Kannada NewsKarnataka News

ಡಾ.ಎಂ.ವಿ.ಜಾಲಿ ಅವರಿಗೆ ನಾಳೆ ವಿಎಸ್ಕೆ ವಿವಿ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿಯ ಡಾ.ಪ್ರಭಾಕರ ಕೋರೆ ಕೆಎಲ್‌ಇ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕೆಎಲ್‌ಇಎಸ್ ಬೆಳಗಾವಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಡಾ.ಎಂ.ವಿ.ಜಾಲಿ ಅವರಿಗೆ ನಾಳೆ (ಶುಕ್ರವಾರ) ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ.

ಶುಕ್ರವಾರ ನಡೆಯಲಿರುವ ವಿವಿಯ ಘಟಿಕೋತ್ಸವದಲ್ಲಿ ರಾಜ್ಯಪಾಲ ಹಾಗೂ ವಿವಿಯ ಕುಲಾಧಿಪತಿಗಳೂ ಆಗಿರುವ ಥಾವರಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. ಕುಲಪತಿ ಪ್ರೊ.ಸಿದ್ದು ಪಿ ಅಲಗೂರು ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

ಲಂಡನ್‌ನ ಪ್ರತಿಷ್ಠಿತ ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ಫಿಜಿಸಿಯನ್ (ಎಫ್‌ಆರ್‌ಸಿಪಿ) ಗೌರವಕ್ಕೆ ಪಾತ್ರರಾಗಿರುವ ಡಾ.ಎಂ.ವಿ.ಜಾಲಿ ಅವರು ಖ್ಯಾತ ಮಧುಮೇಹ ತಜ್ಞರು. ಅವರು ಕೆಎಲ್‌ಇ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಮಧುಮೇಹ ಕೇಂದ್ರ ಉತ್ತರ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮಧುಮೇಹಿಗಳಿಗೆ ನೆರವಿನ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಡಾ.ಜಾಲಿ ಅವರು ಈ ಮಧುಮೇಹಿಗಳ ಆಪದ್ಬಾಂಧವ. ನೊಂದವರ ಕಣ್ಣೀರು ಒರೆಸಿ ಸಾಂತ್ವನ ಹೇಳುವ ಮಾತೃ ಹೃದಯಿ. ಎರಡು ತಿಂಗಳ ಹಸುಗೂಸು ಮಧುಮೇಹದಿಂದ ಬಳಲುತ್ತಿದ್ದಾಗ ಸಕಾಲಿಕ ಚಿಕಿತ್ಸೆ ನೀಡಿ ಮರುಜನ್ಮ ನೀಡಿದ ಹೆಗ್ಗಳಿಕೆ ಡಾ.ಜಾಲಿ ಅವರದ್ದು. ಸಾವಿರಾರು ಮಕ್ಕಳಿಗೆ ಉಚಿತ ಇನ್ಸುಲಿನ್ ನೀಡುವ ಮೂಲಕ ಆ ಮಕ್ಕಳ ಪಾಲಿನ ಆಪ್ತ ರಕ್ಷಕರಾಗಿದ್ದಾರೆ.

ಮಧುಮೇಹಿಗಳಿಗೆ ಕೇವಲ ಚಿಕಿತ್ಸೆ ನೀಡುವುದಷ್ಟೇ ಅಲ್ಲ ಅವರಿಗೆ ತಿಳಿವಳಿಕೆ, ಜ್ಞಾನ ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ಡಾ.ಎಂ.ವಿ.ಜಾಲಿ ಅವರು ತಮ್ಮ ಸಂಪಾದಕತ್ವದಲ್ಲಿ ಕಳೆದ ಎರಡು ದಶಕಗಳಿಂದ ಪ್ರಕಟಿಸುತ್ತಿರುವ ಮಧುಮೇಹ ವೈದ್ಯ ಪತ್ರಿಕೆ ರಾಜ್ಯದಾದ್ಯಂತ ವೈದ್ಯಕೀಯ ಕ್ಷೇತ್ರದಲ್ಲಿ ಮನೆಮಾತಾಗಿದೆ. ಡಾ.ಜಾಲಿ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಸಂಶೋಧಕರು ಕೂಡಾ. ಸಾಂಕ್ರಾಮಿಕ ರೋಗಗಳು ಮತ್ತು ಆನುವಂಶೀಯ ರೋಗ ಪ್ರವೃತ್ತಿಗಳ ಕುರಿತು ಡಾ.ಜಾಲಿ ಅವರು ನಡೆಸಿರುವ ಸಂಶೋಧನೆಯನ್ನಾಧರಿಸಿದ ಲೇಖನಗಳು ಜಗತ್ತಿನ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ.

ಡಾ.ಎಂ.ವಿ.ಜಾಲಿ ಅವರು ತಮ್ಮ ಅನುಪಮ ಸೇವೆಗಾಗಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನವದೆಹಲಿಯ ಭಾರತೀಯ ಹಿರಿಯ ನಾಗರಿಕರ ಸಂಘದ ಡಾ.ರಘುನಂದನ್ ಲಾಲ್ ಓರೇಸನ್ ಫೆಲೋಶಿಪ್, ನವದೆಹಲಿಯ ಪ್ರತಿಷ್ಠಿತ ಡಾ.ಬಿ.ಸಿ.ರಾಯ್ ಫೆಲೋಶಿಪ್, ಭಾರತೀಯ ಮಧುಮೇಹ ಸಂಘದ ಡಾ.ಆರ್.ವಿ.ಸಾಠೆ, ಭಾರತೀಯ ಹಿರಿಯ ನಾಗರಿಕರ ಕಲ್ಯಾಣ ಪ್ರಶಸ್ತಿ, ಹಿರಿಯ ನಾಗರಿಕರ ನಿಂದನೆ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ೨೦೨೧ರಲ್ಲಿ ಪ್ರಶಂಸಾ ಪತ್ರ ನೀಡಲಾಗಿದೆ. ಅಲ್ಲದೇ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರೆಡ್‌ಕ್ರಾಸ್ ರಾಜ್ಯ ಪ್ರಶಸ್ತಿ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರು ಗೌರವ ಫೆಲೋಶಿಪ್-೨೦೨೨, ಮತ್ತು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಐಪಿಎಫ್ ಮೆಡಿಕಾನ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕೂಡಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

https://pragati.taskdun.com/karnataka-maharashtra-border-issuecm-basavaraj-bommaiclarification/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button