*ಅನ್ನಭಾಗ್ಯ ಅಕ್ಕಿ ಮೋದಿಯವರದ್ದು, ಚೀಲ ಮಾತ್ರ ಕಾಂಗ್ರೆಸ್ ನದ್ದು; ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಕಾಂಗ್ರೆಸ್ ನವರು ದೇಶದ ಪರವಾಗಿದ್ದಾರೋ ಅಥವಾ ಭಯೋತ್ಪಾದಕರ ಪರವಾಗಿದ್ದಾರೋ ಎಂಬ ಬಗ್ಗೆ ಸ್ಪಷ್ಟವಾದ ಉತ್ತರ ಬೇಕು. ಕಾಂಗ್ರೆಸ್ ನ ನಿಲುವಿನ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಂಡ್ಯ ಜಿಲ್ಲೆಯ ಪಾಂಡವಪುರದ ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿರುವ ಜನ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ನವರು ಟಿಪ್ಪುವಿನ ಬಗ್ಗೆ ಹಾಗೂ ಭಯೋತ್ಪಾದಕರ ಬಗ್ಗೆ ಅನುಕಂಪದ ಮಾತುಗಳನ್ನಾಡುತ್ತಾರೆ. ಇಂತಹ ಕೆಲಸಕ್ಕೆ ಕೈಹಾಕಿದರೆ ಇಲ್ಲಿನ ಜನ ಹಾಗೂ ಕಾನೂನು ಅವರನ್ನು ಕ್ಷಮಿಸುವುದಿಲ್ಲ ಎಂದರು.
ಕಾಂಗ್ರೆಸ್ನಿಂದ ರಾಜ್ಯಕ್ಕೆ ದೌರ್ಭಾಗ್ಯ :
ಕಾಂಗ್ರೆಸ್ ನವರ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಮೋದಿಯವರದ್ದು, ಸಿದ್ದರಾಮಯ್ಯನವರ ಚಿತ್ರದ ಚೀಲ ಮಾತ್ರ ಕಾಂಗ್ರೆಸ್ ನವರದ್ದು. ಬಡ ಎಸ್ ಸಿ ಎಸ್ ಟಿ ಮಕ್ಕಳ ಹಾಸ್ಟೆಲ್ ಗಳ ದಿಂಬು ಹಾಸಿಗೆ ಖರೀದಿಯಲ್ಲಿ ಹಗರಣ, ಸಣ್ಣ ಮತ್ತು ಬೃಹತ್ ನೀರಾವರಿಯಲ್ಲಿ ಭ್ರಷ್ಟಾಚಾರ ಮಾಡಿ, ಕಾಂಗ್ರೆಸ್ ರಾಜ್ಯಕ್ಕೆ ದೌರ್ಭಾಗ್ಯವನ್ನು ತಂದರು. ಮಂಡ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣುತ್ತಿದ್ದಾರೆ. ಆದರೆ ಜನ ಜಾಗೃತರಾಗಿದ್ದು, ದಕ್ಷಿಣ ಭಾಗದ ಕರ್ನಾಟಕದಲ್ಲಿ ಭಾಜಪ ಗೆಲುವನ್ನು ಕಾಣಲಿದೆ ಎಂಬ ವಿಶ್ವಾಸವಿದೆ ಎಂದರು.
ಮೈಸೂರು ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳಗಾರರಿಗೆ 21 ಕೋಟಿ ರೂ. ಪಾವತಿ:
ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 21 ಕೋಟಿ ರೂ. ಮೊತ್ತದ ಕಬ್ಬಿನ ಬಿಲ್ ಮೊದಲನೆ ಕಂತನ್ನು ರೈತರಿಗೆ ಪಾವತಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಡ್ಯ ಜಿಲ್ಲೆಗೆ ಎಥನಾಲ್ ಪ್ಲಾಂಟ್ ಸ್ಥಾಪಿಸಿ, ಈ ಭಾಗದ ರೈತರ ಕಬ್ಬನ್ನು ಅರೆಸುವ ಕಾರ್ಯವನ್ನು ಮಾಡಲಾಗುವುದು. ಪಾಂಡವಪುರ ಶ್ರೀರಾಂಪುರ ಸಕ್ಕರೆ ಕಾರ್ಖಾನೆಯಲ್ಲಿ ಮಂಡ್ಯ ಜಿಲ್ಲೆಯ ಕಬ್ಬನ್ನು ಅರೆಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಕೆಆರ್ ಎಸ್ ಜಲಾಶಯದ ಕ್ರೆಸ್ಟ್ ಗೇಟ್ ಗಳು ಹಳೆಯದಾಗಿದ್ದು, ನೀರು ಸೋರುತ್ತಿತ್ತು. 16 ಗೇಟ್ ಗಳನ್ನು ಈವರೆಗೆ ಬದಲಾಯಿಸಲಾಗಿದ್ದ, ಮುಂದಿನ ದಿನಗಳಲ್ಲಿ ಎಲ್ಲ ಹಳೆಯ ಗೇಟ್ ಗಳನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸ ಗೇಟ್ ಗಳನ್ನು ಅಳವಡಿಸಲಾಗುವುದು ಎಂದರು.
ಮಂಡ್ಯ ಜಿಲ್ಲೆಯ 180 ಕೆರೆ ತುಂಬಿಸಲು 454 ಕೋಟಿ ರೂ. :
ವಿ.ಸಿ.ನಾಲೆಯ ನಿರ್ಮಾಣವನ್ನು 330 ಕೋಟಿ ರೂ.ಗಳ ವೆಚ್ಚದಲ್ಲಿ ನಮ್ಮ ಸರ್ಕಾರ ಪೂರ್ಣಗೊಳಿಸಿದೆ. ರೈತರ ಹೊಲಕ್ಕೆ ನೀರು ತಲುಪಿಸುವ ಸಂಕಲ್ಪದೊಂದಿಗೆ ವಿ.ಸಿ.ನಾಲೆ ಹೆಬ್ಬಗೋಡಿ ಆಧುನೀಕರಣಕ್ಕೆ 606 ಕೋಟಿ ರೂ.ಗಳನ್ನು ಮಂಜೂರಾತಿಯನ್ನು ನೀಡಲಾಗುವುದು. ಮಂಡ್ಯ ಜಿಲ್ಲೆಯ 180 ಕೆರೆಗಳನ್ನು ತುಂಬಿಸುವ 454 ಕೋಟಿ ರೂ.ಗಳ ಅನುದಾನವನ್ನು ಸಧ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು. ರೈತರ ಸಬಲೀಕರಣ, ಔದ್ಯೋಗಿಕರಣ ಆಗುವುದು ಭಾಜಪದ ಸಂಕಲ್ಪ ಎಂದರು.
ಸಾಧನೆಗಳ ರಿಪೋರ್ಟ್ ಕಾರ್ಡ್ :
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ಕರ್ನಾಟಕದಲ್ಲಿ ಭಾಜಪ ಗೆಲ್ಲಬೇಕೆಂಬ ಆಶಯದಿಂದ ಜನಸಂಕಲ್ಪ ಯಾತ್ರೆಯ ನೇತೃತ್ವವನ್ನು ವಹಿಸಿದ್ದಾರೆ. ಭಾರತೀಯ ಜನತಾ ಪಕ್ಷ ಸಕಾರಾತ್ಮಕ ರಾಜಕಾರಣವನ್ನು ಮಾಡುತ್ತದೆ. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ಮಂತ್ರದೊಂದಿಗೆ ರಾಜ್ಯದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಗಳ ಸಾಧನೆಯ ರಿಪೋರ್ಟ್ ಕಾರ್ಡ್ ನ್ನು ಮುಂದಿಟ್ಟುಕೊಂಡು ಈ ಬಾರಿಯೂ ರಾಜ್ಯದಲ್ಲಿ ಭಾಜಪ ಸರ್ಕಾರವನ್ನು ಅಧಿಕಾರಕ್ಕೆ ತರಲಾಗುವುದು ಎಂದರು.
ಬೆಂಗಳೂರು ಮೈಸೂರು ಹೈಸ್ಪೀಡ್ ರೈಲು :
ಜಲಜೀವನ ಮಿಷನ್ ಯೋಜನೆಯಲ್ಲಿ ಕರ್ನಾಟಕದಲ್ಲಿ ಒಂದೂವರೆ ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಿದೆ. ಈ ವರ್ಷ 20 ಲಕ್ಷ ಮನೆಗಳಿಗೆ ನಳಸಂಪರ್ಕ ನೀಡಲಾಗುವುದು. 6000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯದಿಂದ 3000 ಕಿ.ಮೀ. ರಾಜ್ಯ ಹೆದ್ದಾರಿಗಳನ್ನು ರಾಜ್ಯದಲ್ಲಿ ನಿರ್ಮಿಸಲಾಗುತ್ತಿದೆ. ಬೆಂಗಳೂರು ಮೈಸೂರು ಎಕ್ಸಪ್ರೆಸ್ ಹೈವೇಯನ್ನು 10 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬೆಂಗಳೂರು ಮೈಸೂರು ಹೈಸ್ಪೀಡ್ ರೈಲು ಪ್ರಾರಂಭಿಸಲಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳು ಡಬಲ್ ಇಂಜಿನ ಸರ್ಕಾರದಿಂದ ಸಾಧ್ಯವಾಗಿದೆ. ಈ ಕೆಲಸ ಕಾಂಗ್ರೆಸ್ ನವರ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅವಧಿಯಲ್ಲಿ ಆಗಲಿಲ್ಲ ಎಂದರು.
ಕಿಸಾನ್ ಸಮ್ಮಾನ್ ನಿಧಿ:
60 ಲಕ್ಷಕ್ಕೂ ಹೆಚ್ಚು ರೈತರ ಕುಟುಂಬಗಳು ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಕೇಂದ್ರದ 6000 ರೂ. ಕ್ಕೆ ರಾಜ್ಯ ಸರ್ಕಾರದ 4000 ರೂ. ಸೇರಿಸಿ, ಒಟ್ಟು 10 ಸಾವಿರ ರೂ.ಗಳ ಪರಿಹಾರವನ್ನು ಒದಗಿಸಲಾಗುತ್ತಿದೆ. ಬಿ ಎಸ್.ಯಡಿಯೂರಪ್ಪ ಅವರು ರೈತಪರ ಕಾಳಜಿಯುಳ್ಳ ನಾಯಕರಾಗಿದ್ದಾರೆ. ತಾವು ಅಧಿಕಾರಕ್ಕೆ ಬಂದಾಗ ರೈತರಿಗೆ 10 ಹೆಚ್ ಪಿ ಉಚಿತ ವಿದ್ಯುತ್ ನೀಡಿದ್ದರು. 2 ನೇ ಬಾರಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕಿಸಾನ್ ಸಮ್ಮಾನ ನಿಧಿಯಲ್ಲಿ ರಾಜ್ಯದಿಂದ 4000 ರೂ.ಗಳನ್ನು ಮಂಜೂರು ಮಾಡಿದರು. ಭಾಗ್ಯಲಕ್ಷ್ಮಿ ಯೋಜನೆ, ವಿಧವಾ ಮಾಸಾಶನ, ಸಂಧ್ಯಾ ಸುರಕ್ಷಾ ಯೋಜನೆಯನ್ನು ಜಾರಿ ಮಾಡಿದರು. 20 ಲಕ್ಷ ಹೆಣ್ಣುಮಕ್ಕಳು ಭಾಗ್ಯಲಕ್ಷ್ಮಿ ಯೋಜನೆಯ ಲಾಭ ಪಡೆದಿದ್ದಾರೆ. ಇದರಲ್ಲಿ ಶೇ.25 ರಷ್ಟು ಅಲ್ಪಸಂಖ್ಯಾತ ಹೆಣ್ಣಮಕ್ಕಳಿದ್ದಾರೆ ಎಂದರು.
46 ಸಾವಿರ ನೇಕಾರರಿಗೆ ಆರ್ಥಿಕ ನೆರವು:
ರೈತ ಮಕ್ಕಳಿಗೆ ವಿದ್ಯಾನಿಧಿ , ನೇಕಾರ ಸಮ್ಮಾನ ನಿಧಿಯನ್ನು 5000 ರೂ. ಹೆಚ್ಚಿಸಿ 46 ಸಾವಿರ ನೇಕಾರರಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ವಿವಿಧ ಕಸುಬುದಾರರಿಗೆ ಕಾಯಕ ಯೋಜನೆಯಡಿ 50 ಸಾವಿರ ವರೆಗೆ ಧನಸಹಾಯ ನೀಡಲಾಗುತ್ತಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿಯೋಜನೆಯಿಂದ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ, ಸ್ತ್ರೀ ಸಾಮರ್ಥ್ಯ ಯೋಜನೆಯಿಂದ 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ, ದುಡಿಯುವ ವರ್ಗಕ್ಕೆ ಬೆಂಬಲ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಅಬಕಾರಿ ಸಚಿವರು ಹಾಗೂ ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ, ಕಂದಾಯ ಸಚಿವ ಆರ್.ಅಶೋಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಡಾ. ಕೆ.ಸಿ ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಮುಖಂಡರುಗಳಾದ ಇಂದ್ರೇಶ್ ಸಿ.ಪಿ ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
*78 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ; ಹೊಸ ವರ್ಷಕ್ಕೆ 4000 ಕ್ಯಾಮರಾ ಕಣ್ಗಾವಲು*
https://pragati.taskdun.com/home-minister-araga-jnanendrapolice-officersmeeting/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ