ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಿಜೆಪಿ ಎಂ ಎಲ್ ಸಿ ಬಸವರಾಜ್ ಹೊರಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
8 ಬಾರಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಹೊರಟ್ಟಿಯವರ ಹಿರಿತನವನ್ನು ಪರಿಗಣಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹೊರಟ್ಟಿ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸದ ಹಿನ್ನೆಲೆಯಲ್ಲಿ ಬಸವರಾಜ್ ಹೊರಟ್ಟಿಯವರನ್ನು ಅವಿರೋಧವಾಗಿ ಪರಿಷತ್ ಸಭಾಪತಿಯಾಗಿ ಆಯ್ಕೆ ಮಾಡಲಾಯಿತು.
ಇಂದು ಕಲಾಪ ಆರಂಭವಾಗುತ್ತಿದ್ದಂತೆ ಹೊರಟ್ಟಿ ಅವರನ್ನು ಚುನಾಯಿಸುವಂತೆ ತೇಜಸ್ವಿನಿಗೌಡ, ಶಂತಾರಾಂ ಸಿದ್ದಿ, ವೈ ಎ ನಾರಾಯಣಸ್ವಾಮಿ ಮೊದಲಾದವರು ಪ್ರಸ್ತಾವಕ್ಕೆ ಸೂಚಿಸಿದರು. ಪ್ರಸ್ತಾವಕ್ಕೆ ಅನುಮೋದಿಸಿದ ಆಯನೂರು ಮಂಜುನಾಥ್, ಆರ್.ಶಂಕರ್, ಎಸ್.ವಿ.ಸಂಕನೂರ್, ಪ್ರದೀಪ್ ಶೆಟ್ಟರ್ ಪರಿಷತ್ ನೂತನ ಸಭಾಪತಿಯಾಗಿ ಹೊರಟ್ಟಿಯವರನ್ನು ಆಯ್ಕೆ ಮಾಡಿದ್ದಾರೆ.
ಆಯ್ಕೆ ಆದ ನಂತರ ಅವರು ಮಾತನಾಡಿ, ಸಭಾಪತಿಯಾಗಿ ಪಕ್ಷಕಾತೀತವಾಗಿ, ಜಾತ್ಯಾತೀತವಾಗಿ ಸಂವಿಧಾನದ ಆಶಯಕ್ಕೆ ಬದ್ಧನಾಗಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಪಾರದರ್ಶಕ ಹಾಗೂ ಮುಕ್ತ ಮನಸ್ಸಿನಿಂದ, ಶುದ್ಧ ಅಂತಃಕರಣದಿಂದ ಕೆಲಸ ಮಾಡುತ್ತೇನೆ. ಕಳೆದ 4 ದಶಕಗಳಿಂದ ನಂಬಿಕೊಂಡು ಬಂದ ಶಿಕ್ಷಕರಿಗೆ ಅಭಿನಂದನೆಗಳು. ಶಿಕ್ಷಕರೊಬ್ಬರು 3ನೇ ಬಾರಿ ಸಭಾಪತಿಯಾಗಿದ್ದು ಇತಿಹಾಸ. ಇದಕ್ಕೆ ಕಾರಣೀಕರ್ತರು ಶಿಕ್ಷಕರು. ಅವರ ಪ್ರೀತಿಗೆ ನಾನು ಸದಾ ಚಿರಋಣಿ ಎಂದರು.
ಈ ಎಲ್ಲ ಗೌರವ ಆದರಗಳು ಅವರಿಗೆ ಸಲ್ಲುತ್ತವೆ. ಶಿಕ್ಷಕರೊಬ್ಬರು ಮೂರು ಬಾರಿ ಸಭಾಪತಿಯಾಗಿ ಆಯ್ಕೆಯಾಗಿದ್ದು ದೇಶದಲ್ಲಿಯೇ ಮೊದಲು. ಎಂಟು ಬಾರಿ ಸತತ ವಿಧಾನ ಪರಿಷತ್ತಿಗೆ ಆಯ್ಕೆಯಾಗುವುದು ಸಹ ಇದು ಕೂಡಾ ಮೊದಲು; ಈ ಎಲ್ಲ ಗೌರವ ನನ್ನ ಬೆಂಬಲಿಸಿದ ಶಿಕ್ಷಕ ಸಮೂಹಕ್ಕೆ ಸಲ್ಲುತ್ತದೆ. ಹಿಂದಿನ ಹಾಗೂ ಇಂದಿನ ರಾಜಕೀಯ ವ್ಯವಸ್ಥೆ ಅಜಗಜಾಂತರದಿಂದ ಕೂಡಿದೆ. ರಾಜಕೀಯ ಮೌಲ್ಯಗಳು ಕುಸಿಯುತ್ತಿವೆ. ರಾಜಕಾರಣಿಗಳನ್ನು ಜನರು ನಂಬದೇ ಇರುವಂತಹ ವಾತಾವರಣ ಸೃಷ್ಟಿಯಾಗಿದೆ. ಆ ಶುದ್ದೀಕರಣದತ್ತ ಎಲ್ಲರೂ ಕೈಜೋಡಿಸುವ ಅವಶ್ಯಕತೆ ಇದೆ ಎಂದರು.
ರಾಜಕಾರಣ ಒಂದು ವೃತ್ತಿಯಾಗದ ಸೇವೆಯಾಗಬೇಕೆಂಬುದೇ ನನ್ನ ಬಯಕೆ. ಇಂದು ಮೌಲ್ಯಾಧಾರಿತ ರಾಜಕಾರಣ ಎಂದರೆ ಏನು ಎನ್ನುವ ಪ್ರಶ್ನೆ ಎದುರಾಗಿದೆ.ಎರಡು ಬಾರಿ ಸಭಾಪತಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ತಾವು ನೀಡಿದ ಸಹಕಾರವನ್ನು ನಾನು ಎಂದೂ ಮರೆಯಲಾರೆ.ಸದನದಲ್ಲಿ ತಮೆಲ್ಲರ ಸಹಕಾರದಿಂದ 3ನೇ ಬಾರಿ ಸಭಾಪತಿಯಾಗುವ ಅವಕಾಶ ನನಗೆ ನೀಡಿದ್ದೀರಿ. ಹಲವಾರು ಬದಲಾವಣೆಗಳನ್ನು ಚಿಂತನೆಗಳನ್ನು ಅಳವಡಿಸಿಕೊಂಡು ಹೊಸ ದಿಕ್ಕಿನತ್ತ ಒಯ್ಯುವ ಪ್ರಯತ್ನ ಮಾಡೋಣ ಎಂದರು.
115 ವರ್ಷಗಳ ಸುದೀರ್ಘ ಇತಿಹಾಸ ಇರುವ ಕರ್ನಾಟಕ ರಾಜ್ಯದ ವಿಧಾನಪರಿಷತ್ತಿನ ಸಭಾಪತಿಯಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ಹಿತೈಷಿಗಳ ಸಹಕಾರ ಮತ್ತು ವಿಶೇಷವಾಗಿ ಶಿಕ್ಷಕ ಬಂಧುಗಳ ಆಶೀರ್ವಾದದಿಂದಾಗಿ ಒದಗಿ ಬಂದಿರುವದು ನನ್ನ ಪುಣ್ಯ ಎಂದರು.
ಹಿರಿಯರ ಮನೆಯ ಗಾಂಭಿರ್ಯತೆ, ಘನತೆ ಹಾಗೂ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ವಿನೂತನ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸದನದಲ್ಲಿನ ಚರ್ಚೆಗಳು ಅರ್ಥಪೂರ್ಣವಾಗಿರಬೇಕು ಹಾಗೂ ಸಮಾಜಮುಖಿಯಾಗಿರಬೇಕು ಎಂಬ ಧೈಯೋದ್ದೇಶದೊಂದಿಗೆ ಅತ್ಯಂತ ಉತ್ಸಾಹದಿಂದ ದೇಶದ ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆಯ ಮಾದರಿಯಲ್ಲಿ ಸದನವನ್ನು ಕಿಯಾಶೀಲವಾಗಿ ಮತ್ತು ಸಂಸದೀಯ ಮೌಲ್ಯಗಳ ಆಧಾರದ ಮೇಲೆ ಶಾಸನಸಭೆಯ ನಿಯಮಾವಳಿ ಅಡಿಯಲ್ಲಿ ಮುನ್ನಡೆಸುವ ಆಶಯಕ್ಕೆ ಬದ್ದನಾಗಿದ್ದೇನೆ ಎಂದರು
ಬಸವರಾಜ್ ಹೊರಟ್ಟಿ ಆಯ್ಕೆಅನ್ನು ವಿಪಕ್ಷಗಳು ಸರ್ವಾನುಮತದಿಂದ ಒಪ್ಪಿವೆ. ಹೊರಟ್ಟಿಯವರು ಜೆಡಿಎಸ್ ತೊರೆದು ಬಿಜೆಪಿಗೆ ಬಂದಾಗ ಸಭಾಪತಿ ಸ್ಥಾನದ ಭರವಸೆ ನೀಡಿತ್ತು. ಜನತಾಪರಿವಾರದಿಂದ 7 ಬಾರಿ ಗೆದ್ದಿದ್ದ ಹೊರಟ್ತಿಯವರು ಕಳೆದ ಅಕ್ಟೋಬರ್ ನಲ್ಲಿ ಜೆಡಿಎಸ್ ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
*ಗಡಿ ವಿವಾದ ಬೆನ್ನಲ್ಲೇ ಜಲ ವಿವಾದ ಸೃಷ್ಟಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ*
https://pragati.taskdun.com/karnataka-maharashtra-border-issuencp-mla-jayanth-patilmaharashtra-session/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ