Latest

ಭೂಮಿಯ ಮೇಲೆ, ಬೆಳೆಯಬಹುದಾದ ಜಾಗದಲ್ಲಿ ಹುಲ್ಲು ಕಡ್ಡಿಯಾಗಿ ಹುಟ್ಟಬೇಕು ! ಯಾಕೆ ಗೊತ್ತಾ ?

ಕಥಾ ಲೇಖನ : ರವಿ ಕರಣಂ

ತುಂಬಾ ವರ್ಷಗಳ ಕೆಳಗೆ ಇದನ್ನು ಓದಿದ್ದೆ. ಅದು ಆಂಗ್ಲ ಭಾಷೆ ಕಲಿಯುವಾಗ, ಹಲವು ಕಥೆಗಳನ್ನು ಕಂಡ ಕಂಡಲೆಲ್ಲ ಕುಳಿತು ಓದುತಿದ್ದೆ. ಎಲ್ಲಿ? ಹೇಗೆ? ಗೊತ್ತಿಲ್ಲ. ನಿಮಗೂ ಈ ಕಥೆ ಗೊತ್ತಿದ್ದರೂ ಗೊತ್ತಿರಬಹುದು. ಇಲ್ಲದಿರಬಹುದು. ಇದನ್ನು ಪ್ರತಿಯೊಬ್ಬರೂ ಸಮಯ, ಸಂದರ್ಭಗಳಿಗೆ ಅನುಸಾರವಾಗಿ ಅನ್ವಯಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಮತ್ತು ಮನಸಿಗೆ ಮುಟ್ಟುವಂತಿದೆ. ಅದನ್ನು ನನ್ನ ಶೈಲಿಯಲ್ಲಿ ಹೇಳುತ್ತಿದ್ದೇನೆ. ಕಥೆಯ ನಿರೂಪಣೆಯನ್ನು ಮನಸು ಮರೆತಿಟ್ಟಿದೆ. ಇದನ್ನೋದಿ ವೇದಾಂತಿಗಳ ಗುಂಪಿಗೆ ನನ್ನನ್ನು ತಳ್ಳಿ ಬಿಡಬೇಡಿ. ನನಗೂ ವೇದಾಂತಕ್ಕೂ ಎಣ್ಣೆ ಸೀಗೆಕಾಯಿ ! ಜೀವನದ ಪ್ರತಿ ಕ್ಷಣವನ್ನು, ಕಬ್ಬಿನ ರಸ ಹಿಂಡಿ ಬಿಸಾಡಿದ ಮೇಲೆ, ಆ ಸಿಪ್ಪೆಯಲ್ಲಿ ರಸ ಇದ್ದೀತೇ? ಎಂದು ಹುಡುಕಿ, ಮತ್ತೆ ಅರಿಯುವ ಜಾಯಮಾನ ನನ್ನದು! ಬೆಟ್ಟೇನು ಕೆಲಸ ? ಇರಲಿ. ವಿಷಯ ಇಷ್ಟು.

ಅದೊಂದು ಚೆಂದದ ಉದ್ಯಾನವನ. ಪ್ರತಿ ದಿನ ಬೆಳಗಿನಲ್ಲಿ, ಸಂಜೆಯಲ್ಲಿ ಜನರ ಗುಂಪು ಅಲ್ಲಿ ಇದ್ದೇ ಇರುತಿತ್ತು. ಎತ್ತರದ ಹಸಿರು ಮರಗಳು. ನಡುನಡುವೆ ಹೂ ಗಿಡಗಳು. ಬಣ್ಣಗಳ ಸೆರಗನ್ನು ಹಾಸಿದಂತೆ, ಉದ್ಯಾನವನದ ಬೇಲಿಗುಂಟ ಕಾಣುತಿತ್ತು. ಅವುಗಳಿಗಾಗಿ ದುಂಬಿಗಳ ದಿಬ್ಬಣ. ಹಲವು ಬಣ್ಣದ ಚಿಟ್ಟೆಗಳು , ಅಲೆಗಳಂತೆರಗಿ ಬರುತ್ತಿದ್ದವು. ಉದ್ಯಾನವನದ ದಂಡೆಗುಂಟ, ಚೌಕ ಸಿಮೆಂಟು ಕಲ್ಲುಗಳ ಹಾದಿಯ ಮೇಲೆ ಹೂಗಳುದುರಿ, ನಡೆವವರ ಬರಿಗಾಲುಗಳಿಗೆ ಮುತ್ತಿಕ್ಕುತ್ತಿರುವಂತೆ ಭಾಸವಾಗುತಿತ್ತು. ಉದ್ಯಾನವನದ ನಡುವೆ ಹುಲ್ಲು ಗೇಣುದ್ದದಷ್ಟು ಬೆಳೆದು ನಿಂತಿತ್ತು. ಅದರ ನಡುವೆ ನಡು ತನಕ ಎತ್ತರವಿರುವ ದುಂಡನೆಯ ಕಲ್ಲು ಬಂಡೆ. ಅದರ ಸುತ್ತಲೂ ಬೆಳೆದಿದ್ದ ಹುಲ್ಲಿನ ಲವ ಲವಿಕೆಗೆ ಇಡೀ ವಾತಾವರಣ ಮಾರುಹೋಗಿತ್ತು. ಎಷ್ಟು ಚೆಂದ ! ಎಷ್ಟು ಉತ್ಸಾಹ ! ಎಷ್ಟು ಅಂದ ಅದರ ಸೌಮ್ಯ ನೋಟ ! ವ್ಹಾ ! ಅತ್ಯದ್ಭುತ !!!

ಪಂಪ ಒಂದು ಕಡೆ ಬಯಸುತ್ತಾನೆ. ನಾನು ಬನವಾಸಿಯಲ್ಲಿ ಮನುಷ್ಯನಾಗಿ ಅಲ್ಲದಿದ್ದರೂ ಮರಿದುಂಬಿಯಾಗಿ ಹುಟ್ಟಬೇಕೆಂದು ! ನಾನು ಹಾಗಲ್ಲ. ಭೂಮಿಯ ಮೇಲೆ, ಬೆಳೆಯ ಬಹುದಾದ ಜಾಗದಲ್ಲಿ ಹುಲ್ಲು ಕಡ್ಡಿಯಾಗಿ ಹುಟ್ಟಬೇಕು ! ಯಾಕೆ ಗೊತ್ತಾ ?

ಒಂದು ದಿನ ಇದ್ದಕ್ಕಿದ್ದ ಹಾಗೆ ದುಂಡನೆಯ ಕಲ್ಲು ಬಂಡೆ, ಹುಲ್ಲನ್ನು ಕುರಿತು ಮಾತಾಡತೊಡಗಿತು. ” ಎಲೆ ! ಹುಲ್ಲೆಽ, ನಾನು ಹಲವು ವರ್ಷಗಳಿಂದ ನೋಡುತ್ತಲೇ ಇದ್ದೇನೆ. ಎಂಥಾ ಜೀವನ ನಿನ್ನದು? ಎಂಥಾ ದೌರ್ಭಾಗ್ಯ ನಿನ್ನದು? ನಿನ್ನದೊಂದು ಬದುಕು ಬದುಕೇ? ನಿನ್ನನ್ನು ನೋಡಿ, ಅಯ್ಯೋಽಽ ಎನಿಸುತ್ತಿದೆ” ಎಂದಿತು.

ತಂಗಾಳಿಗೆ ಮೈಯೊಡ್ಡಿ, ಆನಂದ ಲಹರಿಯಲ್ಲಿ ಮೈಮರೆತಿದ್ದ ಹುಲ್ಲಿಗೆ, ರಸಭಂಗವಾದಂತೆನಿಸಿ, ಕಲ್ಲು ಬಂಡೆಯ ಕಡೆಗೆ ತಿರುಗಿತು. ಅದು ” ಓ! ಕಲ್ಲು ಬಂಡೆಯೇ, ನಿನಗೇಕೆ ಇಂದು ನನ್ನನ್ನು ಕಂಡು ಹಾಗೆನಿಸಿತು? ಯಾಕೆ ನನ್ನಿಂದ ಏನಾದರೂ ತೊಂದರೆಯಾಯಿತೇ ? ನಾನು, ನೀನು ಅದೆಷ್ಟೋ ವರ್ಷಗಳಿಂದ ಜೊತೆಯಾಗೇ ಇದ್ದೇವೆ. ನೀನು ಎಂದೂ ಹೀಗೆ ಕೇಳಿರಲಿಲ್ಲ. ನನಗಚ್ಚರಿ ಇಂದು ! ಯಾಕೆ ಹಾಗೆನಿಸುತ್ತಿದೆ ನಿನಗೆ ? ಎಂದಿತು.

ಕಲ್ಲು ಜಂಭದಿಂದ ನುಡಿಯ ತೊಡಗಿತು. “ಹುಲ್ಲೇ, ನಿನ್ನ ಪರಿಸ್ಥಿತಿ ಯಾರಿಗೂ ಬರುವುದು ಬೇಡ. ನಾನು ನೋಡುತ್ತಲೇ ಬಂದಿದ್ದೇನೆ. ಪ್ರತಿ ದಿನ ಇಲ್ಲಿಗೆ ಬರುವ ಜನ, ಪಾದರಕ್ಷೆಯಿಂದ ನಿನ್ನನ್ನು ತುಳಿದುಕೊಂಡು ಓಡಾಡುತ್ತಾರೆ. ಮಲಗುತ್ತಾರೆ. ನಿನ್ನ ಮೇಲೆಯೇ ಉಗುಳುತ್ತಾರೆ. ಅಷ್ಟೇ ಅಲ್ಲ, ಮಳೆಗಾಲದಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕು ಬೋರಲಾಗಿ ಬೀಳುತ್ತೀಯೆ. ಕೆಸರಿನ ಮಡುವಲ್ಲಿ ಹೂತು ಹೋಗುತ್ತಿಯೆ. ಬಿರುಗಾಳಿ ಬೀಸಿದಾಗ, ಆಸರೆಯಿರದೇ ದಿಕ್ಕಾಪಾಲಾಗಿ ಓಲಾಡಿ, ಬಸವಳಿಯುತ್ತೀಯೆ. ಬೇಸಿಗೆ ಬಂದಾಗಲಂತೂ ಹನಿ ನೀರು ಸಿಗದೇ, ಒಣಗಿ ವಟರಿಟ್ಟು ಹೋಗುತ್ತೀಯೆ. ಇದನ್ನು ನೋಡಿ. ಮರುಕ ಉಂಟಾಗುತ್ತಿದೆ. ಅದೇ ನನ್ನನ್ನು ನೋಡು. ದೇವರು ಎಂಥಾ ಸೌಭಾಗ್ಯವನ್ನು ಕರುಣಿಸಿದ್ದಾನೆ. ಯುಗ ಕಳೆದರೂ ನನ್ನ ಯಾರೂ ಏನೂ ಮಾಡಲಾಗಲಿಲ್ಲ. ನನ್ನ ಅಗಾಧ ಶಕ್ತಿಯ ಕಂಡು, ಜನ ತಂಟೆಗೆ ಬರುವುದೇ ಇಲ್ಲ” ಹೀಗೆ ಅದರ ಬಾಲ ಭಾಷೆ ಮುಂದುವರೆಯಿತು.

ಕಡೆಗೆ ಸುಮ್ಮನೆ ಕೇಳಿಸಿಕೊಂಡ ಹುಲ್ಲು ಉತ್ತರಿಸಿತು. “ಕಲ್ಲೇ ಽಽ, ಅಯ್ಯೋ ಮರುಳೇ ! ನಿನ್ನ ಅಜ್ಞಾನಕ್ಕೆ ಏನು ಹೇಳಲಿ? ನಿನಗೆ ಒಂದೇ ಮುಖ ಕಾಣಿಸಿದೆ. ಮತ್ತೊಂದು ಗೊತ್ತಿಲ್ಲ. ಕೇಳು. ನೀನು ಹೇಳಿದಂತೆ, ಪ್ರತಿ ದಿನ ಇಲ್ಲಿಗೆ ಬರುವ ಜನ, ಪಾದರಕ್ಷೆಯಿಂದ ನನ್ನನ್ನು ತುಳಿದುಕೊಂಡು ಓಡಾಡುತ್ತಾರೆ. ಮಲಗುತ್ತಾರೆ. ನನ್ನ ಮೇಲೆಯೇ ಉಗುಳುತ್ತಾರೆ. ನಾನು ಮಳೆ ಬಂದಾಗ ತೊಳೆದುಕೊಂಡು ಬಿಡುತ್ತೇನೆ. ಅಷ್ಟೇ ಅಲ್ಲ, ಮಳೆಗಾಲದಲ್ಲಿ ನಾನು ಮಳೆಯ ಹೊಡೆತಕ್ಕೆ ಸಿಕ್ಕು ಬೋರಲಾಗಿ ಬೀಳುತ್ತೇನೆ. ಕೆಸರಿನ ಮಡುವಲ್ಲಿ ಹೂತು ಹೋಗುತ್ತೇನೆ. ಚೂರು ಬಿಸಿಲು ಮತ್ತು ಗಾಳಿಗೆ ಮೈಕೊಡವಿ ಏಳುತ್ತೇನೆ. ಬಿರುಗಾಳಿ ಬೀಸಿದಾಗ, ಆಸರೆಯಿರದೇ ದಿಕ್ಕಾಪಾಲಾಗಿ ಓಲಾಡಿ, ಬಸವಳಿಯುತ್ತೇನೆ. ಆದರೆ ಬಿರುಗಾಳಿ ಕೆಲ ಹೊತ್ತು. ಮತ್ತೆ ಗಟ್ಟಿಯಾಗಿ ನಿಲ್ಲುತ್ತೇನೆ. ಹಾರಿ ಹೋಗಲ್ಲ ಮತ್ತೆ.

ಬೇಸಿಗೆ ಬಂದಾಗಲಂತೂ ಹನಿ ನೀರು ಸಿಗದೇ, ಒಣಗಿ ವಟರಿಟ್ಟು ಹೋಗುತ್ತೇನೆ. ಆದರೆ ಉಸಿರು ಬಿಗಿ ಹಿಡಿದು ಕಾಯುತ್ತೇನೆ. ಒಂದೇ ಒಂದು ಮಳೆ ಹನಿಗೆ, ಸಣ್ಣ ಬೇರೊಂದರಿಂದಲೇ ಚಿಗುರಿ ಎದ್ದು ನಿಲ್ಲುತ್ತೇನೆ. ಬೆಳೆಯುತ್ತೇನೆ. ಬೆಳೆಯುತ್ತಲೇ ಇರುತ್ತೇನೆ. ಈ ಎಲ್ಲ ಅಡೆ ತಡೆಗಳು ಬೆಳೆಯಲೋಸುಗ ! ಇದೇ ನನ್ನ ಸಾಮರ್ಥ್ಯ! ಇದೇ ನನ್ನ ಅಶಾ ಜೀವನ! ಅದೆಲ್ಲ ಸರಿ. ನಿನ್ನನ್ನು ಯುಗ ಕಳೆದರೂ ಯಾರೂ ಏನೂ ಮಾಡಲಾಗಲಿಲ್ಲ. ನಿನ್ನ ಅಗಾಧ ಶಕ್ತಿಯ ಕಂಡು, ಜನ ತಂಟೆಗೆ ಬರುವುದೇ ಇಲ್ಲ. ನಿನ್ನ ಸೌಭಾಗ್ಯಕ್ಕೆ ಎಣೆಯಿಲ್ಲ. ಅದೆಷ್ಟೇ ಇದ್ದರೂ ನಿನಗೆ ಬೆಳೆಯುವ ತಾಕತ್ತು ಇಲ್ಲ. ಅತ್ತಿತ್ತ ಚಲಿಸಲಾಗದಿದ್ದ ಮೇಲೆ, ನಿನ್ನ ಶಕ್ತಿಯ ಪ್ರಯೋಜನವೇನು? ನೀನು ಕಟ್ಟಡದ ಗೋಡೆಯಾಗಿ, ಭಾರ ಹೊರುವಲ್ಲಿ ದಣಿದು ಹೋಗುತ್ತಿಯೆ. ಭೂಮಿಗೂ ಭಾರವೇ!
ನಿನಗಿಂತ ನಾನೇ ವಾಸಿಯಲ್ಲವೇ ?” ಎಂದಿತು.

ಆಗ ಕಲ್ಲಿಗೆ ತನ್ನ ಗುಣದ ಅರಿವಾಗಿ ವಿಷಾದ ವ್ಯಕ್ತಪಡಿಸಿತು. ಜಂಭ ಮುರುಟಿ ಹೋಯಿತು. ಆಗ ಹುಲ್ಲು,” ಯಾರನ್ನೂ ಕೇವಲವಾಗಿ ಕಾಣದೇ, ಅವರವರ ಗುಣಧರ್ಮಕ್ಕೆ ಬೆಲೆ ಕೊಡಬೇಕು. ಶ್ರೇಷ್ಠ ಕನಿಷ್ಟ ಇವು ನಮ್ಮ ಅಜ್ಞಾನದ ಬೀಜಗಳು. ಹೆಮ್ಮರವಾಗಿ ಬೆಳೆಯಲು ಬಿಡಬಾರದು”. ಎಂದಾಗ, ಕಲ್ಲು ಅಕ್ಷರಶಃ ತಲೆಬಾಗಿತು.

ಆತ್ಮೀಯರೇ ಅರ್ಥವಾಯಿತೇ? ಕಲ್ಲು ಈ ಸಮಾಜ. ಹುಲ್ಲು ನಾವಾಗಬೇಕು. ಸಮಾಜ ನಮಗೆ ಯಾವತ್ತೂ ಗೌರವಿಸುವುದಿಲ್ಲ. ಅದು ಅವಮಾನ, ಅಪವಾದ, ಅಪಕೀರ್ತಿ,ನಿಂದನೆ, ತಾತ್ಸಾರ, ಅವಹೇಳನ, ಕಡೆಗಣನೆಗಳಿಂದಲೇ ನೋಡುತ್ತದೆ. ಅದರ ನಡುವೆ ಹುಲ್ಲಂತೆ ಎದ್ದು ಬರುವುದೊಂದೇ ನಮ್ಮ ಕಾಯಕವಾಗಬೇಕು.

ಸಮಾಜ ನಿಂತಲ್ಲೇ ನಿಂತಿರುತ್ತದೆ. ಬರೀ ಟೀಕೆಗಳಲ್ಲಿ ತನ್ನ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತದೆ. ನಾವು ಮಾತ್ರ ಅಮೂಲ್ಯ ಸಮಯವನ್ನು ನಮ್ಮ ಬೆಳವಣಿಗೆಗೆ ಮೀಸಲಿರಿಸಿ, ಕಾಯಕದಲ್ಲಿ ನಿರತರಾಗಬೇಕು.

ಅದಕ್ಕೆ ಮನಸ್ಸಲ್ಲಿಡಿ “ಹುಲ್ಲಾಗಿ ಹುಟ್ಟಲು ಇಚ್ಚಿಸುತ್ತೇನೆ. ಬೆಳೆಯುವದಕ್ಕಾಗಿ. ತೋರಿಸಿಕೊಳ್ಳಲು ಅಲ್ಲ. ಆನಂದದಿಂದಿರಲು”.
ನಮ್ಮ ಸುತ್ತಲಿನವರ ಬಗ್ಗೆ ಕಿಂಚಿತ್ತೂ ಗಮನ ಕೊಡಬೇಡಿ. ಕಾರಣ ನಮ್ಮ ಪ್ರಗತಿಗೆ ಅಡ್ಡಿಯನ್ನುಂಟು ಮಾಡಲೆಂದೇ ಇರುತ್ತಾರೆ. ಆದರೆ ನಮ್ಮ ಜೀವನದ ಯಶಸ್ಸಿನ ಚಕ್ರ ನಿರಂತರವಾಗಿ ತಿರುಗುತ್ತಲೇ ಇರಬೇಕು.

ಮಹಾರಾಷ್ಟ್ರ ಕನ್ನಡಿಗರಿಗೆ ಕರ್ನಾಟಕ ಸಿಎಂ ಆಹ್ವಾನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button