ಪ್ರಗತಿವಾಹಿನಿ ಸುದ್ದಿ; ಕುಮಟಾ: ಇದು ಕೇವಲ ಪರೇಶ್ ಮೇಸ್ತಾ ಅವರ ವಿಚಾರಕ್ಕೆ ಮಾತ್ರ ಮಾಡುತ್ತಿರುವ ಸಮಾವೇಶವಲ್ಲ. ಇದು ಜನಜಾಗೃತಿ ಸಮಾವೇಶ. ಈ ಸಮಾವೇಶಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ನಿಮ್ಮೆಲ್ಲರಿಗೂ ಕೋಟಿ ನಮಸ್ಕಾರಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸರ್ವಜ್ಞ ಅವರು ಒಂದು ಮಾತು ಹೇಳಿದ್ದಾರೆ. ಹುಳಿಗಳಲ್ಲಿ ನಿಂಬೆ ಹುಳಿ ಶ್ರೇಷ್ಠ, ಕಪ್ಪು ಬಣ್ಣದಲ್ಲಿ ದುಂಬಿಯ ಕಪ್ಪು ಬಣ್ಣ ಶ್ರೇಷ್ಠ, ದೇವತೆಗಳಲ್ಲಿ ಶಿವನಿಗಿಂತ ಶ್ರೇಷ್ಠ ಮತ್ತೊಬ್ಬರಿಲ್ಲ. ಅದೇ ರೀತಿ ನಂಬಿಕೆಗಿಂತ ದೊಡ್ಡ ಗುಣ ಬೇರೊಂದಿಲ್ಲ ಎಂದು. ನಾನು ಕೂಡ ಉತ್ತರ ಕನ್ನಡ ಜಿಲ್ಲೆಯ ಜನ ನಮಗೆ ಶಕ್ತಿ ನೀಡುತ್ತೀರಿ ಎಂದು ನಂಬಿದ್ದೇನೆ. ಇಡೀ ಜಿಲ್ಲೆ ನರಳುತ್ತಿದೆ. ನೋವಿನಿಂದ ನಿಮ್ಮ ಬದುಕಲ್ಲಿ ಬದಲಾವಣೆಗೆ ಕಾಯುತ್ತಿದ್ದೀರಿ. ಜನಪರ ಆದಳಿತಕ್ಕೆ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಕೇಂದ್ರದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಅವರು ಆಗಾಗ್ಗೆ ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಆದರೆ ಇವರು ಕೊಟ್ಟ ಮಾತಿನಂತೆ ನಡೆದಿದ್ದಾರಾ? ಇದು ಬಸವಣ್ಣನ ಕರ್ನಾಟಕ ಇದು, ಕುವೆಂಪು, ಕನಕದಾಸರು, ಸಂತ ಶಿಶುನಾಳ ಶರೀಫರ ಕರ್ನಾಟಕ. ಈ ಕರ್ನಾಟಕ ಎಲ್ಲಿ ಹೋಯಿತು? ದ್ವೇ, ಅಸೂಯೆ, ಶಾಂತಿ ಭಂಗದ ಪರಿಣಾಮ ನಾವುಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಕರಾವಳಿ ಭಾಗಕ್ಕೆ ಯಾರೂ ವ್ಯಾಪಾರ ವಹಿವಾಟು ಮಾಡದ ಪರಿಣಾಮ ಇಲ್ಲಿನ ಯುವಕರು ಉದ್ಯೋಗ ಅರಸಿ ಬೇರೆ ರಾಜ್ಯ, ದೇಶಗಳಿಗೆ ಹೋಗುತ್ತಿದ್ದಾರೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಆಗದ ಕಾರಣ ಎಲ್ಲ ವಲಸೆ ಹೋಗಬೇಕಾಗಿದೆ. ಮೋದಿ ಅವರು ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು, ನಿಮ್ಮ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು. ಯಾವುದೂ ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಮಾಡುತ್ತಿರುವಾಗ ನೀವೆಲ್ಲರೂ ಬಂದು ಬೆಂಬಲ ನೀಡಿದ್ದಿರಿ. ಆ ಮೂಲಕ ನೀವು ಇಡೀ ದೇಶಕ್ಕೆ ಶಕ್ತಿ ತುಂಬಿದ್ದೀರಿ. ನಿಮ್ಮ ಹೆಜ್ಜೆ ಇತಿಹಾಸದ ಪುಟ ಸೇರಿದೆ. ಆ ಮೂಲಕ ನಿಮ್ಮ ಜೀವನದಲ್ಲಿ ಒಂದು ಮರೆಯಲಾದ ನೆನಪು ಮಾಡಿಕೊಂಡಿದ್ದೀರಿ. ನಾನು ಕೂಡ 400ಕ್ಕೂ ಹೆಚ್ಚು ಕಿ.ಮೀ ದೂರ ಪಾದಯಾತ್ರೆ ಮಾಡಿದ್ದೇನೆ. ಮೊಳ ಕಾಲ್ಮೂರು ಬಳಿ ಹಿರಿಯ ಮಹಿಳೆ ರಾಹುಲ್ ಗಾಂಧಿ ಅವರಿಗೆ ಸೌತೇಕಾಯಿ ಕೊಟ್ಟು, ಇದು ನಿಮ್ಮ ಅಜ್ಜಿ ಇಂದಿರಾ ಗಾಂಧಿ ಅವರು ಕೊಟ್ಟ ಜಮೀನಿನಲ್ಲಿ ಬೆಳೆದ ಸೌತೇಕಾಯಿ ಎಂದು ಸ್ಮರಿಸಿದರು. ಆ ಹೆಣ್ಣು ಮಗಳು ಆ ಮೂಲಕ ಹೃದಯ ಶ್ರೀಮಂತಿಕೆ ಮೆರೆದರು. ಆಗ ರಾಹುಲ್ ಗಾಂಧಿ ಅವರು ಸಂತುಷ್ಟರಾದರು ಎಂದರು.
ರಾಹುಲ್ ಗಾಂಧಿ ಅವರಿಗೆ ಮಾಧ್ಯಮ ಮಿತ್ರರೊಬ್ಬರನ್ನು ಪರಿಚಯಿಸಿದಾಗ ಅವರು ರಾಹುಲ್ ಅವರನ್ನು ನೀವು ಪ್ರಧಾನಮಂತ್ರಿ, ಮಂತ್ರಿ, ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಾಗ ಮಾಡಿ ಯಾಕೆ ಇಷ್ಟು ದೊಡ್ಡ ಪಾದಯಾತ್ರೆ ಮಾಡುತ್ತಿದ್ದೀರಿ? ಯಾರಿಗಾಗಿ ಮಾಡುತ್ತಿದ್ದೀರಿ ಎಂದು ಕೇಳಿದರು. ಅದಕ್ಕೆ ರಾಹುಲ್ ಗಾಂಧಿ ಅವರು ಉತ್ತರಿಸಿ, ‘ನಿಮ್ಮ ಮನೆಯಲ್ಲಿ ಯಾರಾದರೂ ಹುಟ್ಟಿದರೆ ಎಷ್ಟು ಜನ ಸಂತೋಷ ಪಡುತ್ತೀರಿ. ಸತ್ತರೆ ಎಷ್ಟು ಜನ ದುಃಖ ಪಡುತ್ತೀರಿ. ಆದರೆ ನಮ್ಮ ಕುಟುಂಬದಲ್ಲಿ ಹಾಗಲ್ಲ. ನಮ್ಮ ಕುಟುಂಬಕ್ಕೆ ಜನ ಪ್ರೀತಿ ಮತ್ತು ಅಧಿಕಾರ ನೀಡಿದ್ದಾರೆ. ನಮ್ಮ ಕುಟುಂಬದಲ್ಲಿ ಇಬ್ಬರು ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಗಾಗಿ ಪ್ರಾಣ ಬಲಿ ಕೊಟ್ಟಿದ್ದಾರೆ. ಜನ ನಮ್ಮ ಕುಟುಂಬಕ್ಕೆ ನೀಡಿರುವ ಪ್ರೀತಿಗೆ ಪ್ರತಿಯಾಗಿ ಅವರಿಗೆ ನೀಡಲು ನನ್ನ ಬಳಿ ಏನೂ ಇಲ್ಲ. ಆದೇ ಜನ ಇಂದು ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆಯಿಂದ ನರಳುತ್ತಿದ್ದಾರೆ. ಧರ್ಮ ದ್ವೇಷದಿಂದ ಇಬ್ಬಾಗವಾಗಿದ್ದಾರೆ. ಆದಾಯ ಕುಸಿಯುತ್ತಿದೆ. ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದ ಜನರನ್ನು ರಕ್ಷಿಸಿ ಶಕ್ತಿ ತುಂಬಬೇಕು. ಜನರ ಪ್ರೀತಿಯ ಋಣ ತೀರಿಸಲು ಎಷ್ಟು ತ್ಯಾಗ ಮಾಡಿದರೂ ಸಾಧ್ಯವಿಲ್ಲ ಎಂದರು.
ಇಂದು ಹಲವು ಮಂದಿ ಯುವಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಈ ದೇಶದ ತ್ರಿವರ್ಣ ಧ್ವಜವನ್ನು ಮೈಮೇಲೆ ಹಾಕಿಕೊಳ್ಳುವ ಅದೃಷ್ಟ ಕಾಂಗ್ರೆಸಿಗರಿಗೆ ಮಾತ್ರ ಇದೆ. ಬಿಜೆಪಿ ಹಾಗೂ ಜೆಡಿಸ್ ಸೇರಿದಂತೆ ಬೇರೆ ಪಕ್ಷದವರಿಗೆ ಇದನ್ನು ಹಾಕಿಕೊಳ್ಳುವ ಭಾಗ್ಯವಿಲ್ಲ. ಇದಕ್ಕೆ ಒಂದು ಇತಿಹಾಸವಿದೆ. ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ನೀಡಿದ್ದೇವೆ. ಈ ಸಮಾರಂಭಕ್ಕೆ ಸೇರಿರುವ ಜನಸಾಗರ, ಉತ್ಸಾಹ ನೋಡಿದರೆ ಸಂತೋಷವಾಗುತ್ತದೆ. ನೀವು ಎಂತಹ ಗಳಿಗೆಯಲ್ಲಿ ಈ ಕಾರ್ಯಕ್ರಮ ಮಾಡಿದಿದ್ದೀರಿ ಎಂದರೆ ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತ ಶಿಲುಬೆಗೆ ಏರಿದ ಗಳಿಗೆಯಲ್ಲಿ, ಪೈಗಂಬರ್ ಅವರು ದಿವ್ಯ ವಾಣಿ ಕೇಳಿದ ಗಳಿಗೆಯಲ್ಲಿ, ಭಿಮಾಬಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ನೀಡಿದ ಗಳಿಗೆಯಲ್ಲಿ, ಮಹಾತ್ಮ ಗಾಂಧಿ ಅವರ ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿದ ಗಳಿಗೆಯಲ್ಲಿ ಈ ಕಾರ್ಯಕ್ರಮದ ಜ್ಯೇತಿ ಬೆಳಗಿದ್ದೇವೆ.
ಮುಂದಿನ ಚುನಾವಣೆಯಲ್ಲಿ ಎಷ್ಟೇ ಜನ ಟಿಕೆಟ್ ಗೆ ಅರ್ಜಿ ಹಾಕಿದ್ದರೂ ನೀವೆಲ್ಲರೂ ಒಟ್ಟಿಗೆ ಕೆಲಸ ಮಾಡುವುದಾಗಿ ಪಣ ತೊಡಬೇಕು. ಕಾಂಗ್ರೆಸ್ ಮನೆ ಕಾಲಿಯಾಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ 1200ಕ್ಕೂ ಹೆಚ್ಚು ಜನ ಅರ್ಜಿ ಹಾಕಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 140-150 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರುವ ವಿಶ್ವಾವಿದೆ. ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಎಲ್ಲವನ್ನು ನೀಡಿದೆ.
ಮಾಜಿ ಸಂಸದರು ಹನಿ ಹನಿ ರಕ್ತ ನೀಡಿ ರಕ್ಷಣೆ ಮಾಡುವುದಾಗಿ ಹೇಳಿದ್ದಾರೆ. ಆದರೆ 2 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ನಿಮ್ಮ ಸರ್ಕಾರಕ್ಕೆ ಇವರಿಗೆ ರಕ್ಷಣೆ ನೀಡಲು ಆಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ನೀಡಲಿದೆ. ಬಿಜೆಪಿ ಚುನಾವಣೆ ಸಮಯದಲ್ಲಿ ಏನು ಭರವಸೆ ನೀಡಿದ್ದರು ಎಂದು ಅವರ ಪ್ರಣಾಳಿಕೆ ತೆಗೆದು ನೋಡಿ. ಆ ಬಗ್ಗೆ ನಾವು ನಿತ್ಯ ಪ್ರಶ್ನೆ ಕೇಳುತ್ತಿದ್ದೇವೆ. ಆದರೂ ಬೊಮ್ಮಾಯಿ ಅವರಾಗಲಿ, ಬಿಜೆಪಿಯ ಯಾವುದೇ ನಾಯಕರು ಬಾಯಿ ಬಿಚ್ಚುತ್ತಿಲ್ಲ. 1 ಲಕ್ಷದವರೆಗೂ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಯಾಕೆ ಮಾಡಲಿಲ್ಲ? ಮೈತ್ರಿ ಸರ್ಕಾರ ಬಂದಾಗ ನಮ್ಮ ಶಕ್ತಿ ಅನುಸಾರ ಸಾಲ ಮನ್ನಾ ಮಾಡಿದ್ದೇವೆ. ನಿಮ್ಮ ಡಬಲ್ ಇಂಜಿನ್ ಸರ್ಕಾರದಲ್ಲಿ ಯಾವುದಾದರೂ ಒಂದು ಜನಪರ ಯೋಜನೆ ಮಾಡಿದ್ದೀರಾ? ರೈತರ ಆದಾಯ ಡಬಲ್ ಮಾಡಿದ್ದೀರಾ? ಎಂದು ಪ್ರಶ್ನಿಸಿದರು.
ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಾದಾಗ ಆಸ್ಪತ್ರೆ ಬಿಲ್ ನೀಡುವುದಾಗಿ ಹೇಳಿದ್ದಿರಿ ಯಾರಿಗಾದರೂ ಕೊಟ್ಟರಾ? ಸತ್ತವರಿಗೆ ಪರಿಹಾರ ನೀಡುವುದಾಗಿ ಹೇಳಿದ್ದರು 4.5 ಲಕ್ಷ ಜನ ಸತ್ತಿದ್ದು ಎಂಟು ಜನರಿಗೆ ಪರಿಹಾರ ನೀಡಿದ್ದಾರೆ? ಆಕ್ಸಿಜನ್ ದುರಂತದಲ್ಲಿ ಸತ್ತವರಿಗೆ ಪ್ರಮಾಣಪತ್ರವೂ ನೀಡಲಿಲ್ಲ, ಪರಿಹಾರವನ್ನು ನೀಡಲಿಲ್ಲ. ಆದರೆ ನಾನು 36 ಮೃತರ ಮನೆ ಮನೆಗೆ ಹೋಗಿ 1 ಲಕ್ಷ ರೂ. ಚೆಕ್ ನೀಡಿ ಸಾಂತ್ವನ ಹೇಳಿದೆ. ಕೇವಿಡ್ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಲು ಮುಂದಾದಾಗ ಅವರಿಂದ ಮೂರುಪಟ್ಟು ಹೆಚ್ಚಿನ ಟಿಕೆಟ್ ದರ ವಸೂಲಿ ಮೂಲಕ ಸುಲಿಗೆ ಮಾಡಲು ಮುಂದಾದರು. ಅದನ್ನು ವಿರೋಧಿಸಿ ಪ್ರತಿಭಟನೆ ಮಾಡಿದೆವು. ಪಕ್ಷದ ಪರವಾಗಿ 1 ಕೋಟಿ ನೀಡುತ್ತೇವೆ, ಅವರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿ ಎಂದು ಆಗ್ರಹಿಸಿದ ಮೇಲೆ 1 ವಾರ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದರು. ಯಾವುದಾದರೂ ಒಂದು ಜನಪರ ಕೆಲಸವನ್ನು ಈ ಸರ್ಕಾರ ಮಾಡಿದೆಯಾ? ಎಂದು ಕಿಡಿಕಾರಿದರು.
ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವ ಕಾರ್ಮಿಕರಿಗೆ ತಿಂಗಳಿಗೆ 10 ಸಾವಿರ ಪರಿಹಾರ ನೀಡಿ ಎಂದು ಆಗ್ರಹಿಸಿದಾಗ, ಒಂದು ಬಾರಿ ತಿಂಗಳಿಗೆ 5 ಸಾವಿರ ನೀಡುವುದಾಗಿ ಘೋಷಿಸಿದರು. ಅದರಲ್ಲಿ ಎಷ್ಟು ಜನರಿಗೆ ನೀಡಿದ್ದಾರೆ? ಕೇಂದ್ರ ಸರ್ಕಾರದ ವತಿಯಿಂದ 21 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದರು. ನಿಮ್ಮಲ್ಲಿ ಯಾರಿಗಾದರೂ ಆ ಹಣ ಬಂದಿದೆಯಾ? ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಕೋವಿಡ್ ನಿಂದ ಸತ್ತಾಗ ಅವರ ಪಾರ್ಥೀವ ಶರೀರವನ್ನು ಅವರ ಊರಿಗೆ ತರಲು ಈ ಸರ್ಕಾರಕ್ಕೆ ಆಗಲಿಲ್ಲ. ಇದು ನಾಚಿಕೆಗೇಡಿನ ವಿಚಾರ. ಕೋವಿಡ್ ಶವಗಳನ್ನು ಕಸದ ಗುಂಡಿಗೆ ಎಸೆದರು. ನಮ್ಮ ಸಂಸದ ಡಿ.ಕೆ. ಸುರೇಶ್ ಪಿಪಿಇ ಕಿಟ್ ಧರಿಸಿ ಕೋವಿಡ್ ನಿಂದ ಸತ್ತವರ ಮೃತದೇಹದ ಅಂತ್ಯಸಂಸ್ಕಾರ ಮಾಡಿ ಬೇರೆಯವರಿಗೆ ಮಾದರಿಯಾದರು.
ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ. ಇಂದು ಯಾವ ರೀತಿ ನಾಟಕವಾಡುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರ 40% ಸರ್ಕಾರ ಎಂದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದರು. ಇದರ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಬೆಳಗಾವಿ ಗುತ್ತಿಗೆದಾರ ಸಚಿವರ ಕಮಿಷನ್ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ. ಹುಬ್ಬಳ್ಳಿಯ ಗುತ್ತಿಗೆದಾರ ಈಗ ದಯಾಮರಣಕ್ಕೆ ಪತ್ರ ಬರೆದಿದ್ದಾರೆ. ಇವು ಕೆಲವು ಉದಾಹರಣೆಗಳು ಮಾತ್ರ ಬೆಳಕಿಗೆ ಬಂದಿವೆ.
ಇಷ್ಟೆಲ್ಲಾ ಆದ ನಂತರ ಈಗ ಮತದಾರರ ಮಾಹಿತಿ ಕಳವು ಮಾಡಿ 27 ಲಕ್ಷ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಯಾವುದೇ ಒಬ್ಬ ವ್ಯಕ್ತಿಯ ಹೆಸರನ್ನು ಮತಪಟ್ಟಿಯಿಂದ ಕೈಬಿಡಬೇಕಾದರೆ ಅವರ ಮನೆಗೆ ಹೋಗಿ ಪರಿಶೀಲಿಸಬೇಕು. ಮತ ಸ್ಥಳಾಂತರ ಮಾಡಬೇಕಾದರೆ ಫಾರಂ 7 ಬೇಕು. ಆದರೆ ಅವರು ತಮ್ಮ ಪಕ್ಷ ಕಾರ್ಯಕರ್ತರನ್ನು ಕೂರಿಸಿಕೊಂಡು ಅವರಿಗೆ ಯಾರು ಬೇಕೋ ಅವರ ಹೆಸರನ್ನು ಸೇರಿಸುವುದು, ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಸಮುದಾಯದ ಮತದಾರರ ಹೆಸರು ತೆಗೆದುಹಾಕುವುದು ಮಾಡಿದ್ದಾರೆ. ಇದರ ವಿರುದ್ಧ ನಿನ್ನೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿ ನೇರವಾಗಿ ಇಲ್ಲಿಗೆ ಬಂದಿದ್ದೇನೆ. ನಿಮ್ಮ ಬೂತ್ ಗಳಲ್ಲಿ ಎಲ್ಲರೂ ಹೋಗಿ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಈ ಬಗ್ಗೆ ಜಾಗೃತರಾಗಿರಬೇಕು.
ಬಿಜೆಪಿಯವರು ಸೋಲುವ ಭೀತಿಯಲ್ಲಿ ಕಡೇ ಆಟ ಆಡುತ್ತಿದ್ದಾರೆ. ಅವರು ಚಿಲುಮೆ ಸಂಸ್ಥೆಗೆ ಇವಿಎಂ ಅನ್ನು ತಿರುಚಲು ಅವಕಾಶ ಕೊಡುತ್ತಾರಂತೆ. ಮಂತ್ರಿಯೊಬ್ಬ ಆರಂಭದಲ್ಲಿ ನನಗೆ ಅವರು ಗೊತ್ತೇ ಇಲ್ಲ ಎಂದ. ಈಗ ನನಗೂ ಅವರಿಗೂ ಸಂಬಂಧವಿದೆ, ಆದರೆ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಹೇಳುತ್ತಿದ್ದಾನೆ. ಆತ ಬಹಳ ದೊಡ್ಡ ಗಂಡು. ಆ ಬಗ್ಗೆ ನಂತರ ಮಾತನಾಡುತ್ತೇನೆ.
ಎಲ್ಲ ಜಾತಿ ಎಲ್ಲ ಧರ್ಮ ಒಂದೇ. ಬಿಜೆಪಿಯವರು ನಾವು ಹಿಂದೂಗಳು, ನಾವು ಮಾತ್ರ ಮುಂದು ಎನ್ನುತ್ತಾರೆ. ಆದರೆ ನಾವು ಹಿಂದೂ, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಜೈನರು ಸೇರಿದಂತೆ ಎಲ್ಲರೂ ಒಂದು ಎನ್ನುವವರು. ಇದೇ ನಮ್ಮ ತತ್ವ. ನಾನು ಇಲ್ಲಿಗೆ ಬರುವಾಗ ಹಾಲಕ್ಕಿ ಸಮಾಜದ ಹೆಣ್ಣು ಮಕ್ಕಳು ನನ್ನನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದರು. ಈ ಡಬಲ್ ಇಂಜಿನ್ ಸರ್ಕಾರಕ್ಕೆ ಅವರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಆಗುವುದಿಲ್ಲವೇ? ಅವರ ರಕ್ತವೂ ಕೆಂಪು, ನನ್ನ ರಕ್ತವೂ ಕೆಂಪಾಗಿದೆ. ನನ್ನ ಬೆವರೂ ಉಪ್ಪೇ, ಅವರ ಬೆವರೂ ಉಪ್ಪೇ. ಮನುಷ್ಯ ಯಾರೇ ಆದರೂ ನಾವೆಲ್ಲರೂ ಒಂದು. ಇದೇ ಮಾನವೀಯತೆ. ಮಾನವೀಯತೆ ತತ್ವದ ಮೇಲೆ ನಮ್ಮ ಪಕ್ಷ ನಿಂತಿದೆ. ಆದರೆ ಬಿಜೆಪಿ ಮಾತ್ರ ಜಾತಿ ವಿಷಬೀಜ ಬಿತ್ತುತ್ತಿದ್ದಾರೆ.
ಈ ದೇಶದ ಸಂವಿಧಾನದಲ್ಲಿ ಎಲ್ಲರಿಗೂ ರಕ್ಷಣೆ ನೀಡಬೇಕು ಎಂದು ಹೇಳಿದೆ. ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಈ ದೇಶಕ್ಕೆ ಸಂವಿಧಾನ ನೀಡಿದ್ದಾದರೂ ಯಾಕೆ? ಪ್ರಜಾಪ್ರಭುತ್ವ ಉಳಿಸಲು, ಎಲ್ಲರನ್ನು ಸಮಾನರಾಗಿ ಕಾಣಲು. ಕಾಂಗ್ರೆಸ್ ಪಕ್ಷಕ್ಕೆ ಜನ ಯಾವ ಕಾರಣಕ್ಕೆ ಶಿಕ್ಷೆ ನೀಡಿದ್ದಾರೋ ಗೊತ್ತಿಲ್ಲ. ಆದರೆ ಈಗ ಡಬಲ್ ಇಂಜಿನ್ ಸರ್ಕಾರದ ಆಡಳಿತ ನೋಡಿದ್ದೀರಿ. ನಿಮ್ಮ ಜೀವನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಸರ್ಕಾರದಿಂದ ನಿಮಗೆ ಏನಾದರೂ ಲಾಭ ಆಗಿದೆಯಾ? ರೈತರಿಗೆ ಕಡಿಮೆ ದರದಲ್ಲಿ ಗೊಬ್ಬರ ಸಿಗುತ್ತಿದೆಯೇ? ರೈತ ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಸಿಕ್ಕಿದೆಯೇ? ಯುವಕರಿಗೆ ಉದ್ಯೋಗ ಸಿಕ್ಕಿದೆಯೇ? ಈ ಬಗ್ಗೆ ನೀವು ಬಿಜೆಪಿಯನ್ನು ಪ್ರಶ್ನಿಸಿ. ನೀವು ಮತದಾನದ ಹಕ್ಕನ್ನು ಮಾರಿಕೊಳ್ಳಬೇಡಿ. ನಿಮ್ಮ ಮತದಾನ ಬದಲಾವಣೆಗಾಗಿ ಇರಬೇಕು.
ಮಂಗಳೂರಿನಿಂದ ಉತ್ತರ ಕನ್ನಡದವರೆಗೂ ಕರಾವಳಿ ಭಾಗದ ಅಭಿವೃದ್ಧಿ, ಇಲ್ಲಿ ಉದ್ಯೋಗ ಸೃಷ್ಟಿ, ಹಾಗೂ ಈ ಭಾಗದಲ್ಲಿ ಶಾಂತಿ ಕಾಪಾಡಲು ಪ್ರತ್ಯೇಕ ಪ್ರಣಾಳಿಕೆ ನೀಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ವಚನ. ಕಾಂಗ್ರೆಸ್ ಉದ್ಯೋಗ ಸೃಷ್ಟಿಗೆ ತೆಗೆದುಕೊಳ್ಳುತ್ತಿರುವ ಕಾರ್ಯಕ್ರಮ ಎಂದು ಭರವಸೆ ನೀಡಿದರು.
ಪರೇಶ್ ಮೇಸ್ತಾ ಅವರ ಸಾವಿನ ಮೇಲೆ ಬಿಜೆಪಿಯವರು ರಾಜಕಾರಣ ಮಾಡಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದರು. ಆದರೆ ಸಿಬಿಐ ವರದಿಯಲ್ಲಿ ಸತ್ಯಾಂಶ ಹೊರಬಂದಿದೆ. ಆಪರೇಷನ್ ಕಮಲದ ಮೂಲಕ ನೀವು ಹಲವರನ್ನು ಕರೆದುಕೊಂಡಿರಿ. ನಿಮ್ಮ ಪಕ್ಷದಿಂದ ಹಲವು ನಮ್ಮ ಪಕ್ಷ ಸೇರುತ್ತಿದ್ದಾರೆ. ಈ ಜಿಲ್ಲೆಯ ಬಿ.ಎಸ್ ಪಾಟೀಲ್ ಅವರು ಕೂಡ ಕಾಂಗ್ರೆಸ್ ಪಕ್ಷ ಸೇರಲು ಅರ್ಜಿ ಹಾಕಿದ್ದಾರೆ. ಸದ್ಯದಲ್ಲೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಮೊನ್ನೆಯಷ್ಟೇ ಯು.ಬಿ ಬಣಕಾರ್ ಅವರನ್ನು ಸೇರಿಸಿಕೊಂಡಿದ್ದೇವೆ. ಇನ್ನು ಜೆಡಿಎಸ್ ನಲ್ಲಿದ್ದ ಮಧು ಬಂಗಾರಪ್ಪ, ಪಕ್ಷದ ಕ್ಷೇತ್ರದ ಮಂಜುನಾಥ್ ಗೌಡರು ಸೇರಿದಂತೆ 30-35 ಮಂದಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇನ್ನು ಹಲವು ಮಂದಿ ಪಕ್ಷ ಸೇರುವವರಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ದೇಶವನ್ನು ಒಗ್ಗೂಡಿಸಲು ಪಾದಯಾತ್ರೆ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಹಿರಿಯ ನಾಯಕರು, 50 ವರ್ಷಗಳ ಕಾಲ ರಾಜಕೀಯ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವ ಭಾಗ್ಯ ಸಿಕ್ಕಿದೆ. ಈ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗಬೇಕು, ಈ ಭಾಗದ ಪ್ರಕೃತಿ ಸೌಂದರ್ಯಕ್ಕೆ ಶಕ್ತಿ ತುಂಬಬೇಕು. ಈ ಭಾಗದಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಕೇಳಿದ್ದೀರಿ. ಅದನ್ನು ಕಾಂಗ್ರೆಸ್ ಸರ್ಕಾರ ನೀಡಲಿದೆ. ಕ್ಯಾನ್ಸರ್ ಸೇರಿದಂತೆ ಬೇರೆ ಅನಾರೋಗ್ಯಗಳಿಗೆ ಚಿಕಿತ್ಸೆ ಪಡೆಲು ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಬೇಕು. ಮುಂದಿನ ದಿನಗಳಲ್ಲಿ ನಾವು ಎಲ್ಲ ತಾಲೂಕು ಕ್ಷೇತ್ರಗಳಿಗೆ ಬರುತ್ತೇವೆ. ನಿಮ್ಮ ಜತೆ ಮಾತನಾಡುವ ವಿಚಾರ ಸಾಕಷ್ಟಿದೆ. ನಿಮ್ಮ ಮತಗಳು ಈ ದೇಶದ ಆಸ್ತಿ. ಅವುಗಳನ್ನು ಕಾಪಾಡಿಕೊಳ್ಳಿ. ಈ ದೇಶದಲ್ಲಿ ಬದಲಾವಣೆ ತರಲು ನೀವೆಲ್ಲ ಸಹಾಯ ಮಾಡಬೇಕು.
ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಇಡೀ ರಾಜ್ಯಕ್ಕೆ ಸಂದೇಶ ರವಾನಿಸಿದ್ದೀರಿ. ನಿಮ್ಮ ಶಕ್ತಿ ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳು ಅಧಿಕಾರಕ್ಕೆ ಬಂದಂತೆ. ಈ ಜಿಲ್ಲೆಯಲ್ಲಿ ಆರು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ನೀವೆಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಗಡಿ ವಿವಾದ: ಸರ್ವಪಕ್ಷಗಳ ಸಭೆ ಕರೆದ ಸಿಎಂ
https://pragati.taskdun.com/karnataka-maharashtra-border-issuejath-taluqcm-basavaraj-bommaireaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ