Latest

ಲಿಂಗಾಯತ ಮಠದಲ್ಲಿ ನಮಾಜು ಮಾಡಲು ವ್ಯವಸ್ಥೆ ಮಾಡಿದ್ದ ಸಿದ್ಧಲಿಂಗ ಶ್ರೀಗಳು -ಹರ್ಲಾಪುರ


   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಲಿಂಗಾಯತ ಮಠದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ರಮಜಾನ್ ತಿಂಗಳಲ್ಲಿ ಬೆಳಗಿನ ಅಡುಗೆ ಮಾಡಿಸಿ ಅವರಿಗೆ ನಮಾಜು ಮಾಡಲು ವ್ಯವಸ್ಥೆ ಮಾಡಿದ ಗದುಗಿನ ತೋಂಟದ ಸಿದ್ದಲಿಂಗ ಶ್ರೀಗಳು ಬಸವಣ್ಣವರ ತತ್ವಗಳ ಕಟ್ಟಾ ಪ್ರತಿಪಾದಕರಾಗಿದ್ದರೆಂದು ಪ್ರೋ. ಎಸ್.ಎಸ್.ಹರ್ಲಾಪುರ ನುಡಿದರು.
ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ದಿ.ಶಿವಬಸವ ಸ್ವಾಮಿಜಿಯವರ 129ನೇ ಜಯಂತಿ ಮಹೋತ್ಸವ ಮತ್ತು ಡಾ.ತೋಂಟದ ಸಿದ್ಧರಾಮ ಸ್ವಾಮಿಜಿ ಅವರ ಗುರುವಂದನ ಕಾರ್ಯಕ್ರಮದ ಅಂಗವಾಗಿ ಮೂರನೇ ದಿನವಾದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸೇವಾರತ್ನ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಲಿಂಗಾಯತ ಪ್ರಸಾದ ನಿಲಯಗಳು ಕೇವಲ ಲಿಂಗಾಯತರಿಗಾಗಿ ಇರಲಿಲ್ಲ. ಎಲ್ಲ ಜಾತಿ ಮತಗಳ ಬಡ ವಿದ್ಯಾರ್ಥಿಗಳಿಗಾಗಿ ಇದ್ದವು. ಇದೇ ಬಸವತತ್ವ ಎಂದ ಅವರು, ಶತಮಾನಗಳ ಕಾಲ ಯಾವ ಸ್ಥಾನದಲ್ಲಿ ರಾಮ ಮತ್ತು ಕೃಷ್ಣರು ಇದ್ದರೋ ಆ ಸ್ಥಾನಕ್ಕೆ ಮಾದಾರ ಚನ್ನಯ್ಯರನ್ನ ತಂದು ಕೂಡ್ರಿಸಿದ ಹಿರಿಮೆ ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.
ಸೇವಾರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಂಕರ ದೇವನೂರ, ಮಾತಿಲ್ಲದೇ ಮೌನದಲ್ಲಿಯೇ ಎಲ್ಲವನ್ನೂ ಮಾಡಿ ತೋರಿಸಿದ ಡಾ.ಶಿವಬಸವ ಶ್ರೀಗಳ ಸಾಧನೆ ಬಹು ದೊಡ್ಡದು. ಅವರಂತೆ ಬದುಕು ಬಸವಮಯವಾಗಬೇಕು ಎಂದರು. ಸಾವನ್ನು ಸಹ ರಾಜಕೀಯಕ್ಕೆ ಬಳಸಿಕೊಳ್ಳುವ ಇಂದಿನ ಸಮಾಜದಲ್ಲಿ ಶರಣರ ವಚನಗಳು ಹಿಂದಿಗಿಂತಲೂ ಪ್ರಸ್ತುತವಾಗಿದೆ ಎಂದರು.
ಮಕ್ಕಳ ಸಾಹಿತ್ಯಕ್ಕಾಗಿ ಸ್ಥಾಪಿತವಾಗಿರುವ ಡೆಪ್ಯೂಟಿ ಚನ್ನಬಸಪ್ಪ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಡಾ. ಜಯಶ್ರೀ ಎಸ್. ಮುದಿಗೌಡರ ಮಾತನಾಡಿ, ಮಕ್ಕಳನ್ನು ಸ್ವಚ್ಚಂದವಾಗಿ ಬೆಳೆಯಲು ಬಿಡದೆ ಅವರಲ್ಲಿ ನೈತಿಕ ಮೌಲ್ಯಗಳನ್ನು ತುಂಬಿ ಪಾಶ್ಚಿಮಾತ್ಯ ಕರಿನೆರಳಿನಿಂದ ದೂರ ಇಟ್ಟು ತಾಯಿ ನುಡಿಯನ್ನು ಕಲಿಸಬೇಕು ಎಂದರು.
ಮಕ್ಕಳ ಸಾಹಿತ್ಯಕ್ಕಾಗಿ ಸ್ಥಾಪಿತವಾಗಿರುವ ಹರ್ಡೇಕರ ಮಂಜಪ್ಪ ಪ್ರಶಸ್ತಿಯನ್ನು ತಯಬ್‌ಅಲಿ ಅ. ಹೊಂಬಳ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ವೆಬ್ ಸೈಟ್ ಅನ್ನು ಡಾ.ತೋಂಟದ ಸಿದ್ಧರಾಮ ಸ್ವಾಮಿಜಿ ,ನಾಗನೂರು ರುದ್ರಾಕ್ಷಿ ಮಠ,ಬೆಳಗಾವಿ ಅವರು ಉದ್ಘಾಟಿಸಿದರು.
ಪ್ರತಿ ವರ್ಷ ಶ್ರೀಮಠದಿಂದ ನೀಡಲಾಗುವ ಸೇವಾರತ್ನ ಪ್ರಶಸ್ತಿಯನ್ನು ಶ್ರೀ ಶಂಕರ ದೇವನೂರು, ಮೈಸೂರು, ಡಾ. ಹೆಚ್. ಬಿ. ರಾಜಶೇಖರ, ಬೆಳಗಾವಿ, ಡಾ. ವ್ಹಿ. ಡಿ. ಪಾಟೀಲ, ಬೆಳಗಾವಿ, ಡಾ. ಬಿ. ಎಫ್. ದಂಡಿನ, ಗದಗ , ಡಾ. ಬಿ. ವ್ಹಿ. ಗುಂಜೆಟ್ಟಿ, ಧಾರವಾಡ, ವ್ಹಿ. ಸಿ. ಐರಸಂಗ, ಧಾರವಾಡ , ಜಯದೇವಪ್ಪ ಜೈನಕೇರಿ, ಶಿವಮೊಗ್ಗ, ಡಾ. ಉಜ್ವಲಾ ಹಿರೇಮಠ, ಧಾರವಾಡ, ಪ್ರೊ. ಎಸ್. ಎಸ್. ಹರ್ಲಾಪುರ, ಧಾರವಾಡ, ಎಂ.ಎಂ. ಸಂಗಣ್ಣವರ, ಹುಣಸೀಕಟ್ಟಿ ಇವರುಗಳಿಗೆ ನೀಡಿ ಗೌರವಿಸಲಾಯಿತು.
ಮಕ್ಕಳ ಸಾಹಿತ್ಯಕ್ಕಾಗಿ ಸ್ಥಾಪಿತವಾಗಿರುವ ಪ್ರಶಸ್ತಿಗಳಾದ ಹರ್ಡೇಕರ ಮಂಜಪ್ಪ ಪ್ರಶಸ್ತಿಯನ್ನು ಶ್ರೀ ತಯಬ್‌ಅಲಿ ಅ. ಹೊಂಬಳ, ಗದಗ ಅವರಿಗೆ ಮತ್ತು ಡೆಪ್ಯೂಟಿ ಚನ್ನಬಸಪ್ಪ ಪ್ರಶಸ್ತಿಯನ್ನು ಡಾ. ಜಯಶ್ರೀ ಎಸ್. ಮುದಿಗೌಡರ, ಧಾರವಾಡ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಡಾ. ಬಸವಪ್ರಭು ಹಿರೇಮಠ ಮತ್ತು ವಿಮಲವ್ವ ಜಗಜಂಪಿ ಬೆಳಗಾವಿ ಇವರುಗಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ನೇತೃತ್ವವನ್ನು ಅಥಣಿ ಮೋಟಗಿಮಠದ ಶ್ರೀ ಚನ್ನಬಸವ ಸ್ವಾಮಿಜಿ ವಹಿಸಿದ್ದರು, ಹುಲ್ಲೋಳಿಹಟ್ಟಿ-ಘೋಡಗೇರಿ ಶ್ರೀ ಶಿವಾನಂದ ಮಠದ ಶ್ರೀ ಕೈವಲ್ಯಾನಂದ ಸ್ವಾಮಿಜಿ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು. ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮಿಜಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ.ಪೂ. ಕಾಲೇಜಿನ ಪ್ರಾಚಾರ್ಯ ಎ.ಕೆ.ಪಾಟೀಲ ಸ್ವಾಗತಿಸಿದರು. ಮಹಾಂತದೇವರು ಮತ್ತು ಸಿ.ಜೆ ಮಠಪತಿ ನಿರ್ವಹಿಸಿದರು. ಸುರೇಶ ಹಿಡದುಗ್ಗಿ ಮತ್ತು ಶಿವಶಂಕರ ಹಿರೇಮಠ ಉಪಸ್ಥಿತರಿದ್ದರು. ಪ್ರಭುದೇವ ಪ್ರತಿಷ್ಟಾನದ ಮಾತೃಮಂಡಳಿ ಸದಸ್ಯರಿಂದ ಪ್ರಾರ್ಥನೆ ಮತ್ತು ಬಸವರಾಜ ಕಟ್ಟಿಮನಿ ರಚಿಸಿದ ಹಾಡಿನೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ಮಹಾಂತದೇವರು ಮತ್ತು ಸಿ.ಜೆ.ಮಠಪತಿ ನಿರ್ವಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button