ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯಡಿ ರಾಜ್ಯದ 6 ಕಡೆ ಜವಳಿ ಪಾರ್ಕ್ ಈಗಾಗಲೇ ನಿರ್ಮಿಸಲಾಗಿದೆ. ಹಾವೇರಿ, ಉಡುಪಿ ಹಾಗೂ ರಾಯಚೂರಿನಲ್ಲೂ ಸಹ ಜವಳಿ ಪಾರ್ಕ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.
ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಕೆ.ಎಸ್.ನವೀನ್ ಹಾಗೂ ಚನ್ನರಾಜ್ ಬಸವರಾಜ್ ಹಟ್ಟಿಹೊಳಿ ಅವರ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.
ರಾಜ್ಯ ಸರ್ಕಾರ 2019ರಲ್ಲಿ ನೂತನ ಜವಳಿ ಹಾಗೂ ಸಿದ್ಧಉಡುಪು ನೀತಿಯನ್ನು ಜಾರಿಗೊಳಿಸಿದೆ. ಇದರ ಅನ್ವಯ ಪ್ರತ್ಯೇಕ ಉದ್ಯಮಿ ಅಥವಾ ಎಸ್.ಪಿ.ವಿಗಳು 15 ಎಕರೆ ಜಾಗ ಹೊಂದಿ ಜವಳಿ ಪಾರ್ಕ್ ಸ್ಥಾಪಿಸಲು ಮುಂದಾದರೆ ಸರ್ಕಾರದಿಂದ ಸಹಾಯ ನೀಡಲಾಗುವುದು ಎಂದರು.
ಶಾಸಕ ಕೆ.ಎಸ್. ನವೀನ್ ಮಾತನಾಡಿ ಜಾಗತಿಕವಾಗಿ ಪಾಕಿಸ್ತಾನ ಹಾಗೂ ಚೈನಾ ಬಂಡವಾಳ ಹೂಡಿಕೆದಾರರ ವಿಶ್ವಾಸ ಕಳೆದುಕೊಂಡಿವೆ. ಮುಂದಿನ ದಿನಗಳಲ್ಲಿ ಭಾರತ ಸಿದ್ಧ ಉಡುಪು ತಯಾರಿಕೆ ಕೇಂದ್ರವಾಗಿ ಜಗತ್ತಿಗೆ ಹೊರಹೊಮ್ಮಲಿದೆ. ರಾಜ್ಯ ಸರ್ಕಾರ ಇದಕ್ಕೆ ಸಿದ್ದವಾಗಿದ್ದು, ರಾಜ್ಯದಲ್ಲಿ ಜವಳಿ ಉದ್ಯಮಕ್ಕೆ ಬೆಂಬಲ ನೀಡಬೇಕು.
ಬೆಂಗಳೂರಿನಲ್ಲಿ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳು ನೆಲೆಗೊಂಡಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಗಾರ್ಮೆಂಟ್ಸ್ ಉದ್ಯೋಗ ಅರಿಸಿ ಲಕ್ಷಾಂತರ ಜನ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಪ್ರತಿ ತಾಲೂಕು ಹಂತಲ್ಲಿಯೂ ಗಾರ್ಮೆಂಟ್ಸ್ ತೆರೆಯಲು ನೆರವು ನೀಡಬೇಕು. ಜವಳಿ ಪಾರ್ಕ್ ಸ್ಥಾಪನೆಯ ಉದ್ದೇಶದಿಂದ ಸರ್ಕಾರದ ನೆರವು ಪಡೆದುಕೊಂಡು ಖಾಸಗಿ ವ್ಯಕ್ತಿಗಳು ಉದ್ದಿಮೆ ಸ್ಥಾಪಿಸದೆ ರಿಯಲ್ ಎಸ್ಟೇಟ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದಾರೆ. ಇವರಿಗೆ ಕಡಿವಾಣ ಹಾಕಬೇಕು ಎಂದು ಸಚಿವರಲ್ಲಿ ಕೋರಿಕೊಂಡರು.
ಜವಳಿ ಪಾರ್ಕ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿರುವ ಹಾಗೂ ಉದ್ಯೋಗ ನೀಡದಿರುವ ಉದ್ದಿಮೆದಾರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಚಿವ ಶಂಕರ್ ಪಾಟೀಲ್ ಮುನೇನಕೋಪ್ಪ ಭರವಸೆ ನೀಡಿದರು.
ಕೋವಿಡ್‍ನಲ್ಲಿ ಮೃತಪಟ್ಟ ನೇಕಾರರರ ಕುಟುಂಬದವರಿಗೆ ರೂ.2 ಲಕ್ಷ ಪರಿಹಾರ: ಸರ್ಕಾರ ಕೋವಿಡ್‍ನಲ್ಲಿ ಮೃತಪಟ್ಟ ನೇಕಾರರ ಕುಟುಂಬದವರ ನೆರವಿಗೆ ನಿಂತಿದೆ. ಮೃತರ ಪರಿಹಾರ್ಥವಾಗಿ ರೂ.2 ಲಕ್ಷವನ್ನು ಅವಲಂಬಿತರ ಖಾತೆ ಜಮೆ ಮಾಡಲಾಗಿದೆ ಎಂದು ಸಚಿವ ಶಂಕರ್ ಪಾಟೀಲ್ ಮುನೇನಕೋಪ್ಪ ಹೇಳಿದರು.
2019-20 ನೇ ಸಾಲಿನ 4ನೇ ರಾಷ್ಟ್ರೀಯ ಗಣತಿಯ ಅನುಸಾರ ರಾಜ್ಯದಲ್ಲಿ 54250 ಕೈಮಗ್ಗ ನೇಕಾರರು ಇದ್ದಾರೆ. ರಾಜ್ಯ ಸರ್ಕಾರ ಕೈಗೊಂಡ ವಿದ್ಯುತ್ ಮಗ್ಗ ನೇಕಾರರ ಗಣತಿಯಲ್ಲಿ ಡಿ.16 ಅಂತ್ಯದ ವೇಳೆಗೆ 97133 ವಿದ್ಯುತ್ ಕೈಮಗ್ಗ ನೇಕಾರರು ಇದ್ದಾರೆ. ಕೈಮಗ್ಗಕ್ಕೆ ಉತ್ತೇಜನ ನೀಡಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಪ್ರತಿ ವರ್ಷ ನೇಕಾರರಿಗೆ ರೂ.5000 ಹಣ ನೇರವಾಗಿ ಖಾತೆ ಜಮೆ ಮಾಡಲಾಗುವುದು. ಅಗತ್ಯ ಸಲಕರಣೆ ಖರೀದಿಗೆ ಶೇ.50 ರಷ್ಟು ಸಹಾಯಧನ, ಕಚ್ಚಾ ಮಾಲು ಖರೀದಿಗೆ ಕೈಮಗ್ಗ ಸಹಕಾರಿ ಸಂಘಗಳಿಗೆ ರೂ.15 ಸಹಾಯಧನ, ಸಹಕಾರಿ ಬ್ಯಾಂಕುಗಳ ಮೂಲಕ ಶೇ.1 ರಿಂದ 3ರ ವರೆಗಿನ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗಿದೆ. ಕೈಮಗ್ಗ ಅಭಿವೃದ್ದಿಗಾಗಿ ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ, ಕರ್ನಾಟಕ ರಾಜ್ಯ ಜವಳಿ ಸೌಲಭ್ಯ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ ಎಂದರು.
ಶಾಸಕ ಚನ್ನರಾಜ್ ಬಸವರಾಜ್ ಹಟ್ಟಿಹೊಳಿ ಮಾತನಾಡಿ, ರಾಜ್ಯದ ಕೈಮಗ್ಗ ನೇಕಾರರಿಗೆ ತಮಿಳುನಾಡು ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು. ವಿದ್ಯುತ್ ಬಿಲ್ ಪಾವತಿ ಮೇಲಿನ ಸಹಾಯ ಧನ ವಿತರಣೆ ಬದಲಿಗೆ, ರಿಯಾಯಿತಿ ದರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಬೆಳಗಾವಿಯ ಸಾಲಿಗ್ರಾಮದಲ್ಲಿ ಶೇ.90ಕ್ಕೂ ಹೆಚ್ಚು ಕುಟುಂಬಗಳು ನೇಕಾರಿಯಲ್ಲಿ ತೊಡಗಿವೆ. ಹಲವು ವರ್ಷಗಳ ಅವಧಿಯಲ್ಲಿ ಸುಮಾರು 25 ರಿಂದ 30 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಸರ್ಕಾರ ವಿಶೇಷ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದರು.
*ಹುಬ್ಬಳ್ಳಿ-ಧಾರವಾಡ 24/7 ಕುಡಿಯುವ ನೀರು ಯೋಜನೆ: ಗುತ್ತಿಗೆದಾರರ ಬದಲಾವಣೆ*
https://pragati.taskdun.com/hubli-dharawada24-7-drinking-waterbhairati-basavaraj/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ