ಪಕ್ಷಕ್ಕೆ ಡ್ಯಾಮೆಜ್ ಆಗಬಾರದು ಎಂದು ಹೇಳಿಕೆ ಹಿಂಪಡೆದಿರುವೆ: ಸತೀಶ್ ಜಾರಕಿಹೊಳಿ, ಈ ವಿಚಾರವನ್ನು ಇಲ್ಲಿಗೆ ಕೈ ಬಿಡಿ – ಲಕ್ಷ್ಮೀ ಹೆಬ್ಬಾಳಕರ್ ಮನವಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಕ್ಷಕ್ಕೆ ಡ್ಯಾಮೇಜ್ ಆಗುವುದನ್ನು ತಡೆಯಲು ಹಿಂದೂ ಶಬ್ದದ ಕುರಿತು ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಪ್ಪಾಣಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿಂದೂ ಶಬ್ದದ ಬಗ್ಗೆ ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದಿದ್ದು, ನನ್ನ ಮೇಲೆ ಯಾರ ಒತ್ತಡವು ಇಲ್ಲ. ಜಿಲ್ಲೆಯ ನಾಯಕರ ಜತೆ ಚರ್ಚೆ ಮಾಡಿ ಹೇಳಿಕೆ ವಾಪಸ್ ಪಡೆದಿರುವೆ. ಹೀಗಾಗಿ ನಿನ್ನೆಯೇ ಸಿಎಂಗೆ ಪತ್ರ ಬರೆದಿರುವೆ ಎಂದರು.
ನೈಜ ಸುದ್ದಿ ಬಿಟ್ಟು ಬೇರೆ ಬೇರೆ ಆಯಾಮದಲ್ಲಿ ಚರ್ಚೆ ಆರಂಭವಾಗಿದೆ. ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಬೇರೆ ನಾಯಕರು ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ. ಅದು ಖಾಸಗಿ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮ ಅಲ್ಲ, ಎಲ್ಲರೂ ಬೆಂಬಲಿಸುವ ನಿರೀಕ್ಷೆಯೂ ಇರಲಿಲ್ಲ. ಆದರೂ ಕೆಲವರು ಮಾತನಾಡಿದ್ದಾರೆ ಎಂದು ತಿಳಿಸಿದರು.
ಇದು ಇಷ್ಟಕ್ಕೆ ನಿಂತಿಲ್ಲ ಸ್ವಪಕ್ಷ, ವಿರೋಧ ಪಕ್ಷ ಹಾಗೂ ಮಾಧ್ಯಮಗಳ ಮುಂದೆ ಕೆಲ ಸಂಗತಿ ಹೇಳುತ್ತೇವೆ. ನನಗೆ ಪಕ್ಷ ದೊಡ್ಡದು, ಹೀಗಾಗಿ ಪಕ್ಷಕ್ಕೆ ಡ್ಯಾಮೇಜ್ ಆಗಬಾರದೆಂದು ಆ ಪದ ವಾಪಸ್ ಪಡೆದಿರುವೆ. ನನ್ನ ಮೇಲಿನ ಆರೋಪದ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿಗಳು ತನಿಖೆ ಮಾಡಬೇಕೆಂದು ಶಾಸಕ ಸತೀಶ್ ಜಾರಕಿಹೊಳಿ ಅವರು ಆಗ್ರಹಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ನಿನ್ನೆ ಸಾಯಂಕಾಲ ಈ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಹಿಂದೂ ಭಾವನೆಗಳಿಗೆ ಧಕ್ಕೆ ಆಗಿರುವ ವಿಚಾರಕ್ಕೆ ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ ವಿಚಾರವನ್ನು ಇಲ್ಲಿಗೆ ಕೈ ಬಿಡಿ ಎಂದು ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದರು.
ಈ ವಿಚಾರವಾಗಿ ನಾವು ಯಾರೂ ಇನ್ಮುಂದೆ ಮಾತನಾಡುವುದಿಲ್ಲ. ಹೇಳಿಕೆ ವಾಪಸ್ಸು ಪಡೆದು ವಿಷಾದ ವ್ಯಕ್ತಪಡಿಸಿದ್ದಾರೆ. ಒಂದೊಂದು ಧರ್ಮ, ಜಾತಿಗೆ ಇದರ ಬಣ್ಣ ಕಟ್ಟುವುದು ಬೇಡ. ಇದನ್ನು ನಾನು ಒಂದೊಂದು ಜಾತಿ, ಧರ್ಮಕ್ಕೆ ಈ ವಿಚಾರಕ್ಕೆ ಕಟ್ಟಲು ಬಯಸುವುದಿಲ್ಲ. ಅನೇಕ ಸಂದರ್ಭದಲ್ಲಿ ನಮ್ಮ ಕಾರ್ಯಾಧ್ಯಕ್ಷರು ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಇದಕ್ಕೆ ಮಾಧ್ಯಮಗಳು, ನಾವು ಮತ್ತು ಬೆಳಗಾವಿ ಜಿಲ್ಲೆಯ ಜನ ಸಾಕ್ಷಿಯಾಗಿದ್ದಾರೆ. ಈಗ ವಿಷಾದ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಅವರು ಮಾಡಿದ ಸಮಾಜಮುಖಿ ಕಾರ್ಯಗಳನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಚಿವ ವೀರಕುಮಾರ ಪಾಟೀಲ್, ಮಾಜಿ ಶಾಸಕರಾದ ರಮೇಶ ಕುಡಚಿ, ಶ್ಯಾಮ್ ಘಾಟಗೆ, ಬೆಳಗಾವಿ ಜಿಲ್ಲಾ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಇತರರು ಇದ್ದರು.
Breaking News: ವಿಷಾಧಿಸಿ, ಹೇಳಿಕೆಯನ್ನು ಹಿಂದಕ್ಕೆ ಪಡೆದ ಸತೀಶ್ ಜಾರಕಿಹೊಳಿ
https://pragati.taskdun.com/latest/regretfully-satish-jarakiholi-retracted-the-statement/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ