ಪ್ರಗತಿವಾಹಿನಿ ಸುದ್ದಿ, ಚಾಮರಾಜನಗರ : ಚಾಮರಾಜನಗರ ಮತ್ತು ಗುಂಡ್ಲುಪೇಟೆಯ 754 ಕೋಟಿ ರೂ.ಗಳ ಯೋಜನೆಯ ಎರಡು ಪ್ರಸ್ತಾವನೆಗಳನ್ನು ಮಂಡಳಿ ಸಭೆಗೆ ಅನುಮೋದನೆಗಾಗಿ ಕಳುಹಿಸಲಾಗಿದ್ದು, ಶೀಘ್ರದಲ್ಲಿಯೇ ಅನುಮೋದನೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ತಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು.
ಸಮಗ್ರ ಜಿಲ್ಲೆಯ ಕೆರೆಗಳನ್ನು ತುಂಬಿಸಲು 1100 ಕೋಟಿ ರೂ.ಗಳ ಡಿಪಿಆರ್ ಸಿದ್ಧವಾಗಿದ್ದು, ಇದಕ್ಕೆ ಅನುಮೋದನೆಯಾದರೆ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವ ಬೃಹತ್ ಯೋಜನೆಯಾಗಲಿದ್ದು, ಈ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು. ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಇಡೀ ಜಿಲ್ಲೆಯ ಕೆರೆ ತುಂಬಿಸುವ ಯೋಜನೆಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ನೀರಾವರಿಯ ಐದು ಯೋಜನೆಗಳಿಗೆ ಮಂಜೂರಾತಿ ನೀಡಿ 694 ಕೋಟಿ ರೂ.ಗಳ ವೆಚ್ಚದಲ್ಲಿ 63 ಕೆರೆಗಳನ್ನು 2 ಯೋಜನೆಗಳಲ್ಲಿ ಪೂರ್ಣಗೊಳಿಸಿದ್ದು, ಗುಂಡ್ಲುಪೇಟೆ, ಮಟೇಹಳ್ಳ, ಕುಡ್ತರಿಹಳ್ಳ ಸೇರಿದಂತೆ ಇನ್ನೂ 3 ಯೋಜನೆಗಳನ್ನು 121 ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದರು.
*ಚಾಮರಾಜನಗರ ಕೈಗಾರಿಕಾ ಟೌನ್ ಶಿಪ್ :*
ನೀರಾವರಿ ಯೋಜನೆಗಳಿಂದ ಅಂತರ್ಜಲ ಹೆಚ್ಚಳವಾಗಿ, ಕೃಷಿ, ಕುಡಿಯುವ ನೀರು ಇವುಗಳಿಗೆ ಸಹಕಾರಿಯಾಗಲಿದೆ. ಇದರಿಂದ ಇಲ್ಲಿ ಜನವಸತಿ ಆರೋಗ್ಯವಂತರಾಗುತ್ತಾರೆ. ಚಾಮರಾಜನಗರ ಜಿಲ್ಲೆಯನ್ನು ಕೈಗಾರಿಕಾ ಜಿಲ್ಲೆಯಾಗಿ ಪರಿವರ್ತಿಸಲು ಸಾಧ್ಯವಿದೆ. ಈಗಾಗಲೇ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಟೌನ್ಶಿಪ್ ಸ್ಥಾಪಿಸಿ, ಸಾವಿರ ಎಕರೆ ಪ್ರದೇಶದಲ್ಲಿ ಬೃಹತ್ ಮತ್ತು ಸಣ್ಣ ಕೈಗಾರಿಕೆಗಳನ್ನು ಮಂಜೂರಾತಿ ಮಾಡಲಾಗುವುದು. ಯುವಕರ ಕೈಗೆ ಕೆಲಸ ಸಿಗಬೇಕು ಎಂಬ ಕಾರಣದಿಂದ ಚಾಮರಾಜನಗರಕ್ಕೆ ಈ ಯೋಜನೆಗಳಿಗೆ ಮಂಜೂರಾತಿ ನೀಡಲಾಗುವುದು ಎಂದರು.
*ಚಾಮರಾಜನಗರಕ್ಕೆ ಬರುವುದು ಶುಭಸೂಚನೆ :*
ಚಾಮರಾಜನಗರ ಜಿಲ್ಲೆಗೆ ಹೋಗುವುಮೂಲಕ ನಮ್ಮ ರಾಜಕೀಯ ಶಕ್ತಿ ವೃದ್ಧಿಯಾಗುತ್ತದೆಯೇ ವಿನ: ಕಡಿಮೆಯಾಗುವುದಿಲ್ಲ. ಬಹಳ ವರ್ಷಗಳಿಂದ ಅನಾವಶ್ಯಕವಾಗಿ ಒಂದು ಮೂಢನಂಬಿಕೆ ಉಳಿದುಕೊಂಡಿದೆ. ಇಲ್ಲಿರುವವರು ಮುತ್ತಿನಂಥ ಜನ, ಇಲ್ಲಿಯ ಜನರ ದರ್ಶನ ಮಾಡಿದರೆ ಅದು ಶುಭಸೂಚನೆ ಎಂದರು ಚಾಮರಾಜನಗರ ಗಡಿ ಜಿಲ್ಲೆ. ಇದರ ಸಮಗ್ರ ಹಾಗೂ ಯೋಜನಾಬದ್ಧ ಅಭಿವೃದ್ಧಿಯಾಗಬೇಕು. ಇಲ್ಲಿ ನೈಸರ್ಗಿಕ ಸಂಪತ್ತಿದೆ. ಅತ್ಯುತ್ತಮವಾದ ವನ್ಯಜೀವಿ ಸಂಪತ್ತು, ಕೆರೆಕಟ್ಟೆಗಳ ಸಂಪತ್ತು, ಕಷ್ಟಪಟ್ಟು ದುಡಿಯುವ ರೈತಾಪಿ ವರ್ಗದವರಿದ್ದಾರೆ. ಇಲ್ಲಿ ಅಭಿವೃದ್ಧಿಯಾಗುವ ಸಕಾಲ ಕೂಡಿಬಂದಿದೆ. ಜಿಲ್ಲೆಯಾಗಿ 25 ವರ್ಷಗಳಾದ ಮೇಲೆ ಮೂಲಸೌಕರ್ಯಗಳು ಇಲ್ಲಿ ಕಾಣುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲರನ್ನು ಸ್ಮರಿಸಬೇಕು. ಜಿಲ್ಲೆ ರಚನೆಯಾಗುವ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆ ಮಾಡುವಾಗ ಜೆ.ಹೆಚ್.ಪಟೇಲರು ಅತ್ಯಂತ ಸಂತೋಷದಿಂದ ಇದಕ್ಕೆ ಮುದ್ರೆ ಹಾಕಿದರು. ಅಧಿಕಾರ ಇದ್ದ ಸಂದಃಈದಲ್ಲಿ ಸಹಾಯ ಮಾಡಿದವರನ್ನು ಸ್ಮರಿಸುವುದು ಮಾನವೀಯ ಧರ್ಮ. ಅವರ ಸೇವೆಯನ್ನು ಸ್ಮರಿಸುತ್ತಾ ಚಾಮರಾಜನಗರಕ್ಕೆ ಹಲವಾರು ಯೋಜನೆಗಳ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
*ದುಡಿಯುವ ವರ್ಗಕ್ಕೆ ಮಹತ್ವ :*
ದುಡಿಯುವ ವರ್ಗಕ್ಕೆ ಅತ್ಯಂತ ಮಹತ್ವ ಕೊಡುತ್ತಿರುವ ಮೊಟ್ಟ ಮೊದಲು ಸರ್ಕಾರ ನಮ್ಮದು. ರೈತ ವಿದ್ಯಾ ನಿಧಿ, ಕುಶಲಕರ್ಮಿಗಳಿಗೆ ಸಹಾಯಧನ ಯೋಜನೆ, ಸ್ತ್ರೀ ಸಾಮಥ್ರ್ಯ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ರಾಜ್ಯದ ಜನ ಹಾಗೂ ಚಾಮರಾಜನಗರ ಜಿಲ್ಲೆಯು ಆರ್ಥಿಕವಾಗಿ ಸಲರಾಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳುತ್ತಿದೆ. ಅಭಿವೃದ್ಧಿಯಲ್ಲಿ ಪಕ್ಷಬೇಧವಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಸಾಮಾಜಿಕ ಸಾಮರಸ್ಯ ಮೂಡಿಸುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಿಸಲಾಗಿದೆ. ಜನಶಕ್ತಿಯ ಪರವಾಗಿ ರಾಜಶಕ್ತಿ ಸದಾ ಇರಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇದೊಂದು ಸಾಮಾಜಿಕ ಬದಲಾವಣೆಯ, ವೈಚಾರಿಕ ಕ್ರಾಂತಿಯಾಗಲಿದೆ. ಜನರಿಗೆ ನ್ಯಾಯ ಸಿಗಬೇಕಾಗಿರುವುದು ಮುಖ್ಯ. ಅಂತಿಮವಾಗಿ ಸತ್ಯವೇ ಗೆಲ್ಲಲಿದೆ ಎಂದರು.
*1048 ಕೋಟಿ ರೂ.ಗಳ ಯೋಜನೆಗಳು :*
ಅಮೃತ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಜಿಲ್ಲೆಯಲ್ಲಿ ಗುಂಡ್ಲುಪೇಟೆ 205 ಕೋಟಿ ರೂ., ಹನೂರು 435, ಕೊಳ್ಳೇಗಾಲಕ್ಕೆ 116 ಕೋಟಿ ಸೇರಿದಂತೆ ಒಟ್ಟು 1048 ಕೋಟಿ ರೂ.ಗಳ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
*ಚಾಮರಾಜನಗರದ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳು:*
ಚಾಮರಾಜನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಎಂದು ಪರಿಗಣಿಸಲಾಗಿದೆ. ಇಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣದ ಬಗ್ಗೆ ಗಮನಹರಿಸಲಾಗಿದೆ. ಒಂದೇ ವರ್ಷದಲ್ಲಿ ರಾಜ್ಯದಲ್ಲಿ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. 100 ಪಿಹೆಚ್ ಸಿ ಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ಚಿಕಿತ್ಸೆ, ಕನ್ನಡಕ, ಶ್ರವಣ ಸಾಧನಗಳನ್ನು ಒದಗಿಸಲಾಗುತ್ತಿದೆ. ಡಯಾಲಿಸಿಸ್ ಸೈಕಲ್ಸ್ ಹೆಚ್ಚಳ, ಕ್ಯಾನ್ಸರ್ ಚಿಕಿತ್ಸೆ ಕೇಂದ್ರಗಳ ಹೆಚ್ಚಳ ಮಾಡಲಾಗಿದೆ. ಆರೋಗ್ಯ ಅಭಿವೃದ್ಧಿ ಮತ್ತು ದುಡಿಯುವ ವರ್ಗಕ್ಕೆ ಬೆಂಬಲ ನೀಡಲಾಗುತ್ತಿದೆ. ಕೃಷಿಕರು ಆರ್ಥಿಕವಾಗಿ ಸದೃಢರಾಗಬೇಕು. ಶೂನ್ಯಬಡ್ಡಿದರದಲ್ಲಿ ಕೃಷಿ ಸಾಲ, ಯಶಸ್ವಿನಿ ಯೋಜನೆ ಪುನರಾರಂಭ, 600 ಕೋಟಿ ರೂ. ವೆಚ್ಚದಲ್ಲಿ ರೈತಶಕ್ತಿ ಯೋಜನೆ, ರೈತ ವಿದ್ಯಾನಿಧಿ ಜಾರಿ ಮಾಡಲಾಗಿದೆ. ಕುಂಬಾರರು, ಕಮ್ಮಾರ ಸೇರಿದಂತೆ ಕುಲಕಸುಬುದಾರರಿಗೆ ಧನಸಹಾಯ ಮಾಡುವ ಯೋಜನೆ ಜಾರಿ ಮಾಡಲಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಗಳಿಂದ 5 ಲಕ್ಷ ಮಹಿಳೆಯರಿಗೆ ಹಾಗೂ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದರು.
ಸಚಿವರಾದ ಆರ್. ಅಶೋಕ್, ವಿ.ಸೋಮಣ್ಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್.ನಿರಂಜನ ಕುಮಾರ್, ಮರಿತಿಬ್ಬೇಗೌಡ, ಸಂಸದ ಶ್ರೀನಿವಾಸ ಪ್ರಸಾದ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
*ಗಡಿ ಜಿಲ್ಲೆಯ 1500 ಕ್ಕೂ ಹೆಚ್ಚಿನ ಗ್ರಾಮ ಪಂಚಾಯತಿಗಳ ಅಭಿವೃದ್ಧಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಗಡಿ ಜಿಲ್ಲೆಯ 1500 ಕ್ಕೂ ಹೆಚ್ಚಿನ ಗ್ರಾಮ ಪಂಚಾಯತಿಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹನೂರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಚಾಮರಾಜನಗರಕ್ಕೆ ಸಚಿವ ಹಾಗೂ ಶಾಸಕನಾಗಿದ್ದ ಸಂದರ್ಭದಲ್ಲಿ ಭೇಟಿ ನೀಡಿದ್ದು, ಈಗ ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿರುವುದು ನನ್ನ ಪುಣ್ಯ ಎಂದರು. ಗಡಿ ಜಿಲ್ಲೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನಮ್ಮ ಸರ್ಕಾರ ನೀಡಿದೆ. ಗಡಿ ಜಿಲ್ಲೆಯ ಗ್ರಾಮ ಪಂಚಾಯತ್ಗಳ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳುವುದಾಗಿ ಈಗಾಗಲೇ ಬಜೆಟ್ ನಲ್ಲಿ ಘೋಷಿಸಲಾಗಿದೆ. ಗಡಿ ಭಾಗದ ಶಾಲೆಗಳು, ರಸ್ತೆಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಗೆ 100 ಕೋಟಿ ರೂ.ಗಳನ್ನು ಕಾಮಗಾರಿಗಳಿಗೆ ಬಿಡುಗಡೆ ಮಾಡುತ್ತಿದ್ದೇವೆ. ಗಡಿ ಭಾಗಗಳ ಜನರ ಸಂಪೂರ್ಣ ಅಭಿವೃದ್ಧಿಯನ್ನು ಕೈಗೊಳ್ಳಬೇಕಿದೆ. ನಡುಭಾಗದ ರಾಜ್ಯವನ್ನು ಗಮನಿಸಿದಷ್ಟೇ ದೂರದ ಪ್ರತಿ ಒಂದು ಗ್ರಾಮವನ್ನು ಅಭಿವೃದ್ಧಿ ಮಾಡುವ ಸಂಕಲ್ಪ ನಮ್ಮ ಸರ್ಕಾರಕ್ಕಿದೆ. ಕರ್ನಾಟಕದಲ್ಲಿರುವ ಗಡಿ ಭಾಗದ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿರುವುದರಿಂದ ಗಡಿಯಾಚೆ ಇರುವ ಕನ್ನಡಿಗರೂ ಕೂಡ ಅದೇ ರೀತಿಯ ಅಭಿವೃದ್ಧಿಯನ್ನು ಆಶಾಭಾವದಿಂದ ನೋಡುತ್ತಿದ್ದಾರೆ. ಹೀಗಾಗಿ ಗಡಿಯಾಚೆ ಇರುವ ಕನ್ನಡಿಗರು ವಾಸಿಸುವ ಪ್ರದೇಶಗಳಲ್ಲಿ ಶಾಲೆಗಳ ಅಭಿವೃದ್ದಿಗೆ ವಿಶೇಷ ಅನುದಾನ ಮೀಸಲಿಡುವ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
*ಅಭಿವೃದ್ಧಿಗೆ ಅಗತ್ಯ ಸಹಕಾರ*
ಮಲೆ ಮಹದೇಶ್ವರನ ಪುಣ್ಯ ಭೂಮಿ ಕರ್ನಾಟಕದ ಅತ್ಯಂತ ಅಭಿವೃದ್ಧಿಯಾಗಿರುವ ಭಾಗವಾಗಲಿದೆ. ಈ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಅಗತ್ಯ ಸಹಕಾರವನ್ನು ಸರ್ಕಾರ ನೀಡಲು ಸಿದ್ಧವಿದೆ. ಕೃಷಿ ಪ್ರಧಾನವಾಗಿರುವ ಈ ಭಾಗದಲ್ಲಿ ನೀರು ಕೊಟ್ಟರೆ, ಅದರ ಜೊತೆಗೆ ಶ್ರಮ ಸೇರಿದರೆ ಬಂಗಾರದ ಬೆಳೆ ತೆಗೆಯಬಹುದು. ಬರಗಾರ ಪೀಡಿತ, ಹಿಂದುಳಿದ ಪ್ರದೇಶ ಎಂಬ ಜಿಲ್ಲೆಯ ಹಣೆಪಟ್ಟಿ ಬರಲು ಮುಖ್ಯ ಕಾರಣ ನೀರು ದೊರಕದೇ ಇರುವುದು ಎಂದರು.
ಸಮಾನತೆಯ ಸಮಾಜ ನಿರ್ಮಾಣ
20 ಲಕ್ಷ ಹೊಸ ರೈತರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದೆ. ಯಶಸ್ವಿನಿ ಯೋಜನೆಯನ್ನು ಪುನ: ಪ್ರಾರಂಭಿಸಲಾಗಿದೆ. ಹಾಲು ಉತ್ಪಾದಕರಿಗೆ ವಿಶೇಷವಾದ ಹಣಕಾಸಿನ ನೆರವು, ರೈತ ವಿದ್ಯಾ ನಿದಿ,ü ಕುಶಲಕರ್ಮಿಗಳಿಗೆ ಸಹಾಯಧನ ನೀಡುವ ಕಾಯಕ ಯೋಜನೆ, ದುಡಿಯುವ ವರ್ಗಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸ್ತ್ರೀ ಸಾಮಥ್ರ್ಯ, ಸ್ವಾಮಿ ವಿವೇಕಾನಂದ ಯುವ ಶಕ್ತಿ, ಸಾಮಾಜಿಕ ನ್ಯಾಯವನ್ನು ಕೃತಿಯಲ್ಲಿ ತರಲು 100 ಅಂಬೇಡ್ಕರ್ ಹಾಸ್ಟೆಲ್, 50 ಕನಕದಾಸ ಹಾಸ್ಟೆಲ್, 75 ಯೂನಿಟ್ ವರೆಗೆ ಉಚಿತ ವಿದ್ಯುತ್, ಭೂಮಿ ಖರೀದಿಸಲು 20 ಲಕ್ಷ ರೂ.ಗಳು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡುವ ದೊಡ್ಡ ಕ್ರಾಂತಿಕಾರಿ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸಂವವಿಧಾನದ ಆಶಯದಂತೆ ನಿರ್ಣಯ ಕೈಗೊಳ್ಳಲಾಗಿದೆ. ಸಮಾನತೆಯ ಸಮಾಜ ನಿರ್ಮಾಣ ಮಾಡಲು ಮುಖ್ಯಮಂತ್ರಿಯಾಗಿ ಶ್ರಮಿಸುತ್ತಿದ್ದೇನೆ. ಸರ್ಕಾರ ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಂಡಾಗ ಬರುವ ಟೀಕೆಟಿಪ್ಪಣಿಗಳನ್ನು ನನ್ನ ಶಕ್ತಿಯನ್ನಾಗಿ ಮಾಡಿಕೊಳ್ಳುತ್ತೇನೆ ಎಂದರು.
*ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಅನುದಾನ :*
ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವ ಕಾರ್ಯಕ್ರಮಕ್ಕೆ ವಿಶೇಷ ಅನುದಾನ, 8000 ಶಾಲಾಕೊಠಡಿಗಳ ನಿರ್ಮಾಣ, 100 ಪಿಹೆಚ್ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 30 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಸಲಾಗಿದೆ. 6000 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಅದರಲ್ಲಿ 3000 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೊಳಿಸಿ ರಾಷ್ಟ್ರೀಯ ಹೆದ್ದಾರಿಗಳಿಗೆ ಜೋಡಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ, ಕರಾವಳಿ, ಗಡಿಭಾಗ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೊಳಿಸಲು ಡಬಲ್ ಇಂಜಿನ್ ಸರ್ಕಾರ ಶಕ್ತಿಯನ್ನು ತುಂಬಿದೆ ಎಂದರು.
*ಹಿಂದುಳಿದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಕಲ ಕ್ರಮ :*
ಅಮೃತ ಯೋಜನೆಯಡಿ ನಗರ ಪ್ರದೇಶದ ಅಭಿವೃದ್ಧಿಗೆ 7000 ಕೋಟಿ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಈ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ 274 ಕೋಟಿ ರೂ. ಅಮೃತ್-2 ಯೋಜನೆಯಡಿ ನೀಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದಿಂದ ರಾಜ್ಯ ಅಭಿವೃದ್ಧಿಯಾಗುತ್ತಿದೆ. ಈ ಸರ್ಕಾರದ ಅವಧಿಯಲ್ಲಿ ಹಾಳೆಯಲ್ಲಿನ ಸರ್ಕಾರದ ಯೋಜನೆಗಳು ಭೌಧಿಕವಾಗಿ ಜನರಿಗೆ ತಲುಪುತ್ತಿವೆ. ಅಭಿವೃದ್ಧಿ ನಿರಂತವಾಗಿ ನಡೆಯುತ್ತದೆ. ಹಿಂದುಳಿದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಕಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ 7 ಕೆರೆ ತುಂಬಿಸುವ ಯೋಜನೆ ಪ್ರಮುಖವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕೆಗಳಲ್ಲಿ ಎಸ್ ಸಿ ಎಸ್ ಟಿಗಳಿಗೆ ಪ್ರಾತಿನಿಧ್ಯ, ಆಸ್ಪತ್ರೆ ನಿರ್ಮಾಣ, ರೈತರಿಗೆ ಸಾಗುವಳಿ ಪತ್ರ ನೀಡಲು ಕಾನೂನು ಕ್ರಮ , ಉಡುತೊರೆ ನೀರಾವರಿ ಯೋಜನೆಗೆ ಮಂಜೂರಾತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾರಂಭದಲ್ಲಿ ಸಚಿವ ಆರ್.ಅಶೋಕ್, ವಿ.ಸೋಮಣ್ಣ, ಶಾಸಕರಾದ ಎನ್.ಮಹೇಶ್, ನಿರಂಜನ್ ಕುಮಾರ್, ನರೇಂದ್ರ .ಆರ್. ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ