
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೇಸಿಗೆ ರಜೆ ಮುಗಿಸಿ ಬಂದ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹವನ್ನು ತುಂಬಿ ಆಭ್ಯಾಸದತ್ತ ಸೆಳೆಯುವ ವಿನೂತನ ಉದ್ದೇಶದಿಂದ ಬೆಳಗಾವಿ ಹಲಗಾದ ಭರತೇಶ ಸೆಂಟ್ರಲ್ ಸ್ಕೂಲ್ ನಲ್ಲಿ ಇಂದು ಮಾವು ಮೇಳ ಆಯೋಜಿಸಲಾಗಿತ್ತು.
ಮಾವು ಮೇಳದ ನಿಮಿತ್ತ ಇಡೀ ಶಾಲೆ, ಶಾಲೆಯ ವರ್ಗಕೋಣೆಗಳನ್ನು ಮಕ್ಕಳು ತಯಾರಿಸಿ ತಂದ ಕ್ರಿಯಾತ್ಮಕ ಚಿತ್ರಗಳಿಂದ, ಭಿತ್ತಿಪತ್ರಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.
ಆಯಾ ವರ್ಗದ ಮಕ್ಕಳಿಗೆ ಬೇರೆ ಬೇರೆ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಾಲಮಂದಿರದ ವಿಭಾಗ ವಿದ್ಯಾರ್ಥಿಗಳು ಹಳದಿ ಮತ್ತು ಹಸಿರು ಬಣ್ಣದ ಚಂದದ ಉಡುಪು ಧರಿಸಿದ್ದರು. ಆ ಮಕ್ಕಳ ತಾಯಂದಿರಿಗೆ ಮಾವಿನ ರೆಸಿಪಿ ಅಂದರೆ ಫಾಯರ್‌ಲೆಸ್ ಕುಕಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮಾವಿನ ಹಣ್ಣು ಮತ್ತು ಕಾಯಿಯಿಂದ ತಯಾರಿಸುವ ವಿವಿಧ ಖಾದ್ಯಗಳನ್ನು ತಯಾರಿಸಿ ಸುಂದರವಾಗಿ ಅಲಂಕರಿಸಿದ್ದರು.
ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ, ಮೂರರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಮಾವು, ಅವುಗಳ ತಳಿಗಳು, ಅವುಗಳ ಉಪಯೋಗ ಕುರಿತು ಭಾಷಣ ಸ್ಪರ್ಧೆಗಳನ್ನು, ಹಿರಿಯ ವಿದ್ಯಾರ್ಥಿಗಳಿಗೆ ಕುಕಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಸ್ಫರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಈ ಸ್ಪರ್ಧೆಗಳಿಗೆ ನಿರ್ಣಾಯಕರಾಗಿ ಆಡಳಿತ ಮಂಡಳಿಯ ಸದಸ್ಯೆಯರಾದ ಕೀರ್ತಿ ದೊಡ್ಡಣ್ಣವರ್, ಮೇದಾ ಶಹಾ ಆಗಮಿಸಿ ನಿರ್ಣಯ ನೀಡಿದರು.
ವಿದ್ಯಾಸಂಸ್ಥೆಯ ಚೇರ್‌ಮನ್ ವಿನೋದ ದೊಡ್ಡಣ್ಣವರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳ ಸೃಜನಶೀಲ ಕೌಶಲ್ಯವನ್ನು ಪ್ರಶಂಸಿಸಿದರು. ಶಾಲೆಯ ಪ್ರಾಚಾರ್ಯೆ ದೇವಯಾನಿ ದೇಸಾಯಿ ಉಪಪ್ರಾಚಾರ್ಯರಾದ ಪರ್ವಿನ್ ಅತ್ತಾರ ಮತ್ತು ಜೋಫೀನ್ ಗುಂಟಿ, ವೃಷಾಲಿ ಸರ್ನೋಬತ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.




