ,ವರ್ಣಿಸಿ,ಅಭಿಪ್ರಾಯ ತಿಳಿಸಿ ಈ ತರಹದ ಪ್ರಶ್ನಾವಳಿಗಳೆಲ್ಲ ಮಾಯವಾಗಿವೆ. ಅಲ್ಲಲ್ಲಿ ಒಂದೆರೆಡು ಉಳಿಸಿರುವುದೇ ನೆಮ್ಮದಿ.
ಆಲಿಸುವುದಂತೂ ದೂರವೇ. ಮಾತಾಡಲು ಬರದ ವಿದ್ಯಾರ್ಥಿಗಳು ಇನ್ನೂ ಚೀಟಿ ಹಿಡಿದುಕೊಂಡೇ ಭಾಷಣ ಮಾಡುತ್ತಾರೆ.

ಶಿಕ್ಷಣದ ಧೇಯೋದ್ದೇಶಗಳು ಕಾಣೆಯಾಗುತ್ತಿವೆ :

ಶಿಕ್ಷಣದ ಮುಖ್ಯ ಗುರಿ ಮಗುವನ್ನು ಬೌದ್ಧಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಶಾರೀರಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತೆಲ್ಲ ಕ್ಷೇತ್ರಗಳಲ್ಲಿಯೂ ಸಧೃಢ ವ್ಯಕ್ತಿಯನ್ನಾಗಿ ರೂಪಿಸುವುದು. ಆ ಮೂಲಕ ವ್ಯಕ್ತಿಗತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು. ಓದುವುದು, ಬರೆಯುವುದು, ಆಲಿಸುವುದು ಹಾಗೂ ಮಾತನಾಡುವುದು ಈ ಕೌಶಲ್ಯಗಳೇ ಜೀವನಕ್ಕೆ ಅವಶ್ಯಕವಾದುವುಗಳೆಂದು, ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು 19 ಮತ್ತು 20 ನೇ ಶತಮಾನದಲ್ಲಿ ಹಲವು ಪ್ರಯೋಗಗಳ ಮೂಲಕ, ಸಾಧ್ಯಾಸಾಧ್ಯತೆಗಳನ್ನು ತೋರಿಸಿ ಕೊಟ್ಟಿರುವುದಿದೆ. ಆದರೆ ಆ ಧೇಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಎಡವಿದೆ.

ಶಿಕ್ಷಕರು ಬೋಧನಾ ಪದ್ದತಿಗಳನ್ನು, ಕೌಶಲ್ಯಗಳನ್ನು, ಮಕ್ಕಳ ಮನೋವಿಜ್ಞಾನವನ್ನು ತರಬೇತಿ ಪಡೆದುಕೊಂಡ, ಕೇಂದ್ರಗಳಲ್ಲೇ ಬಿಟ್ಟು ಬಂದಿರುವವರೇ ಹೆಚ್ಚು. ಕಾರಣ, ಪದ್ದತಿಗಳ, ಕೌಶಲಗಳ ಘಟಕಾಂಶಗಳನ್ನು ಕೇಳಿದರೆಲ್ಲ ಶೂನ್ಯ.ಗೊತ್ತಿಲ್ಲ!

ಅಧಿಕಾರಿ ವರ್ಗದ ‘ಮೇಲ್ವಿಚಾರಣೆ’ ಎಂಬುದು, ಹೆದರಿಸುವ, ಬೆದರಿಸುವ,ಹಣ ಸುಲಿಗೆ ಮಾಡುವ ದಂಧೆಯಲ್ಲಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಮಾನ್ಯತೆ ನವೀಕರಣ ಮಾಡಿಸಿಕೊಳ್ಳುವ ‘ಬಿ’ ಮತ್ತು ‘ಸಿ’ ವರ್ಗದ ಕೆಲವು ಶಾಲೆಗಳ ಆಡಳಿತ ಮಂಡಳಿಗಳೇ ಸಾಕ್ಷಿ. ಬೆರಳು ತೋರಿಸುತ್ತಿಲ್ಲ. ಸತ್ಯದ ಅನಾವರಣವಿದು. ಮತ್ತು ಗೊತ್ತಿದ್ದದ್ದೇ.

ಪಾಲುದಾರಿಕೆಯ ಕೊರತೆ :

ಇಲ್ಲಿ ಶಿಕ್ಷಕರ ಪಾತ್ರ ಅಷ್ಟಕ್ಕಷ್ಟೇ ! ಅವರ ಅಲಕ್ಷ್ಯ, ಉದಾಸೀನತೆ ಎಂದು ಸಂಪೂರ್ಣ ಹೊಣೆಗಾರರನ್ನಾಗಿಸುವುದು ತಪ್ಪಾಗುತ್ತದೆ. ಇದರಲ್ಲಿ ಪಾಲಕರ ಪಾತ್ರವೆಷ್ಟು ? ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಪಾತ್ರವೆಷ್ಟು ? ಸಮಾಜದ ಜವಾಬ್ದಾರಿಯುತ ಹಿರಿಯ ಸಮೂಹದ ಪಾಲೆಷ್ಟು ? ಆಡಳಿತ ವರ್ಗದ ಉತ್ತರೋಪಾಯಗಳೆನು ? ಇವುಗಳನ್ನು ಕೆದಕಿ ಬಿಟ್ಟರೆ, ಸಂಪೂರ್ಣ ಗೊಂದಲಮಯ. ಉತ್ತರ ಸಿಗದೇ ಆರೋಪ ಪ್ರತ್ಯಾರೋಪಗಳಷ್ಟೇ ! ಮಕ್ಕಳ ಕಲಿಕೆಯ ಪರಿಣಾಮದ ಬಗ್ಗೆ ಯೋಚಿಸುವವರಾರು ?

ಅಸಮರ್ಪಕ, ಅಸಂಬದ್ದ ತೀರ್ಮಾನಗಳು, ವಿರೋಧ ವ್ಯಕ್ತವಾಗುತ್ತಿದ್ದಂತೆ ರಾತ್ರೋರಾತ್ರಿ ತಾನೇ ಹೊರಡಿಸಿದ ಆದೇಶವನ್ನು ಹಿಂಪಡೆಯುವುದೆಲ್ಲ, ಅನುಭವ, ಪ್ರಾವೀಣ್ಯತೆಯ ಕೊರತೆಯನ್ನು ಎತ್ತಿ ಹಿಡಿಯುತ್ತದೆ. ಇದಕ್ಕೆ ಸಾಮಾಜಿಕ ಕಳಕಳಿಯ, ಅನುಭವಿ ಶಿಕ್ಷಣ ತಜ್ಞರ ಪಾಲ್ಗೊಳ್ಳುವಿಕೆ ಇಲ್ಲದಿರುವುದೂ ಕಾರಣ. ಜಾತೀವಾದಿ, ಎಡ ಬಲ ಪಂಥೀಯ ವಿಚಾರಗಳ ಪ್ರಶ್ನೆಯೇ ಇಲ್ಲ. ಇದೇನಿದ್ದರೂ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಅಷ್ಟೇ !

ಶಿಕ್ಷಣ ರಂಗಕ್ಕೆ ಮೊಬೈಲ್ , ಕೊರೋನಾ ಹೊಡೆತ :

ಇತ್ತೀಚೆಗೆ ಜಾರಿಗೊಳಿಸಲಾದ ಮಕ್ಕಳ ಮೂಲಭೂತ ಹಕ್ಕುಗಳು, 2012 ರಲ್ಲಿ ಜಗತ್ತಿನಾದ್ಯಂತ ಎಲ್ಲರ ಕೈಗಳಿಗೆ ಬಂದಪ್ಪಳಿಸಿದ ಎಂಡ್ರಾಯ್ಡ್ ಮೊಬೈಲ್ ಗಳಿಂದ, 2019 ರ ಅಂತ್ಯದಿಂದ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿದ ಕೋವಿಡ್ – 19 ದಿಂದಾಗಿ ದಿಕ್ಕೇ ತಪ್ಪಿ ಹೋಗಿದೆ. ಮಕ್ಕಳನ್ನು ಹೆದರಿಸುವ, ಬೆದರಿಸುವ, ದಂಡಿಸುವ ಯಾವುದೇ ಕ್ರಮಗಳನ್ನು ಕೈಗೆತ್ತಿಕೊಂಡಲ್ಲಿ ,ಬಲಿಪಶುವೇ ! ಅಮಾನತ್ತು, ಸೆರೆವಾಸ, ಎತ್ತಂಗಡಿ ……( ಹಾಗೆಂದು ಕ್ರಮ ಜರುಗಿಸಲು ಅವಕಾಶ ಮಾಡಿಕೊಡಬೇಕು ಎಂದರ್ಥವಲ್ಲ) ಯಾರನ್ನೂ ದೂರಬೇಕು? ಯಾಕಾಗಿ ದೂರಬೇಕು? ಬರುವುದಾದರೂ ಏನು? ಎಂಬುದರ ಅಡ ಕತ್ತರಿಯಲ್ಲಿ ಶಿಕ್ಷಣ ವ್ಯವಸ್ಥೆ ಸಿಕ್ಕಿ ಹಾಕಿಕೊಂಡು, ಜಿಗುಪ್ಸೆ ಬಂದಂತಾಗಿದೆ.

ಚಿಂತನ ಮಂಥನ ರೂಪುರೇಷೆ ಅವಶ್ಯಕ :

ಇದನ್ನು ಪುನಶ್ಚೇತನಗೊಳಿಸಲು, ಪ್ರಜ್ಞಾವಂತರ ಪಾಲುದಾರಿಕೆ ಅತ್ಯವಶ್ಯಕವಾಗಿದೆ. ಈ ವಿಷಯದಲ್ಲಿ ಯಾವುದೇ ರಾಜಕೀಯ, ಅಹಮಿಕೆ, ದೊಡ್ಡಸ್ಥಿಕೆ ಮತ್ತೊಂದನ್ನು ಬೆರೆಸದೇ ಪ್ರಾಮಾಣಿಕವಾಗಿ, ಬದಲಾವಣೆಗೆ ಶ್ರಮಿಸಬೇಕಾಗಿದೆ.

ಸರ್ಕಾರವಾಗಲೀ, ಆಡಳಿತ ವರ್ಗವಾಗಲೀ ಕಲ್ಪನೆಯಲ್ಲಿ ಮುಳುಗಿ, ಕಾರ್ಯ ನಿರ್ವಹಿಸುವುದಲ್ಲ. ವಾಸ್ತವದಲ್ಲಿ ಆಗು ಹೋಗುಗಳನ್ನು ಸರ್ವ ದಿಕ್ಕಿನಿಂದಲೂ, ಎಲ್ಲೆಡೆ ಅನ್ವಯವಾಗುವಂತೆ ಯೋಜನೆಗಳನ್ನು ರೂಪಿಸಬೇಕು. ಅಂತಕ ಚಾಣಾಕ್ಷತನವಿರುವ ವ್ಯಕ್ತಿಗಳೇ ಶಿಕ್ಷಣ ರಂಗದಲ್ಲಿರಬೇಕು. ಈ ವಿಷಯದಲ್ಲಿ ಜಡತ್ವ ತುಂಬಿರುವ ವರ್ಗಕ್ಕೆ ತರಬೇತಿ ಕೊಡಬೇಕು.

– ಲೇಖನ : ರವಿ ಕರಣಂ.

ಬೆಳಗಾವಿಯಲ್ಲಿ ಬುಧವಾರ ಬಿಜೆಪಿ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button