ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಯಾರು ಏನೇ ಅಂದುಕೊಳ್ಳಲಿ. ಅದಕ್ಕೆ ಯಾರು ತಲೆ ಕೆಡಿಸಿಕೊಳ್ಳಬೇಡಿ. ಕಳೆದ ಒಂದೂವರೆ ದಶಕದಿಂದ ನನಗೆ ಮತ ನೀಡಿ ಹಾರೈಸುತ್ತಿರುವ ಮತದಾರ ಪ್ರಭುಗಳ ಋಣ ತೀರಿಸಲು ಕೌಜಲಗಿ (ಕಲ್ಮಡ್ಡಿ) ಭಾಗದ ಪ್ರಮುಖ ಬೇಡಿಕೆಯಾದ ಕಲ್ಮಡ್ಡಿ ನೀರಾವರಿ ಯೋಜನೆಯನ್ನು ರೈತ ಸಮುದಾಯಕ್ಕೆ ಅರ್ಪಿಸಿದ್ದೇನೆ. ಇದೊಂದು ನಾನು ರೈತರಿಗೆ ನೀಡುತ್ತಿರುವ ನನ್ನ ಉಡುಗೊರೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ಕೌಜಲಗಿಯ ಟಿಪ್ಪು ಸುಲ್ತಾನ ಸರ್ಕಲ್ನಲ್ಲಿ ಬುಧವಾರ ರಾತ್ರಿ ಕಲ್ಮಡ್ಡಿ ಭಾಗದ ರೈತರು ಹಮ್ಮಿಕೊಂಡಿದ್ದ ನಾಗರೀಕ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು, ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಮಂಜೂರಾತಿ ದೊರೆಯಲು ೧೫ ವರ್ಷ ಬೇಕಾಯಿತು ಎಂದು ಹೇಳಿದರು.
೨೦೦೬ರಲ್ಲಿ ಜೆಡಿಎಸ್-ಬಿಜೆಪಿ ಸಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ದ ಸಂದರ್ಭದಲ್ಲಿ ರೈತರು ಕೌಜಲಗಿ ಭಾಗದ ರೈತರು ಕಲ್ಮಡ್ಡಿ ಏತ ನೀರಾವರಿ ಯೋಜನೆಗಾಗಿ ನನ್ನಲ್ಲಿ ಮನವಿ ಮಾಡಿಕೊಂಡಿದ್ದರು. ಆಗಿನ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಗೆ ಇದನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಅಂದಿನಿಂದ ಆರಂಭಗೊಂಡ ಈ ಹೋರಾಟಕ್ಕೆ ಮಂಜೂರಾತಿ ನೀಡಲು ಕೊನೆಗೂ ಕುಮಾರಸ್ವಾಮಿಯವರು ಬರಬೇಕಾಯಿತು ಎಂದು ಮೆಲಕು ಹಾಕಿದರು.
ಕಲ್ಮಡ್ಡಿ ಭಾಗದ ಕೌಜಲಗಿ, ಗೋಸಬಾಳ, ಬಗರನಾಳ, ಮನ್ನಿಕೇರಿ ಮತ್ತು ಬಿಲಕುಂದಿ ಗ್ರಾಮಗಳ ೭೨೦೦ ಎಕರೆಯಷ್ಟು ಭೂಪ್ರದೇಶ ಸಂಪೂರ್ಣ ನೀರಾವರಿಯಾಗಿ ಮಾರ್ಪಾಡಲಿದೆ. ಇದಕ್ಕಾಗಿ ಮೈತ್ರಿ ಸರ್ಕಾರದ ಕಳೆದ ಬಜೆಟ್ನಲ್ಲಿ ೧೨೦ ಕೋಟಿ ರೂಗಳನ್ನು ಮೀಸಲಿಡಲಾಗಿತ್ತು. ಬಜೆಟ್ನಲ್ಲಿ ಘೋಷಣೆಯಾದ ಬಹುತೇಕ ಯೋಜನೆಗಳು ಅನುಷ್ಠಾನಗೊಳ್ಳುವುದಿಲ್ಲ. ಅಲ್ಲದೇ ಈ ಕಾಮಗಾರಿಗೆ ಅನುದಾನ ಕೂಡಾ ಸಾಕಾಗಲಿಲ್ಲ.
ನಾನು ಹಾಗೂ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ ಹಾಗೂ ಈಗಿನ ಸಚಿವರಾಗಿರುವ ಸತೀಶ ಜಾರಕಿಹೊಳಿ ಕೂಡಿಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಜೆಟ್ನಲ್ಲಿ ಘೋಷಣೆ ಮಾಡಲಾದ ಕಲ್ಮಡ್ಡಿ ಏತ ನೀರಾವರಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿದೆವು.
ಜೊತೆಗೆ ನೀರಾವರಿ ಯೋಜನೆಗಾಗಿ ಭೂಸ್ವಾಧಿನ ಮಾಡಿಕೊಳ್ಳಲು ರೈತರಿಗೆ ಪರಿಹಾರವನ್ನು ನೀಡುವುದಕ್ಕಾಗಿ ಅಂದಾಜು ೧೬ ಕೋಟಿ ರೂಗಳಷ್ಟು ಮೀಸಲಿಡಬೇಕಾಗಿದ್ದರಿಂದ ೧೨೦ ಕೋಟಿ ರೂಗಳ ಜೊತೆಗೆ ಇನ್ನೂ ೪೦ ಕೋಟಿ ರೂಗಳ ಹೆಚ್ಚುವರಿಯಾಗಿ ಅನುದಾನ ನೀಡುವಂತೆ ಮನವಿ ಮಾಡಿದೆವು. ನಂತರ ಹಣಕಾಸು ಸಚಿವಾಲಯಕ್ಕೆ ಕಳುಹಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ೧೬೧.೨೦ ಕೋಟಿ ರೂಗಳ ಅನುದಾನಕ್ಕೆ ಆಡಳಿತಾತ್ಮಕ ಒಪ್ಪಿಗೆ ಸೂಚಿಸಿದರೆಂದು ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಕೌಜಲಗಿ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ವಾರದೊಳಗೆ ಸರ್ಕಾರಿ ಆದೇಶದ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತದೆ. ಒಟ್ಟಿನಲ್ಲಿ ಎರಡು ವರ್ಷದೊಳಗೆ ರೈತ ಬಾಂಧವರಿಗೆ ಕಲ್ಮಡ್ಡಿ ನೀರು ದೊರಕಲಿದೆ ಎಂದು ಅವರು ತಿಳಿಸಿದರು.
ಕೌಜಲಗಿ ತಾಲೂಕು ರಚನೆಗೆ ಬದ್ಧ:
೪ ದಶಕಗಳಿಂದ ಹೋರಾಟ ಮಾಡಿಕೊಂಡು ಬರುತ್ತಿರುವ ಕೌಜಲಗಿ ತಾಲೂಕು ರಚನೆಯ ಹೋರಾಟಗಾರರಿಗೆ ಆತ್ಮಸ್ಥೈರ್ಯ ತುಂಬಿದ ಬಾಲಚಂದ್ರ ಜಾರಕಿಹೊಳಿ ಅವರು, ಮುಂದಿನ ದಿನಗಳಲ್ಲಿ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿಯೇ ತೀರುತ್ತೇನೆ. ನಾನು ಸೂಕ್ಷವಾದಿಯಾದರೂ ತುಂಬಾ ಹಠವಾದಿಯಾಗಿರುವೆ. ಹಿಡಿದ ಕಾರ್ಯವನ್ನು ಪೂರ್ಣಗೊಳಿಸದೇ ಬಿಡುವುದಿಲ್ಲ. ಇದಕ್ಕೆ ಕಲ್ಮಡ್ಡಿ ನೀರಾವರಿ ಯೋಜನೆಯೇ ಸಾಕ್ಷಿಯಾಗಿದೆ. ಇನ್ನೊಂದು ಕೌಜಲಗಿ ತಾಲೂಕು. ರಚನೆಯಾಗುವರೆಗೂ ನಾನು ವಿಶ್ರಮಿಸುವದಿಲ್ಲ ಎಂದು ಅವರು ಘಂಟಾಘೋಷವಾಗಿ ಹೇಳಿದರು.
ಜಿ.ಪಂ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಕಲ್ಮಡ್ಡಿ ಯೋಜನೆ ಜಾರಿಗೊಳ್ಳಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪರಿಶ್ರಮವೇ ಕಾರಣ. ಕೌಜಲಗಿ ಗ್ರಾಮಸ್ಥರು ಹೇಳಿದ ಕೆಲಸ-ಕಾರ್ಯಗಳನ್ನು ಮಾಡಿಕೊಟ್ಟಿರುವ ಅವರಿಗೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಾವುಗಳು ಅತಿ ಕಡಿಮೆ ಮತಗಳನ್ನು ನೀಡಿ ಶಾಸಕರಿಗೆ ಮೋಸ ಮಾಡಿದ್ದೇವೆ. ಈ ತಪ್ಪಿನ ಅರಿವು ಸರಿಪಡಿಸಲು ಲೋಕಸಭಾ ಚುನಾವಣೆಯಲ್ಲಿ ಸಂಸದ ಸುರೇಶ ಅಂಗಡಿ ಅವರಿಗೆ ಹೆಚ್ಚಿನ ಮತಗಳ ಮುನ್ನಡೆಯನ್ನು ದೊರಕಿಸಿ ಕೊಟ್ಟೆವು ಎಂದರು.
ಕೌಜಲಗಿ ಭಾಗವನ್ನು ಸಂಪೂರ್ಣ ನೀರಾವರಿ ಕ್ಷೇತ್ರವನ್ನಾಗಿ ಪರಿವರ್ತಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅಭಿನಂದಿಸಿದ ಅವರು, ಕಲ್ಮಡ್ಡಿ ವಿಷಯದಲ್ಲಿ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಕಲ್ಮಡ್ಡಿ ನೀರಾವರಿ ಯೋಜನೆ ಯಾವ ಇಲಾಖೆಗೆ ಒಳಪಡುತ್ತದೆ ಎಂಬ ಕನಿಷ್ಠ ಜ್ಞಾನವೂ ಅವರಿಗಿಲ್ಲ ಎಂದು ಟಾಂಗ್ ನೀಡಿದರು.
ಕಲ್ಮಡ್ಡಿ ನೀರಾವರಿ ಯೋಜನೆಯ ರೂವಾರಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಕೌಜಲಗಿ ಭಾಗದ ಜನರು ಆಕರ್ಷಕ ಸ್ಮರಣಿಕೆ, ಬೆಳ್ಳಿಗದೆ ನೀಡಿ ಹೃದಯಸ್ಪರ್ಷಿಯಾಗಿ ನಾಗರೀಕ ಸತ್ಕಾರ ನೀಡಿದರು.
ಇದೇ ಸಂದರ್ಭದಲ್ಲಿ ಕಲ್ಮಡ್ಡಿ ರೈತ ಹೋರಾಟಗಾರರಾದ ಪ್ರಕಾಶ ಕೋಟಿನತೋಟ, ದಸ್ತಗೀರ ನದಾಫ, ಸಿದ್ದಪ್ಪ ಹುಂಡರದ, ಈರಪಣ್ಣ ಬಿಸಗುಪ್ಪಿ, ರಾಮಣ್ಣ ಈಟಿ ಅವರನ್ನು ಸತ್ಕರಿಸಲಾಯಿತು.
ವೇದಿಕೆ ಮೇಲೆ ವಿಠ್ಠಲ ದೇವಋಷಿ, ಮುಖಂಡರಾದ ಅಶೋಕ ಪರುಶೆಟ್ಟಿ, ಎಸ್.ಆರ್.ಭೋವಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಅಶೋಕ ಉದ್ದಪ್ಪನವರ, ತಾ.ಪಂ ಸದಸ್ಯರಾದ ಶಾಂತಪ್ಪ ಹಿರೇಮೇತ್ರಿ, ಲಕ್ಷ್ಮಣ ಮುಸಗುಪ್ಪಿ, ಪ್ರಭಾ ಶುಗರ ಉಪಾಧ್ಯಕ್ಷ ರಾಮಣ್ಣ ಮಹಾರೆಡ್ಡಿ, ಶಿವು ಲೋಕನ್ನವರ, ಸುಭಾಶ ಕೌಜಲಗಿ, ಶಿವಲಿಂಗ ಬಳಿಗಾರ, ವಿಠ್ಠಲ ಸವದತ್ತಿ, ರಾಮಯ್ಯ ಮಠದ, ಬಾಳಪ್ಪ ಬುಳ್ಳಿ, ಸತ್ತೆಪ್ಪ ಹೊಸಟ್ಟಿ, ಸುಭಾಶ ಹಾವಾಡಿ, ಬಸನಗೌಡ ಪಾಟೀಲ, ಮುದಕಪ್ಪ ಗೋಡಿ, ಬಾಳಪ್ಪ ಗೌಡರ, ಗಿರೆಪ್ಪ ಹಳ್ಳೂರ, ರಾಯಪ್ಪ ಬಳೋಲದಾರ, ಎಮ್.ಡಿ.ಖಾಜಿ, ಮಂಜು ಸಣ್ಣಕ್ಕಿ, ಝಾಕೀರ ಜಮಾದಾರ, ಕರೆಪ್ಪ ಬಿಸಗುಪ್ಪಿ, ಸಿದ್ದಪ್ಪ ಹುಚ್ಚಾಡಿ, ರಮಜಾನ ಪೋದಿ, ಮಹಾದೇವ ಬುದ್ನಿ, ಲಕ್ಷ್ಮಣ ಗಡಾದ, ಕೌಜಲಗಿ ಭಾಗದ ಗ್ರಾ.ಪಂ ಸದಸ್ಯರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಗ್ರಾ.ಪಂ ಮಾಜಿ ಅಧ್ಯಕ್ಷ ನೀಲಪ್ಪ ಕಿವಟಿ ಸ್ವಾಗತಿಸಿದರು. ಮಾಲತೇಶ ಸಣ್ಣಕ್ಕಿ ಮತ್ತು ಅವಣ್ಣ ಮೋಡಿ ನಿರೂಪಿಸಿದರು. ರವಿ ಪರುಶೆಟ್ಟಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ