ಪ್ರಗತಿ ವಾಹಿನಿ, ಬೆಳಗಾವಿ: ಟ್ಯಾಕ್ಸಿಗಳೆಲ್ಲ ಹೆಚ್ಚಾಗಿ ಹಳದಿ, ಅಥವಾ ಕೆಳಗೆ ಕಪ್ಪು ಮೇಲೆ ಬಹುಭಾಗ ಹಳದಿ ಬಣ್ಣದಲ್ಲಿರುವುದು ಎಲ್ಲರೂ ನೋಡಿರುತ್ತಾರೆ. ಒಂದು ಸಮಾನತೆಯ ಸಲುವಾಗಿ ಈ ರೀತಿ ಹಳದಿ ಬಣ್ಣ ಹೊಡೆಸುವ ಪದ್ಧತಿ ಬೆಳೆದಿರಬಹದು ಎಂದುಕೊಳ್ಳುತ್ತೇವೆ.
ಆದರೆ ಟ್ಯಾಕ್ಸಿಗಳಿಗೆ ಹಳದಿ ಬಣ್ಣವನ್ನು ಬಳಿಯುವುದರ ಹಿಂದೆ ಒಂದು ಕುತೂಹಲಕಾರಿ ಕತೆ ಹೀಗಿದೆ……..
ಬಾಡಿಗೆ ಕಾರುಗಳ ಕಂಪನಿ ಪ್ರಾರಂಭವಾಗಿದ್ದು 1907 ರ ಸುಮಾರಿಗೆ ಅಮೇರಿಕದಲ್ಲಿ. ಅಮೇರಿಕದ ಚಿಕಾಗೋದ ಕಾರುಗಳ ವ್ಯಾಪಾರಿ ಜಾನ್ ಹರ್ಡ್ಜ್ ಎಂಬುವವರು ತಮ್ಮ ಬಳಿ ಅನೇಕ ಕಾರುಗಳು ಮಾರಾಟವಾಗದೇ ಉಳಿದಿದ್ದು ನೋಡಿ ಚಿಂತೆಗೀಡಾದರು. ಬಳಿಕ ಅವರು ಒಂದು ಟ್ಯಾಕ್ಸಿ ಕಂಪನಿ ಆರಂಭಿಸಿದರು.
ಆದರೆ ಆಗಿನ ಅವಧಿಯಲ್ಲಿ ಮೋಟಾರ್ ಕಾರುಗಳಿಗಿಂತ ರಸ್ತೆಗಳಲ್ಲಿ ಕುದುರೆ ಟಾಂಗಾ, ಸೈಕಲ್ ರಿಕ್ಷಾಗಳಂತಹ ನಿಧಾನವಾಗಿ ಚಲಿಸುವ ವಾಹನಗಳೇ ಹೆಚ್ಚು ಓಡಾಡುತ್ತಿದ್ದವು. ನಿರಂತರವಾಗಿ ರಸ್ತೆಯಲ್ಲಿ ಸಂಚರಿಸಬೇಕಾದ ಟ್ಯಾಕ್ಸಿಗಳಿಗೆ ಈ ಕುದುರೆ ಟಾಂಗಾ ಮತ್ತಿತರ ವಾಹನಗಳ ಜತೆ ಅಪಘಾತವಾಗುವ ಅಪಾಯ ಹೆಚ್ಚಿತ್ತು.
ಈ ಸಮಸ್ಯೆಯನ್ನು ಹರ್ಡ್ಜ ಅವರು ಚಿಕಾಗೋ ವಿಶ್ವ ವಿದ್ಯಾಲಯದ ಕೆಲ ಪರಿಚಿತ ಸಂಶೋಧಕರ ಮುಂದೆ ಹೇಳಿಕೊಂಡರು. ಆಗ ಚಿಕಾಗೋ ವಿಶ್ವ ವಿದ್ಯಾಲಯವು ಹರ್ಡ್ಜ ಅವರ ಸಮಸ್ಯೆಗೆ ಪರಿಹಾರವೊಂದನ್ನು ಕಂಡು ಹಿಡಿಯಿತು. ಅದುವೇ ಹಳದಿ ಬಣ್ಣ.
ಹೌದು, ಹಳದಿ ಬಣ್ಣವು ಬಹಳ ದೂರದಿಂದಲೂ ಗುರುತಿಸಲ್ಪಡಬಹುದಾದ ಬಣ್ಣ ಎಂಬುದು ಸಂಶೋಧಕರ ಅಭಿಪ್ರಾಯ. ಇದರಿಂದ ರಸ್ತೆಯಲ್ಲಿ ಟ್ಯಾಕ್ಸಿ ಬರುತ್ತಿದ್ದರೆ ಇತರ ವಾಹನಗಳು ದೂರದಿಂದಲೇ ಗುರುತಿಸಿ ಎಚ್ಚರಿಕೆ ವಹಿಸಲು ಅನುಕೂಲವಾಯಿತು. ಅಷ್ಟೇ ಅಲ್ಲದೇ ಪ್ರಯಾಣಿಕರಿಗೂ ಸಹ ದೂರದಿಂದಲೇ ಟ್ಯಾಕ್ಸಿಯನ್ನು ಗುರುತಿಸಿ ಬಾಡಿಗೆಗೆ ಕರೆಯಲು ಅನುಕೂಲ ಒದಗಿಸಿತು.
ಆ ಬಳಿಕ ಅಮೆರಿಕದಲ್ಲಿ ಒಂದಾದಮೇಲೊಂದರಂತೆ ಹುಟ್ಟಿಕೊಂಡ ಬಹುತೇಕ ಟ್ಯಾಕ್ಸಿ ಕಂಪನಿಗಳು ತಮ್ಮ ಕಾರುಗಳಿಗೆ ಹಳದಿ ಬಣ್ಣವನ್ನೇ ಬಳಿಯತೊಡಗಿದವು. ಕಾಲಾಂತರದಲ್ಲಿ ಹಳದಿ ಬಣ್ಣದ ಟ್ಯಾಕ್ಸಿಗಳು ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಸಾಮಾನ್ಯ ಎಂಬಂತಾಗಿದೆ.
ಆದರೂ ಸಹ ಇಂಗ್ಲೆಂಡ್‌ನಲ್ಲಿ ಮೊದಲಿಂದಲೂ ಟ್ಯಾಕ್ಸಿಗಳಿಗೆ ಕಪ್ಪು ಬಣ್ಣ ಬಳಿಯಲಾಗುತ್ತದೆ. ಇನ್ನು, ಭಾರತದಲ್ಲಿ ಸರಕು ಸಾಗಣೆ, ಮತ್ತು ಪ್ರಯಾಣಿಕರ ಸಾರಿಗೆ ವಾಹನಗಳಿಗೆ ನಂಬರ್ ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲಾಗುತ್ತದೆ.
ಇನ್ನು, ಟ್ಯಾಕ್ಸಿಯ ಬಣ್ಣ ಹಳದಿ ಬಣ್ಣವಾಗಿರುವುದು ಪ್ರಯಾಣಿಕರಿಗೆ ಎಷ್ಟು ಸುರಕ್ಷಿತ ಎಂಬ ಬಗ್ಗೆಯೂ ಕೆಲ ಸಂಶೋಧನಾ ವರದಿಗಳು ಸಾಬೀತು ಮಾಡಿವೆ. ಸಿಂಗಾಪುರದ ಅತೀ ದೊಡ್ಡ ಟ್ಯಾಕ್ಸಿ ಕಂಪನಿಯೊಂದು ಟ್ಯಾಕ್ಸಿಗಳ ಅಪಘಾತದ ಪ್ರಮಾಣವನ್ನು ಲೆಕ್ಕ ಹಾಕಿದಾಗ ಪ್ರತಿ 1000 ಟ್ಯಾಕ್ಸಿಗಳಲ್ಲಿ ಹಳದಿ ಬಣ್ಣದ ಟ್ಯಾಕ್ಸಿಗಳು ಶೇ.6.1ರಷ್ಟು ಅಪಘಾತಕ್ಕೀಡಾಗಿದ್ದರೆ ಬೇರೆ ಬಣ್ಣದ ಟ್ಯಾಕ್ಸಿಗಳು ಅಪಘಾತಕ್ಕೀಡಾದ ಪ್ರಮಾಣ ಶೇ.೯ ಆಗಿದೆ.
ಹಾಗಾಗಿ 1907ರಲ್ಲಿ ಚಿಕಾಗೋ ವಿಶ್ವ ವಿದ್ಯಾಲಯದ ಸಂಶೋಧಕರು ಹೇಳಿದ ಮಾತು ಇಂದಿಗೂ ಸತ್ಯವೇ ಎಂದು ಸಾಬೀತಾಗಿದೆ.
ಈ ನಡುವೆ ಇತ್ತೀಚೆಗೆ ಟ್ಯಾಕ್ಸಿಗಳು ತಮ್ಮ ಸಾಂಪ್ರದಾಯಿಕ ಬಣ್ಣದಿಂದ ಹೊರಬರುತ್ತಿವೆ. ಬಳಿ, ನೀಲಿ ಮಿಶ್ರಿತ ಬಣ್ಣದ ಟ್ಯಾಕ್ಸಿಗಳನ್ನು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನೋಡಬಹುದು. ಅಲ್ಲದೇ ಬೇರೆ ಬೇರೆ ಬಣ್ಣಗಳಲ್ಲೂ ಟ್ಯಾಕ್ಸಿಗಳು ಕಾಣಸಿಗುತ್ತವೆ. ಆದರೂ ಸರಿ ಸುಮಾರು 100 ವರ್ಷಗಳ ಕಾಲ ಹಳದಿ ಬಣ್ಣವೇ ಟ್ಯಾಕ್ಸಿಗಳ ಅಧಿಕೃತ ಗುರುತಾಗಿದ್ದು, ಸಂಪ್ರದಾಯವೇ ಆಗಿ ಬದಲಾಗಿದೆ.
PSI ನೇಮಕಾತಿ ಅಕ್ರಮ; ದೈಹಿಕ ಶಿಕ್ಷಕ ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ