ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಮಂಡಳದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಸೋಮವಾರ ಆರಂಭವಾಗಲಿದೆ. ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ 10 ದಿನಗಳ ಈ ಅಧಿವೇಶನ ರಾಜಕೀಯವಾಗಿ ಮಹತ್ವಪಡೆದುಕೊಂಡಿದೆ. ಸಹಜವಾಗಿ ಎಲ್ಲ ಪಕ್ಷಗಳು ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು ಕಲಾಪದಲ್ಲಿ ಕಾರ್ಯಕಲಾಪ ನಡೆಸಲಿವೆ.
ಕಾಂಗ್ರೆಸ್ ಭಾನುವಾರ ಬೆಳಗಾವಿಯಲ್ಲಿ ತನ್ನ ರಾಜ್ಯಮಟ್ಟದ ಚುನಾವಣೆ ಸಮಿತಿ ಸಭೆ ನಡೆಸುವ ಮೂಲಕ ಚುನಾವಣೆ ಮತ್ತು ಅಧಿವೇಶನದ ದಿಕ್ಸೂಚಿಯನ್ನು ನಿರ್ಧರಿಸಲಿದೆ. ಬಿಜೆಪಿಗೆ ಎದಿರೇಟು ಕೊಡಲು ತಂತ್ರ ಹೆಣೆಯಲಿದೆ. ಹಾಗಾಗಿ ಕಾಂಗ್ರೆಸ್ ನಾಯಕರ ದಂಡು ಒಂದು ದಿನ ಮೊದಲೇ ಬೆಳಗಾವಿಯತ್ತ ಹರಿದುಬರಲಿದೆ.
ಆಡಳಿತಾರೂಢ ಬಿಜೆಪಿ ಇಡೀ ಅಧಿವೇಶನವನ್ನು ಮತ್ತೆ ಅಧಿಕಾರಕ್ಕೆ ಬರಲು ಏನೇನು ಮಾಡಬೇಕೋ ಆ ದಿಸೆಯಲ್ಲೇ ಕೊಂಡೊಯ್ಯಲಿದೆ. ವಿರೋಧಿಗಳ ಪ್ರತಿಯೊಂದು ಹೇಳಿಕೆ, ತಂತ್ರಗಳನ್ನು ತನಗೆ ಬೇಕಾದಂತೆ ಪರಿವರ್ತಿಸಿಕೊಳ್ಳಲಿದೆ.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು 50ಕ್ಕೂ ಹೆಚ್ಚು ಸಂಘಟನೆಗಳಿಂದ ಪ್ರತಿಭಟನೆಗಳು ನಡೆಯಲಿವೆ. ಅನೇಕ ಸಂಘಟನೆಗಳು ಪೊಲೀಸರ ಅನುಮತಿ ಪಡೆದಿದ್ದು, ಇನ್ನೂ ಅರ್ಜಿಗಳು ಬರುತ್ತಲೇ ಇವೆ.
ಪ್ರಮುಖವಾಗಿ ಮೊದಲ ದಿನ 2 ವಿಷಯ
ಅಧಿವೇಶನದಲ್ಲಿ 7 ವಿಧೇಯಕಗಳು ಮಂಡನೆಯಾಗಲಿವೆ. ಜೊತೆಗೆ ನೂರಾರು ವಿಷಯಗಳು ಸಹಜವಾಗಿ ಚರ್ಚೆಗೆ ಬರಲಿವೆ. ಆಯಾ ಸಂದರ್ಭದಲ್ಲಿ ನಡೆಯುವ ಪ್ರತಿಭಟನೆಗಳು ಸಹ ಚರ್ಚೆಗೆ ಬರಲಿವೆ.
ಅವುಗಳಲ್ಲಿ ಪ್ರಮುಖವಾಗಿ ಮೊದಲ ದಿನವೇ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತು ಹಳೆಯ ಪಿಂಚಣಿಗಾಗಿ ಸರಕಾರಿ ನೌಕರರ ಹೋರಾಟ ಸರಕಾರದ ಗಮನ ಸೆಳೆಯಲಿವೆ.
ಪಂಚಮಸಾಲಿ ಹೋರಾಟ ಸಮಿತಿ ಡಿ.19ರೊಳಗೆ ಮೀಸಲಾತಿ ಘೋಷಿಸುವಂತೆ ಸರಕಾರಕ್ಕೆ ಗಡುವು ನೀಡಿದೆ. ಇಲ್ಲವಾದಲ್ಲಿ 22ರಂದು ಸುವರ್ಣ ವಿಧಾನಸೌಧಕ್ಕೆ 25 ಲಕ್ಷ ಜನರು ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದೆ. ಹಾಗಾಗಿ ಅಧಿವೇಶನದ ಮೊದಲ ದಿನವೇ ಈ ಸಂಬಂಧ ಸರಕಾರ ಯಾವುದಾದರೊಂದು ನಿರ್ಧಾರ ಪ್ರಕಟಿಸುವ ಅನಿವಾರ್ಯತೆಯಲ್ಲಿದೆ.
ಜೊತೆಗೆ ಹಳೆಯ ಪಿಂಚಣಿ (ಓಪಿಎಸ್) ಮರುಸ್ಥಾಪನೆಗೆ ಒತ್ತಾಯಿಸಿ ಸರಕಾರಿ ನೌಕರರು ಡಿ.19ರಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸಲಿದ್ದಾರೆ. ಅಧಿವೇಶನ ಘೋಷಣೆಗೂ ಮೊದಲೇ ನಿರ್ಧರಿಸಿದಂತೆ ಬೆಂಗಳೂರಿನ ಫ್ರೀಂಡ್ ಪಾರ್ಕ್ ನಲ್ಲಿ ಅನಿರ್ಧಿಷ್ಠಾವಧಿ ಧರಣಿ ಆರಂಭವಾಗಲಿದೆ. ರಾಜ್ಯದ ಎಲ್ಲೆಡೆಯಿಂದ ಲಕ್ಷಾಂತರ ನೌಕರರು ಸೇರುವ ನಿರೀಕ್ಷೆಯಿದೆ.
ಹಾಗಾಗಿ ಸರಕಾರಿ ಕೆಲಸಗಳಿಗೆ ಇದರಿಂದ ಅಡಚಣೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಎನ್ ಪಿಎಸ್ ಕುರಿತು ಸಹ ಸರಕಾರ ತನ್ನ ನಿರ್ಧಾರವನ್ನು ತುರ್ತಾಗಿ ಪ್ರಕಟಿಸಬೇಕಾದ ಒತ್ತಡದಲ್ಲಿದೆ.
ಇದರ ಜೊತೆಗೆ ಕಬ್ಬು ಬೆಳೆಗಾರರ ಪ್ರತಿಭಟನೆ, ಎಂಇಎಸ್ ಮಹಾಮೇಳಾವ ಮೊದಲಾದವು ಸಹ ಚರ್ಚೆಗೆ ಬರುವ ಸಾಧ್ಯತೆ ಇದೆ.
ಒಟ್ಟಾರೆ ಬೆಳಗಾವಿ ಅಧಿವೇಶನ ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚು ಬಿಸಿಯಾಗುವ ಸಾಧ್ಯತೆ ಇದೆ. 2023ರ ವಿಧಾನಸಭೆ ಚುನಾವಣೆಯೇ ಎಲ್ಲರಿಗೂ ಏಕೈಕ ಗುರಿಯಾಗಲಿದೆ. ಉತ್ತರ ಕರ್ನಾಟಕದ ಕುರಿತು ಚರ್ಚೆ ಕೇವಲ ಭರವಸೆಯಾಗಷ್ಟೇ ಉಳಿಯುವ ಸಾಧ್ಯತೆ ಇದೆ.
*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಘೋಷಣೆ*
https://pragati.taskdun.com/chief-minister-basavaraja-bommai-new-announcement/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ