Kannada NewsKarnataka NewsLatest

ಮಕ್ಕಳ ಅಭಿವ್ಯಕ್ತಿಗೆ ಶಾಲೆ ವೇದಿಕೆಯಾಗಲಿ

ಪ್ರಗತಿವಾಹಿನಿ ಸುದ್ದಿ, ಧಾರವಾಡ: ಚಿತ್ರಕಲೆಯೂ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಲ್ಲಿ ಹುದುಗಿರುವ ರಂಗಕಲೆ, ಭರತನಾಟ್ಯ, ಹಾಡುಗಾರಿಕೆ, ಯೋಗ, ಕ್ರೀಡೆ ಮತ್ತು ಮೇಲಾಟಗಳಂತಹ ಸುಪ್ತವಾದ ಪ್ರತಿಭೆ ಬೆಳೆದು ಬಲಗೊಳ್ಳಲು ಮಕ್ಕಳ ಅಭಿವ್ಯಕ್ತಿಗೆ ಶಾಲೆ ವೇದಿಕೆಯಾಗಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿರ್ದೇಶಕರಾದ ಮಮತಾ ನಾಯಕ ಹೇಳಿದರು.

ಅವರು ನಗರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಕಚೇರಿಯು ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿರುವ ಚಿತ್ರಕಲಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಶಾಲಾ ಮಕ್ಕಳಲ್ಲಿಯ ಸುಪ್ತ ಪ್ರತಿಭೆಗಳತ್ತ ಗಮನ ನೀಡಿ ಆ ಪ್ರತಿಭೆಗಳನ್ನು ಗುರುತಿಸಿ ಅವುಗಳು ವಿಕಾಸವಾಗಲು ಸೂಕ್ತ ಮಾರ್ಗದರ್ಶನ ನೀಡಿ ಅಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹಳ ಮುಕ್ತ ನೆಲೆಯಲ್ಲಿ ಹೆಚ್ಚೆಚ್ಚು ಅವಕಾಶಗಳನ್ನು ಒದಗಿಸಬೇಕು ಎಂದರು.

ಗುಹೆಗಳಲ್ಲಿ, ಕಟ್ಟಿಗೆಯ ಫಲಕಗಳಲ್ಲಿ ಹಾಗೂ ಗೋಡೆಗಳ ಮೇಲೆ ರಚನೆಯಾಗಿರುವ ಹಿಂದಿನ ಕಾಲದ ಚಿತ್ರಕಲೆಯನ್ನೇ ಆಧರಿಸಿ, ಒಂದು ಕಾಲಘಟ್ಟದ ನಿರ್ದಿಷ್ಟ ಸಂಸ್ಕೃತಿ, ಜನಮನದ ಬದುಕು ಮತ್ತು ಇತಿಹಾಸವನ್ನು ಅರಿಯಲಾಗಿದ್ದು, ಈ ನಿಟ್ಟಿನಲ್ಲಿ ಚಿತ್ರಕಲೆಯು ತನ್ನದೇ ಆದ ವಿಶಿಷ್ಟ ಮಹತ್ವವನ್ನು ಪಡೆದುಕೊಂಡಿದೆ ಎಂದೂ ಮಮತಾ ನಾಯಕ ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಗಜಾನನ ಮಣ್ಣಿಕೇರಿ ಮಾತನಾಡಿ,
ಚಿತ್ರಕಲೆಯು ವಿಶ್ವಭಾಷೆಯಾಗಿದ್ದು, ಸಾವಿರ ಶಬ್ದಕ್ಕಿಂತಲೂ ಹೆಚ್ಚಿನ ಮಾಹಿತಿಯನ್ನು ಒಂದು ನಿರ್ದಿಷ್ಟ ಚಿತ್ರವು ವಿವರಿಸುತ್ತದೆ. ಅವರಿವರೆನ್ನದೇ ಎಲ್ಲ ಜನಮನಗಳನ್ನು ಭಾವೈಕ್ಯದ ನೆರಳಿನಲ್ಲಿ ಹಿಡಿದಿಡುವ ವಿಶ್ವಬಂಧುತ್ವದ ತಾಕತ್ತು ಚಿತ್ರಕಲೆಗೆ ಇದೆ. ವಿದ್ಯಾರ್ಥಿಗಳು ತಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಲು, ತನ್ಮೂಲಕ ಹೊಸತು ಆಲೋಚನೆಗಳನ್ನು ತಮ್ಮ ಚಿತ್ರದ ಮೂಲಕ ಅಭಿವ್ಯಕ್ತಿಸಲು ಚಿತ್ರಕಲೆ ಸಹಾಯಕವಾಗಿದೆ ಎಂದರು.

ಆಯುಕ್ತರ ಕಚೇರಿಯ ಆಡಳಿತ ಉಪನಿರ್ದೇಶಕ ಸಂಜೀವ ಬಿಂಗೇರಿ, ದೈಹಿಕ ಶಿಕ್ಷಣ ಉಪನಿರ್ದೇಶಕ ಕೆ.ಜಿ.ತೆಲಬಕ್ಕನವರ, ಆಯುಕ್ತರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕಿ ಪಾರ್ವತಿ ವಸ್ತ್ರದ, ವೃತ್ತಿ ಶಿಕ್ಷಣದ ಹಿರಿಯ ಸಹಾಯಕ ನಿರ್ದೇಶಕ ಬಿ.ವೈ. ಭಜಂತ್ರಿ, ಡಯಟ್ ಹಿರಿಯ ಉಪನ್ಯಾಸಕ ದೀಪಕ ಕುಲಕರ್ಣಿ, ಸಾರ್ವಜನಿಕ ಸಂಪರ್ಕಾಧಿಕಾರಿ ಸುಜಾತಾ ತಿಮ್ಮಾಪುರ, ಬೆಳಗಾವಿ ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಗಳ ಸಂಚಾಲಕ ಮತ್ತು ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ಇ-ಆಡಳಿತ ಸಂಯೋಜನಾಧಿಕಾರಿ ಶಾಂತಾ ಮೀಸಿ, ಎಸ್.ಎ.ಕೇಸರಿ, ವಿ.ಬಿ. ಶಿಂಗೆ, ಗುರುರಾಜ ಅಂಬೇಕರ, ರವಿ ಗೋಡಕೆ, ಗೋಪಾಲ ಚೆಲುವಾದಿ ಸೇರಿದಂತೆ ಇತರರು ಇದ್ದರು.

ಬೆಳಗಾವಿ, ಉತ್ತರಕನ್ನಡ, ವಿಜಯಪುರ, ಬಾಗಲಕೋಟ, ಧಾರವಾಡ, ಗದಗ, ಹಾವೇರಿ, ಚಿಕ್ಕೋಡಿ ಹಾಗೂ ಶಿರಸಿ ಜಿಲ್ಲೆಗಳ ಪ್ರೌಢ ಶಾಲಾ ಚಿತ್ರಕಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

“ನೀರು” ಜಗದ ಜೋಕಾಲಿಯ ತೂಗಿದ ಕೈಗಳು 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button