ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಸ್ವಚ್ಛ ಭಾರತ ಯೊಜನೆಯಡಿ 277ನೇ ಸ್ಥಾನದಲ್ಲಿರುವ ಬೆಳಗಾವಿಯನ್ನು 10ನೇ ಸ್ಥಾನದೊಳಗೆ ತರುವ ಗುರಿ ಇಟ್ಟುಕೊಂಡು ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಯ ಜೊತೆ ಕೈಜೋಡಿಸಿ ಕೆಲಸ ಮಾಡಲು ಬಿಲ್ಡರ್ಸ್ ಅಸೋಸಿಯೇಶನ್ (ಕ್ರೆಡೈ) ನಿರ್ಧರಿಸಿದೆ.
ಶುಕ್ರವಾರ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಂ ನಸ್ಲಾಪುರೆ ಅವರನ್ನು ಭೇಟಿ ಮಾಡಿದ ಕ್ರೆಡೈ ಪದಾಧಿಕಾರಿಗಳುಈ ಸಂಬಂಧ ಸುದೀರ್ಘ ಚರ್ಚೆ ನಡೆಸಿದರು.
ಹೊಟೆಲ್ ಗಳು ಸೇರಿದಂತೆ ವಾಣಿಜ್ಯ ಸಂಕೀರ್ಣಗಳಲ್ಲಿರುವ ಮೂತ್ರಾಲಯಗಳನ್ನು ಸಾರ್ವಜನಿಕ ಬಳಕೆಗೂ ಮುಕ್ತಗೊಳಿಸಬೇಕು. ಇದಕ್ಕಾಗಿ ವಾಣಿಜ್ಯ ಮಳಿಗೆಗಳಿಗೆ ನಿರ್ವಹಣೆಗಾಗಿ ಪಾಲಿಕೆಯಿಂದ ಆರ್ಥಿಕ ನೆರವು ನೀಡಬೇಕು. ಹೀಗೆ ಮಾಡುವುದರಿಂದ ಪಾಲಿಕೆಗೆ ಸಾರ್ವಜನಿಕ ಮೂತ್ರಾಲಯ ನಿರ್ಮಿಸಲು ಜಾಗದ ಸಮಸ್ಯೆಯೂ ಬರುವುದಿಲ್ಲ. ಜೊತೆಗೆ ಆರ್ಥಿಕ ಉಳಿತಾಯವೂ ಆಗಲಿದೆ ಎದು ಕ್ರೆಡೈ ಸಲಹೆ ನೀಡಿತು.
ಇದರ ಜೊತೆಗೆ ನಗರದಲ್ಲಿ ಅಕ್ರಮ ಬಡಾವಣೆ ಮತ್ತು 100 ರೂ. ಬಾಂಡ್ ಮೇಲೆ ಮನೆ ಕಟ್ಟುತ್ತಿರುವುದಕ್ಕೆ ಕಡಿವಾಣ ಹಾಕಬೇಕೆನ್ನುವ ಕುರಿತೂ ಇಬ್ಬರು ಆಯುಕ್ತರೊಂದಿಗೆ ಚರ್ಚಿಸಲಾಯಿತು. ಸಿಂಗಲ್ ಪ್ಲಾಟ್ ಲೇಔಟ್ ಗೆ ವಿಧಿಸಲಾಗುತ್ತಿರುವ ಶುಲ್ಕವನ್ನು ಹಿಂದಕ್ಕೆ ಪಡೆಯಬೇಕೆಂದು ಬುಡಾ ಆಯುಕ್ತರಲ್ಲಿ ಕ್ರೆಡೈ ವಿನಂತಿಸಿತು.
ಕ್ರೆಡೈ ರಾಜ್ಯ ನಿಯೋಜಿತ ಅಧ್ಯಕ್ಷ ಚೈತನ್ಯ ಕುಲಕರ್ಣಿ, ರಾಜ್ಯ ಜಂಟಿ ಕಾರ್ಯದರ್ಶಿ ಕೈಸ್ ನೂರಾನಿ, ಜಿಲ್ಲಾಧ್ಯಕ್ಷ ರಾಜೇಶ ಹೆಡಾ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ