ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಭಾರತ ದೇಶವನ್ನು ಉಳಿಸಲು, ಬೆಳಸಲು, ಉಜ್ವಲ ಭವಿಷ್ಯ ನೀಡಲು ಭಾಜಪ ದಿಂದ ಮಾತ್ರ ಸಾಧ್ಯ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಷಾ ಅವರೊಂದಿಗೆ ಇಂದು ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ ಸುಮಾರು 2 ಸಾವಿರ ಪಕ್ಷಗಳಿದ್ದು ಭಾಜಪ ಸದಸ್ಯರಾಗಿ ಕೆಲಸ ಮಾಡುತ್ತಿರುವುದು ನಮ್ಮೆಲ್ಲರ ಅದೃಷ್ಟ. ವಿಶ್ವದ ಅತಿ ದೊಡ್ಡ ಪಕ್ಷ ಭಾಜಪ. ಚೈನಾದ ಕಮ್ಯುನಿಸ್ಟ್ ಪಕ್ಷಕ್ಕಿಂತ ಅತಿ ಹೆಚ್ವು ಸದಸ್ಯರನ್ನು ಹೊಂದಿರುವ ಭಾಜಪ. ಕೇವಲ ಸಂಖ್ಯೆಯಲ್ಲಿ ಮಾತ್ರ ದೊಡ್ಡದಲ್ಲದೆ, ವಿಚಾರದಲ್ಲಿಯೂ ದೊಡ್ಡದು. ಭಾರತ ಮಾತೆಯನ್ನು ಆರಾಧ್ಯ ದೇವತೆ ಎಂದು ತಿಳಿದವರು.
ನಾವು. ದೇಶ ಮೊದಲು ಎಂಬ ಭಾವನೆಯಿಂದ ಸಾರ್ವಜನಿಕ ಬದುಕು ನಡೆಸುತ್ತಿದ್ದೇವೆ. ದೇಶಕ್ಕಾಗಿ ಜೀವನ. ಮಾಡಲು, ತ್ಯಾಗ ಮಾಡಲೂ ಸಿದ್ದ ಎನ್ನುವ ದೇಶಭಕ್ತರ ಪಕ್ಷ. ಕಾಂಗ್ರೆಸ್ ಪಕ್ಷದವರು ಕೇವಲ ಅಧಿಕಾರಕ್ಕಾಗಿ ಇರುವ ರಾಷ್ಟ್ರೀಯ ಪಕ್ಷದ ಸದಸ್ಯರು. ಇದು ನಮ್ಮ ಮತ್ತು ಅವರ ನಡುವಿನ ವ್ಯತ್ಯಾಸ. ನಾವು ಭಾರತ್ ಮಾತಾ ಕಿ ಜೈ ಅಂದರೆ ಅವರು ಸೋನಿಯಾ ಮಾತಾ ಕಿ ಜೈ ಅನ್ನುತ್ತಾರೆ. ಅವರ ನಿಷ್ಠೆ ಇಟಲಿಯ ನಾಯಕರಿಗೆ ಇದ್ದರೆ, ನಮ್ಮ ಭಕ್ತಿ ಭಾರತ ಮಾತೆಗೆ ಎಂದರು.
*ಉನ್ನತ ಮಟ್ಟದ ಧ್ಯೇಯೋದ್ದೇಶ/ ನಾಯಕತ್ವ*
ಈ ದೇಶದ ಅಖಂಡತೆ, ಏಕತೆ, ಆಂತರಿಕ ಮತ್ತು ಬಾಹ್ಯ ಸುರಕ್ಷತೆಯ ಜೊತೆಗೆ ಈ ದೇಶದ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಬಡವರ ಚಿಂತನೆ, ಕಾರ್ಯಕ್ರಮಗಳನ್ನು ಭಾಜಪ ಮಾಡಲು ಸಾಧ್ಯ. ಒಂದು ಪಕ್ಷ ಯಶಸ್ವಿಯಾಗಲು ನೀತಿ, ಸಿದ್ಧಾಂತ,ಅದರ ಕ್ರಿಯಾಶೀಲ ಸದಸ್ಯರು ಕಾರಣ. ಉನ್ನತ ಮಟ್ಟದ ಧ್ಯೇಯೋದ್ದೇಶ, ನಾಯಕತ್ವ ನಮಲ್ಲಿದೆ. ನರೇಂದ್ರ ಮೋದಿಯವರು ವಿಶ್ವಮಾನ್ಯ ನಾಯಕರು. ಭಾರತವನ್ನು ಮುನ್ನಡೆಸುವ ಬಗ್ಗೆ ಸ್ಪಷ್ಟತೆವುಳ್ಳ ನಾಯಕರು ಎಂದರು.
*ಪಾಲಿಸಿ ಪ್ಯಾರಾಲಿಸಿಸ್*
ಯುಪಿಎ ಸರ್ಕಾರ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳದೇ ಪಾಲಿಸಿ ಪ್ಯಾರಾಲಿಸಿಸ್ ಆಗಿದ್ದನ್ನು ನಾವು ನೋಡಿದ್ದೇವೆ. ಭಾರತ ಮುಂದುವರೆಯಲಿಲ್ಲ. ಅನೈತಿಕತೆಯಿಂದ ರಾಷ್ಟ್ರವನ್ನಾಳಿದರು. ಎಲ್ಲಾ ರಂಗದಲ್ಲಿ ದೇಶ ಮತ್ತು ರಾಜ್ಯ ಹಿನ್ನಡೆಯಾಯಿತು. ಅದಕ್ಕಾಗಿ ನರೇಂದ್ರ ಮೋದಿಯವರ ಗುಜರಾತಿನ ಮಾದರಿಯಲ್ಲಿ ದೇಶ ಅಭಿವೃದ್ಧಿ ಗೊಳಿಸಲು ಪ್ರಧಾನ ಮಂತ್ರಿಗಳಾಗಿ ದೇಶಕ್ಕೆ ಹೊಸ ದಿಕ್ಸೂಚಿ ನೀಡಿನಾಯಕತ್ವ ನೀಡಿದರು.
ನಿರ್ಣಯ ತೆಗೆದುಕೊಳ್ಳುವ ನಾಯಕತ್ವ. ಈ ಎಲ್ಲಾ ಸಾಧಿಸಲು ಇರುವ ಶಕ್ತಿ ಕೇಂದ್ರ ಸಚಿವ ಅಮಿತ್ ಶಾ ಅವರದ್ದು. ದೃಢ ಸಂಕಲ್ಪವನ್ನು ನಾವು ನೋಡಿದ್ದೇವೆ. ತ್ರಿಪಲ್ ತಲಾಖ್ , ಆರ್ಟಿಕಲ್ 370 ಹಿಂಪಡೆಯುವ ವಿಚಾರದಲ್ಲಿ ಎಲ್ಲರ ವಿಶ್ವಾಸ ಗಳಿಸಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಈ ದೇಶದ ಗಡಿ ರಕ್ಷಣೆ ಮಾಡಲು ಸಾಧ್ಯವಾಗದೇ ಇದ್ದವರು, ನೆಲ ಜಲವನ್ನು, ಆರ್ಥಿಕ ಅಭಿವೃದ್ಧಿ ಯನ್ನು ಮಾಡದವರು, ಈ ದೇಶಕ್ಕೆ ಬೇಡ ಎನ್ನುವ ನಿರ್ಧಾರವನ್ನು ಮಾಡಿದ್ದಾರೆ ಎಂದರು.
*2 ಲಕ್ಷ ಕೋಟಿ ಸಾಲ*
ಕರ್ನಾಟಕ ಪ್ರಗತಿಪರ ರಾಜ್ಯ. ಇದನ್ನು ಅತ್ಯಂತ ಹಿಂದುಳಿದ ರಾಜ್ಯ ವನ್ನಾಗಿ ಮಾಡುವ ಕೆಲಸವನ್ನು ಕಾಂಗ್ರೆಸ್ 5 ವರ್ಷ ಮಾಡಿತು. ಸಿದ್ದರಾಮಯ್ಯ ಅವರು 5 ವರ್ಷಗಳ ಲ್ಲಿ 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕೋವಿಡ್ ಇರಲಿಲ್ಲ. ಸಿದ್ದರಾಮಯ್ಯ ಬರುವವರೆಗೂ 1 ಲಕ್ಷ ಕೋಟಿ ಸಾಲವಿತ್ತು. ಅವರು ಬಂದ ನಂತರ ಹೆಚ್ಚಾಯಿತು ಎಂದರು.
*ಜಲಜೀವನ ಮಿಷನ್ ಅಡಿ 30 ಲಕ್ಷ ಮನೆಗೆ ಸಂಪರ್ಕ :*
ಕೋವಿಡ್ ನಿರ್ವಹಣೆ ಮಾಡುತ್ತಾ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಕಳೆದ ಸಾಲಿನಲ್ಲಿ 10 ಸಾವಿರ ಕೋಟಿ ಸಾಲ ತೆಗೆದುಕೊಳ್ಳದೇ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ. ರಾಜ್ಯದಲ್ಲಿ 6000 ರಾಷ್ಟ್ರಿಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಜಲಜೀವನ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ಕಳೆದ 2 ವರ್ಷದ ಅವಧಿಯಲ್ಲಿ 30 ಲಕ್ಷ ಮನೆಗಳಿಗೆ ನೀರು ಸಂಪರ್ಕ ನೀಡಲಾಗಿದ್ದು, ಇನ್ನೂ 25 ಲಕ್ಷ ಸಂಪರ್ಕ ನೀಡಲಾಗುವುದು. ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟರು.
ತಿನ್ನುವ ಅನ್ನ, ದಿಂಬು ಹಾಸಿಗೆ, ಸಣ್ಣ ನೀರಾವರಿಯಲ್ಲಿ ಭ್ರಷ್ಟಾಚಾರ ಮಾಡಿದರು. ನಮ್ಮ ಮೇಲೇ ಹತಾಶರಾಗಿ ಆರೋಪಗಳನ್ನು ಮಾಡುತ್ತಾರೆ. ಪುರಾವೆಗಳ ಸಮೇತ ಆರೋಪಗಳನ್ನು ಮಾಡಲಿ, ತನಿಖೆ ಮಾಡಿಸಲಾಗುವುದು. ಇವತ್ತಿನವರೆಗೂ ಒಂದು ಪುರಾವೆಯನ್ನು ತರದೇ ಕೇವಲ ಮಾತಿನಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುತ್ತಾರೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ 90 ಪ್ರಕರಣಗಳು ಎಸಿಬಿಗೆ ಹೋಗಿತ್ತು. ಎಲ್ಲವಕ್ಕೂ ಬಿ ರಿಪೋರ್ಟ್ ನೀಡಿದರು. ಕಾಂಗ್ರೆಸ್ ನವರು ತಮ್ಮ ಹಗರಣಗಳನ್ನು ಮುಚ್ಚಲು ಎಸಿಬಿ ಯನ್ನು ಸ್ಥಾಪಿಸಿ, ಲೋಕಾಯುಕ್ತವನ್ನು ಮುಚ್ಚಿಸಿದರು. ಸ್ವಾಯತ್ತ ಸಂಸ್ಥೆ ಲೋಕಾಯುಕ್ತವನ್ನು ಮುಚ್ಚುವ ಅವಶ್ಯಕತೆ ಏನಿತ್ತು. ಈ ಎಲ್ಲ ಪ್ರಕರಣಗಳೂ ಇಂದು ಲೋಕಾಯುಕ್ತದಲ್ಲಿ ರೆಫರ್ ಆಗುತ್ತಿವೆ ಎಂದರು.
*ಸಕಾರಾತ್ಮವಾಗಿ ಜನರ ಬಳಿಗೆ ಹೋಗಬೇಕು :*
ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ, ಮುದ್ರಾ, ಉಜ್ವಲ, ಪ್ರಧಾನಮಂತ್ರಿ ಆವಾಸ ಯೋಜನೆ, ಆಯುಷ್ಮಾನ ಭಾರತ ಯೋಜನೆಗಳನ್ನು ಜನರ ಮುಂದಿಡಲಾಗಿದೆ. ರಾಜ್ಯದಲ್ಲಿ ರೈತ ವಿದ್ಯಾನಿಧಿ, ಕೂಲಿಕಾರರು, ಮೀನುಗಾರರು, ನೇಕಾರರ ಮಕ್ಕಳಿಗೆ ವಿದ್ಯಾನಿಧಿ, ಯುವಕರಿಗೆ ಸ್ವಯಂಉದ್ಯೋಗ ಕಲ್ಪಿಸುವ ಸ್ವಾಮಿ ವಿವೇಕಾನಂದ ಯೋಜನೆ, ಸ್ತ್ರೀ ಸಾಮರ್ಥ್ಯ ಯೋಜನೆಗಳ ಮೂಲಕ 5 ಲಕ್ಷ ಮಹಿಳೆಯರು ಹಾಗೂ 5 ಲಕ್ಷ ಯುವಕರಿಗೆ ಈ ಯೋಜನೆಗಳಿಂದ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ. ಕಮ್ಮಾರರು, ಬಡಿಗರು ಸೇರಿದಂತೆ ಹಲವು ಕಸುಬುದಾರರಿಗೆ 50 ಸಾವಿರಗಳ ಧನಸಹಾಯ ನೀಡುವ ಕಾಯಕ ಯೋಜನೆ ನೀಡಲಾಗುತ್ತಿದೆ.
ಎಸ್ ಸಿ ಎಸ್ ಟಿ ವರ್ಗದವರಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್, ವಿದ್ಯಾರ್ಥಿ ವೇತನ, ಭೂಮಿಖರೀದಿಗೆ ನೆರವು, ಹೀಗೆ ಸಾಮಾಜಿಕ ನ್ಯಾಯವನ್ನು ಒದಗಿಸಲಾಗಿದೆ. 20 ಸಾವಿರ ಕುರಿಗಾಹಿಗಳ ಸಂಘಗಳಿಗೆ ಸುಮಾರು 354 ಕೋಟಿ ರೂ.ಗಳ ಯೋಜನೆಯನ್ನು ಮಾಡಲಾಗಿದೆ. ಲಂಬಾಣಿ ಗ್ರಾಮಗಳಲ್ಲಿ ಹಕ್ಕು ಪತ್ರ ನೀಡುತ್ತಿರುವುದು ದಾಖಲಾರ್ಹ ಕಾರ್ಯಕ್ರಮ. ಸರ್ಕಾರ ಮಾಡಿರುವ ಕೆಲಸಗಳ ರಿಪೋರ್ಟ್ ಕಾರ್ಡ್ ಹಿಡಿದು ಸಕಾರಾತ್ಮಕವಾಗಿ ಜನರ ಬಳಿಗೆ ಹೋಗಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವ ಮೂಲಕ ನವಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡುವ ಆತ್ಮವಿಶ್ವಾಸವನ್ನು ಈ ಕಾರ್ಯಕ್ರಮ ನೀಡಿದೆ ಎಂದರು.
ಭಾಜಪ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದಗೌಡ, ಸಚಿವರಾದ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಆರ್.ಅಶೋಕ್, ಕೆ.ಗೋಪಾಲಯ್ಯ, ಮುನಿರತ್ನ, ಎಸ್.ಟಿ.ಸೋಮಶೇಖರ್, ಸಂಸದ ತೇಜಸ್ವಿ ಸೂರ್ಯ ಮೊದಲಾದವರು ಉಪಸ್ಥಿತರಿದ್ದರು.
https://pragati.taskdun.com/cm-basavaraj-bommaibjp-vijaya-sankalpa-samaveshaamith-shah/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ