Latest

ಸರ್ಕಾರಿ ಕಾಲೇಜು ಮಕ್ಕಳನ್ನು ಕರೆತಂದು ಕಾರ್ಯಕ್ರಮ; ಬಿಜೆಪಿಯವರಿಗೆ ಇಂತಹ ದುರ್ಗತಿ ಬಂದಿದೆಯೇ?: ಡಿಕೆಶಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದ ಪ್ರಧಾನಿಗಳು ರಾಜ್ಯಕ್ಕೆ ಆಗಮಿಸುತ್ತಿರುವುದರ ಬಗ್ಗೆ ನಮ್ಮದು ಯಾವುದೇ ಆಕ್ಷೇಪ ಇಲ್ಲ. ಆದರೆ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸರ್ಕಾರಿ ಕಾಲೇಜು ಮಕ್ಕಳನ್ನು ಕರೆತರಬೇಕು ಎಂದು ಸುತ್ತೊಲೆ ಹೊರಡಿಸಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರಿಗೆ ಇಂತಹ ದುರ್ಗತಿ ಬಂದಿದೆಯೇ? ನಿಮ್ಮ ನಾಯಕರು, ನಿಮ್ಮ ಡಬಲ್ ಇಂಜಿನ್ ಸರ್ಕಾರ ಮೂರು ವರ್ಷದಲ್ಲಿ ಮಾಡಿರುವ ಸಾಧನೆ ತೋರಿಸಿ, ಜನರನ್ನು ಕರೆತಂದು ಕಾರ್ಯಕ್ರಮ ಮಾಡಿ. ಯಾರೂ ಬೇಡ ಎನ್ನುವುದಿಲ್ಲ. ಆದರೆ ಮಕ್ಕಳನ್ನು ಕರೆತಂದು ಕಾರ್ಯಕ್ರಮ ಮಾಡಲು ಇದೇನು ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮವೇ?
ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ 17-18 ವರ್ಷದ ಮಕ್ಕಳನ್ನು ಕರೆತಂದು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪ್ರಧಾನಮಂತ್ರಿ ಸ್ಥಾನಕ್ಕೆ ದೊಡ್ಡ ಅಪಮಾನ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಜನಸಂಕಲ್ಪ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡುವಾಗ ಕುರ್ಚಿಗಳು ಖಾಲಿ, ಖಾಲಿ ಇದ್ದವು. ಹೀಗಾಗಿ ಕುರ್ಚಿ ತುಂಬಿಸಲು ಈ ರೀತಿ ಮಾಡುತ್ತಿದ್ದಾರೆ. ಅವರ ಪಕ್ಷ ದಿವಾಳಿಯಾಗಿರುವುದಕ್ಕೆ ಇದೇ ಸಾಕ್ಷಿ. ಈ ಸುತ್ತೊಲೆ ಹೊರಡಿಸಿರುವ ಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು. ಇಡೀ ದೇಶಕ್ಕೆ ಇದು ಅಪಮಾನ. ಇದಕ್ಕೆ ಪ್ರಧಾನಮಂತ್ರಿಗಳು ಉತ್ತರ ನೀಡಬೇಕು ಎಂದರು.

ಸತೀಶ್ ಜಾರಕಿಹೊಳಿ ಅವರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯ ಅಂಶ ಪುಸ್ತಕದಲ್ಲಿ ಇದೆ ಎಂದು ಸಮರ್ಥನೆ ಮಾಡಿಕೊಂಡಿದ್ದು, ಆ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಧರ್ಮ, ಸಂಸ್ಕೃತಿ ಸೇರಿದಂತೆ ಯಾವುದಕ್ಕೂ ಧಕ್ಕೆ ಆಗಬಾರದು ಎಂದು ನಾನು, ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಅವರು ಸ್ಪಷ್ಟಪಡಿಸಿದ್ದೇವೆ. ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಆ ಹೇಳಿಕೆಯನ್ನು ಖಂಡಿಸುತ್ತೇವೆ. ಬಿಜೆಪಿಯವರು ಇದರಿಂದ ರಾಜಕೀಯ ಲಾಭ ಮಾಡಿಕೊಳ್ಳಲು ಏನು ಬೇಕಾದರೂ ಮಾಡಲಿ. ಪಕ್ಷದ ಅಧ್ಯಕ್ಷನಾಗಿ ಆ ಹೇಳಿಕೆ ತಪ್ಪು ಎಂದು ಹೇಳುತ್ತೇನೆ’ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ನೀವು ಸಿಎಂ ಆಗುವುದಿಲ್ಲ, ಬಿಜೆಪಿಗೆ ಬನ್ನಿ ಎಂದು ಸಚಿವ ಮುನಿರತ್ನ ಅವರು ಆಹ್ವಾನ ನೀಡಿರುವ ಬಗ್ಗೆ ಕೇಳಿದಾಗ, ‘ಬಹಳ ಸಂತೋಷ. ಅಲ್ಲಿಗೆ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಜನ ಇಲ್ಲ ಎಂಬುದು ಸಾಬೀತಾಗಿದೆ’ ಎಂದರು.

ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನನ್ನ ಖಾಸಗಿ ಬದುಕು, ವ್ಯವಹಾರ ಬೇರೆ ಇದೆ. ನಾನು ಎಲ್ಲಿಯೂ ಓಡಾಡಬಾರದೇ? ಬಾಗಲಕೋಟೆ ಜಿಲ್ಲೆಗೆ ಹೋಗಿದ್ದು ನಿಜ. ಯಾವ ಕ್ಷೇತ್ರಕ್ಕೆ ಹೋಗಿದ್ದೆ ಎಂಬುದು ಬೇಡ. ನಾನು ನನ್ನ ಖಾಸಗಿ ಕೆಲಸದ ಮೇಲೆ ಹೋಗಿದ್ದೆ’ ಎಂದು ಹೇಳಿದರು.

ಯುವಕರಿಗೆ ಹೆಚ್ಚಿನ ಆದ್ಯತೆ ಎಂದು ಉದಯಪುರ ಶಿಬಿರದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಹಾಕುತ್ತಿದ್ದಾರೆಯೇ ಎಂದು ಕೇಳಿದಾಗ, ‘ನೀವು ಕೂಡ ಅರ್ಜಿ ಹಾಕಿ. ನಿಮಗೂ ಪ್ರೋತ್ಸಾಹಿಸೋಣ’ ಎಂದರು.
ಕಾಂಗ್ರೆಸ್ ನಲ್ಲಿ ಅಸ್ಪಷ್ಟತೆ; ಸತೀಶ್ ಜಾರಕಿಹೊಳಿ ವಿರುದ್ಧ ಮೊದಲು ಕ್ರಮ ಕೈಗೊಳ್ಳಲಿ

https://pragati.taskdun.com/politics/cm-basavaraj-bommairayabhagasatish-jarakiholireaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button