Kannada NewsLatest

ಆರ್ ಸಿಯುಗೆ ಉತ್ತರ ಕರ್ನಾಟಕದವರನ್ನೇ ಕುಲಪತಿ ಮಾಡಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಉತ್ತರ ಕರ್ನಾಟಕದವರನ್ನೇ ಕುಲಪತಿಯನ್ನಾಗಿ ನೇಮಕ ಮಾಡಬೇಕು ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಆಗ್ರಹಿಸಿದ್ದು, ತಪ್ಪಿದಲ್ಲಿ ಕುಲಪತಿ ನೇಮಕದ ದಿನದಿಂದಲೇ ಪ್ರತಿಭಟನೆ ಹಾಗೂ ತೀವ್ರ ಹೋರಾಟವನ್ನು ಆರಂಭಿಸುವುದು ಅನಿವಾರ್ಯವಾಗುವುದೆಂದು ಎಚ್ಚರಿಸಿದೆ. 

ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟೆ.ದೇವೇಗೌಡ ಅವರಿಗೆ ಸಮಿತಿ ಪತ್ರ ಬರೆದಿದೆ. 

ಬೆಳಗಾವಿಯ ಕನ್ನಡಿಗರ ಹಾಗೂ ಕನ್ನಡ ಸಂಘ ಸಂಸ್ಥೆಗಳ ಹೋರಾಟದ ಫಲವಾಗಿ ಅಸ್ತಿತ್ವಕ್ಕೆ ಬಂದಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಗಳ ಸ್ಥಾನಕ್ಕೆ ನೇಮಕ ಮಾಡುವ ಪ್ರಕ್ರಿಯೆಯನ್ನು ಆರಂಭವಾಗಿದ್ದು ಈ ಸಂಬಂಧ ರಚಿಸಲಾದ ಶೋಧನಾ ಸಮಿತಿಯು ಆರಿಸಿದ ಮೂವರ ಸಂಭನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಬ್ಬರೂ ಸಹ ಉತ್ತರ ಕರ್ನಾಟಕಕ್ಕೆ ಸೇರಿಲ್ಲದಿರುವದು ಅತ್ಯಂತ ದುರ್ದೈವದ ಸಂಗತಿಯಾಗಿದೆ.

ಈ ಹುದ್ದೆಗಾಗಿ ಉತ್ತರ ಕರ್ನಾಟಕದ ಅನೇಕ ಸಮರ್ಥರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಶೋಧನಾ ಸಮಿತಿಯು ಯಾವದೋ ಪ್ರಭಾವಕ್ಕೆ ಹಾಗೂ ಒತ್ತಡಕ್ಕೆ ಒಳಗಾಗಿ ಇವರೆಲ್ಲರನ್ನೂ ಸಂಭವನೀಯ ಪಟ್ಟಿಯಿಂದ ಹೊರಗಿಟ್ಟಿದೆ.

ನಮಗೆ ತಿಳಿದಿರುವ ಪ್ರಕಾರ ಬೆಂಗಳೂರಿನ ರಾಮಚಂದ್ರೇಗೌಡ, ಮೈಸೂರಿನ ಪ್ರೊ. ರಾಜಣ್ಣ ಹಾಗೂ ದಾವಣಗೆರೆಯ ಪ್ರೊ. ಸೋಮಶೇಖರ ಅವರನ್ನು ಉಪಕುಲಪತಿ ಹುದ್ದೆಗಾಗಿ ಪರಿಗಣಿಸಿದೆ.

ಆದರೆ ಉತ್ತರ ಕರ್ನಾಟಕದ ಅನೇಕ ಶಿಕ್ಷಣ ತಜ್ಞರನ್ನು ಕಡೆಗಣಿಸಿದೆ. ಇದು ಉತ್ತರ ಕರ್ನಾಟಕದ ವಿರೋಧಿ ಕ್ರಮವಾಗಿದೆ.
ಮೈಸೂರಿನ ಪ್ರೊ. ರಾಜಣ್ಣ ಅವರ ಮೇಲೆ ಸಾಕಷ್ಟು ಗುರುತರ ಆರೋಪಗಳಿದ್ದು ಅವರ ಮೇಲೆ ವಿಚಾರಣೆಯೂ ನಡೆದಿದೆ. ಅಂಥವರ ಹೆಸರನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಗಳ ಸ್ಥಾನಕ್ಕೆ ಶಿಫಾರಸ್ಸು ಮಾಡಿರುವದು ಶೋಧನಾ ಸಮಿತಿಯ ಮೇಲಿನ ನಮಗಿರುವ ವಿಶ್ವಾಸವನ್ನು ಹಾಳುಗೆಡವಿದಂತಾಗಿದೆ.

ಈ ಹಿಂದಿನ ಉಪಕುಲಪತಿಗಳೊಬ್ಬರು ಕೆಲವು ಸಿಂಡಿಕೇಟ್ ಸದಸ್ಯರ ಜೊತೆಗೆ ಶಾಮೀಲಾಗಿ ನೇಮಕಾತಿ ಮತ್ತಿತರ ವಿಷಯಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಹೊತ್ತು ಬೆಳಗಾವಿಯಿಂದ ನಿರ್ಗಮಿಸಿರುವ ನೆನಪು ಬೆಳಗಾವಿ ಕನ್ನಡಿಗರಿಗೆ ಇನ್ನೂ ಮಾಸಿಲ್ಲ. ಇಂಥದರಲ್ಲಿ ಮತ್ತೊಬ್ಬ ಕಳಂಕಿತ ವ್ಯಕ್ತಿಯನ್ನು ಈ ಸ್ಥಾನಕ್ಕೆ ಕೂಡಿಸುವ ಯತ್ನ ಸರ್ವಾಥಾ ಸರಿಯಲ್ಲ.
ಆದ್ದರಿಂದ ತಾವು ಉಪಕುಲಪತಿ ಸ್ಥಾನಕ್ಕೆ ಉತ್ತರ ಕರ್ನಾಟಕದ ಸಮರ್ಥ ಹಾಗೂ ಕಳಂಕರಹಿತ ಶಿಕ್ಷಣ ತಜ್ಞರನ್ನು ನೇಮಿಸಲು ಶೋಧನಾ ಸಮಿತಿಗೆ ಕಟ್ಟುನಿಟ್ಟಿನ ಸೂಚನೆ ನೀಡುವುದು ಒಳ್ಳೆಯದೆಂದು ನಾವು ಭಾವಿಸಿದ್ದೇವೆ. ಒಂದು ವೇಳೆ ದಕ್ಷಿಣ ಕರ್ನಾಟಕ್ಕೆ ಸೇರಿದವರನ್ನು ಹಾಗೂ ಕಳಂಕಿತರನ್ನು ನೇಮಿಸಿದಲ್ಲಿ ಬೆಳಗಾವಿಯ ಕನ್ನಡ ಸಂಘಟನೆಗಳು ನೇಮಕದ ದಿನದಿಂದಲೇ ಪ್ರತಿಭಟನೆ ಹಾಗೂ ತೀವ್ರ ಹೋರಾಟವನ್ನು ಆರಂಭಿಸುವದು ಅನಿವಾರ್ಯ ಎಂದು ಎಚ್ಚರಿಸಲಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button