ಅಭಿವೃದ್ಧಿಯಾದರೆ ನನಗೆ ಹೆಸರು ಬರುತ್ತದೆ ಎಂದು ಕುತಂತ್ರ – ಲಕ್ಷ್ಮೀ ಹೆಬ್ಬಾಳಕರ್ ಆರೋಪ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನಡುವೆ ಸದನದಲ್ಲಿ ತೀವ್ರ ವಾಗ್ವಾದ ನಡೆಯಿತು.
ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಲಕ್ಷ್ಮೀ ಹೆಬ್ಬಾಳಕರ “ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡಲಾಗುತ್ತಿದೆ. ಇದಕ್ಕೆ ಉನ್ನತ ಶಿಕ್ಷಣ ಸಚಿವರೇ ಕಾರಣ. ಅಭಿವೃದ್ಧಿ ಯಾದರೆ ನನಗೆ ಹೆಸರು ಬರುತ್ತದೆ ಎಂದು ಕುತಂತ್ರ ನಡೆಸಲಾಗುತ್ತಿದೆ” ಎಂದು ನೇರವಾಗಿ ಆರೋಪಿಸಿದರು.
“ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ನೀಡಿದ ಜಮೀನಿನಲ್ಲಿ ಈ ಮೊದಲು 100 ಕೋಟಿ ರೂ. ವೆಚ್ಚದ ಕೆರೆ ತುಂಬಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಈ ಜಾಗದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ಜಮೀನು ಕಳೆದುಕೊಂಡವರಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ನೀಡಲಾಗುತ್ತದೆ ಎಂದು ಕುಲಪತಿಗಳು ಪತ್ರ ಬರೆದಿದ್ದರು. ಆದರೆ ಈಗ ರೈತರ ಭೂಮಿಯನ್ನು ಬಳಕೆ ಮಾಡದೆ ರೈತರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ,” ಎಂದು ಲಕ್ಷ್ಮೀ ಹೆಬ್ಬಾಳಕರ ದೂರಿದರು.
ರೈತರಿಗೆ ಸಂಚರಿಸಲೂ ಆಗದಂತೆ ಕಂಪೌಂಡ್ ಗೋಡೆ ಕಟ್ಟಲಾಗಿದೆ. ಉದ್ದೇಶಪೂರ್ವಕವಾಗಿ ರೈತರನ್ನು ತಪ್ಪುದಾರಿಗೆ ಎಳೆದಿದ್ದಲ್ಲದೆ ರೈತರಿಗೆ ಮೋಸ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವರೇ ಇದಕ್ಕೆಲ್ಲ ನೇರ ಕಾರಣ ಎಂದೂ ಅವರು ಗಂಭೀರ ಆರೋಪ ಮಾಡಿದರು.
“ಲಕ್ಷ್ಮೀ ಹೆಬ್ಬಾಳಕರ ಅವರು ವಿಶ್ವವಿದ್ಯಾಲಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಹಾದುಹೋಗುವ ರಸ್ತೆಗೆ 14 ಎಕರೆ ಜಾಗ ಬಿಟ್ಟುಕೊಟ್ಟಿದ್ದು, ಕಂಪೌಂಡ್ ತೆರವುಗೊಳಿಸಲಾಗಿದೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಉತ್ತರ ನೀಡಿದರು.
“ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 2010ರಲ್ಲಿ ಆರಂಭವಾಯಿತು. ಇದಕ್ಕೆ 126 ಎಕರೆ ಭೂಮಿ ನೀಡಲಾಗಿದೆ. ಹೆಚ್ಚುವರಿ ಭೂಮಿ ಅಗತ್ಯವಿಲ್ಲದಿರುವುದನ್ನು ಗಮನಿಸಿ ಆರ್ಥಿಕ ಇಲಾಖೆ ಕೂಡ ಇದಕ್ಕೆ ಒಪ್ಪಿಗೆ ನೀಡದ ಕಾರಣ ರೈತರ ಜಮೀನು ಖರೀದಿಸಲಿಲ್ಲ. ಇದರಲ್ಲಿ ಯಾವ ರಾಜಕಾರಣವೂ ಇಲ್ಲ,” ಎಂದು ಅಶ್ವತ್ಥನಾರಾಯಣ ಹೇಳಿದರು.
“ಶೈಕ್ಷಣಿಕ ಅಭಿವೃದ್ಧಿಗೆ ನಾನು ವಿರೋಧಿಸಿಲ್ಲ, ಆದರೆ ಕೆರೆ ತುಂಬುವ ಯೋಜನೆ ಜಾರಿಯಾದರೆ ನನಗೆ ಹೆಸರು ಬರುತ್ತದೆ. ಅದಕ್ಕಾಗಿ ಕೆರೆ ತುಂಬಿಸುವ ಯೋಜನೆ ಕೈಬಿಟ್ಟು ಅದೇ ಜಾಗದಲ್ಲಿ ವಿವಿ ಸ್ಥಾಪನೆಗೆ ಮುಂದಾಗಿದ್ದಾರೆ, ಎಲ್ಲ ದೃಷ್ಟಿಯಿಂದಲೂ ರೈತರಿಗೆ ಮೋಸವಾಗಿದೆ. ನಾನು ಯಾವತ್ತಿದ್ದರೂ ರೈತರ ಪರವಾಗಿಯೇ ನಿಲ್ಲುತ್ತೇನೆ” ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಹಿರೇಬಾಗೇವಾಡಿಯಲ್ಲಿ ಕಾಲೇಜು ಕಟ್ಟಡ ಉದ್ಘಾಟಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್
https://pragati.taskdun.com/college-building-inaugarated-in-hirebagewadi/
*ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಮುಕ್ತಿ; ಅಭಿವೃದ್ಧಿಶೀಲ ಕರ್ನಾಟಕ ನಿರ್ಮಾಣಕ್ಕೆ ಕಾಂಗ್ರೆಸ್ ಪಣ; ಡಿ.ಕೆ.ಶಿವಕುಮಾರ್*
https://pragati.taskdun.com/d-k-shivakumarpressmeetveerasoudhabelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ