Kannada NewsLatest

ಡಿ. 2ರಂದು ಬೆಳಗಾವಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಡಿಸೆಂಬರ್ 2ರಂದು ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದು ರಾಮದುರ್ಗ ತಾಲೂಕಿನಲ್ಲಿ ನಡೆಯಲಿರುವ  ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಹುಬ್ಬಳ್ಳಿ ಮೂಲಕ  ಆಗಮಿಸಲಿರುವ ಅವರು, ಬೆಳಗ್ಗೆ 11.40ಕ್ಕೆ ರಾಮದುರ್ಗ ತಾಲೂಕಿನ ದೊಡಮಂಗಡಿ ಗ್ರಾಮದ ಶ್ರೀ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವೇಶ್ವರರ ಕಂಚಿನ ಪುತ್ಥಳಿ  ಅನಾವರಣಗೊಳಿಸಲಿದ್ದಾರೆ.

ಮಧ್ಯಾಹ್ನ 12ಕ್ಕೆ ದೊಡಮಂಗಡಿ ಮೂಲಕ ರಸ್ತೆ ಮಾರ್ಗವಾಗಿ ಸಾಲಹಳ್ಳಿ ಗ್ರಾಮಕ್ಕೆ ಆಗಮಿಸಿ, ಅಲ್ಲಿನ ಡಾ. ಶ್ಯಾಮಪ್ರಸಾದ ಮುಖರ್ಜಿ ವೇದಿಕೆಯಲ್ಲಿ ಮಧ್ಯಾಹ್ನ 12.15ಕ್ಕೆ ನಡೆಯಲಿರುವ ಸಮಾರಂಭದಲ್ಲಿ ರಾಮದುರ್ಗ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

 

 ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಸಂನ್ಮೂಲ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ನಿ. ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಡಾ. ಶ್ಯಾಮ ಪ್ರಸಾದ ಮುಖರ್ಜಿ ವೇದಿಕೆಯಲ್ಲಿ ಶುಕ್ರವಾರ (ಡಿ.೨) ಬೆಳಿಗ್ಗೆ ೧೦ ಗಂಟೆಗೆ ರಾಮದುರ್ಗ ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಸಮಾರಂಭ ನಡೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗಮಿಸಲಿದ್ದಾರೆ.

ಅದೇ ರೀತಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರಗೇಶ್ ಆರ್.ನಿರಾಣ , ನಗರಾಭವೃದ್ಧಿ ಸಚಿವ ಬಿ. ಎ ಬಸವರಾಜ (ಭೈರತಿ), ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸಕಾಲ ಸಚಿವ ಬಿ.ಸಿ ನಾಗೇಶ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನೀಲ್ ಕುಮಾರ್ ಹಾಗೂ ಕೈಮಗ್ಗ ಮತ್ತು ಜವಳಿ, ಸಕ್ಕರೆ ಅಭಿವೃದ್ಧಿ ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ಅವರು ಮುಖ್ಯ ಅತಿಥಿಗಳಾಗಿ ಇರಲಿದ್ದಾರೆ.

ರಾಮದುರ್ಗ ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ಮಹಾದೇವಪ್ಪಾ ಯಾದವಾಡ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮಹೇಶ ಕುಮಠಳ್ಳಿ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ ಹಾಗೂ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಪಿ. ರಾಜೀವ ಅವರು ವಿಶೇಷ ಆಮಂತ್ರಿತರಾಗಿ ಆಗಮಿಸಲಿದ್ದಾರೆ.

ಕಾಮಗಾರಿಗಳ ವಿವರ:
ಸವದತ್ತಿ ತಾಲೂಕಿನ ನವಿಲು ತೀರ್ಥ ಡ್ಯಾಮ್ ನಿಂದ ರಾಮದುರ್ಗ ತಾಲೂಕಿನ ೧೩೭ ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಅಂದಾಜು ರೂ. ೪೩೯ ಕೋಟಿ ವೆಚ್ಚದ ಕಾಮಗಾರಿ ಭೂಮಿ ಪೂಜೆ ನಡೆಯಲಿದೆ.

ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದಿಂದ ಗೊಣ್ಣಾಗರ ಗ್ರಾಮದವರೆಗೆ ಅಂದಾಜು ರೂ.೧೨೬ ಕೋಟಿ ಮಲಪ್ರಭಾ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ, ಹಾಗೂ ರಾಮದುರ್ಗ ತಾಲೂಕಿನ ಗೊಡಚಿ-ಸಾಲಹಳ್ಳಿ ನಡುವಿನ ಬನ್ನೂರು ಗ್ರಾಮದಲ್ಲಿ ೨೨೦ ಕೆ. ವ್ಹಿ ವಿದ್ಯುತ್ ಸ್ವೀಕರಣ ಕೇಂದ್ರದ ಕಾಮಗಾರಿಯ ಭೂಮಿ ಪೂಜೆ ನಡೆಯಲಿದೆ.

ಅದೇ ರೀತಿಯಲ್ಲಿ ಅಂದಾಜು ರೂ. ೩.೨೪ ಕೋಟಿ ವೆಚ್ಚದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ರಾಮದುರ್ಗ ನೂತನ ಕಟ್ಟಡದ ಉದ್ಘಾಟನೆಯಾಗಲಿವೆ.

ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದಲ್ಲಿ ಅಂದಾಜು ರೂ. ೩.೦೧ ಕೋಟಿಯ ಸರ್ಕಾರಿ ಪ್ರೌಢಶಾಲೆಯ ೦೯ ನೂತನ ಕೊಠಡಿ ಹಾಗೂ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ೧೪ ನೂತನ ಕೊಠಡಿಗಳ ಹಾಗೂ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಅಂದಾಜು ರೂ. ೨.೧೫ ಕೋಟಿಯ ಸರಕಾರಿ ಪ್ರೌಢಶಾಲೆಯ ೦೭ ನೂತನ ಕೊಠಡಿ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ೦೮ ಕೊಠಡಿಗಳು ಉದ್ಘಾಟನೆಯಾಗಲಿವೆ.

ಸುಮಾರು ೨ ಕೋಟಿ ಅಂದಾಜು ವೆಚ್ಚದಲ್ಲಿ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ಸರ್ಕಾರಿ ಪಿ.ಯು ಕಾಲೇಜು ನೂತನ ಕಟ್ಟಡದ ಉದ್ಘಾಟನಾ ನಡೆಯಲಿದೆ.
ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಜಿ. ಕುಮಾರ ನಾಯಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ್ ಕುಮಾರ್ ಸಿಂಗ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಮೇಜರ್ ಮಣಿವಣ್ಣನ್ ಪಿ, ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಮೋಹನ್ ರಾಜ್ ಕೆ.ಪಿ, ಬೆಳಗಾವಿ ಉತ್ತರ ವಲಯದ ಆರಕ್ಷಕ ಮಾಹಾನಿರೀಕ್ಷಕರಾದ ಎನ್. ಸತೀಶ್ ಕುಮಾರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದರ್ಶನ್ ಹೆಚ್.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಉಪಸ್ಥಿತರಿರಲಿದ್ದಾರೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಶಶಿಕಾಂತ ನಾಯಕ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಕ್ಷ್ಮಣ ಬಬಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ನಾಲತ್ತವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಜೈಲು, 1ಲಕ್ಷ ರೂ. ದಂಡ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button