
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಚಿರತೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ 15 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ನೀಡಿದಂತೆ ಚಿರತೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೂ ಪರಿಹಾರ ಒದಗಿಸಲಾಗುವುದು. ಮೊದಲು ಕಾಡುಗಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಇಂಥ ಘಟನೆಗಳು ನಡೆಯುತ್ತಿದ್ದವು. ಈಗ ಬೆಂಗಳೂರಿನ ಆಸುಪಾಸಿನಲ್ಲಿ ಆಗುತ್ತಿರುವುದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕಳೆದ ಹಲವಾರು ದಿನಗಳಿಂದ ಅದರ ಬೇಟೆಯಾಡಲು ಪ್ರಯತ್ನ ಮಾಡಲಾಗುತ್ತಿದ್ದು ಅದಕ್ಕೆ ಬಲೆಯನ್ನೂ ಹಾಕಲಾಗಿದೆ. ಅದನ್ನು ಜೀವಂತವಾಗಿ ಹಿಡಿದು ಕಾಡಿಗೆ ಬಿಡಲು ಇಲಾಖೆಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ವಿಶೇಷ ತಂಡ:
ಬೆಂಗಳೂರು ಹಾಗೂ ಮೈಸೂರು ವಲಯದಲ್ಲಿ ಆನೆ ಕಾರಿಡಾರ್ ಸುತ್ತಮುತ್ತ ಚಿರತೆಗಳೂ ಇವೆ. ಚಿರತೆ ದಾಳಿ ಆಗುತ್ತಿರುವುದನ್ನು ತಡೆಯಲು ವಿಶೇಷ ತಂಡ ರಚಿಸಲಾಗಿದ್ದು, ನಿರ್ದಿಷ್ಟವಾಗಿ ಕ್ರಮಕೈಗೊಳ್ಳಲು ತಿಳಿಸಲಾಗಿದೆ. ಅವುಗಳನ್ನು ನಿಯಂತ್ರಿಸಲು ಹಾಗೂ ಕಾಡು ಬಿಟ್ಟು ಆಚೆ ಬಂದಿರುವ ಚಿರತೆಗಳನ್ನು ಹಿಡಿಯಲು ತಂಡ ಕಾರ್ಯಾಚರಣೆ ಮಾಡಲಿದೆ ಎಂದರು.
ಮಹಾ ಸಚಿವರ ಕುತಂತ್ರ ಬಿಜೆಪಿ ವರಿಷ್ಠರ ಗಮನಕ್ಕೆ ತನ್ನಿ: ಚಂದರಗಿ