ಪ್ರಗತಿವಾಹಿನಿ ವಿಶೇಷ: ಇಂದು ಹೇಳ ಹೊರಟ ವಿಷಯ ಬೇಸರವೆಂದು ಭಾವಿಸಲೇ ಬೇಡಿ. ಮನೆ ಮನೆಗಳಲ್ಲಿ ಒಳಹೊಕ್ಕ ಸಮಸ್ಯೆ ಇದು. ಇಂದು ಜಗತ್ತು ಎದುರಿಸಬಹುದಾದ ಜ್ವಲಂತ ಸಮಸ್ಯೆಗಳಲ್ಲಿ ಇದೂ ಒಂದೆಂದು ಪರಿಗಣಿಸಬಹುದು. ಕಣ್ಣಿಗೆ ಕಾಣಿಸದಂತೆ ಗೌಪ್ಯವಾಗಿರುವ ಸಮಸ್ಯೆ “ದುರ್ಬಲ ಮನ ಸ್ಥಿತಿ”. ನಿಜ ಹೇಳಬೇಕೆಂದರೆ ಪ್ರಕೃತಿಯ ವರದಿಂದ ಈ ಅದ್ಭುತ ಮಾನವ ಜನ್ಮವನ್ನು ಪಡೆದ ನಾವು ನಿಜಕ್ಕೂ ಧನ್ಯರು. ಅದನ್ನು ಮನಸಾರೆ ಆಸ್ವಾದಿಸುವ ಬದಲು ಎಷ್ಟೋ ಜನ, ಹಿರಿ ಕಿರಿಯರೆನ್ನದೇ ಆತ್ಮಹತ್ಯೆಗೆ ಶರಣಾಗುವುದಿದೆಯಲ್ಲ… ಅದು ಒಂದು ಸಂತೋಷದ ವಾತಾವರಣದಲ್ಲಿ ವಿಷ ಬೆರೆಸಿ ಹೋದಂತೆ !
ನೈಸರ್ಗಿಕವಾಗಿ ಅಗಲಿ ಹೋದವರನ್ನು ನೆನೆದು ರೋಧಿಸುವವರೆಷ್ಟೋ ! ಹೇಳತೀರದು. ಜೀವನದಲ್ಲಿ ಹಲವು ಎಡರು- ತೊಡರುಗಳು, ಸೋಲು-ಗೆಲುವು, ಮಾನ -ಅವಮಾನ, ಸತ್ಕಾರ-ತಿರಸ್ಕಾರ ಏನೇನೆಲ್ಲಾ ಇದೆಯೋ ಅದೆಲ್ಲ ಸುಂದರ ಶಿಲ್ಪವಾಗಲು ಬೀಳುವ ಉಳಿಯ ಪೆಟ್ಟುಗಳು. ಪ್ರತಿಯೊಂದನ್ನೂ ಧನಾತ್ಮಕವಾಗಿ ತೆಗೆದು ಕೊಳ್ಳದ ಹೊರತು ಮನಸು, ಜೀವನ ಖುಷಿಯಾಗಿರಲು ಸಾಧ್ಯವಿಲ್ಲ.
ಇಂದು ಆತ್ಮಹತ್ಯೆ ಒಂದು ಪಿಡುಗಾಗಿ ಪರಿಣಮಿಸಿದೆ. ಅದಕ್ಕೆ ಚಿಕಿತ್ಸೆ ಮನೆಯಿಂದಲೇ ಶುರುವಾಗಬೇಕು. ಮಾನಸಿಕ ಭದ್ರತೆ, ಪ್ರೀತಿ, ಮಮತೆ,ವಾತ್ಸಲ್ಯ ಇವೆಲ್ಲವೂ ಊರುಗೋಲಾ ಗಬೇಕು. ಜೀವವನ್ನು ಉಳಿಸುವಂತಿರಬೇಕೇ ಹೊರತು ಉರುಳಿಸುವಂತಿರಬಾರದು. ಪರಸ್ಪರರ ನಡುವೆ ಭಿನ್ನಾಭಿಪ್ರಾಯಗಳು ಸಹಜವೇ. ಮನುಷ್ಯ ಒಂದು ಪ್ರಾಣಿಯೇ. ಸುಸಂಸ್ಕೃತ, ವಿದ್ಯಾವಂತ, ಮಾತು ಬಲ್ಲವ, ವಿಚಾರ ಮಾಡ ಬಲ್ಲವ……..ಇತ್ಯಾದಿ ಇತ್ಯಾದಿ ಪದ ಮಾಲಿಕೆಗಳೆಲ್ಲವನ್ನು ಹೆಕ್ಕಿ ತೆಗೆದು ‘ಮಾನವ’ ಎಂದು ಕರೆದಿರುವಾಗ, ಎಲ್ಲಿ ಎಡವಟ್ಟಾಗಿ, ಇಷ್ಟು ದುರ್ಬಲನಾಗಿ ಬಿಡುತ್ತಾನೆ ಮನುಷ್ಯ ? ಆತ್ಮಹತ್ಯೆಯಂಥ ವಿಚಾರವೇ ಸುಳಿಯ ಬಾರದು.
ಜೀವನದ ಅವಧಿ ಅಮೂಲ್ಯ. ನಾವು ಬಂದದ್ದು ಸಂತೋಷ ಸವಿಯಲೇ ಹೊರತು, ಅಸಂತೋಷದಿಂದ, ದುಃಖದಿಂದ, ಅಳುತ್ತಾ ಸಾಯಲು ಅಲ್ಲವೇ ಅಲ್ಲ. ಎಲ್ಲ ಸಂದರ್ಭಗಳ ಲ್ಲಿಯೂ ಧೈರ್ಯವನ್ನು ಗುರಾಣಿಯನ್ನಾಗಿ ಬಳಸಬೇಕು. ಮನಸ್ಸು ಕೆಲವು ವಿಷಯಗಳಲ್ಲಿ ಉಕ್ಕಿನಷ್ಟು ಕಠಿಣವಾಗಿರಬೇಕು. ಕಷ್ಟ,ನೋವು, ಹಿಂಸೆ, ಅಸಂತೋಷ, ತಳಮಳ, ತಲ್ಲಣಗಳ ಸಮಯದಲ್ಲಿ ಇದೇನು ಮಹಾ ! ಎಂಬ ಧೋರಣೆಯೊಂದಿಗೆ ಮುನ್ನುಗ್ಗಬೇಕು ಅಷ್ಟೇ !
ಶಿಕ್ಷಣದಲ್ಲಿ ಇದರದ್ದೇ ಒಂದು ವಿಭಾಗ ಇರಬೇಕು ಮತ್ತು ಕಡ್ಡಾಯವಾಗಬೇಕು. ಮನೋಚಿಕಿತ್ಸಿಕ ಕ್ರಮಗಳಿರಬೇಕು. ಜೀವ ಎಷ್ಟು ಅಮೂಲ್ಯ? ಎಂಬುದನ್ನು ಯಾರೂ ಗಂಭೀರವಾಗಿ ಹೇಳಿಕೊಡಲ್ಲ. ಹಾಗಾಗಿಯೇ ಸುಲಭವಾಗಿ ಜೀವ ಕಳೆವ, ಕಳೆದುಕೊಳ್ಳುವ ವಿಲಕ್ಷಣ ಕೃತ್ಯಗಳು ಸಂಭವಿಸುತ್ತವೆ. ಅದರಲ್ಲಿ ತೊಡಗಿಕೊಳ್ಳುವುದು ಖೇದವೇ !.ಸಣ್ಣ ಸಣ್ಣ ಕಾರಣಗಳಿಗೆ ! ಮೊಬೈಲ್ ಬಳಸಬೇಡ ಅಂದಿದ್ದಕ್ಕೆ, ಹೊಸ ಬಟ್ಟೆ ಕೊಡಿಸಿಲ್ಲ ಅಂದದಕ್ಕೆ, ಬುದ್ದಿ ಹೇಳಿದರು ಎಂಬುದಕ್ಕೆ, ಶಿಕ್ಷಕರು ಅವಮಾನಿಸಿದ್ದಕ್ಕೆ, ಟಿ ವಿ ನೋಡಬೇಡ ಎಂದಿದ್ದಕ್ಕೆ …….
ಇವೆಲ್ಲ ಎಂಥಾ ಕಾರಣಗಳು ? ಅಯ್ಯೋ ದೇವಾಽಽ ಇನ್ನೇನು ಮಾಡೋದು ಬಿಡಿ. ಮನಸ್ಸುಗಳು ಇಷ್ಟು ಜಾಳು ಜಾಳಾಗಲು ಕಾರಣವೇನು ? ಪಾಲಕರು, ಶಿಕ್ಷಕರು, ಸಹಪಾಠಿಗಳು,ನೆರೆ ಹೊರೆಯವರು,ಬಂಧು ಬಳಗದವರು, ಜಾತ್ರೆ, ಉತ್ಸವಗಳು, ಸಭೆ ಸಮಾರಂಭಗಳು, ಹಬ್ಬ ಹರಿ ದಿನಗಳಿಂದ ಅಂತರ ಹೆಚ್ಚಾಗುತ್ತಿದೆ. ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಪರ್ಕ ಕಡಿತಗೊಂಡು, ಕಿರಿದಾಗುತ್ತಾ ಹೋಗಿದೆ. ಆಧುನಿಕ ಸೌಲಭ್ಯಗಳ ಮಾಯೆಯಿದು.
ದೃಶ್ಯ ಮಾಧ್ಯಮಗಳಲ್ಲಿ ತರಾತುರಿಯಲ್ಲಿ, ಒಂದೇ ಉಸಿರಿನಲ್ಲಿ ಚೀರಿಕೊಂಡು, ತಿರುಗು ಮುರುಗಾಗಿ “ಹೇಳಿದ್ದನ್ನೇ ಹೇಳುವ …….. ದಾಸನಂತೆ” ಬ್ರೇಕಿಂಗ್ ನ್ಯೂಸ್ ” ಆತ್ಮಹತ್ಯೆಗೆ ಶರಣಾಗಿದ್ದಾರೆ ಕಾರಣ ತಿಳಿದು ಬಂದಿಲ್ಲ. ಇನ್ನೇನು ಕೆಲವೇ ಕ್ಷಣಗಳಲ್ಲಿ ತನಿಖಾಧಿಕಾರಿಗ ಳಿಂದ ಹೇಳಿಕೆ ಪಡೆಯುತ್ತೇವೆ” ಇದನ್ನು ಅಷ್ಟು ಅವಸರದಲ್ಲಿ ಹೇಳಿ,ಸಮಾಜಕ್ಕೆ ಏನಾಗುವುದಿದೆ? ” ದಿನಾ ಸಾಯೋರಿಗೆ ಅಳುವವರಾರು ?” ಗಾದೆ ಮಾತೇ ಇದೆ. ಸಮಾಜ ಮರೆತು ಬಿಡುವುದು. ಮರೆಗುಳಿ ಸಮಾಜ. ಬದುಕುವ ಇಚ್ಛೆಯಿಲ್ಲ ಎಂದರೆ ಯಾರು ಹೊಣೆ ? ನಷ್ಟ ತನಗೂ ತನ್ನ ನಂಬಿ ಕೊಂಡವರಿಗೆ. ಸಮಾಜಕ್ಕೇನಾಗುವುದಿದೆ ? ಹೀಗೆನಿಸಿಬಿಡುತ್ತದೆ. ನಿಜಕ್ಕೂ ದೇಶಕ್ಕೆ ಅಪಾರ ನಷ್ಟವದು.
ಬದುಕಿನ ಸ್ವಾರಸ್ಯ ಅಡಗಿರುವುದು ನಮ್ಮ ಜೀವನ ಕ್ರಮದ ಮೇಲೆ. ಇಲ್ಲಿ ಯಾವುದೂ ಕೆಟ್ಟದ್ದು, ಒಳ್ಳೆಯದು ತನ್ನಷ್ಟಕ್ಕೆ ತಾನೇ ಸಂಭವಿಸುವುದಿಲ್ಲ. ಅದು ಪ್ರಚೋದನೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ಸಂಭವಿಸುತ್ತವೆ. ಆದರೆ ನಾವು ಇನ್ನೊಂದರ ತಲೆಗೆ ಕಟ್ಟಿ ಬಿಡುವುದು ಅಭ್ಯಾಸವಾಗಿದೆ. ಅದೇ ‘ಹಣೆಬರೆಹ’.
ಹಣೆ ಬರೆಹದ ಕರ್ತೃ ನಾವೇ ಆಗಿರುತ್ತೇವೆ. ಬರೆದುಕೊಳ್ಳುವ ಯೋಗ್ಯತೆ, ಶಕ್ತಿ ಸಾಮರ್ಥ್ಯ ಎಲ್ಲವನ್ನೂ ಪ್ರಕೃತಿಯು ಕೊಟ್ಟಿರುತ್ತದೆ ಬಳಸಿ ಕೊಳ್ಳಲು ಸಾಧ್ಯವಾಗದೇ ನಮ್ಮನ್ನು ನಾವೇ ಹಳಿದುಕೊಳ್ಳುತ್ತಾ ಇರುತ್ತೇವೆ ಅಷ್ಟೇ. ನಮ್ಮ ಮುಂದೆ ಒಣಗಿದ ಜೇಡಿ ಮಣ್ಣನ್ನು, ತಿರುಗು ಚಕ್ರವನ್ನು, ನೀರನ್ನು ತಂದು ಮುಂದಿಟ್ಟಿದ್ದಾರೆ ಎಂದು ಕೊಳ್ಳೋಣ. ಈಗ ಅದನ್ನು ಬಳಸಿ ಕೊಂಡು ಮಡಕೆಯೊಂದನ್ನು ಮಾಡಬೇಕು. ಹದವಾಗಿ ಮಣ್ಣನ್ನು ಕಲಸದ ಹೊರತು, ಕಲಸಿದ ನಂತರ ಚಕ್ರದ ಮೇಲೆ ಇಟ್ಟು, ತಿರುಗಿಸುತ್ತಾ ಕೈಯನ್ನು ಕುಶಲತೆಯಿಂದ ಆಡಿಸದ ಹೊರತು ಮಡಕೆಯ ಸ್ವರೂಪ ಬರದು. ಹಾಗೆಯೇ ಅಲ್ಲವೇ ಪ್ರತಿಯೊಂದನ್ನು ಹದ ಮಾಡಿಕೊಳ್ಳದೇ ಹೋದರೆ ಮಡಕೆಯಾಗುವ ಬದಲು ಇನ್ನೇನೋ ಆದೀತು! ಅಲ್ಲವೇ ?
ನಂಬಿಕೆಗಳನೇ ಇರಲಿ. ಸದೃಢ ಮನಸ್ಸಿನ ಮುಂದೆ ಅಗಾಧವಾದುದೆಲ್ಲ ಸುಲಭ ಸಾಧ್ಯವಾಗುತ್ತದೆ. ಅದೇ ಪುಕ್ಕಲು ತನದಿಂದ ಕೂಡಿದ ಮನಸ್ಸು ಎಂದೂ ಕೂಡಾ ಗೆಲುವಿನ ನಿರೀಕ್ಷೆ ಮಾಡಲಾರದು. ಕೇವಲ ಭ್ರಮೆಯಲ್ಲಿ ಮುಳುಗಿ ಆನಂದಿಸುತ್ತದೆ.
ವಿಚಾರವೊಂದನ್ನು ಹಲವು ಕೋನಗಳಿಂದ ಜಾಲಾಡಿಸಬೇಕು. ತಾತ್ಕಾಲಿಕ ಪರಿಹಾರ ಕಂಡ ಕೂಡಲೇ ಕಾರ್ಯ ರೂಪಕ್ಕೆ ತರಲು ಸಿದ್ದರಾಗಿ ಬಿಡುತ್ತೇವೆ. ಎರೆಡು ಮೂರು ನಿಮಿಷಗಳವರೆಗೆ ತಡೆದುಕೊಳ್ಳುವ ವ್ಯವಧಾನವನ್ನು ಇಟ್ಟುಕೊಳ್ಳ ಲು ಸಾದ್ಯವಾಗದೇ ಹೋದಾಗ, ಮುಂದಿನ ಪರಿಣಾಮವನ್ನು ಎದುರಿಸಲು ಸಾಧ್ಯವಾಗದು.
ಅದರ ಜೊತೆ ನಮ್ಮ ದೃಷ್ಟಿ ಕೋನದಂತೆ ಜಗತ್ತು ಖಂಡಿತ ಇರುವುದಿಲ್ಲ. ಅದರೊಟ್ಟಿಗೆ ಹೊಂದಿಕೊಳ್ಳುವ ಮನೋಭಾವ ಅನಿವಾರ್ಯ.
ನಾವು ಸಣ್ಣ ಸಣ್ಣ ವಿಷಯಗಳಿಗೆ ನಿರಾಶರಾಗುತ್ತೇವೆ. ಪ್ರಕೃತಿ ಸಹಜವಾದರೂ ಅಷ್ಟಕ್ಕೇ ಮುಗಿಯುವುದಿಲ್ಲ. ಮುಂದಿನ ಪಯಣದಲ್ಲಿ ಗೆಲುವಿನ ಮರದ ನೆರಳು ಸಿಕ್ಕೇ ಸಿಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಇರದು. ಆದರೆ ಮನಸು ಕಾರ್ಯ ಕೈಗೊಂಡ ತಕ್ಷಣವೇ ಫಲಿತಾಂಶ ನಮ್ಮದಾಗಿ ಬರಬೇಕು ಎಂಬ ನಿರೀಕ್ಷೆಯೇ ಹತಾಶೆಗೆ ತಳ್ಳುತ್ತದೆ. ಅದಕ್ಕಾಗಿಯೇ ಶ್ರೀ ಕೃಷ್ಣ ಒಂದೆಡೆ ಹೇಳುತ್ತಾನೆ. ಕರ್ಮಣ್ಯೇ ವಾಧಿಕಾರಸ್ಥೇ ಮಾ ಫಲೇಷು ಕದಾಚನ । ಎಂದು . ಕರ್ಮವನ್ನು ಮಾಡುವು ದಷ್ಟೇ ನಮ್ಮದು. ಫಲ ದೊರೆಯುವುದು ಬಿಡುವುದು ನಮ್ಮ ಅಣತಿಯಲ್ಲಿಲ್ಲ ಮತ್ತು ಕಾಯುತ್ತಾ ಕುಳಿತುಕೊಳ್ಳಲೂ ಬಾರದು. ಅದರ ಹಿನ್ನೆಲೆ, ಉದ್ದೇಶ,ಪ್ರಾಮಾಣಿಕ ಪ್ರಯತ್ನ ಹೀಗೆ ಹಲವು ಅಂಶಗಳ ಮೇಲೆ ದೊರೆಯುತ್ತ ದೆ. ಮುಖ್ಯವಾಗಿ ಸ್ವಚ್ಛ ಮನದ ಪ್ರಾಮಾಣಿಕ ಯತ್ನದಲ್ಲಿದೆ. ದುರುದ್ದೇಶ, ದುರ್ವಿಚಾರಗಳು ಎಂದೂ ಹಿಂದಕ್ಕೆ ಕೆಡವುತ್ತವೆ.
ನಮಗೆ ಸಾಯಲು ಸಮಯವೇ ಇಲ್ಲವೆನ್ನುವಷ್ಟು ಸಾಧನೆಗಳ ಪಟ್ಟಿ ಕಣ್ಣ ಮುಂದಿರಬೇಕು. ಎಲ್ಲವನ್ನೂ ಖುಷಿಯಿಂದಲೇ ಮಾಡಬೇಕೇ ಹೊರತು, ಭಯಗೊಂಡು ಸೋಲನ್ನು ಅಪ್ಪಿಕೊಳ್ಳುವುದಲ್ಲ. ಜ್ಞಾನಿಗಳಿಗೆ ಭಯವಿಲ್ಲ. ಅತಿಯಾಸೆಯಿಂದ ತುಂಬಿದ ಮನಸುಗಳಿಗೆ ನೆಮ್ಮದಿಯಿಲ್ಲ. ಅದಕ್ಕೆ ನಮ್ಮ ಪೂರ್ವಜರು ಹಿತ ಮಿತ ಎಂಬ ಪದ ಪ್ರಯೋಗಿಸಿದರು. ಇದೇ ಸಂದರ್ಭದಲ್ಲಿ “ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ” ಎಂಬ ಸ್ವಾಮಿ ವಿವೇಕಾನಂದನಂದರ ವಾಕ್ಯವನ್ನು ಉಲ್ಲೇಖಿಸದಿದ್ದರೆ ಮಾತು ಪೂರ್ಣವೆನಿಸದು. ಅರ್ಥವೂ ಇರದು ಎನಿಸುತ್ತದೆ.
– ಲೇಖನ : ರವಿ ಕರಣಂ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ