ವೈದ್ಯಕೀಯ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಡಿ.ಕೆ‌ ಶಿವಕುಮಾರ್; ರಾಜ್ಯದ ವಿದ್ಯಾರ್ಥಿಗಳ ಹಿತಕಾಯಲು ಕಾಂಗ್ರೆಸ್ ಬದ್ಧ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಉಕ್ರೇನ್ – ರಷ್ಯಾ ಯುದ್ಧದ ಪರಿಣಾಮದಿಂದಾಗಿ ಭಾರತಕ್ಕೆ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿರುವ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ರಷ್ಯಾ-ಉಕ್ರೇನ್‌ ನಡುವಿನ ಯುದ್ಧದ ಸಂದರ್ಭದಲ್ಲಿ ರಾಜ್ಯಕ್ಕೆ ಮರಳಿದ್ದ ಸಂತ್ರಸ್ತ ವೈದ್ಯಕೀಯ ವಿದ್ಯಾರ್ಥಿಗಳು ತಾಯ್ನಾಡಿನಲ್ಲಿ ಶಿಕ್ಷಣ ಮುಂದುವರಿಸಲು ಸರ್ಕಾರ ನೆರವಾಗದೇ ಇರುವುದು ದುಃಖಕರ ವಿಚಾರ.” ಎಂದು ತಮ್ಮ ಟ್ವೀಟ್‌ನಲ್ಲಿ ಬೇಸರ ಹೊರಹಾಕಿರುವ ಡಿ.ಕೆ ಶಿವಕುಮಾರ್‌, “ಅತಂತ್ರಗೊಂಡಿರುವ ರಾಜ್ಯದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಕಾಂಗ್ರೆಸ್‌ ಪಕ್ಷ ಬದ್ಧವಾಗಿದೆ.” ಎಂದು ಹೇಳಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧದ ವೇಳೆ ರಾಜ್ಯದ ಸುಮಾರು 700 ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನಿನಿಂದ ಮರಳಿ ಬಂದಿದ್ದರು. ಇವರನ್ನೂ ಸೇರಿದಂತೆ ಭಾರತದ ಸಾವಿರಾರು ವಿದ್ಯಾರ್ಥಿಗಳು ಭಾರತದಲ್ಲೇ ಶಿಕ್ಷಣ ಮುಂದುವರಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್.ಎಂ.ಸಿ) ನಿರಾಕರಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾದಂತಾಗಿದೆ.
“ಯುದ್ಧ ಸಂತ್ರಸ್ತ ವಿದ್ಯಾರ್ಥಿಗಳು ರಾಜ್ಯದಲ್ಲೇ ಶಿಕ್ಷಣ ಮುಂದುವರಿಸಲು ಪರಿಹಾರವೇನು? ನನ್ನಿಂದ ಹಾಗೂ ಪಕ್ಷದಿಂದ ಏನೇ ಸಹಾಯ ಕೇಳಿದರೂ ಮಾಡಲು ಖಂಡಿತ ಸಿದ್ಧ.” ಎಂದು ಡಿ.ಕೆ ಶಿವಕುಮಾರ್ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ.
“ವಿದ್ಯಾರ್ಥಿಗಳು ಈಕೂಡಲೇ ನನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ನೇರ ಸಂದೇಶ (DM) ಕಳಿಸುವ ಮೂಲಕ ಸಂಪರ್ಕಿಸಬಹುದು. ವಿದ್ಯಾರ್ಥಿಗಳ ಬೆನ್ನಿಗೆ ಖಂಡಿತ ನಾವು ನಿಲ್ಲುತ್ತೇವೆ.” ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.

 

https://pragati.taskdun.com/3-bus-got-fire-in-bengaluru/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button