ದಾಂಪತ್ಯ/ಪ್ರೀತಿಯ ಪಯಣದಲ್ಲಿ ಪರಿಶ್ರಮವೊಂದಿದ್ದರೆ ಜೀವನ ಹಾಲು ಜೇನಿನಂತೆ, ಕಹಿಯನ್ನು ದೂರವಿರಿಸಿ ಸಿಹಿಯನ್ನೇ ಉನಿಸುತ್ತದೆ ಎನ್ನುವುದಕ್ಕೆ ನಾ ಕಂಡ ಆ ಇಬ್ಬರು ಪ್ರಣಯ ಪಕ್ಷಿಗಳೇ ಸಾಕ್ಷಿ.ಅವರಿಬ್ಬರ ದೇಹವು ಗಾತ್ರದಲ್ಲಿ ಮನುಷ್ಯರಿಗಿಂತ ಸಣ್ಣದಾಗಿದ್ದರೂ ಅವುಗಳ ಆಲೋಚನೆ, ಪರಿಶ್ರಮ ಮಾತ್ರ ಮನುಷ್ಯನಿಗಿಂತಲೂ ಮಿಗಿಲಾಗಿದ್ದು, ಅತೀ ಬುದ್ಧಿವಂತಿಕೆಯ ಮಾನವನಿಗೇ ಸವಾಲು ಹಾಕಿತ್ತು.
ಎಂದಿನಂತೆ ಆ ದಿನವೂ ಮುಂಜಾನೆ ನನ್ನ ಕೆಲಸ ಮುಗಿಸಿ ವಾಸ್ತವ್ಯವಿದ್ದ ರೂಮಿನತ್ತ ಬಂದಿದ್ದೆ.ಇಂದಿನ ನವೀನ ಮಾದರಿಯಲ್ಲಿ ಕಟ್ಟಲಾಗಿದ್ದ ಆ ರೂಮಿಗೆ ನಾನು ಅದಾಗಲೇ ಪ್ರವೇಶ ಪಡೆದು ಕೆಲ ತಿಂಗಳುಗಳೇ ಉರುಳಿತ್ತು.ಹಾಗೆ ಬಂದವನೇ ಹಿಂಬದಿಯಲ್ಲಿ ಹಾಕಿದ್ದ ಚೇರ್ ನಲ್ಲಿ ಕೂತು ಇತರರೊಂದಿಗೆ ಕೊಂಚ ಕಾಲಹರಣ ಮಾಡುತ್ತಿದ್ದ ವೇಳೆ ಪಕ್ಕದಲ್ಲೇ ಇದ್ದ ಮರವೊಂದರಲ್ಲಿ ಪುಟ್ಟನೆಯ ಹಕ್ಕಿಯ ಗೂಡೊಂದು ಕಂಡಿತು.
ಸುತ್ತಲೂ ಸಣ್ಣ ಪುಟ್ಟ ಗಿಡಗಳು, ಅದಾಗಲೇ ಬೆಳೆಯುತ್ತಿರುವ ಸಾಲು ಮರ, ಅವುಗಳ ಪಕ್ಕದಲ್ಲೇ ಬೆಳೆದು ನಿಂತಿರುವ ಮರವೊಂದರ ಸಣ್ಣ ಗೆಲ್ಲು ನಮ್ಮ ರೂಮಿನ ಹಿಂಬದಿಯ ಶೀಟ್ ನಡಿಗೆ ಬಂದಿತ್ತು. ಶೀಟ್ ನೆರಳಿನಲ್ಲಿದ್ದ ಆ ಗೆಲ್ಲನ್ನೇ ಆರಿಸಿದ್ದ ಆ ಹಕ್ಕಿಗಳು ಗೂಡು ತಯಾರಿಸಲು ಪ್ರಾರಂಭಿಸಿ ಅದಾಗಲೇ ಒಂದೆರಡು ದಿನ ಕಳೆದಿತ್ತೇನೋ. ಸಣ್ಣ ಗಾತ್ರದ ಹಕ್ಕಿಗಳಾಗಿದ್ದರಿಂದ ನಮ್ಮ ಲೋಕಲ್ ಭಾಷೆಯಲ್ಲಿ ‘ಚಿಟ್ಟೆ ಹಕ್ಕಿ’ ಎಂದು ಕರೆಯುತ್ತಿದ್ದೆ.
ಏಕೋ ಅವುಗಳ ಕಾರ್ಯವೈಖರಿಯನ್ನು ಕಾಣುವ ಹಂಬಲದಿಂದ ಕೆಲ ಹೊತ್ತು ಅಲ್ಲೇ ಪಕ್ಕದಲ್ಲಿ ಕೂತಿದ್ದ ಸಂದರ್ಭ ಹಕ್ಕಿಗಳ ಆಗಮನವಾಯಿತು. ಬಂದವುಗಳೇ ತಮ್ಮ ಕೊಕ್ಕಿನಲ್ಲಿ ಸಣ್ಣ ಸಣ್ಣ ಹತ್ತಿ,ತರಗೆಲೆ ಮುಂತಾದವುಗಳನ್ನು ಜೋಡಿಸಿ ಗೂಡನ್ನು ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಭದ್ರವಾಗಿಸುತ್ತಿದ್ದವು.ಅವುಗಳ ಕೆಲಸ ಹೇಗಿತ್ತೆಂದರೆ, ಕೊಂಚವೂ ದಣಿವು, ಆಯಾಸವಿಲ್ಲದೆ ತಮ್ಮ ಪಾಡಿಗೆ ತಾವು ಗಿಡದಿಂದ ಗಿಡಕ್ಕೆ,ಸಣ್ಣ ಸಣ್ಣ ಪೊದೆಗಳ ಬಳಿಗೆ ಹಾರಿ ಏನನ್ನಾದರೂ ಸಂಗ್ರಹಿಸುವ ಗಂಭೀರ ತವಕ ಅವುಗಳಲ್ಲಿ ಕಂಡುಬಂತು.
ತಮ್ಮ ಕನಸಿನ ಕೂಸಿನ ಆಗಮನಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಉಳಿದಿರಬಹುದೇನೋ. ಆ ವೇಳೆಗೆ ಮೊದಲೇ ಕೂಸಿಗೆ ಬೆಚ್ಚಗಿನ ಅರಮನೆ ನಿರ್ಮಿಸುವ ಹಂಬಲ, ಕರ್ತವ್ಯ ಅವುಗಳದ್ದಾಗಿತ್ತು.ಅಂತೂ ಒಂದು ವಾರ ಕಳೆಯುವುದರೊಳಗಾಗಿ ಆ ಮರದಲ್ಲಿ ಚಿಕ್ಕದಾಗಿ ಚೊಕ್ಕದಾದ, ಬಲು ಸುಂದರವಾದ ಗೂಡು ನಿರ್ಮಾಣವಾಗಿತ್ತು.ಈಗ ಹಕ್ಕಿ ಆ ಗೂಡಿನಲ್ಲಿ ಮೊಟ್ಟೆ ಇಡಲು ತುದಿಗಾಲಿನಲ್ಲಿ ನಿಂತಿದೆ.ಈ ಪ್ರಾಕೃತಿಕ ವೈಶಿಷ್ಟ್ಯ ಕಂಡ ನನ್ನಲ್ಲಿ ಅವುಗಳ ಸಮಯಪ್ರಜ್ಞೆ ಹಾಗೂ ಕರ್ತವ್ಯ ನಿಷ್ಠೆಗೆ ಗೌರವ ಬಂದಿತ್ತಾದರೂ, ನರ ಸತ್ತ ಬೇತಾಳನಂತಿರುವ, ಎಲ್ಲವನ್ನೂ ಸುಲಭದಲ್ಲಿ ಗಳಿಸಲು ಹಪಹಪಿಸುವ ಬುದ್ಧಿ ಜೀವಿ ಮಾನವನ ಮೇಲೆ ಅಸೂಯೆ ಮೂಡಿತ್ತು.
ವಿದ್ಯಾರ್ಥಿ ನಿಲಯದಲ್ಲೇ ಬಾಲಕ ಆತ್ಮಹತ್ಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ