Kannada NewsLatest
ವೈದ್ಯರನ್ನು ತಕ್ಷಣ ರಿಲೀವ್ ಮಾಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಕ್ಷಣ ಪೂರ್ಣಗಳಿಸಿ – ಸಚಿವ ಕಾರಜೋಳ ಸೂಚನೆ
2022-23 ನೇ ಸಾಲಿನ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಪ್ರಧಾನಮಂತ್ರಿಗಳ ಆಶಯದಂತೆ ಜಲಜೀವನ್ ಮಿಷನ್ ಯೋಜನೆ ಜಾರಿಗೆ ತರಲಾಗಿದೆ. ಕಾಮಗಾರಿಗಳು ಚಾಲನೆಯಲ್ಲಿವೆ. ಆದರೆ ಕೆಲವೆಡೆ ಕಾಮಗಾರಿಗಳು ನಿರೀಕ್ಷಿತ ಪ್ರಗತಿ ಕಾಣಿಸುತ್ತಿಲ್ಲ. ಆದ್ದರಿಂದ ಕೂಡಲೇ ಕಾಮಗಾರಿ ಚುರುಕುಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ತಿಳಿಸಿದರು.
ಸುವರ್ಣ ವಿಧಾನಸೌಧ ಸಭಾಂಗಣದಲ್ಲಿ ಸೋಮವಾರ( ನ.14) ನಡೆದ 2022-23 ನೇ ಸಾಲಿನ ಎರಡನೇ ತ್ರೈಮಾಸಿಕ ಕೆ. ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ ಸರ್ಕಾರದ ಆದೇಶದಂತೆ 3 ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ. ಆಸ್ಪತ್ರೆ ಅವಶ್ಯಕತೆಗೆ ತಕ್ಕಂತೆ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು.
ವರ್ಗಾವಣೆ ಹೊಂದಿರುವ ವೈದ್ಯರನ್ನು ತಕ್ಷಣ ರಿಲಿವ್ ಮಾಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ತಕ್ಷಣ ಪೂರ್ಣಗಳಿಸಬೇಕು. ಜಿಲ್ಲಾಧಿಕಾರಿಗಳ ಹಂತದಲ್ಲಿ ಕಮಿಟಿ ರಚಿಸಿ, ಪ್ರತಿ ತಿಂಗಳು ಸಭೆ ನಡೆಸಬೇಕು. ತಕ್ಷಣ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ತಿಳಿಸಿದರು.
2019 ರಲ್ಲಿ ಕಾಮಗಾರಿ ಪ್ರಾರಂಭಿಸಲು ಆದೇಶ ನೀಡಲಾಗಿದೆ. ಕಾಮಗಾರಿ ಬಹಳ ವಿಳಂಬ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳು ವಿನಾಕಾರಣ ನೆಪವೊಡ್ಡದೇ, ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದೊಳಗಾಗಿ ಪೂರ್ಣಗೊಳಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆ ಮಾಡಿಸಲು ಯೋಜನೆಯಿದೆ ಎಂದು ಸಚಿವ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ತಿಳಿಸಿದರು.
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ನಿಗದಿ:
ಬೆಳಗಾವಿಯ ದಕ್ಷಿಣ ಭಾಗದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಕಿದ್ವಾಯಿ ವ್ಯವಸ್ಥಾಪಕ ನಿರ್ದೇಶಕರು ಈಗಾಗಲೇ ಹಿಂದಿನ ಜಿಲ್ಲಾಧಿಕಾರಿಗಳ ಜೊತೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಕಿದ್ವಾಯಿ ಆಸ್ಪತ್ರೆ ದಕ್ಷಿಣ ಭಾಗದಲ್ಲಿ ನಿರ್ಮಾಣ ಮಾಡಲು ಸ್ಥಳ ಕೂಡ ನಿಗದಿಪಡಿಸಲಾಗಿದೆ. ನಿರ್ಮಾಣ ಸ್ಥಳ ಬದಲಿಸಬಾರದು ಎಂದು ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ ಅವರು ಹೇಳಿದರು.
ಅರ್ಜಿ ವಿಲೇವಾರಿಗೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ:
ಸರ್ಕಾರಿ ಅಭಿವೃದ್ಧಿ ಯೋಜನೆಗಳ ಫಲಾನಭವಿಗಳಿಗೆ ಸಾಲ ಸೌಲಭ್ಯಗಳು ತಲುಪಬೇಕು. ಯಾವುದೇ ಬಾಕಿ ಅರ್ಜಿಗಳು ಉಳಿಯದಂತೆ ನೋಡಿಕೊಳ್ಳಬೇಕು. ಅರ್ಜಿಗಳನ್ನು ವಿಲೇವಾರಿಗೊಳಿಸಿ, ಸಾಲ ಸೌಲಭ್ಯ ಒದಗಿಸಬೇಕು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮಹೇಶ ಕುಮಠಳ್ಳಿ, ಅವರು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲವಾಗುವ ಸರ್ಕಾರಿ ಅಭಿವೃದ್ಧಿ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು. ಕೇವಲ ಇತರೆ ವಹಿವಾಟುಗಳಿಗೆ ಗಮನ ಕೊಡದೇ ಸರ್ಕಾರಿ ಯೋಜನೆಗಳನ್ನು ತಲುಪಿಸುವುದು ಬ್ಯಾಂಕ್ ಅಧಿಕಾರಿಗಳ ಕರ್ತವ್ಯ ವಾಗಿದೆ ಎಂದು ಸಚಿವ ಕಾರಜೋಳ ಹೇಳಿದರು.
ಕೊಳಗೇರಿ ಅಭಿವೃದ್ಧಿ ನಿಗಮದಿಂದ ನಿರ್ಮಾಣ ಆಗಬೇಕಿದ್ದ, ಮನೆಗಳ ಕಟ್ಟಡ ಕಾಮಗಾರಿಗಳು ವಿಳಂಬ ಆಗಬಾರದು. ಈ ಕುರಿತು ತಕ್ಷಣ ವರದಿ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ತಿಳಿಸಿದರು.
ಗ್ರಾಮ ನಕಾಶೆ ಮೂಲಕ ರಸ್ತೆ ನಿರ್ಮಾಣಕ್ಕೆ ಅಡತಡೆ ಆಗಬಾರದು:
ಅರಣ್ಯ ಇಲಾಖೆಯವರು ಬೆಳಗಾವಿ ಭಾಗದ ಚಿಕಲೆ ಮತ್ತು ಪಾರವಾಡ ಗ್ರಾಮದಲ್ಲಿ ಗ್ರಾಮ ನಕಾಶೆ ಮೂಲಕ ಈಗಾಗಲೇ ಇರುವ ರಸ್ತೆ ನಿರ್ಮಾಣಕ್ಕೆ ಅಡೆತಡೆ ಮಾಡಬಾರದು. ಅರಣ್ಯ ವಲಯದ ಯಾವುದೇ ಜಾಗ ಅಲ್ಲಿ ಇರುವುದಿಲ್ಲ. ಈಗಾಗಲೇ ಅದೇ ರೀತಿಯ ಗೋಕಾಕ್ ರಸ್ತೆ ನಿರ್ಮಾಣ ಮಾಡಲು ಬಿಟ್ಟಿದ್ದಾರೆ. ರಸ್ತೆ ನಿರ್ಮಾಣ ಕಾಮಗಾರಿಗೆ ಅಡೆತಡೆ ಮಾಡಬಾರದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿದ್ಯುತ್ ಕಂಬಗಳ ದುರಸ್ತಿ ಕೈಗೆತ್ತಿಕೊಳ್ಳಿ:
ಅತಿ ಮಳೆಯಿಂದ ನೇರ ಹಾವಳಿಯಾದ ಗ್ರಾಮಗಳಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಗಳು ದುರಸ್ತಿ ಇವೆ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು.
ಲೈನ್ ಮ್ಯಾನ್ ಗಳು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಸುರಕ್ಷಾ ಪರಿಕರಗಳು ಇಲ್ಲದೆ ದುರಸ್ತಿ ಕಾರ್ಯಕ್ಕೆ ಹೆಸ್ಕಾಂ ಸಿಬ್ಬಂದಿಗಳು ಮುಂದಾಗಬಾರದು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಶಾಸಕ ಮಹೇಶ ಕುಮಠಳ್ಳಿ ಅವರು ನಿರ್ದೇಶನ ನೀಡಿದರು.
ರಸ್ತೆ ದುರಸ್ತಿ ಕಾಮಗಾರಿಗಳ ಪ್ರಾರಂಭಕ್ಕೆ ಸೂಚನೆ:
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯ ಗುರಿಯಲ್ಲಿ ಈಗಾಗಲೇ 80 ಪ್ರತಿಶತ ಪ್ರಗತಿ ಸಾಧಿಸಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಇರುವ ಗುರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ದರ್ಶನ್ ಹೆಚ್.ವಿ ಅವರು ವಿವರಿಸಿದರು.
ಸಿಸಿ ರಸ್ತೆ, ತೋಟಪಟ್ಟಿ ರಸ್ತೆ ಕಾಮಗಾರಗಳು ಸೇರಿದಂತೆ ಯಾವುದೇ ರಸ್ತೆಗಳ ನಿರ್ಮಾಣ ಬಾಕಿ ಇರುವುದಿಲ್ಲ. ಸದ್ಯ ಮಳೆ ಕಡಿಮೆ ಇರುವುದರಿಂದ ದುರಸ್ತಿ ರಸ್ತೆ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. ಮಾರ್ಚ್-ಏಪ್ರಿಲ್ ಅಂತ್ಯದೊಳಗೆ ರಸ್ತೆ ಕಾಮಗಾರಿಗಳು ಬಾಕಿ ಉಳಿಯಬಾರದು ಎಂದು ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದರು.
ಜಲಜೀವನ ಮಿಷನ್ ಯೋಜನೆ:
ಜಲ ಜೀವನ ಮಿಷನ್ ಯೋಜನೆಯಡಿ ಪ್ರತಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಮನೆ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪ್ರಧಾನ ಮಂತ್ರಿಗಳು ಆಸಕ್ತಿಯಿಂದ ಈ ಯೋಜನೆ ಜಾರಿಗೆ ತಂದಿದ್ದಾರೆ. ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿ ನಿಗದಿತ ಅವಧಿಯೊಳಗೆ ಜಲಜೀವನ್ ಮಿಷಿನ ಕಾಮಗಾರಿಗಳು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಜಲ ಜೀವನ ಮಿಷನ್ ಯೋಜನೆಯ 1ನೇ ಹಂತದ ಕಾಮಗಾರಿಗೆ ಇನ್ನೂ ಪೂರ್ಣಗೊಂಡಿಲ್ಲ ಈಗಾಗಲೇ 4 ಹಂತದಲ್ಲಿ ಕಾಮಗಾರಿಗಳು ನಡೆದಿವೆ. ಚಿಕ್ಕೋಡಿ ಇನ್ನೂ ಕಾಮಗಾರಿಗಳ ಪ್ರಗತಿ ಕಡಿಮೆ ಇದೆ. ಸದರಿ ಭಾಗದಲ್ಲಿ ಸಭೆ ನಡೆಸಿ, ಕಾಮಗಾರಿಗಳು ಬಾಕಿ ಇರದಂತೆ ನೋಡಿಕೊಳ್ಳಿ, ಸ್ಥಗಿತ ಆಗಿರುವ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಬೆಳಕು ಯೋಜನೆ ವಿದ್ಯುತ್ ಸಂಪರ್ಕ ಕಲ್ಪಿಸಿ:
ಗ್ರಾಮೀಣ ಭಾಗದಲ್ಲಿ ವಿದ್ಯುತ್ ನಿರಂತರ ಕಡಿತ ಆಗುತ್ತಿದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳು ಗಮನಹರಿಸಿ, ಗ್ರಾಮಗಳಲ್ಲಿ ಕನಿಷ್ಠ 8 ಗಂಟೆಯಾದರೂ ವಿದ್ಯುತ್ ಒದಗಿಸಬೇಕು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ಅವರು ಹೇಳಿದರು.
ಬೆಳಕು ಯೋಜನೆಯ ಮೂಲಕ ಗ್ರಾಮಗಳ ಮನೆಗಳು, ತೋಟಪಟ್ಟಿ ಮನೆ ಸೇರಿದಂತೆ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು. ಬೆಳಕು ಯೋಜನೆ ಸರ್ಕಾರದ ಅತ್ಯುತ್ತಮ ಯೋಜನೆಯಾಗಿದೆ. ಸಾರ್ವಜನಿಕರಿಗೆ ಬೆಳಕು ಯೋಜನೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ದೊಡ್ಡಗೌಡ್ರ ಅವರು ತಿಳಿಸಿದರು.
ಜಾನುವಾರುಗಳ ಗಂಟು ರೋಗ ನಿಯಂತ್ರಣಕ್ಕೆ ಕ್ರಮ ವಹಿಸಿ:
ಜಾನುವಾರುಗಳ ಗಂಟು ರೋಗ ಜಿಲ್ಲೆಯಲ್ಲಿ ಹಬ್ಬಿದ್ದು, ಎಲ್ಲಾ ಭಾಗಗಳಲ್ಲಿ ಉಚಿತ ವ್ಯಾಕ್ಷಿನ್ ನೀಡಲಾಗುತ್ತಿದೆ. ರೋಗ ನಿಯಂತ್ರಣಕ್ಕೆ ವ್ಯಾಕ್ಸೀನ್, ಔಷಧಿ ನೀಡಿ ನಿಯಂತ್ರಣಕ್ಕೆ ತರಲಾಗುತ್ತಿದೆ. ಮುಜಾಗೃತಾ ಕ್ರಮವಾಗಿ ಎಚ್ಚರಿಕೆ ವಹಿಸಲು ಜನರಲ್ಲಿ ಜಾನುವಾರಗಳ ಗಂಟು ರೋಗಗಳ ನಿಯಂತ್ರಣಕ್ಕೆ ಪೂರಕವಾಗಿ ಜಾಗೃತಿ ಕೂಡ ಮೂಡಿಸಲಾಗುತ್ತಿದೆ ಎಂದು ಪಶು ಇಲಾಖೆಯ ಅಧಿಕಾರಿಗಳು ವಿವರಿಸಿದರು.
ಸರ್ಕಾರದಿಂದ ಔಷಧಿಗೆ ಈಗಾಗಲೇ ಜಿಲ್ಲೆಗೆ 10 ಕೋಟಿ ಬಿಡುಗಡೆ ಮಾಡಲಾಗಿದೆ. ವಿಧಾನಸಭಾ ಕ್ಷೇತ್ರ ಹಾಗೂ ತಾಲೂಕಾವಾರು ಪಟ್ಟಿ ನೀಡಿ, ಜನಸಂಖ್ಯೆ, ಜಾನುವಾರುಗಳ ಅನುಗುಣವಾಗಿ ಔಷಧಿ ಹಂಚಿಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪಶು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಂಸದೆ ಮಂಗಳಾ ಅಂಗಡಿ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅನೀಲ ಬೆನಕೆ, ಶಾಸಕ ದುರ್ಯೋಧನ ಐಹೊಳೆ, ಪಿ. ರಾಜೀವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು
ಕೈಪಿಡಿ ಬಿಡುಗಡೆ:
ಇದಕ್ಕೂ ಮುಂಚೆ ಗ್ರಾಮ ಪಂಚಾಯತ್ ದೂರದೃಷ್ಟಿ ಯೋಜನೆಯ ಸಿದ್ದಾಪಡಿಸುವಿಕೆಯ ಜಿಲ್ಲಾ ಮಟ್ಟದ ಚಾಲನಾ ಕಾರ್ಯಕ್ರಮಗಳ ಸಂಕ್ಷಿಪ್ತ ಕೈಪಿಡಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸದೆ ಮಂಗಳಾ ಅಂಗಡಿ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅನಿಲ ಬೇನಕೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಪಿ. ರಾಜೀವ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮಹೇಶ ಕುಮಠಳ್ಳಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಕರ್ನಾಟಕ ಆದಿಜಾಂಬವ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್, ಹೆಚ್.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಹಾಜರಿದ್ದರು.
https://pragati.taskdun.com/politics/siddaramaiahattackbjp-govtkesarikaranaschools/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ