Kannada NewsKarnataka NewsLatest

ತಾಯಿ- ಶಿಶು ಮರಣ ಪ್ರಮಾಣ ತಗ್ಗಿಸಲು ನಿಯಮಾವಳಿ ನಿರೂಪಣೆಗೆ ಕ್ರಮ

ಪ್ರಗತಿವಾಹಿನಿ ಸುದ್ದಿ ಬೆಳಗಾವಿ
ಕಳೆದ 22 ವರ್ಷಗಳಿಂದ ಕೆ.ಎಲ್.ಇ ಸಂಸ್ಥೆಯ ಸಂಶೋಧನಾ ಘಟಕವು ತಾಯಿ, ನವಜಾತ ಶಿಶು ಮತ್ತು ಮಕ್ಕಳ ಆರೋಗ್ಯ ಸಂಬಂಧಿತ ಹಲವು ವಿನೂತನ ಸಂಶೋಧನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅಂತಾರಾಷ್ಟ್ರೀಯ ಸಮ್ಮೇಳನವು ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯ ಸುಧಾರಿಸುವ ಮತ್ತು ಮರಣ ಪ್ರಮಾಣಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೈಗೊಂಡ ವಿವಿಧ ಸಂಶೋಧನೆಗಳ ಫಲಿತಾಂಶಗಳನ್ನು ಮಂಡಿಸಿ, ಜಾಗತಿಕ ಮಟ್ಟದಲ್ಲಿ ನೀತಿ-ನಿಯಮಾವಳಿಗಳನ್ನು ರೂಪಿಸುವ ಉದ್ದೇಶ ಹೊಂದಿದೆ ಎಂದು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ  ಹೇಳಿದರು.
ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕ ಆಯೋಜಿಸಿದ್ದ ತಾಯಿ,
ನವಜಾತ ಶಿಶು ಹಾಗೂ ಮಕ್ಕಳ ಆರೋಗ್ಯದ ಕುರಿತಾದ ತೃತೀಯ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್, ಅಮೆರಿಕದ ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಶನ್, ಅಮೆರಿಕದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ, ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ಸಂಶೋಧನೆಗಳನ್ನು ಅನುಷ್ಠಾನಗೊಳಿಸಿರುವುದು ತೃಪ್ತಿ ತಂದಿದೆ ಹಾಗೂ ಕೆ.ಎಲ್.ಇ ಸಂಸ್ಥೆಯ
ಜೆಎನ್.ಎಂ.ಸಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಸೋಧನಾ ಘಟಕದ ಕಾರ್ಯದಿಂದ ಕೆ.ಎಲ್.ಇ ಸಂಸ್ಥೆಯನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಅಮೆರಿಕದ ಥಾಮಸ್ ಜೆಫರ್‌ಸನ್ ವಿಶ್ವವಿದ್ಯಾಲಯದ ಸಂಶೋಧಕ ಡಾ. ರಿಚರ್ಡ್ ಡರ್ಮನ್ ಅವರು ಸಂಶೋಧನಾ ಘಟಕ  ಕುರಿತ ಮಾಹಿತಿ ಪುಸ್ತಕ  ಬಿಡುಗಡೆಗೊಳಿಸಿ ಮಾತನಾಡಿ, ಡಾ. ಪ್ರಭಾಕರ ಕೋರೆ ನೇತೃತ್ವದಲ್ಲಿ ಕೆ.ಎಲ್.ಇ ಸಂಸ್ಥೆಯು ತಾಯಿ, ನವಜಾತ ಶಿಶು ಹಾಗೂ ಮಕ್ಕಳ ಆರೋಗ್ಯ ಸಂಶೋಧನೆ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳನ್ನು ಮಂಡಿಸಿ ವಿಶ್ವದ ಗಮನ ಸೆಳೆಯುವಂತೆ ಮಾಡಿದೆ ಎಂದರು.
ಕೆ.ಎಲ್.ಇ ಸಂಶೋಧನಾ ಘಟಕದ ಹಿರಿಯ ಸಂಶೋಧಕ  ಡಾ. ಶಿವಪ್ರಸಾದ ಗೌಡರ ಪ್ರಸ್ತಾವಿಕ ಮಾತನಾಡಿ, ಕೆ.ಎಲ್.ಇ ಸಂಶೋಧನಾ ಘಟಕದ ಅಂತರಾಷ್ಟ್ರೀಯ ಯಶಸ್ಸಿಗೆ ವಿಶ್ವದ ಅನೇಕ ಸಂಸ್ಥೆಗಳ ಸಹಯೋಗ ಲಭಿಸಿದೆ ಎಂದರು.
ಸಮ್ಮೇಳನದಲ್ಲಿ  ಡಾ. ಪುಷ್ಪಾ ದೇವ ಚೌಧರಿ, ಡಾ. ಭಾರತಿ ಕುಲಕರ್ಣಿ, ಡಾ. ಎಂ. ಇಂದುಮತಿ, ಡಾ. ಮರಿಯನ್ ಕೊಸೊ ಥಾಮಸ್, ಡಾ. ರೆನಾಟಾ ಹಾಫ್ ಸ್ಟೇಟರ್, ಡಾ. ರಾಬರ್ಟ್ ಜಸ್ಟೀನ್ ಬ್ರೋನ್, ಡಾ. ಜಿಯಾನ್ ಯಾನ್, ಡಾ. ಎಲಿಜಾಬೆತ್ ಮೆಕ್ಲೂರ, ಡಾ. ನ್ಯಾನ್ಸಿ ಕ್ರೆಬ್ಸ್, ಡಾ. ಎಲ್ವಿನ್ ಚೊಂಬಾ, ಡಾ. ಅರ್ಚನಾ ಪಟೇಲ, ಡಾ.ರಿಚರ್ಡ್ ಡರ್ಮನ್, ಡಾ ರಾಬರ್ಟ ಗೋಲ್ಡನ್‌ಬರ್ಗ್, ಡಾ. ಬಿ.ಎಸ್.ಕೋಡ್ಕ ಣಿ ಅವರನ್ನು ಸತ್ಕರಿಸಲಾಯಿತು.
ಸಮಾರಂಭದಲ್ಲಿ ಡಾ. ಜಿನ್ ಆ್ಯಂಡರ್ ಸನ್, ಡಾ. ಡಿಲ್ಲಿ ಒಸಿ ಅನುಂಬಾ, ಡಾ. ಮ್ಯಾಥಿವ್
ಹಾಫ್ ಮನ್, ಡಾ. ರಾಬರ್ಟ್ ಸಿಲ್ವರ್, ಡಾ. ಜೆಫ್ರಿ, ಡಾ. ಜೊಶುವಾ ವೊಗೆಲ್, ಡಾ. ಕೆಥರೈನ್ ಸಿಮರೌ, ಡಾ. ಜುಬೇರ ಆಘಾಯಿ, ಡಾ. ಎನ್.ಎಸ್.ಮಹಾಂತಶೆಟ್ಟಿ, ಡಾ ವ್ಹಿ.ಎ.ಕೊಠಿವಾಲೆ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಅಂತಾರಾಷ್ಟ್ರೀಯ ಪ್ರಸಿಧ್ಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಂಶೋಧಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧಿಕಾರಿಗಳು ಸೇರಿದಂತೆ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಸ್ವಿಡ್ಜರ್‌ಲ್ಯಾಂಡ್, ಡಿ.ಆರ್.ಸಿ ಕೊಂಗೊ, ಜಾಂಬಿಯಾ, ಕಿನ್ಯಾ, ಯುಗಾಂಡಾ, ಜಾಂಬಿಯಾ, ನೈಜಿರಿಯಾ, ಬಾಂಗ್ಲಾದೇಶ, ಗ್ವಾಟೆಮಾಲಾ ಸೇರಿದಂತೆ 12 ದೇಶಗಳ ತಜ್ಞ ಸಂಶೋಧಕರು, ಭಾರತ ದೇಶದ ನಾನಾ ಭಾಗಗಳ ವೈದ್ಯರು, ಸಂಶೋಧಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button