Kannada NewsLatest

ಗ್ರಾಮೀಣ ಶಾಸಕಿಯಾಗಿದ್ದಕ್ಕೆ ಸಾರ್ಥಕತೆ ಕಂಡೆ -ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

“ನಿಜವಾಗಿಯೂ ಗ್ರಾಮೀಣ ಭಾಗದ ಶಾಸಕಿಯಾಗಿದ್ದಕ್ಕೆ ಸಾರ್ಥಕತೆ ಕಂಡೆ”

3 ದಿನಗಳ ಪೆನ್ಶನ್ ಅದಾಲತ್ ಪೂರ್ಣಗೊಳಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬಾಯಿಯಿಂದ ಬಂದ ಉದ್ಘಾರವಿದು.

ರಸ್ತೆ, ಗಟಾರದಂತಹ ಕೆಲಸವನ್ನು ಎಲ್ಲರೂ ಮಾಡುತ್ತಾರೆ. ಆದರೆ ಮಾಡಬೇಕಾದ ನಿಜವಾದ ಕೆಲಸ ಇಲ್ಲಿದೆ. ಸರಕಾರ ಬಡಜನರಿಗಾಗಿ ನೂರಾರು ಯೋಜನೆಗಳನ್ನು ತರುತ್ತದೆ. ಆದರೆ ಅರ್ಹರಿಗೆ ತಲುಪುತ್ತಲೇ ಇಲ್ಲ ಎನ್ನುವ ನಿಜ ಸತ್ಯ ಇಂತಹ ಅದಾಲತ್ ನಡೆಸಿದಾಗ ತಿಳಿಯುತ್ತದೆ ಎಂದು ಹೆಬ್ಬಾಳಕರ್ ಹೇಳಿದರು.

ಮಧ್ಯವರ್ತಿಗಳ ಕಾರಣದಿಂದಲೋ, ಅಧಿಕಾರಿಗಳ ನಿರ್ಲಕ್ಷ್ಯದಿಂದಲೋ ಗೊತ್ತಿಲ್ಲ. ಇಂದೊ, ನಾಳೆಯೋ ಸಾಯುವಂತಹ ಸ್ಥಿತಿಯಲ್ಲಿರುವವರಿಗೆ ಪೆನ್ಶನ್ ಸಿಕ್ಕಿಲ್ಲ. ಕಾಲಿಲ್ಲದವರಿಗೆ, ಕೈಯಿಲ್ಲದವರಿಗೆ, ಕಣ್ಣಿಲ್ಲವರಿಗೆ ಮಾಸಾಶನ ಕೊಟ್ಟಿಲ್ಲ. ಎಂತೆಂತಹ ದಯನೀಯ ಸ್ಥಿತಿಯಲ್ಲಿರುವವರೆಲ್ಲ ಅರ್ಜಿ ಹಿಡಿದು ಬರುತ್ತಿದ್ದಾರೆ. ಅಂತಹ ಜನರು ಪಡುತ್ತಿರುವ ಪಾಡು ನೋಡಿದರೆ ಕರುಳು ಕಿತ್ತು ಬರುತ್ತದೆ. ಇಂತವರ ಮನೆ ಬಾಗಿಲಿಗೆ ಹೋಗಿ ಕಿಂಚಿತ್ ಸಹಾಯ ಮಾಡುವ ಅವಕಾಶ ನನಗೆ ಸಿಕ್ಕಿದ್ದು ಯಾವ ಜನ್ಮದ ಪುಣ್ಯವೋ ತಿಳಿಯುತ್ತಿಲ್ಲ ಎಂದು ಅವರು ಭಾವುಕರಾದರು.

ಅಧಿಕಾರಿಗಳ ತಂಡದೊಂದಿಗೆ ಕುದ್ರೆಮನಿ, ತುರಮುರಿ ಮತ್ತು ಉಚಗಾಂವ್ ಗ್ರಾಮಗಳಲ್ಲಿ 3 ದಿನ ನಿರಂತರವಾಗಿ ಪೆನ್ಶನ್ ಅದಾಲತ್ ನಡೆಸಲಾಯಿತು. ಮಾಸಾಶನಕ್ಕಾಗಿ 400ಕ್ಕೂ ಹೆಚ್ಚು ಹಾಗೂ ರೇಶನ್ ಕಾರ್ಡ್ ಗಾಗಿ 100ಕ್ಕೂ ಹೆಚ್ಚು ಅರ್ಜಿಗಳು ಬಂದವು. ಅರ್ಹರಿದ್ದವರಿಗೆ ಸ್ಥಳದಲ್ಲೇ ಮಂಜೂರು ಮಾಡಲು ಲಕ್ಷ್ಮಿ ಹೆಬ್ಬಾಳಕರ್ ಅಧಿಕಾರಿಗಳಿಗೆ ಸೂಚಿಸಿದರು. ಉಳಿದವನ್ನು ಪರಿಶೀಲಿಸಿ, ವಾರದೊಳಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದರು.

ತಮ್ಮ ಮನೆಯ ಬಾಗಿಲಿಗೆ ಬಂದು ಸರಕಾರದ ಸೌಲಭ್ಯಗಳನ್ನು ನೀಡುತ್ತಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಸೇವೆ ಕಂಡು ಮಹಿಳೆಯರು ಭಾವುಕರಾಗಿ ಅಪ್ಪಿಕೊಳ್ಳುವುದು, ವೃದ್ದರು ಹರಸುವುದು. ಎಲ್ಲರೂ ಯಾವ ಸಂಕೋಚವಿಲ್ಲದೆ ಮನೆಯ ಮಗಳೇ ಬಂದಿದ್ದಾಳೆನ್ನುವಂತೆ ಕೈ ಹಿಡಿದುಕೊಂಡು ಮಾತನಾಡುವುದು, ತಲೆಯ ಮೇಲೆ ಕೈ ಇಟ್ಟು ಆಶಿರ್ವದಿಸುವುದು ಸಾಮಾನ್ಯವಾಗಿತ್ತು

ಕಳೆದ ವರ್ಷ ಸಾಂಬ್ರಾ ಜಿಲ್ಲಾಪಂಚಾಯಿತಿ ಕ್ಷೇತ್ರದಲ್ಲಿ ಪೆನ್ಶನ್ ಅದಾಲತ್ ನಡೆಸಿದಾಗ 800 ಜನರಿಗೆ ಪೆನ್ಶನ್ ಮಂಜೂರು ಮಾಡಿಸಲಾಗಿತ್ತು. ಇನ್ನುಳಿದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲೂ ಶೀಘ್ರದಲ್ಲೇ ಪೆನ್ಶನ್ ಅದಾಲತ್ ನಡೆಸುವುದಾಗಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.

ನೇತ್ರ ಚಿಕಿತ್ಸೆ ವೆಚ್ಚ ಭರಿಸುವ ಭರವಸೆ:

ಉಚಗಾಂವ್ ನಲ್ಲಿ ಶನಿವಾರ ನಡೆದ ಉಚಿತ ಕಣ್ಣು ತಪಾಸಣೆ ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರು ಕಣ್ಣು ತಪಾಸಣೆ ಮಾಡಿಸಿಕೊಂಡರು. ಅವರಲ್ಲಿ 57 ಜನರಿಗೆ ಕನ್ನಡಕ ಅಗತ್ಯವಾಗಿದ್ದು, 27 ಜನರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಎಲ್ಲವನ್ನೂ ಉಚಿತವಾಗಿ ಮಾಡಿಸಿಕೊಂಡುವುದಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button