ಬೆಳಗಾವಿ ಭಾಗದ ಅಭಿವೃದ್ಧಿಗೆ ಕ್ರಮ ವಹಿಸಿ; ಸಿಎಂಗೆ ಚನ್ನರಾಜ ಹಟ್ಟಿಹೊಳಿ ನೇತೃತ್ವದ ನಿಯೋಗದ ಮನವಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ವಿಧಾನ ಮಂಡಲದ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಈ ಭಾಗದ ಅಭಿವೃದ್ಧಿಗಾಗಿ ಸರ್ಕಾರದ ವಿಶೇಷ ಅನುದಾನ ಘೋಷಿಸುವಂತೆ ಆಗ್ರಹಿಸಿ ಜನಪ್ರತಿನಿಧಿಗಳ ಕ್ಷೇತ್ರದಿಂದ ಚುನಾಯಿತ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಇದೇ ವೇಳೆ ಅವರು ಇನ್ನೂ ಆರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದು ಇದಕ್ಕೂ ಮುನ್ನ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರವಾಹ ಮತ್ತು ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸರ್ಕಾರಿ ಬಸ್ಸುಗಳ ಅನಾನುಕೂಲವಾಗಿದ್ದು, ಈ ಭಾಗಕ್ಕೆ ಹೆಚ್ಚಿನ ಬಸ್ಸುಗಳ ಅಗತ್ಯತೆ ಇದೆ. ಕನಿಷ್ಠ 100 ಬಸ್ ರೂಟ್ ಗಳನ್ನು ಹೆಚ್ಚಿಸಬೇಕು. ಹಾಗೆಯೇ 100 ಹೆಚ್ಚುವರಿ ನೂತನ ಬಸ್ಸುಗಳನ್ನು ಮಂಜೂರು ಮಾಡಬೇಕೆಂದು ಅವರು ಕೋರಿದ್ದಾರೆ.
ಬೆಳಗಾವಿ ವಿಭಾಗದಲ್ಲಿ ಕ್ಯಾನ್ಸರ್ ಆಸ್ಪತ್ರೆಯ ಉಪ ಕೇಂದ್ರ ಮಂಜೂರು ಮಾಡಬೇಕು. 18 ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದ ಬೆಳಗಾವಿ ಜಿಲ್ಲೆ ಸುಮಾರು 45 ಲಕ್ಷ ಜನಸಂಖ್ಯೆ ಹೊಂದಿದ್ದು, ಕೇವಲ ಒಂದು ಆಸ್ಪತ್ರೆಯನ್ನು ಮಾತ್ರ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳಿದ್ದು, ಅವರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಚನ್ನರಾಜ ಹಟ್ಟಿಹೊಳಿ ಅವರು ಮುಖ್ಯಮಂತ್ರಿ ಗಮನ ಸೆಳೆದಿದ್ದಲ್ಲದೆ, ಇನ್ನೂ ಎರಡು ಕಡೆ ಸೂಪರ್ ಮಲ್ಟಿಸ್ಪೆಷಾಲಿಸ್ಟ್ ಆಸ್ಪತ್ರೆ ಮಂಜೂರು ಮಾಡಬೇಕೆಂದು ಈ ಭಾಗದ ಜನತೆ ಪರವಾಗಿ ಕೋರಿದ್ದಾರೆ.
ಬೆಂಗಳೂರಿನಲ್ಲಿರುವ ಕೆಲವು ಪ್ರಮುಖ ಇಲಾಖೆಗಳು ಬೆಳಗಾವಿಗೆ ಸ್ಥಳಾಂತರಗೊಂಡಿಲ್ಲ, ಅವುಗಳನ್ನು ಕೂಡಲೇ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಕೇವಲ ಭರವಸೆ ನಿಡಿದರೆ ಸಾಲದು. ಪ್ರತಿ ಮೂರು ತಿಂಗಳಿಗೊಮ್ಮೆ ಸುವರ್ಣ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸುವುದರಿಂದ ಈ ಭಾಗದ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಸಹಕಾರಿಯಾಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಚನ್ನರಾಜ ಹಟ್ಟಿಹೊಳಿ ಕೋರಿದ್ದಾರೆ.
ಶಾಸಕರಾದ ಶರಣಗೌಡ ಬಯ್ಯಾಪುರ, ಅರವಿಂದ ಅರಳಿ, ದಿನೇಶ ಮರಿಗೌಡರ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.
*ರಾಜ್ಯದಲ್ಲಿ ಬಲಿಷ್ಠ ಕಾಂಗ್ರೆಸ್ ಸರ್ಕಾರ ಬರಲಿದೆ ಡಿ.ಕೆ.ಶಿವಕುಮಾರ್*
https://pragati.taskdun.com/congress-foundation-daybelagavid-k-shivakumarpressmeet/
ಖಾನಾಪುರ ತಾಲೂಕಿನಲ್ಲಿ ಬಸ್ ವ್ಯವಸ್ಥೆ ಸರಿಪಡಿಸಲು ಆಗ್ರಹ
https://pragati.taskdun.com/demand-to-fix-bus-system-in-khanapur-taluk/
ಲೈಂಗಿಕ ಕಿರುಕುಳ ಪ್ರಕರಣ; ಟಿವಿಎಫ್ ಸಂಸ್ಥಾಪಕ ಅರುಣಾಭ್ ಕುಮಾರ್ ದೋಷಮುಕ್ತ
https://pragati.taskdun.com/a-case-of-sexual-harassment-tvf-founder-arunabh-kumar-acquitted/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ