Kannada NewsKarnataka NewsLatest

ಆಶ್ರಮಗಳಿಂದ ನೆಮ್ಮದಿ ಸಾಧ್ಯ: ವೈ.ಎಸ್.ಪಾಟೀಲ

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ: ಮಠ, ಮಂದಿರ, ದೇವಸ್ಥಾನ, ಆಶ್ರಮಗಳಿಂದ ಮಾನಸಿಕ ನೆಮ್ಮದಿ ಸಾಧ್ಯ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ನಿವೃತ್ತ ಆಯುಕ್ತ, ಕೆಎಲ್‌ಇ ನಿರ್ದೇಶಕ ವೈ.ಎಸ್.ಪಾಟೀಲ ಹೇಳಿದರು.

ಅವರು ಬುಧವಾರ ಅಜಂ ನಗರದ ಶ್ರೀ ರೇಣುಕಾಶ್ರಮದಲ್ಲಿ ನಡೆದ ಲಕ್ಷ ದೀಪೋತ್ಸವದಲ್ಲಿ ಮಾತನಾಡುತ್ತ, ಹಬ್ಬ ಹರಿದಿನಗಳಲ್ಲಿಯಾದರೂ ಪ್ರತಿಯೊಬ್ಬರೂ ಇಂಥ ಸ್ಥಳಗಳ ದರ್ಶನ ಪಡೆದು ಪುನೀತರಾಗಬೇಕೆಂದರು.

ಆಧ್ಯಾತ್ಮಿಕ ಚಿಂತನೆ ಹಾಗೂ ಆಚಾರ, ವಿಚಾರಗಳಿದ್ದರೆ ಸಂಸಾರದ ಜಂಜಾಟಗಳು ಹೊರೆಯಾಗದೆ ಹಗುರವಾಗುತ್ತದೆ ಎಂದ ಅವರು, ಈ ಕಾರ್ಯ ಶ್ರೀ ರೇಣುಕಾಶ್ರಮ ಹಲವಾರು ವರ್ಷಗಳಿಂದ ಮಾಡುತ್ತ ಬಂದಿದ್ದು, ಇಲ್ಲಿ ಬಂದ ಅನೇಕ ನೊಂದು, ಬೆಂದ ಭಕ್ತರು ಉದ್ಧಾರವಾಗಿದ್ದಾರೆ ಎಂದರು.

ಸಾನಿಧ್ಯ ವಹಿಸಿದ್ದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ದೀಪೋತ್ಸವ ಮಾಡುವ ಮೊದಲು ಅದರ ಉದ್ದೇಶವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಕಾರ್ತಿಕ ಮಾಸದಲ್ಲಿ ನಡೆಯಲ್ಪಡುವ ಈ ದೀಪೋತ್ಸವ ಕಾರ್ಯ ಕೇವಲ ಕಾಟಾಚಾರಕ್ಕೆ ಆಗುತ್ತಿದ್ದು, ನಮ್ಮ ಪೂರ್ವಜರು ಮಾಡುತ್ತ ಬಂದಿದ್ದಾರೆ. ಅದರಂತೆ ನಾವು ಮಾಡುತ್ತಿದ್ದೇವೆ ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವುದು ಕಳವಳಕಾರಿ ಎಂದರು.

ದೀಪವೆಂದರೆ ಬೆಳಕು ಕೊಡುವುದು. ಕತ್ತಲೆಯನ್ನು ಹೊಡೆದೊಡಿಸುವ ಶಕ್ತಿ ದೀಪಕ್ಕೆ ಇರುವುದರಿಂದ ಅದರಲ್ಲಿರುವ ಬತ್ತಿ ತನನ್ನು ತಾನು ಸುಟ್ಟುಕೊಂಡು ಬೆಳಕು ನೀಡುವಂತೆ ಪ್ರತಿಯೊಬ್ಬರು ಪರರಿಗೆ ಉಪಕಾರ ಮಾಡುವಂಥ ಮತ್ತು ಬೆಳಕು ನೀಡುವಂತ ಕಾರ್ಯ ಮಾಡಬೇಕೆಂದು ಕರೆ ನೀಡಿದರು.
ಪರೋಪಕಾರಂವಿದಂ ಶರೀರಂ ಎಂಬ ತತ್ವಾದಾರದ ಮೇಲೆ ಜೀವಿಸುತ್ತ ತಾವು ಸುಖವಾಗಿದ್ದು, ಮನೆ ನೆರೆ, ಹೊರೆ, ಗ್ರಾಮಗಳಲ್ಲಿರುವ ಜನರೊಂದಿಗೂ ಅನ್ಯೋನ್ಯತೆಯಿಂದ ಜೀವನ ಸಾಗಿಸಬೇಕೆಂದರು. ಈ ಆಶ್ರಮಕ್ಕೆ ಬಂದು ಇಂಥ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜತೆಗೆ ಇಲ್ಲಿ ಬರುವ ಭಕ್ತಾಧಿಗಳು ತಮ್ಮದೆಯಾದ ಸಂಘಟನೆ ಮಾಡಿಕೊಂಡು ಆಶ್ರಮದ ಭಕ್ತರಲ್ಲಿ ಯಾರಾದರೂ ಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡುವ ಕಾರ್ಯ ಇಲ್ಲಿ ನಡೆಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ರೇಣುಕಾಶ್ರಮದ ಪೀಠಾಧಿಪತಿ ಮಾತೋಶ್ರೀ ಗಂಗಾಮಾತಾ ಅಮ್ಮನವರು ಮಾತನಾಡಿ, ಈ ಆಶ್ರಮವು ಕಳೆದ 42 ವರ್ಷಗಳಿಂದ ನಿರಂತರವಾಗಿ ಪ್ರತಿ ವರ್ಷ ದೀಪೋತ್ಸವ, ಶ್ರಾವಣ ಮಾಸದ ಕಾರ್ಯ ಹಾಗೂ ಧರ್ಮಜಾಗೃತಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತ ಬಂದಿದ್ದು, ಇದಕ್ಕೆಲ್ಲ ಭಕ್ತರ ಸಹಕಾರ ಸದಾಕಾಲ ಇದೆ. ಮುಂಬರುವ ದಿನಗಳಲ್ಲಿ ಇಂಥ ಕಾರ್ಯಕ್ರಮಗಳ ಹೆಚ್ಚು ಹೆಚ್ಚು ಈ ಆಶ್ರಮದಲ್ಲಿ ನಡೆಯುವ ಇಚ್ಛೆ ನಮ್ಮದಾಗಿದ ಎಂದರು.

ಈ ಸಂದರ್ಭದಲ್ಲಿ ಕೆಎಲ್‌ಇ ಹೃದಯ ರೋಗ ತಜ್ಞ ಡಾ. ಸುರೇಶ ಪಟ್ಟೆದ, ಜಿಪಂ ಮಾಜಿ ಸದಸ್ಯ ಮಹೇಶ ಬಾತೆ, ಗುರುಸಿದ್ಧಪ್ಪ ಇಟಗಿ, ಬಸವರಾಜ ಬಾತೆ, ಡಾ. ಇಂದಿರಾ ಶಂಕರಗೌಡರ, ನೈನಾ ಗಿರಿಗೌಡರ, ಭುವನೇಶ್ವರ ಮುರನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ದಿವ್ಯಾ ವಾಲಿ ನಿರೂಪಿಸಿ, ವಂದಿಸಿದರು.

‘ಟಿಪ್ಪುವಿನ ನಿಜಕನಸುಗಳು’ ಕೃತಿಯ ಮಾರಾಟಕ್ಕೆ ತಾತ್ಕಾಲಿಕ ತಡೆಯಾಜ್ಞೆ  

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button