ಪ್ರಗತಿ ವಾಹಿನಿ ಸುದ್ದಿ, ಖಾನಾಪುರ:
ಬೆಳಗಾವಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪುರದಲ್ಲಿ ಸ್ಥಾಪಿಸಿರುವ ಸಮಸ್ಯಾ ಪರಿಹಾರ ಕೇಂದ್ರದಲ್ಲಿ ಶುಕ್ರವಾರ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಅಂಚೆ ವಿಮಾ ಯೋಜನೆಯನ್ನು ಆಯೋಜಿಸಲಾಗಿತ್ತು.
ಇವರೆಲ್ಲರಿಗೂ ಡಾ ಸೋನಾಲಿ ಸರ್ನೋಬತ್ ಅವರು ಸ್ವತಃ ವಿಮಾ ಯೋಜನೆಯನ್ನು ಪ್ರಾಯೋಜಿಸಿದ್ದಾರೆ ಮತ್ತು ಪ್ರತಿ ವರ್ಷ ಡಾ. ಸೋನಾಲಿ ಸರ್ನೋಬತ್ ಅವರ ನಿಯತಿ ಫೌಂಡೇಶನ್ ವಿಮೆಯ ಕಂತುಗಳನ್ನು ಭರಿಸಲಿದೆ.
ಹವಾಮಾನ ವೈಪರೀತ್ಯ ಹಾಗೂ ಹದಗೆಟ್ಟ ರಸ್ತೆಗಳು, ಪ್ರತಿಕೂಲ ಪರಿಸ್ಥಿತಿಯಲ್ಲಿ ಕಾಡಾನೆಗಳ ಹಾವಳಿಯ ನಡುವೆಯೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಖಾನಾಪುರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ದಣಿವರಿಯದೆ ಕೆಲಸ ಮಾಡುತ್ತಾರೆ.
ಇಂಥಹ ಶ್ರಮ ಜೀವಿಗಳನ್ನು ಗುರುತಿಸಿ ಅವರ ಕುಟುಂಬ ಮತ್ತು ಜೀವನಕ್ಕೆ ಭದ್ರತೆ ನೀಡುವ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಡಾ. ಸೋನಾಲಿ ಸರ್ನೋಬತ್ ಹೇಳಿದರು.
ಪೋಸ್ಟ್ ಮೆನ್ ಜ್ಞಾನೇಶ್ವರ್ ಗುರವ, ರಾಜು ಮುಟಗಿ, ವಿಶ್ವನಾಥ ಗುಂಜಿಕರ್ ಆನ್ ಲೈನ್ ಮೂಲಕ ವಿಮೆ ಪ್ರಕ್ರಿಯೆ ನಡೆಸಿದರು. ಪೋಸ್ಟ್ ಆಫೀಸ್ ಗ್ರಾಹಕ ಸ್ನೇಹಿ ಸೇವೆಗಳನ್ನು ಒದಗಿಸುತ್ತದೆ ಎಂದು ಅಂಚೆ ಇಲಾಖೆಯ ಅಧಿಕಾರಿಗಳು ಹೇಳಿದರು.
ವೇದಿಕೆಯಲ್ಲಿ ಮೌಳಿ ಶಾಲೆಯ ಮುಖ್ಯೋಪಾಧ್ಯಾಯರಾದ ಸುನೀಲ್ ಚಿಗುಳಕರ, ಡಾ.ಸೋನಾಲಿ ಸರ್ನೋಬತ್, ಬಿಜೆಪಿ ಕಾರ್ಯಕರ್ತರಾದ ಅರ್ಜುನ್ ಗಾವಡೆ, ಅನಂತ್ ಗಾವಡೆ, ಸಚಿನ್ ಪವಾರ, ಸಂದೀಪ ಗಾವಡೆ, ರಾಜು ಮಾದರ ಉಪಸ್ಥಿತರಿದ್ದರು.
ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಎಂ.ಜಿ.ಹಿರೇಮಠ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ