ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗುಜರಾತ್ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಎಂದು ಹೇಳಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಈಗ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಸಂಪುಟ ವಿಸ್ತರಣೆಯ ಮಾತಿಲ್ಲ.. ಈ ವಿಚಾರವಾಗಿ ಟಾಂಗ್ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈಗ ಸಚಿವ ಸಂಪುಟ ವಿಸ್ತರಣೆ ಮಾಡಿ ಪ್ರಯೋಜನವೇನು? ಈಗ ಸಂಪುಟ ವಿಸ್ತರಣೆ ಯಾರಿಗೂ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಯತ್ನಾಳ್, ರಾಜ್ಯ ಸಂಪುಟ ವಿಸ್ತರಣೆ ಈಗ ಯಾರಿಗೂ ಬೇಕಾಗಿಲ್ಲ, ಎಲ್ಲಾ ಖಾತೆಯನ್ನೂ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಟ್ಟುಕೊಳ್ಳಲಿ. ಚುನಾವಣೆಗೆ ನಾಲ್ಕು ತಿಂಗಳಿರುವಾಗ ಸಚಿವರಾಗಿ ಏನು ಅಭಿವೃದ್ಧಿ ಮಾಡುತ್ತಾರೆ. ಈಗ ಮಂತ್ರಿಯಾಗಲು ಯಾರಿಗೂ ಆಸಕ್ತಿ ಇಲ್ಲ ಎಂದು ಹೇಳಿದರು.
ಎಲ್ಲರೂ ಹೊಸ ಸರ್ಕಾರದಲ್ಲಿ ಮಂತ್ರಿಯಾಗಬೇಕು ಎಂದು ಸುಮ್ಮನಿದ್ದಾರೆ. ಚುನಾವಣೆಗೆ ಮೂರ್ನಾಲ್ಕು ತಿಂಗಳಿರುವಾಗ ಸಂಪುಟ ವಿಸ್ತರಣೆ ಮಾಡಿ ಪ್ರಯೋಜನವಿಲ್ಲ ಎಂದರು.
ಇದೇ ವೇಳೆ ಈ ಬಾರಿ ರಾಜ್ಯ ಬಿಜೆಪಿಯಲ್ಲಿ ಹಲವು ಬದಲಾವಣೆಗಳು ಆಗಲಿವೆ. ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಬ್ರೇಕ್ ಬೀಳಲಿದೆ. ಗುಜರಾತ್ ರೀತಿ ಇಲ್ಲಿಯೂ ಹೊಸಬರಿಗೆ ಟಿಕೆಟ್ ನೀಡಬೇಕು. ರಾಜ್ಯದಲ್ಲಿಯೂ ಕೆಲ ಬದಲಾವಣೆಯಾಗಲಿದೆ ಎಂದು ಹೇಳಿದರು.
ಯಾರ ವಿರುದ್ಧ ಆರೋಪವಿದೆಯೋ ಅಂತವರಿಗೆ ಚುನಾವಣೆ ಟಿಕೆಟ್ ಕೊಡಬಾರದು. ಒಂದೇ ಕುಟುಂಬದ ಎರಡು ಮೂರು ಜನರಿಗೆ ಟಿಕೆಟ್ ಸಿಗುವಂತಿಲ್ಲ. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀಡುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಬೇಕಿದೆ. ಈ ನಿಟ್ಟಿನ ಚರ್ಚೆಯೂ ನಡೆದಿದೆ ಎಂದರು.
ಇದೇ ವೇಳೆ ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಡಿಸೆಂಬರ್ 22ರಂದು ನಮ್ಮ ಸಮುದಾಯದ ಅಂತಿಮ ಹೋರಾಟ ಅಥವಾ ವಿಜಯೋತ್ಸವ ನಡೆಯಲಿದೆ. ಡಿ.19ರ ಗಡುವು ನಾವು ಕೊಟ್ಟಿದ್ದಲ್ಲ. ಸಿಎಂ ಬೊಮ್ಮಾಯಿ ಅವರು ಕೊಟ್ಟಿದ್ದು. ವಿಧಾನಸಭಾ ಚುನಾವಣೆ ಫೆಬ್ರವರಿಯಲ್ಲಿ ಆಗಲಿ, ಮೇ ನಲ್ಲಾಗಲಿ ನೀತಿ ಸಂಹಿತೆ ಜಾರಿಗೂ ಮುನ್ನವೆ ಮೀಸಲಾತಿ ಘೋಷಣೆಯಾಗಲಿ ಎಂದು ಹೇಳಿದರು.
*ಪ್ರಧಾನಿ ಮೋದಿ ಹತ್ಯೆ ಮಾಡಿ ಎಂದ ಕಾಂಗ್ರೆಸ್ ನಾಯಕ*
https://pragati.taskdun.com/congress-leader-raja-pateriacontroversial-statementpm-narendra-modifir-file/
https://pragati.taskdun.com/r-ashokd-k-shivakumarvidhanasabha-election/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ