ಚಾಲುಕ್ಯರ ಮನೆತನದಲ್ಲಿಯೇ ಇಮ್ಮಡಿ ಪುಲಿಕೇಶಿ ಎಂದೂ ಅಜರಾಮರ

– ರವಿ ಕರಣಂ
ಬಾದಾಮಿ ಯಾರಿಗೆ ಗೊತ್ತಿಲ್ಲ ? ಒಂದಲ್ಲ ಒಂದು ವಿಷಯದ ಸಲುವಾಗಿ ಲಕ್ಷೋಪಲಕ್ಷ ಜನರು ಇಲ್ಲಿಗೆ ಬಂದೇ ಬರುತ್ತಾರೆ. ಧಾರ್ಮಿಕ ಶ್ರದ್ಧಾ ಕೇಂದ್ರ ಬನಶಂಕರಿ, ಬಾದಾಮಿಯಿಂದ ಕೇವಲ ನಾಲ್ಕು ಕಿಮೀ ಅಂತರದಲ್ಲಿದೆ. ಮತ್ತೆ ಕೆಲವರು ಐತಿಹಾಸಿಕ ಸ್ಥಳ ನೋಡಲು ಬರುತ್ತಾರೆ. ಶೈಕ್ಷಣಿಕ ಪ್ರವಾಸಕ್ಕೆ ತಂಡೋಪ ತಂಡವಾಗಿ ಮಕ್ಕಳು ಬರುತ್ತಾರೆ. ಹಲವು ಕಾರಣಗಳಿಂದಾಗಿ ಇದು ಪ್ರಸಿದ್ಧ ಸ್ಥಳ. ಇದು ಚಾಲುಕ್ಯರ ನೆಲೆಯಾಗಿತ್ತು. ಅಲ್ಲದೇ ಅತ್ಯದ್ಭುತ ಕಾರ್ಯಗಳು ಜರುಗಿದ್ದು, ತಿಳಿದುಕೊಳ್ಳುವ ಅವಶ್ಯಕತೆ ಇದೆ. ಇಡೀ ಬಾದಾಮಿ ಚಾಲುಕ್ಯರ ಇತಿಹಾಸದಲ್ಲಿ ಇಮ್ಮಡಿ ಅಥವಾ ಎರಡನೇ ಪುಲಿಕೇಶಿ ಎಂದೂ ಅಜರಾಮರ. ಅವನನ್ನು ಕುರಿತು ತಿಳಿಯೋಣ.

ಪುಲಿಕೇಶಿಯ ಬೆಳವಣಿಗೆ:

ಎರಡನೇ ಪುಲಿಕೇಶಿಯ ತಂದೆ ಕೀರ್ತಿವರ್ಮ. ಪುಲಿಕೇಶಿಯು ಚಿಕ್ಕವನಿರುವಾಗಲೇ ತೀರಿಕೊಂಡ ಕಾರಣ, ಚಾಲುಕ್ಯ ಸಾಮ್ರಾಜ್ಯದ ಆಡಳಿತವನ್ನು, ಪುಲಿಕೇಶಿಯ ಚಿಕ್ಕಪ್ಪ ಮಂಗಳೇಶನು ಅಧಿಕಾರವಹಿಸಿಕೊಂಡು, ಆಡಳಿತ ನಡೆಸಿಕೊಂಡು ಬಂದನು. ಚಿಕ್ಕಂದಿನಲ್ಲಿಯೇ ಪಾಲಕರಿಲ್ಲದ ಪುಲಿಕೇಶಿಗೆ ಅಜ್ಕಿಯಿಂದಲೇ ಶಿಕ್ಷಣ, ಸಂಸ್ಕಾರ, ರಾಜ ಪರಂಪರೆಯ ನಡತೆಗಳೆಲ್ಲವೂ ದೊರೆತು ಅಪ್ರತಿಮ ಯುದ್ಧ

ವೀರನಾಗಿ ಹೊರ ಹೊಮ್ಮಲು ಕಾರಣವಾಯಿತು.

ಪುಲಿಕೇಶಿಯು ಬೆಳೆದು ದೊಡ್ಡವನಾದ ಮೇಲೆ, ತಂದೆಯ ಸಿಂಹಾಸನವನ್ನು ಬಿಟ್ಟು ಕೊಡುವಂತೆ ಕೇಳಿಕೊಂಡಾಗ, ಮಂಗಳೇಶನು ಅದಕ್ಕೆ ವಿರೋಧ ವ್ಯಕ್ತಪಡಿಸಿದನು. ಮುಂದೆ ತನ್ನ ಅಧಿಕಾರಕ್ಕೆ ಸಂಚಕಾರ ಬರುವುದೆಂದು ತಿಳಿದು, ಪುಲಿಕೇಶಿಯನ್ನು ಮುಗಿಸಿ ಬಿಡುವ ಯೋಜನೆಯಲ್ಲಿ ತೊಡಗಿದ್ದ. ಚಾಣಾಕ್ಷ ಮತಿ ಪುಲಿಕೇಶಿಗೆ ಇದರ ಸುಳಿವು ದೊರೆಯುತ್ತಿದ್ದಂತೆಯೇ ಮಂಗಳೇಶನನ್ನು ಕ್ರಿ ಶ 610 ರಲ್ಲಿ ಕೊಂದು, ಚಾಲುಕ್ಯ ಸಾಮ್ರಾಜ್ಯದ ಅಧಿಪತಿಯಾದನು. ಇದು ಅನಂತಪುರ ಕೋಟೆಯಲ್ಲಿ ನಡೆದ ಘಟನೆ.

ಪುಲಿಕೇಶಿಯ ಯುದ್ದಗಳು ಮತ್ತು ಸಾಮ್ರಾಜ್ಯ ವಿಸ್ತರಣೆ
ಮಂಗಳೇಶನ ಆಪ್ತರೊಂದಿಗಿನ ಯುದ್ಧ:
ಮುಂದಿನ ಆಡಳಿತ ಸುಗಮವಾಗಿರಲಿಲ್ಲ. ತನ್ನ ಸುತ್ತಮುತ್ತಲೂ ವೈರಿಗಳ ಪಡೆ ಎದ್ದು ನಿಂತಿತ್ತು. ಮಂಗಳೇಶನ ಆಪ್ತರೆಲ್ಲ ಸೇಡಿಗಾಗಿ ಹವಣಿಸುತ್ತಿದ್ದರು. ಅದನ್ನರಿತ ಪುಲಿಕೇಶಿ ಜಾಗೃತನಾಗಿ, ಭೀಮಾ ನದಿ ತೀರದಲ್ಲಿ, ಮಂಗಳೇಶನ ಆಪ್ತರಾದ ಗೋವಿಂದ ಮತ್ತು ಅಪ್ಪಯ್ಯ ರನ್ನು ಹೀನಾಯವಾಗಿ ಸೋಲಿಸಿದ.
ಇಲ್ಲಿಂದ ಶುರುವಾದ ಅವನ ಸಾಮ್ರಾಜ್ಯ ವಿಸ್ತರಣಾ ಕಾರ್ಯ ಬಲು ರೋಚಕವಾದುದು.

ಬನವಾಸಿ ಮತ್ತು ತಲಕಾಡು ವಶ:
ತಂದೆಯ ಕಾಲದಲ್ಲಿದ್ದ ಭೂಭಾಗವನ್ನುವಿಸ್ತರಿಸಲು ನಿರ್ಧರಿಸಿದ ಪುಲಿಕೇಶಿಯು, ಕದಂಬರ ಬನವಾಸಿ , ತಲಕಾಡಿನ ಗಂಗರು, ಅಳುಪರ ಮೇಲೆ ಯುದ್ಧ ಸಾರಿದನು. ಅಲ್ಲಿಯೂ ಕೂಡಾ ಅಭೂತಪೂರ್ವ ಯಶ ದೊರೆಯಿತು. ಅವರೆಲ್ಲ ಯುದ್ಧದ ನಂತರ ಪುಲಿಕೇಶಿಯೊಂದಿಗೆ ಮೈತ್ರಿ ಮಾಡಿಕೊಂಡು ಮುಂದುವರೆದರು.

ಪಲ್ಲವ ದೊರೆ ಮಹೇಂದ್ರ ವರ್ಮನೊಂದಿಗೆ ಯುದ್ಧ:
ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾದ ಪಲ್ಲವರು, ಸುದೀರ್ಘ ಕಾಲ ಆಳಿದ ರಾಜ ಮನೆತನ. ಅದು ಕದಂಬರ ಕಾಲಕ್ಕಿಂತಲೂ ಮುಂಚೆ. ಅವರು ಕದಂಬರ ಮೇಲೆ ಆಕ್ರಮಣ ಮಾಡುತ್ತಲೇ ಬಂದವರು. ನಂತರ ಅದು ಚಾಲುಕ್ಯರ ತನಕವೂ ನಡೆದು ಬಂತು. ಯಾವಾಗ ಪುಲಿಕೇಶಿ ಅಧಿಕಾರಕ್ಕೆ ಬಂದನೋ ಆ ವೇಳೆಗಾಗಲೇ ಪಲ್ಲವರ ದೊರೆ ಮಹೇಂದ್ರವರ್ಮನು ಸಂಘರ್ಷಕ್ಕಿಳಿದನು. ಆ ಸಮಯ ತುಂಬಾ ಕ್ಲಿಷ್ಟಕರವಾಗಿತ್ತು. ಬಲಾಢ್ಯ ಪಲ್ಲವರ ಮೇಲೆರಗಿದ ಪುಲಿಕೇಶಿಯು, ಅವರ ರಾಜಧಾನಿ ಕಂಚಿಯನ್ನು ಹೊರತು ಪಡಿಸಿ ಬಹುಪಾಲು ರಾಜ್ಯವನ್ನು ವಶಪಡಿಸಿಕೊಂಡನು. ಇದು ಪುಲಿಕೇಶಿಯ ಜೀವನದಲ್ಲಿ ಕಂಡ ರೋಚಕ ತಿರುವು. ಅಲ್ಲಿಂದ ಅವನು ವೈರಿಗಳ ಪಾಲಿಗೆ ಸಿಂಹವೇ ಆದನು.

ಗುಜರಾತ ಮತ್ತು ಮಾಳವ ಪ್ರದೇಶಗಳ ಮೇಲೆ ಯುದ್ಧ:
ಪುಲಿಕೇಶಿಯು ತನ್ನ ಸುತ್ತಮುತ್ತಲಿನ ರಾಜರುಗಳನ್ನೆಲ್ಲ ಸೋಲಿಸಿ ರಾಜ್ಯಗಳನ್ನು ವಶಪಡಿಸಿಕೊಂಡ ನಂತರ, ಮುಂದೆ ಉತ್ತರ ಭಾರತದಡೆಗೆ ತನ್ನ ಗಮನವನ್ನು ಹರಿಸಿದನು. ಮಾಳ್ವ ಮತ್ತು ಗುರ್ಜರ ಪ್ರದೇಶಗಳನ್ನು ಯುದ್ಧದಲ್ಲಿ ಗೆಲ್ಲುವುದರ ಮೂಲಕ ಆ ಪ್ರದೇಶಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡನು. ತನ್ನ ಸಾಮ್ರಾಜ್ಯ ಗುಜರಾತಿನವರೆಗೆ ಮುಂದುವರೆಯಿತು ಅದರ ಅಭಿವೃದ್ಧಿಗಾಗಿ ತನ್ನ ಸಹೋದರನನ್ನು ನೇಮಿಸಿದನು.

ಹರ್ಷವರ್ಧನನೊಂದಿಗಿನ ಯುದ್ಧ:

ಪುಲಿಕೇಶಿಗೆ ಇಡೀ ಉತ್ತರ ಭಾರತವನ್ನು ವಶಪಡಿಸಿಕೊಳ್ಳುವ ಉದ್ದೇಶವಿತ್ತು. ಹಾಗಾಗಿ ಅವನ ಯುದ್ಧೋನ್ಮಾದದ ಜಾಡು ತಿಳಿದ, ಬಲಿಷ್ಠ ಸೈನ್ಯ ಹೊಂದಿದ ಹರ್ಷವರ್ಧನ ಪುಲಿಕೇಶಿಯ ಮೇಲೆ ಯುದ್ಧ ಸಾರಿದ. ಆದರೆ ಅವನ ನಿರೀಕ್ಷೆಯಂತೆ ಪುಲಿಕೇಶಿಯನ್ನು ಪರಾಭವಗೊಳಿಸುವಲ್ಲಿ ವಿಫಲನಾದ. ನರ್ಮದಾ ನದಿ ದಂಡೆಯ ಮೇಲೆ ನಡೆದ ಭೀಕರ ಯುದ್ಧದಲ್ಲಿ, ಹರ್ಷವರ್ಧನನ ಸೈನ್ಯ ದಿಕ್ಕೆಟ್ಟು ಓಡಿ ಹೋಯಿತು. ಇದನ್ನು ಕಂಡು ಹರ್ಷವರ್ಧನನ ಹರ್ಷವೇ ಇಂಗಿ ಹೋಯಿತೆಂಬುದು ನಮಗೆ ಲಭ್ಯವಿರುವ ಶಾಸನದ ಸಾರಾಂಶ. ಆದರೆ ಹರ್ಷವರ್ಧನನೊಂದಿಗೆ ನಡೆದ ಯುದ್ಧ ಒಪ್ಪಂದದಲ್ಲಿ ಅಂತ್ಯವಾಯಿತು. ಆ ಒಪ್ಪಂದವೇ, ಪುಲಿಕೇಶಿಯು ಇಡೀ ಭಾರತವನ್ನು ವಶಮಾಡಿಕೊಳ್ಳುವ ಕಾರ್ಯದಿಂದ ವಿಮುಖವಾಗುವಂತೆ ಮಾಡಿತು.

ಹರ್ಷವರ್ಧನನು ತಾನೆಂದಿಗೂ ದಕ್ಷಿಣದ ಮೇಲೆ ಮತ್ತು ನೀನೆಂದಿಗೂ ಉತ್ತರದ ಮೇಲೆ ಆಕ್ರಮಣ ಮಾಡುವುದು ಬೇಡ. ದಕ್ಷಿಣದ ಚಕ್ರಾಧಿಪತ್ಯ ನಿನಗಿರಲಿ. ಉತ್ತರದ ಅಧಿಪತ್ಯ ತನಗಿರಲೆಂಬುದಾಗಿ ಒಪ್ಪಂದ ಮಾಡಿಕೊಂಡನು. ಅಲ್ಲಿಗೆ ಪುಲಿಕೇಶಿಯ ಉತ್ತರ ಭಾರತದ ದಂಡಯಾತ್ರೆ ನಿಂತಿತು. ಇಲ್ಲವಾದಲ್ಲಿ ಇಡೀ ಭಾರತ ಪುಲಿಕೇಶಿಯ ಪದ ತಲದಲ್ಲಿರುತಿತ್ತು. ಆದಾಗ್ಯೂ ಭಾರತದ ಮುಕ್ಕಾಲು ಪಾಲು ಅವನ ಅಧೀನದಲ್ಲಿತ್ತು.

ಐಹೊಳೆ ಶಾಸನ ಮತ್ತು ಹುಯೆನ್ ತ್ಸಾಂಗ್ ಬರೆಹದ ಸಾಕ್ಷಿ:
ಯುದ್ಧದಿಂದ ಮರಳಿದ ಹರ್ಷವರ್ಧನನು ತಾನು ಪುಲಕೇಶಿಯೋಡನೆ ನಡೆದ ಯುದ್ಧದಲ್ಲಿ ಜಯಶೀಲನಾಗಿದ್ದೇನೆಂದು ಬರೆಸಿಕೊಂಡಿದ್ದಾನೆ. ಆದರೆ ಇದಕ್ಕೆ ಸಾಕ್ಷಿಯಾಗಿ ಚೀನಾದ ಯಾತ್ರಿಕ ಹುಯೆನ್ ತ್ಸಾಂಗ್ ತನ್ನ ಸಿ-ಯೂ-ಕಿ ಕೃತಿಯಲ್ಲಿ ಇಮ್ಮಡಿ ಪುಲಕೇಶಿಯ ಯುದ್ಧ ಸಾಮರ್ಥ್ಯ, ಯುದ್ಧ ಕೌಶಲ, ಮತ್ತು ಯುದ್ಧ ತಂತ್ರಗಳ ಬಗ್ಗೆ ಅಪಾರವಾಗಿ ಹೊಗಳಿದ್ದಾನೆ. ಇದು ನಮಗೆ ಸಿಗಬಹುದಾದ ವಿದೇಶಿ ಸಾಕ್ಷ್ಯಾಧಾರವಾಗಿದೆ. ಮುಖ್ಯವಾಗಿ ಐಹೊಳೆ ಮೇಗುತಿ ದೇವಾಲಯದ ಎದುರಿನಲ್ಲಿರುವ ರವಿ ಕೀರ್ತಿಯ ಶಾಸನವು ನಿಜ ಅಂಶವನ್ನೇ ಒಳಗೊಂಡಿದೆ. ಇಂದಿಗೂ ನಾವದನ್ನು ಕಾಣಬಹುದು.

ಪಲ್ಲವರ ದೊರೆ ನರಸಿಂಹ ವರ್ಮನ ಆಕ್ರಮಣ ಮತ್ತು ಪುಲಿಕೇಶಿಯ ಅಂತ್ಯ:

ಕ್ರಿ ಶ 642 ರಲ್ಲಿ ಪಲ್ಲವರ ಬಲಿಷ್ಠ ದೊರೆ ನರಸಿಂಹ ವರ್ಮನು ಪುಲಕೇಶಿಯ ಮೇಲೆ ಅಕ್ರಮಣವನ್ನು ಎಸಗುತ್ತಾನೆ. ಇಂತಹ ಸಂದರ್ಭದಲ್ಲಿ ಪುಲಿಕೇಶಿಯ ಮಕ್ಕಳಲ್ಲಿ ಸಿಂಹಾಸನಕ್ಕಾಗಿ ಕಲಹವೇರ್ಪಟ್ಟು, ಮೂರನೆಯ ಮಗ ವಿಕ್ರಮಾದಿತ್ಯ ಬಾದಮಿಯಿಂದ ಹೊರ ನಡೆದು, ಶತೃ ಪಾಳೆಯದೊಂದಿಗೆ ಕೈ ಜೋಡಿಸಿರುತ್ತಾನೆ. ಈ ಯುದ್ಧದಲ್ಲಿ ಪುಲಕೇಶಿಯು ಸೋಲುವುದಲ್ಲದೇ ಕೊಲ್ಲಲ್ಪಡುತ್ತಾನೆ. ಸತತವಾಗಿ ಮೂವತ್ತು ಮೂರು ವರ್ಷಗಳ ಸುದೀರ್ಘ ಆಡಳಿತದಲ್ಲಿ ಅವನ ಸಾಧನೆಗಳು ಅಪೂರ್ವ. ಸುಮಾರು 13 ವರ್ಷಗಳ ಕಾಲ ಬಾದಾಮಿಯು ಪಲ್ಲವರ ಆಳ್ವಿಕೆಯಲ್ಲಿತ್ತು ನಂತರ ಪುಲಿಕೇಶಿಯ 3 ನೇ ಮಗ ವಿಕ್ರಮಾದಿತ್ಯ ಬಾದಾಮಿಯನ್ನು ಪುನಃ ವಶಪಡಿಸಿಕೊಂಡು ಚಾಲುಕ್ಯರ ಸಾಮ್ರಾಜ್ಯವನ್ನು ಸ್ಥಾಪಿಸಿ ಆಳಿದನು.

ಹೀಗೆ ಅದ್ವಿತೀಯ ಶಕ್ತಿ ಸಾಮರ್ಥ್ಯ ಹೊಂದಿದ ಕನ್ನಡ ನೆಲದರಸ ಕಡೆಗೆ ಯುದ್ಧದಲ್ಲಿ ಹತನಾಗಿದ್ದು ವೀರ ಪರಂಪರೆಗೆ ತಕ್ಕುದಾಗಿದೆ. ಅವರ ಕಾಲದಲ್ಲಿ ರಚಿತವಾದ ದೇಗುಲಗಳು ಇಂದಿಗೂ ಸಾಕ್ಷಿಯಾಗಿ ನಿಂತಿವೆ. ಜೀವನ ಕ್ರಮ, ಆಡಳಿತ ಪದ್ಧತಿ, ರಾಜ ಪರಂಪರೆಯ ಬಗ್ಗೆ ಇನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ.

*ನಿಮ್ಮ ಹಣೆ ಬರಹವನ್ನು ನೀವೇ ಬರೆಯಬೇಕು: ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಸಲಹೆ*

https://pragati.taskdun.com/chowgule-education-societycm-basavaraj-bommaihubli/

ಶಾಲಾ ಬಾಲಕಿ ಮೇಲೆ ಆ್ಯಸಿಡ್ ದಾಳಿ

https://pragati.taskdun.com/acid-attack-on-school-girl-by-two-bike-riders/

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನ ಕಳೆದುಕೊಂಡ ಎಲಾನ್ ಮಸ್ಕ್; ಆ ಸ್ಥಾನದಲ್ಲೀಗ ಯಾರಿದ್ದಾರೆ ಗೊತ್ತೇ?

https://pragati.taskdun.com/elon-musk-lost-his-place-as-the-richest-man-in-the-world-do-you-know-who-is-in-that-position-now/

*ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಐದು ದಿನ ಭಾರಿ ಮಳೆ*

https://pragati.taskdun.com/karnataka5daysrainimd/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button