ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಚಂದ್ರನ ಮೇಲೆ ಮಾನವ ಕಾಲಿಟ್ಟು 52 ವರ್ಷ ಕಳೆದು ಹೋಗಿದೆ. ಪ್ರಸ್ತುತ ಅಮೇರಿಕದ ನಾಸಾ ಅಲ್ಲದೇ ಭಾರತವೂ ಸಹ ಚಂದ್ರನನ್ನು ಹೊರತುಪಡಿಸಿ ಇತರ ಗ್ರಹಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿಕೊಂಡಿದೆ.
ಆದರೆ 1969 ರಲ್ಲಿ ಮೊಟ್ಟ ಮೊದಲ ಬಾರಿಗೆ ಚಂದ್ರನ ಮೇಲೆ ಅಮೇರಿಕ ಮಾನವನನ್ನು ಕಳಿಸಿದ್ದು, 1972 ರ ಬಳಿಕ ಈ ಸಾಹಸವನ್ನು ಮುಂದುವರಸಲಿಲ್ಲ. ಅಲ್ಲದೇ ಅಮೇರಿಕ ಹೊರತುಪಡಿಸಿ ಇತರ ಯಾವ ದೇಶಗಳೂ ಚಂದ್ರನ ಮೇಲಾಗಲಿ ಇನ್ಯಾವುದೇ ಗ್ರಹದ ಮೇಲಾಗಲಿ ಕಾಲಿಡಲು ಯಶಸ್ವಿಯೂ ಆಗಿಲ್ಲ.
ಇಂದಿನಷ್ಟು ತಂತ್ರಜ್ಞಾನ ಅಭಿವೃದ್ಧಿ ಹೋಂದಿರದ ೫೦ ವರ್ಷಕ್ಕೂ ಹಿಂದೆಯೇ ಅಮೇರಿಕ ಯಾಕೆ ಚಂದ್ರನ ಮೇಲೆ ಗಗನ ಯಾತ್ರಿಗಳನ್ನು ಕಳುಹಿಸುವ ಸಾಹಸ ಮಾಡಿತು ? ಎಂಬ ಕುತೂಹಲಕಾರಿ ವಿಚಾರಕ್ಕೆ ಉತ್ತರ ಈ ಲೇಖನದಲ್ಲಿದೆ.
ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಮಾನವ ಕಾಲಿಟ್ಟಿದ್ದು 1969 ರ ಜುಲೈ 20ರಂದು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಪೋಲೋ -11 ಗಗನ ನೌಕೆ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿ ಇಡೀ ವಿಶ್ವವನ್ನೇ ನಿಬ್ಬೆರಗು ಮಾಡಿತ್ತು. ಅಮೇರಿಕ ಈ ಸಾಹಸಕ್ಕೆ ಅದು ಸೋವಿಯತ್ ರಷ್ಯಾದೊಂದಿಗೆ ಹೊಂದಿದ್ದ ಶೀತಲ ಸಮರ ಮತ್ತು ವೈಜ್ಞಾನಿಕ ಪೈಪೋಟಿಯೇ ಮಹತ್ವದ ಕಾರಣವಾಗಿತ್ತು !
ಹೌದು. 1957 ರಲ್ಲಿ ಸೋವಿಯತ್ ರಷ್ಯಾ ಸ್ಪುಟ್ನಿಕ್ ಎಂಬ ಮೊದಲ ಕೃತಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಅನಂತರ 1969 ರಲ್ಲಿ ರಷ್ಯಾದ ಗಗನ ಯಾತ್ರಿ ಯೂರಿ ಗಗಾರಿನ್ ಗಗನನೌಕೆಯಲ್ಲಿ ಕುಳಿತು ಬಾಹ್ಯಾಕಾಶ ಯಾನ ಕೈಗೊಂಡರು. ಆ ವೇಳೆಗಾಗಲೇ ರಷ್ಯಾ ಮತ್ತು ಅಮೆರಿಕ ನಡುವೆ ಶೀತಲ ಸಮರ ನಡೆಯುತ್ತಿದ್ದ ಕಾರಣ ಎರಡೂ ದೇಶಗಳು ಶಸ್ತ್ರಾಸ್ತ್ರ ಪೈಪೋಟಿಯ ಜೊತೆಗೆ ಬಾಹ್ಯಾಕಾಶ ಸಾಧನೆ ವಿಷಯದಲ್ಲೂ ಪೈಪೋಟಿ ಆರಂಭಿಸಿದವು. ರಷ್ಯಾದ ಸಾಧನೆ ವಿಶ್ವ ಮಟ್ಟದಲ್ಲಿ ಅದರ ಗೌರವವನ್ನು ಇಮ್ಮಡಿಗೊಳಿಸಿತ್ತು. ಬಾಹ್ಯಾಕಾಶ ವಿಜ್ಞಾನದ ವಿಷಯದಲ್ಲಿ ರಷ್ಯಾ ಅಧಿಪತ್ಯ ಸಾಧಿಸತೊಡಗಿತ್ತು.
ರಷ್ಯಾದ ಈ ಸಾಧನೆ ಅಂದು ವಿಶ್ವದ ದೊಡ್ಡಣ್ಣ ಎನಿಸಿಕೊಳ್ಳುವ ಹಾದಿಯಲ್ಲಿದ್ದ ಅಮೇರಿಕಕ್ಕೆ ಇರಿಸು ಮುರುಸುಂಟುಮಾಡಿತ್ತು. ಇದೇ ಕಾರಣಕ್ಕೆ ಅಮೇರಿಕಾ ಬಾಹ್ಯಾಕಶ ವಿಜ್ಞಾನದ ಅಭಿವೃದ್ಧಿಗೆ ಹೆಚ್ಚಿನ ಹಣ ಹೂಡತೊಡಗಿತು. ಅಮೇರಿಕಾದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾ ರಷ್ಯಾದ ಸಾಧನೆಯನ್ನು ಸವಾಲಾಗಿ ಸ್ವೀಕರಿಸಿತು. ಯೂರಿ ಗಗರಿನ್ ಗಗನ ನೌಕೆಯಲ್ಲಿ ಕುಳಿತು ಬಾಹ್ಯಾಕಾಶದಲ್ಲಿ ಸಂಚರಿಸಿದ್ದರೆ, ತಾನು ಚಂದ್ರನಲ್ಲಿಗೇ ಹೋಗುವ ತೀರ್ಮಾನ ಕೈಗೊಂಡು ಹೊಸ ರಾಕೆಟ್ಗಳನ್ನು ಅಭಿವೃದ್ಧಿಪಡಿಸಿತು. ಕೊನೇಗೂ 1962 ರಲ್ಲಿ ಅಮೇರಿಕಾದ ಅಂದಿನ ಅಧ್ಯಕ್ಷ ಜಾನ್ ಎಫ್. ಕೆನಡಿ, ನಾವು ಚಂದ್ರನಲ್ಲಿಗೆ ಹೋಗುತ್ತಿದ್ದೇವೆ ಎಂದು ಘೋಷಿಸಿದರು.
1969 ರ ಜುಲೈ 16 ರಂದು ರಂದು ನಾಸಾ ನಿರ್ಮಿತ ಅಪೋಲೋ -11 ಗಗನ ನೌಕೆಯಲ್ಲಿ ಕುಳಿತು ಚಂದ್ರನತ್ತ ಹೊರಟ ಗಗನಯಾತ್ರಿಗಳಾದ ನೀಲ್ ಆರ್ಮಸ್ಟಾçಂಗ್, ಎಡ್ವಿನ್ ಇ. ಆಲ್ಡಿçನ್ ಮತ್ತು ಮೈಕಲ್ ಕಾಲಿನ್ಸ್ ಅವರ ತಂಡ ಜುಲೈ 20 ರಂದು ಚಂದ್ರನ ಮೇಲೆ ಇಳಿದು, ಮಣ್ಣಿನ ಮಾದರಿ ಸಂಗ್ರಹಿಸಿ ಜುಲೈ 21 ರಂದು ಹಿಂದಿರುಗಿದ್ದರು.
110 ಗಂಟೆ ಬಾಹ್ಯಾಕಾಶ ಪಯಣ ಜುಲೈ 15 ರಂದು ಅಮೆರಿಕ ಮಾನವ ಸಹಿತ ಚಂದ್ರಯಾನಕ್ಕೆ ಸಿದ್ಧವಾಯಿತು. ಮೂವರನ್ನು ಹೊತ್ತ ಸ್ಯಾಟರ್ನ್ ವಿ ರಾಕೆಟನ್ನು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಮೂಲಕ ಜುಲೈ 16, 1969 ರಂದು ಉಡಾವಣೆ ಮಾಡಲಾಯಿತು. ಅದು ಜುಲೈ 20 ರಂದು ಅಂದರೆ ಭೂಮಿಯಿಂದ ಹೊರಟು ಸುಮಾರು 110 ಗಂಟೆಗಳ ನಂತರ ಚಂದ್ರನ ಕಕ್ಷೆ ತಲುಪಿತು.
ಮೊಟ್ಟ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟ ನೀಲ್ ಆರ್ಮ್ಸ್ಟಾçಂಗ್, ಮನುಷ್ಯ ಇಟ್ಟ ಈ ಸಣ್ಣ ಹೆಜ್ಜೆಯು ಮಾನವ ಕುಲದ ಇತಿಹಾಸದಲ್ಲಿ ದೈತ್ಯ ಹೆಜ್ಜೆ ಎಂದು ಉದ್ಗರಿಸಿದರು. ಅವರ ಈ ಮಾತು ಟಿವಿಗಳಲ್ಲಿ ಪ್ರಸಾರವಾಯಿತು. ಆರ್ಮ್ಸ್ಟಾçಂಗ್ ಚಂದ್ರನ ಮೇಲೆ ಕಾಲಿಟ್ಟ 20 ನಿಮಿಷಗಳ ಬಳಿಕ ಎಡ್ವಿನ್ ಇ. ಆಲ್ಡಿçನ್ ಚಂದ್ರನ ಮೇಲೆ ಪಾದಾರ್ಪಣೆ ಮಾಡಿದರು. ಮೈಕಲ್ ಕಾಲಿನ್ಸ್ ಮಾಡ್ಯೂಲ್ ಪೈಲಟ್ ಆಗಿದ್ದರಿಂದ ಅವರು ಚಂದ್ರನ ಮೇಲೆ ನಡೆದಾಡಲು ಸಾಧ್ಯವಾಗಲಿಲ್ಲ.
ಚಂದ್ರಯಾನ ಮಾಡಿದ ಮೂವರಲ್ಲಿ ಇಬ್ಬರು ಲೂನಾರ್ ಮಾಡ್ಯೂಲ್ನಿಂದ ಆಚೆ ಬಂದು, ಚಂದ್ರನ ಮೇಲೆ 21 ಗಂಟೆ 36 ನಿಮಿಷ ಕಾಲ ಕಳೆದರು. ಈ ವೇಳೆ ಚಂದ್ರನ ಮೇಲಿರುವ ಮಣ್ಣು ಮತ್ತು ಧೂಳನ್ನು ಸಂಗ್ರಹಿಸಿ ತಂದರು. ಬಳಿಕ ಜುಲೈ 21 ರಂದು ಸರ್ವಿಸ್ ಮಾಡ್ಯೂಲ್ ಮತ್ತು ಲೂನಾರ್ ಮಾಡ್ಯೂಲ್ ಸಹಾಯದಿಂದ ಚಂದ್ರನಿAದ ಅವರು ಹೊರಟರು. ಅದು ಜುಲೈ 24 ರಂದು ಪೆಸಿಫಿಕ್ ಸಮುದ್ರಕ್ಕೆ ಬಂದು ಬಿತ್ತು. ಅಮೆರಿಕದ ಈ ಅಭೂತಪೂರ್ವ ಸಾಹಸವನ್ನು ಸುಮಾರು 65 ಕೋಟಿ ಜನರು ಕಣ್ತುಂಬಿಕೊAಡಿದ್ದರು.
2800 ಟನ್ ತೂಕದ ರಾಕೆಟ್
ಅಮೆರಿಕ ತನ್ನ ಮೊದಲ ಮಾನವ ಸಹಿತ ಚಂದ್ರಯಾನಕ್ಕೆ ಬಳಸಿಕೊಂಡ ರಾಕೆಟ್ ಸ್ಯಾಟರ್ನ್ -5 ನೇರವಾಗಿ ನಿಲ್ಲಿಸಿದಾಗ ಸುಮಾರು 100 ಮೀ. ಉದ್ದವಿರುವ ರಾಕೆಟ್, ಚಂದ್ರಯಾನದ ವೇಳೆ 20 ಟನ್ ಇಂಧನವನ್ನು ದಹಿಸಿತ್ತು. ಇದರ ಒಟ್ಟು ತೂಕ 2800 ಟನ್. ಸ್ಯಾಟರ್ನ್ ರಾಕೆಟ್ ಅತ್ಯಂತ ಶಕ್ತಿಶಾಲಿಯಾಗಿದ್ದು, ಈವರೆಗೂ ಇದಕ್ಕಿಂತ ಹೆಚ್ಚು ಶಕ್ತಿಯುತ ರಾಕೆಟ್ ಬೇರೊಂದಿಲ್ಲ.
ಚಂದ್ರನಲ್ಲಿ ಕಾಲಿಟ್ಟ ಅಪೋಲೊ -11 ನೌಕೆಯನ್ನು ಅತ್ಯಂತ ವಿಶೇಷವಾಗಿ ರೂಪಿಸಲಾಗಿತ್ತು. ಈ ಗಗನ ನೌಕೆಯನ್ನು 3 ಭಾಗವಾಗಿ ರೂಪಿಸಲಾಗಿತ್ತು. ಗಗನಯಾತ್ರಿಗಳ ಪ್ರಯಾಣಕ್ಕೆ ಕ್ಯಾಬಿನ್ ಇರುವ ಕಮಾಂಡ್ ಮಾಡ್ಯೂಲ್, ಸರ್ವೀಸ್ ಮಾಡ್ಯೂಲ್ ಮತ್ತು ಚಂದ್ರನಲ್ಲಿ ಲ್ಯಾಂಡ್ ಆಗಲು ಲೂನಾರ್ ಮಾಡ್ಯೂಲ್ಗಳನ್ನು ಹೊಂದಿತ್ತು. ಭೂಮಿಗೆ ಹಿಂದಿರುಗುವಾಗ ಕಮಾಂಡ್ ಮಾಡ್ಯೂಲ್ ಮಾತ್ರ ಇರುವಂತೆ ವ್ಯವಸ್ಥೆ ಮಾಡಲಾಗಿತ್ತು.
ಗಗನ ಯಾತ್ರಿಗಳ ಬಲಿದಾನ
ಚಂದ್ರನಲ್ಲಿ ಮಾನವನನ್ನು ಇಳಿಸಿದ ಯಶಸ್ಸಿನ ಹಿಂದೆ ಮೂರು ಗಗನ ಯಾತ್ರಿಗಳ ಬಲಿದಾನವೂ ಇದೆ. ಮಾನವ ಸಹಿತ ಚಂದ್ರಯಾನ ಉದ್ದೇಶದಿಂದ ಅಪೋಲೋ-1 ನೌಕೆಯನ್ನು 1967 ರಲ್ಲಿ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿತ್ತು. ಆದರೆ ತಾಂತ್ರಿಕ ದೋಷ ಕಾಣಿಸಿಕೊಂಡು ಕಮಾಂಡ್ ಮಾಡ್ಯೂಲ್ಗೆ ಬೆಂಕಿ ಹೊತ್ತಿಕೊಂಡು 3 ಗಗನಯಾತ್ರಿಗಳು ಸಜೀವ ದಹನವಾಗಿದ್ದರು. ಹಾಗಾಗಿ ಮಾನವಸಹಿತ ಚಂದ್ರಯಾನವನ್ನು 3ತಿಂಗಳ ಕಾಲ ಅಮಾನತಿನಲ್ಲಿಡಲಾಗಿತ್ತು. ಅದಾದ ಬಳಿಕ ಅಪೋಲೋ-8 ಗಗನನೌಕೆಯು 1968 ರ ಕ್ರಿಸ್ಮಸ್ ಸಂದರ್ಭ ದಲ್ಲಿ ಮಾನವಸಹಿತ ಚಂದ್ರಯಾನ ಕೈಗೊಂಡಿತ್ತು. ಅದು ಚಂದ್ರನಲ್ಲಿ ಲ್ಯಾಂಡ್ ಆಗಿರಲಿಲ್ಲ. ಅಂತಿಮವಾಗಿ ಅಪೋಲೋ- 11 ಮಾನವನನ್ನು ಚಂದ್ರನಲ್ಲಿಗೆ ಕೊಂಡೊಯ್ಯಲು ಯಶಸ್ವಿಯಾಯಿತು.
ಅಪೋಲೋ-11 ಯಶಸ್ಸಿನ ಬಳಿಕ 12 ಗಗನಯಾತ್ರಿಗಳು ಚಂದ್ರನಲ್ಲಿ ಕಾಲ್ಟಿಟರು. ಅವರೆಲ್ಲರೂ ಅಮೇರಿಕದ ಗಗನ ಯಾತ್ರಿಗಳೇ ಆಗಿರುವುದು ವಿಶೇಷ. ಅಪೋಲೋ ಸರಣಿ ಯಾತ್ರೆ ಮೂಲಕ ಅಮೆರಿಕ ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳುಹಿಸಿತು. ಚಾರ್ಲ್ಸ್ ಕಾನ್ರಾಡ್, ಆಲನ್ ಬೀನ್, ಆಲನ್ ಶೆಫರ್ಡ್, ಅಡ್ಗರ್ ಮಿಶೆಲ್, ಡೇವಿಡ್ ಸ್ಕಾಟ್, ಜೇಮ್ಸ್ ಇರ್ವಿನ್, ಜಾನ್ ಯುಂಗ್, ಚಾರ್ಲ್ಸ್ ಡ್ಯೂಕ್ ಮತ್ತು ಕೊನೆಯದಾಗಿ ೧೯೭೨ರಲ್ಲಿ ಅಪೋಲೋ-17 ರ ಮೂಲಕ ಚಂದ್ರನ ಮೇಲೆ ಕಾಲಿಟ್ಟವರು ಹ್ಯಾರಿಸನ್ ಜ್ಯಾಕ್ ಸ್ಮಿತ್.
1972 ರ ಹೊತ್ತಿಗಾಗಲೇ ಅಮೇರಿಕ ಬಾಹ್ಯಾಕಾಶ ವಿಜ್ಞಾನದಲ್ಲಿ ರಷ್ಯಾಕ್ಕಿಂತ ಮುಂದಿರುವುದನ್ನು ವಿಶ್ವದ ರಾಷ್ಟçಗಳೆದುರು ಸಾಬೀತು ಮಾಡಿತ್ತು. ಅಲ್ಲದೇ ಚಂದ್ರನ ಮೇಲೆ ಹೋಗುವ ಸಾಹಸಕ್ಕೆ ತಗುಲುವ ವೆಚ್ಚವೂ ವಿಪರೀತ ದುಬಾರಿಯಾಗತೊಡಗಿತು. ತನ್ನ ಕಾರ್ಯ ಸಾಧನೆಯಲ್ಲಿ ಯಶಸ್ಸು ಕಂಡಿದ್ದ ಕಾರಣ ಅಮೇರಿಕ 1972 ರ ಬಳಿಕ ಚಂದ್ರನ ಮೇಲೆ ಮನುಷ್ಯನನ್ನು ಕಳಿಸುವ ಸಾಹಸವನ್ನು ಸ್ಥಗಿತಗೊಳಿಸಿತು ಎನ್ನಲಾಗುತ್ತದೆ.
https://pragati.taskdun.com/let-the-dream-of-forest-construction-a-special-article/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ