*ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ::
60 ವರ್ಷ ಕಾಂಗ್ರೆಸ್ ನವರ ಆಡಳಿತವನ್ನು ಜನ ನೋಡಿದ್ದಾರೆ. ಯಾವ ಭಾಗ್ಯವೂ ಜನರನ್ನು ಮುಟ್ಟಲಿಲ್ಲ. ಕಾಂಗ್ರೆಸ್ ನ ದುರಾಡಳಿತ ಮತ್ತು ಅವರ ದೌರ್ಬಾಗ್ಯ ಜನರಿಗೆ ಬೇಡವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಗಾವಿ ಜಿಲ್ಲೆಯ ರಾಯಬಾಗಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಅಕ್ಕಿಗೆ ಸಿದ್ದರಾಮಯ್ಯ ಚೀಲದ ಮೇಲೆ ತಮ್ಮ ಫೋಟೊ ಹಾಕಿಸಿಕೊಂಡರು. ಅನ್ನದಲ್ಲಿ ಕನ್ನ ಹಾಕುವ ಮೂಲಕ ಅದರಲ್ಲೂ ಲೂಟಿ ಮಾಡಿದರು. ಸಣ್ಣ ನೀರಾವರಿ ಯೋಜನೆಯಲ್ಲಿ ಕಾಮಗಾರಿ ಮಾಡದೇ ಬಿಲ್ ತೆಗೆದರು. ಬೆಂಗಳೂರು, ಮಂಗಳೂರು, ಬಳ್ಳಾರಿಯಲ್ಲಿ ಮಣ್ಣಿನಲ್ಲೂ ತಿಂದರು. ಅವರ ಆಡಳಿತಾವಧಿಯಲ್ಲಿ ಕರ್ನಾಟಕವನ್ನು ಅಧೋಗತಿಗೆ ತೆಗೆದುಕೊಂದು ಹೋದರು. ಕಾಂಗ್ರೆಸ್ ನ ದುರಾಡಳಿತ ಮತ್ತು ಅವರ ದೌರ್ಬಾಗ್ಯ ಜನರಿಗೆ ಬೇಡವಾಗಿದೆ. ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಸ್ವಂತ ಲಾಭಕ್ಕಾಗಿ ಹಾಗೂ ಸ್ವಾರ್ಥಕ್ಕಾಗಿ ಮಾಡಿಕೊಳ್ಳುತ್ತಾರೆ. ಜನರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಎಂದರು.
*ಶಾಸಕ ಸತೀಶ್ ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಕ್ಲುಲ್ಲಕವಾಗಿ ಮಾತನಾಡಿದ್ದಾರೆ :*
ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಜಗಳವೇ ಇನ್ನೂ ಮುಗಿದಿಲ್ಲ. ಖರ್ಗೆಯವರು ಎಐಸಿಸಿಯ ಮುಳುಗುವ ದೋಣಿಯ ಅಧ್ಯಕ್ಷರಾದ ತಕ್ಷಣ, ಬೆಳಗಾವಿ ಶಾಸಕರಾದ ಸತೀಶ್ ಜಾರಕಿಹೊಳಿ ಹಿಂದೂ ಅಂದರೆ ಹೊಲಸು ಅಂತ ಹೇಳ್ತಾರೆ. ಅವರಿಗೆ ಈ ರೀತಿಯ ಮಾತನಾಡಲು ಮನಸ್ಸು ಹೇಗೆ ಬಂತು ತಿಳಿಯುತ್ತಿಲ್ಲ. ನಮ್ಮ ಸನಾತನ ಧರ್ಮ ಯಾವುದೇ ಜಗತ್ತಿನಲ್ಲಿ ಯಾವುದೇ ಧರ್ಮ ಹುಟ್ಟಿರಲಿಲ್ಲಾ ಆಗಲೇ ಸಿಂಧೂ ಸಂಸ್ಕೃತಿ ಹಿಂದು ಧರ್ಮವಾಗಿ ಬೆಳೆದಿದೆ. ಇಡೀ ಮನುಕುಲವೊಂದೇ ಎಂದು ಸಾರುವ ಹಿಂದೂ ಧರ್ಮದ ಬಗ್ಗೆ ಕ್ಲುಲ್ಲಕವಾಗಿ ಮಾತನಾಡಿದ್ದಾರೆ ಎಂದರು.
*ಕಾಂಗ್ರೆಸ್ ಗೆ ಕೆಟ್ಟ ಕಾಲ ಬಂದಿದೆ :*
ರಾಹುಲ್ ಗಾಂಧಿ ಚುನಾವಣೆ ಬಂದಾಗ ದೇವಸ್ಥಾನ ಕ್ಕೆ ಹೋಗುತ್ತಾರೆ.ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತಾರೆ. ನಮ್ಮದು ಸಮಾಜವನ್ನು ಜೋಡಿಸುವ ಕೆಲಸವಾದರೆ, ಕಾಂಗ್ರೆಸ್ ಅವರದು ಅಧಿಕಾರಕ್ಕಾಗಿ ದೇಶ ಒಡೆಯುವ ಕೆಲಸ, ಕರ್ನಾಟಕದ ಅಧಿಕಾರಕ್ಕಾಗಿ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ ಜೋಡೊ ಯಾತ್ರೆ ಎನ್ನುತ್ತಾರೆ ಆದರೆ ಭಾರತ ಈಗಾಗಲೇ ಒಂದಾಗಿದೆ. ನೀವು ಜೋಡೊ ಅಂತಿರಿ ಇಲ್ಲಿ ಸತೀಶ್ ಜಾರಕಿಹೊಳಿ ತೋಡೊ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆ ಕೆಟ್ಟ ಕಾಲ ಬಂದಿದೆ ಎಂದರು.
ಕುರಿಗಾಹಿಗಳಿಗೆ ಕುರಿದೊಡ್ಡಿ ಹಾಗೂ ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು.
ಪ್ರತಿ ಕುರಿಗಾರರ ಸಂಘಗಳಿಗೆ 20 ಕುರಿ ಒಂದು ಮೇಕೆ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ 354 ಕೋಟಿ ರೂ. ಗಳನ್ನು ಮೀಸಲಿರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಮ್ಮ ಸರ್ಕಾರ ಆಯಾ ಜನಾಂಗದ ಕುಲಕಸುಬಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಕುರಿಗಾಹಿಗಳಿಗೆ ಕುರಿದೊಡ್ಡಿ ಜೊತೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು.ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಪ್ರತಿ ಮನೆಗೂ ಹಕ್ಕುಪತ್ರ ನೀಡಲು ತೀರ್ಮಾನಿಸಲಾಗಿದೆ. 50 ಸಾವಿರ ತಾಂಡಗಳನ್ನು ಕಂದಾಯಗ್ರಾಮಗಳನ್ನಾಗಿ ಮಾಡುವ ಕ್ರಾಂತಿಕಾರಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವ ದಿಟ್ಡ ನಿರ್ಧಾರ ವನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದರು.
*ದುಡಿಯುವ ವರ್ಗಕ್ಕೆ ಶಕ್ತಿಯನ್ನು ತುಂಬಲಾಗುತ್ತಿದೆ :*
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಈ ಭಾಗದಲ್ಲಿ ಪ್ರಹಾವ ಬಂದಾಗ 5 ಲಕ್ಷ ರೂ..ಪರಿಹಾರ ನೀಡಿದರು . ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬೆಳೆಪರಿಹಾರವನ್ನು ದುಪ್ಪಟ್ಟು ಮಾಡಲಾಯಿತು. ದುಪ್ಪಟ್ಟು ಪರಿಹಾರ ಯಾವ ರಾಜ್ಯದಲ್ಲಿಯೂ ಕೊಡವುದಿಲ್ಲ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದೆ. 10 ಲಕ್ಷ ರೈತ ಕುಟುಂಬಗಳಿಗೆ ಹಾಗೂ 6 ಲಕ್ಷ ಕೂಲಿ ಕಾರ್ಮಿಕರ ಮಕ್ಕಳಿಗೆ, ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ಜಾರಿಗೆ ತರಲಾಗಿದೆ. ದುಡಿಯುವ ವರ್ಗಕ್ಕೆ ಶಕ್ತಿಯನ್ನು ತುಂಬಲಾಗುತ್ತಿದೆ ಎಂದರು.
*ಮಹಿಳೆಯರಿಗೆ ಮತ್ತು ಯುವಕರಿಗೆ ಸ್ವಯಂ ಉದ್ಯೋಗ:*
ಸ್ತ್ರೀಸಾಮರ್ಥ್ಯ ಯೋಜನೆಯಡಿ ಪ್ರತಿ ಹಳ್ಳಿಯಲ್ಲಿ ಎರಡು ಮಹಿಳಾ ಸಂಘಗಳಿಗೆ ಆರ್ಥಿಕ ಸಹಾಯ ನೀಡಿ, ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ. ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಯುವಕ ಸಂಘಗಳ 5 ಲಕ್ಷ ಯುವಕರಿಗೆ ಸ್ವಯಂಉದ್ಯೋಗ ಕಲ್ಪಿಸಲಾಗುತ್ತಿದೆ. ಈ ಭಾಗದ ಅಭಿವೃದ್ದಿಗೆ ಕಂಕಣ ಬದ್ದರಾಗಿದ್ದೇವೆ . ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಒಟ್ಟು 800 ಕೋಟಿ ರೂ.ಗಳನ್ನು ನೀಡಲಾಗಿದೆ. ನಮ್ಮ ಸರ್ಕಾರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಸಮತೋಲಿತವಾಗಿ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ದುರ್ಯೋಧನ ಐಹೊಳೆ, ಪಿ. ರಾಜೀವ, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ರವಿಕುಮಾರ್, ಮಾಜಿ ಸಂಸದರಾದ ರಮೇಶ್ ಕತ್ತಿ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಮತ್ತಿತರರು ಹಾಜರಿದ್ದರು.
https://pragati.taskdun.com/latest/7th-pay-commission-order/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ