*ಬಿಜೆಪಿ ನಾಯಕರಿಗೆ, ಮುಖ್ಯಮಂತ್ರಿಗಳಿಗೆ ಈ ವಿಚಾರವಾಗಿ ಮಾತನಾಡಲು ಧೈರ್ಯವಿಲ್ಲ; ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ‘ಸ್ವಾತಂತ್ರ್ಯ ಪೂರ್ವದಲ್ಲಿ ಹೇಗೆ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ್ದರು. ಅದೇ ರೀತಿ ಇಂದು ರಾಜ್ಯದಲ್ಲಿ ಅನ್ಯಾಯ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಭಾವನೆ, ನೋವಿಗೆ ಧ್ವನಿಯಾಗಿ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಮುಕ್ತಿ ನೀಡಬೇಕಿದೆ. ಅಭಿವೃದ್ಧಿಶೀಲ ಕರ್ನಾಟಕ ನಿರ್ಮಾಣ ಮಾಡಲು ಕಾಂಗ್ರೆಸ್ ಪಕ್ಷ ಸರ್ವ ಸನ್ನದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯ ವೀರಸೌಧದ ಬಳಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ಎಲ್ಲ ಕಾಂಗ್ರೆಸಿಗರು ಮುಂದಿನ ಎರಡು ಮೂರು ತಿಂಗಳ ಕಾಲ ಈ ಸಂದೇಶವನ್ನು ಜನರಿಗೆ ತಿಳಿಸಿ, ಸಮಾಜದಲ್ಲಿ ನೆಮ್ಮದಿ ಶಾಂತಿ ಮೂಡಿಸಲು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ನ್ಯಾಯ ಒದಗಿಸಲು, ಸುಭದ್ರ ಭ್ರಷ್ಟರಹಿತ ಆಡಳಿತ ನೀಡುವ ವಾಗ್ದಾನದೊಂದಿಗೆ ಜ.11 ವೀರಸೌಧದಿಂದ ಯಾತ್ರೆ ಹೊರಟಿದ್ದೇವೆ ಎಂದರು.
ರಾಜ್ಯಕ್ಕೆ ಬಿಜೆಪಿ ಕೇಂದ್ರ ನಾಯಕರ ಆಗಮನದ ವಿಚಾರವಾಗಿ, ಅವರು ಚುನಾವಣೆ ಬಂದಾಗ ಬರುತ್ತಾರೆ. ಚುನಾವಣೆ ಮುಗಿದ ಬಳಿಕ ಹೋಗುತ್ತಾರೆ. ಆದರೆ ಅವರು ಯಾವುದೇ ನ್ಯಾಯ ಒದಗಿಸಿಕೊಡುತ್ತಿಲ್ಲ. ಬೆಳಗಾವಿ ಗಡಿ ವಿಚಾರವಾಗಿ ಆಗುತ್ತಿರುವ ಗೊಂದಲದ ಬಗ್ಗೆ ಅವರು ಸ್ಪಷ್ಟನೆ ನೀಡಲಿ. ಮೀಸಲಾತಿ ಹೆಸರಲ್ಲಿ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಕಾನೂನಿನಲ್ಲಿ ಈ ರೀತಿ ಮಾಡಲು ಅವಕಾಶ ಎಲ್ಲಿದೆ? ಸಮುದಾಯಗಳ ಬೇಡಿಕೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗದೇ, ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿ ಅಲ್ಲಿ ಬಾಕಿ ಉಳಿಯುವಂತೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮುಖ್ಯಮಂತ್ರಿಗಳು ನಿನ್ನೆ ಪರಿಶಿಷ್ಟರು, ಪಂಚಮಸಾಲಿಗಳು, ಒಕ್ಕಲಿಗರ ಬೇಡಿಕೆ ಈ ರೀತಿ ಇದೆ. ನಾವು ಸಂವಿಧಾನದಲ್ಲಿ ತಿದ್ದುಪಡಿ ತಂದು ಇಷ್ಟು ಪ್ರಮಾಣದ ಮೀಸಲಾತಿ ತರಲು ಮುಂದಾಗಿದ್ದೇವೆ ಎಂದು ಹೇಳಿಕೆ ನೀಡಬೇಕಿತ್ತು. ಅವರಿಗೆ ಏನೂ ಹೇಳಲು ಸಾಧ್ಯವಾಗದೇ, ಎಲ್ಲರನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ. ಈಗ ಯಾವುದಾದರೂ ಒಂದು ಸಮುದಾಯದ ಮುಖಂಡರು, ಸ್ವಾಮೀಜಿಗಳು ನಮಗೆ ನ್ಯಾಯ ಸಿಕ್ಕಿದೆ ಎಂದು ಹೇಳಲು ಸಾಧ್ಯವಾಗುತ್ತದೆಯೇ? ಬಿಜೆಪಿ ನಾಯಕರು ಹಾಗೂ ಮುಖ್ಯಮಂತ್ರಿಗಳಿಗೆ ಈ ವಿಚಾರವಾಗಿ ಮಾತನಾಡಲು ಧೈರ್ಯವಿಲ್ಲ. ಇವರ ತೀರ್ಮಾನದಿಂದ ಎಲ್ಲ ಸಮಾಜಕ್ಕೂ ಅನ್ಯಾಯ ಆಗುತ್ತಿದೆ. ಕಾನೂನು ವಿವಾದಕ್ಕೆ ದಾರಿ ಮಾಡಿಕೊಡುತ್ತಿದ್ದಾರೆಯೇ ಹೊರತು ನ್ಯಾಯ ಹಾಗೂ ಸಂವಿಧಾನಬದ್ದವಾಗಿ ಏನನ್ನೂ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಇಂದು ಸಂಜೆ ವರಿಷ್ಠರು, ನಾಯಕರೆಲ್ಲರೂ ಸೇರಿ ವಿಜಯಪುರದಲ್ಲಿ ಕೃಷ್ಣಾ ನದಿ ವಿಚಾರವಾಗಿ ಹೋರಾಟ ಹಮ್ಮಿಕೊಂಡಿದ್ದೇವೆ. ಇದಾದ ನಂತರ ನಾವು ಕೂತು ಚರ್ಚೆ ಮಾಡುತ್ತೇವೆ. ಸಂಪುಟ ಸಭೆಯ ಚರ್ಚೆ, ತೀರ್ಮಾನವನ್ನು ಸರ್ಕಾರ ಗೌಪ್ಯವಾಗಿಟ್ಟಿದ್ದು, ಇದನ್ನು ತಿಳಿದ ನಂತರ ಕಾಂಗ್ರೆಸ್ ಪಕ್ಷದ ಅಭಿಪ್ರಾಯವನ್ನು ತಿಳಿಸಲಾಗುವುದು ಎಂದರು.
ಸರ್ವಪಕ್ಷ ಸಭೆ ವಿಚಾರವಾಗಿ, ‘ಅವರಿಗೆ ಯಾರ ಮೇಲೂ ನಂಬಿಕೆ ಇಲ್ಲ. ಅವರು ಸರ್ವಪಕ್ಷ ಸಭೆ ಕರೆಯದೇ ಇದ್ದದ್ದು ಒಳ್ಳೆಯದಾಯಿತು. ಇಂತಹ ವಿಚಾರದಲ್ಲಿ ಈ ರೀತಿ ತೀರ್ಮಾನ ಮಾಡಲು, ಅವರು ಹೇಳಿದ್ದನ್ನು ಕೇಳಿಕೊಂಡು ಬರಲು ನಾವು ಹೋಗಬೇಕಿತ್ತಾ? ಅವರು ಸದನದಲ್ಲೂ ಯಾವುದೇ ವಿಚಾರದ ಚರ್ಚೆಗೆ ಅವಕಾಶ ನೀಡಲಿಲ್ಲ’ ಎಂದು ತಿಳಿಸಿದರು.
50 ಲಕ್ಷ ಮನೆಗಳಲ್ಲಿ ಬಿಜೆಪಿ ಬಾವುಟ ಹಾರಿಸುವ ಕಾರ್ಯಕ್ರಮದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ‘ಅವರು ಹರ್ ಘರ್ ತಿರಂಗಾ ಎಂಬ ಕಾರ್ಯಕ್ರಮ ಮಾಡಿದರು. ನಾವು ಸ್ವಾತಂತ್ರ್ಯ ನಡಿಗೆ ಮಾಡಿದೆವು. ಅವರು ಈ ದೇಶಕ್ಕೆ ಯಾವುದೇ ಕೊಡುಗೆ ನೀಡಿಲ್ಲ’ ಎಂದರು.
ಬೆಳಗಾವಿಯ ಅಧಿವೇಶನದಿಂದ ಉತ್ತರ ಕರ್ನಾಟಕ ಜನರಿಗೆ ಅನುಕೂಲವಾಯಿತೇ ಎಂಬ ಪ್ರಶ್ನೆಗೆ, ‘ಯಾವುದೇ ಪ್ರಯೋಜನವಾಗಲಿಲ್ಲ, ಸಮಯ ಸೇರಿದಂತೆ ಎಲ್ಲವೂ ವ್ಯರ್ಥವಾಯಿತು. ಉತ್ತರ ಕರ್ನಾಟಕ ಭಾಗದ ಸಮಸ್ಯೆ, ಭ್ರಷ್ಟಾಚಾರ ವಿಚಾರ, ಮತ ಕಳ್ಳತನ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಲಿಲ್ಲ’ ಎಂದು ತಿಳಿಸಿದರು.
ಕಳಸಾ ಬಂಡೂರಿ ಯೋಜನೆ ಡಿಪಿಆರ್ ಗೆ ಅನುಮೋದನೆ ನೀಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಕೃಷ್ಣಾ, ಮಹಾದಾಯಿ ನೀರಾವರಿ ಯೋಜನೆ ವಿಚಾರವಾಗಿ ನಾವು ಹೋರಾಟ ಆರಂಭಿಸುತ್ತಿದ್ದೇವೆ ಎಂದು ಈಗ ಯೋಜನಾ ವಿಸ್ತೃತ ವರದಿಗೆ ಒಪ್ಪಿಗೆ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಏನು ಮಾಡುತ್ತಿದ್ದರು? ಅವರದೇ ತ್ರಿಬಲ್ ಇಂಜಿನ್ ಸರ್ಕಾರ ಇತ್ತು. ಆದರೂ ಈ ವಿಚಾರವಾಗಿ ಇಷ್ಟು ದಿನ ಏಕೆ ಏನೂ ಮಾಡಲಿಲ್ಲ. ಗಡಿ ವಿಚಾರವಾಗಿ ಗೃಹ ಸಚಿವರು ಕರ್ನಾಟಕ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಮಾಡಿದ ಬಳಿಕ ಮಹಾರಾಷ್ಟ್ರದವರು ಯಾಕೆ ರಾಜ್ಯದ ಹಳ್ಳಿಗಳು ತಮಗೆ ಸೇರಬೇಕು ಎಂದು ನಿರ್ಣಯ ಹೊರಡಿಸುತ್ತಾರೆ? ಕೇವಲ ರಾಜಕೀಯ ಕಾರಣಕ್ಕೆ ಜನರಲ್ಲಿ ಜಗಳ ತಂದು ಇಡುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರ ತಾಯಿ ಅಗಲಿಕೆ ವಿಚಾರವಾಗಿ, ದೇಶಕ್ಕೆ ಒಬ್ಬ ನಾಯಕನಿಗೆ ಜನ್ಮ ನೀಡಿದ್ದ ತಾಯಿ. ಎಲ್ಲರೂ ಗೌರವ ನೀಡಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾನು ಹಾಗೂ ನಮ್ಮ ಪಕ್ಷ ಬಹಳ ಗೌರವದಿಂದ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ’ ಎಂದು ತಿಳಿಸಿದರು.
*5 ಎಕರೆಯಲ್ಲಿ ನಿರ್ಮಾಣವಾಗಿರುವ ಮೆಗಾ ಡೇರಿ ಉದ್ಘಾಟಿಸಿದ ಅಮಿತ್ ಶಾ*
https://pragati.taskdun.com/amith-shahmega-dairyinaugurationmandyagejjalagere/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ