Latest

ಮುಡಾ ಭೂಮಿಗೆ ಸಾಲ ನೀಡಿ ಮೋಸ ಹೋದ ಬ್ಯಾಂಕ್

ಪ್ರಗತಿವಾಹಿನಿ ಸುದ್ದಿ; ಮೈಸೂರು: ಭೂ ಖರೀದಿಯ ದಾಖಲೆ ಖಚಿತಪಡಿಸಿಕೊಳ್ಳಲು ಬ್ಯಾಂಕ್ ಸಾಲ ಪಡೆಯುವುದೇ ನಿಖರತೆ ಎನ್ನುವ ಮಾತು ಇರುವಾಗ ಮುಡಾಕ್ಕೆ ಸೇರಿದ ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿಯ ನಕಲಿ ಖಾತೆ ಸೃಷ್ಟಿಸಿ ಬರೋಬ್ಬರಿ ೧೪ ಕೋಟಿ ರೂ.ಸಾಲ ಪಡೆದು ವಂಚಿಸಿರುವ ಪ್ರಕರಣ ಬಯಲಾಗಿದೆ.

ಮುಡಾಗೆ ಸೇರಿದ ಸುಮಾರು ೨೫ ಕೋಟಿ ರೂ. ಬೆಲೆ ಬಾಳುವ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಅಡವಿಟ್ಟ ಭೂಗಳ್ಳರು ಸಾಲ ಪಡೆದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಡಾ ಅಧಿಕಾರಿಗಳು ಭೂಗಳ್ಳರ ವಿರುದ್ದ ವಿದ್ಯಾರಣ್ಯಪುರಂ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

ಮೈಸೂರು ನಗರದ ಇಂಡಸ್ಟ್ರಿಯಲ್‌ ಸಬರ್ಬ್ ಎರಡನೇ ಹಂತ ವಿಶ್ವೇಶ್ವರನಗರದ ಶ್ರೀ ಜುಂಚಾಮರಾಜೇಂದ್ರ ಪಿಯು ಕಾಲೇಜು ಶಾರದಾ ವಿದ್ಯಾಮಂದಿರ ಮುಂಭಾಗವಿರುವ ಕೈಗಾರಿಕಾ ನಿವೇಶನ ಸಂಖ್ಯೆ ೩೬/ಎ ೨೮೫*೨೦೦ ಅಡಿ ವಿಸ್ತೀರ್ಣ ೫೭ ಸಾವಿರ ಚದರಡಿ ಅಳತೆಯ ನಿವೇಶನವು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಆಸ್ತಿಯಾಗಿದೆ. ಪ್ರಾಧಿಕಾರದ ದಾಖಲೆಗಳ ಪ್ರಕಾರ ಈವರೆಗೆ ಈ ನಿವೇಶನ ಯಾರಿಗೂ ಮಂಜೂರಾಗಿಲ್ಲ. ಈ ನಿವೇಶನವನ್ನು ಹರಾಜು ಹಾಕಲು ಹಲವಾರು ಬಾರಿ ಪ್ರಕಟಣೆ ಕೊಟ್ಟು ಹರಾಜಿಗೆ ಆಹ್ವಾನಿಸಿದರೂ ಪ್ರಕ್ರಿಯೆ ಯಶಸ್ವಿಯಾಗಲಿಲ್ಲ.

ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಪ್ರಾಪರ್ಟೀಸ್‌ನ ವಾಲೀಕರಾದ ಲಕ್ಷ್ಮೇಗೌಡ, ಜಗದೀಶ್, ಶಶಿ ಹಾಗೂ ನಂಜಪ್ಪ ಅವರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಕ್ಕೆ ನಕಲಿ ದಾಖಲೆಗಳನ್ನ ಸೃಷ್ಟಿಸಿದ್ದಾರೆ. ಇದೇ ನಕಲಿ ದಾಖಲೆಗಳನ್ನು ಹಾಸನದಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಅಡವಿಟ್ಟು ಬರೋಬರಿ ೧೪ ಕೋಟಿ ರೂ. ಸಾಲ ಪಡೆದಿದ್ದಾರೆ.ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸದ ಬ್ಯಾಂಕ್ ಅಧಿಕಾರಿಗಳು ಕಳೆದ ೨೦೧೮ರ ಅಕ್ಟೋಬರ್ ತಿಂಗಳಲ್ಲಿ ಭಾರಿ ಮೊತ್ತದ ಹಣವನ್ನೇ ಸಾಲವಾಗಿ ಕೊಟ್ಟಿದ್ದಾರೆ. ಈ ಎಲ್ಲ ಅಕ್ರಮಗಳ ಬಗ್ಗೆ ದಾಖಲೆ ಸಂಗ್ರಹಿಸಿದ ಸಾಮಾಜಿಕ ಕಾರ್ಯಕರ್ತ ಬಿ.ಎನ್.ನಾಗೇಂದ್ರ ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್‌ ಗೆ ಲಿಖಿತ ರೂಪದಲ್ಲಿ ದೂರು ಕೊಟ್ಟಿದ್ದಾರೆ.

ನಂತರ ಎಚ್ಚೆತ್ತ ಆಯುಕ್ತರು ಹಾಗೂ ಕಾರ್ಯದರ್ಶಿ ಡಾ.ಎನ್.ಸಿ ವೆಂಕಟರಾಜು ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಅಕ್ರಮ ನಡೆದಿರುವುದು ಖಚಿತವಾಗಿದೆ. ಸಾಲ ಪಡೆಯುವಾಗ ಭೂಗಳ್ಳರು ಒದಗಿಸಿರುವ ದಾಖಲೆಗಳನ್ನು ಸಂಪೂರ್ಣವಾಗಿ ಒದಗಿಸುವಂತೆ ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳಿಗೆ ಮುಡಾ ಆಯುಕ್ತರು ಪತ್ರ ಬರೆದಿದ್ದಾರೆ.ಈ ಪತ್ರಕ್ಕೆ ಬ್ಯಾಂಕ್ ಅಧಿಕಾರಿಗಳಿಂದ ಇದುವರೆಗೆ ಉತ್ತರದ ರೂಪದಲ್ಲಿ ಪ್ರತಿಕ್ರಿಯೆ ಬಂದಿಲ್ಲ. ಕೂಡಲೇ ಮುಡಾ ಆಯುಕ್ತರು ಪ್ರಾಧಿಕಾರದ ವಿಶೇಷ ತಹಸಿಲ್ದಾರ್ ಆರ್.ಮಂಜುನಾಥ್ ಮೂಲಕ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಲಕ್ಷ್ಮೇಗೌಡ, ಜಗದೀಶ, ಶಶಿ ಹಾಗೂ ನಂಜಪ್ಪ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

https://pragati.taskdun.com/latest/nursing-studentsuicidevijayapura/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button