
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ನಿಲ್ಲದ ವನ್ಯಜೀವಿಗಳು ಹಾಗೂ ಮಾನವ ಸಂಘರ್ಷದ ಮಧ್ಯೆ ರಾಜ್ಯ ಸರಕಾರ ಅರಣ್ಯ ಇಲಾಖೆಯ 9 ಹಿರಿಯ ಅಧಿಕಾರಿಗಳ ಹುದ್ದೆಗಳನ್ನು ಸ್ಥಳಾಂತರ ಮಾಡಿದೆ.
ಈ ಅಧಿಕಾರಿಗಳಾರೂ ಕಚೇರಿಯಲ್ಲೇ ಕುಳಿತು ರಾಯಭಾರ ನಿಭಾಯಿಸುತ್ತಿದ್ದು ಅರಣ್ಯಗಳಿಗೆ ಹೋಗುತ್ತಿಲ್ಲ ಎಂಬ ಮುನಿಸು ಸರಕಾರದ್ದು. ಈ ಆಕ್ರೋಶದಲ್ಲೇ ಅರಣ್ಯ ಭೂದಾಖಲೆಗಳ ಅಧಿಕಾರಿಗಳನ್ನು ಕಚೇರಿ ಸಹಿತ ಎತ್ತಂಗಡಿ ಮಾಡಿದೆ. ಆದರೆ ಮೊನ್ನೆಮೊನ್ನೆಯಷ್ಟೇ ಚಳಿಗಾಲದ ಅಧಿವೇಶನ ನಡೆದು ಮತ್ತೆ ಖಾಲಿ ಮನೆಯಾದ ಬೆಳಗಾವಿಯ ಸುವರ್ಣವಿಧಾನಸೌಧಕ್ಕೆ ಮಾತ್ರ ಯಾವ ಹುದ್ದೆಯೂ ಇಲ್ಲ, ಯಾವ ಕಚೇರಿಯೂ ಇಲ್ಲ!
ಇತ್ತೀಚಿನ ದಿನಗಳಲ್ಲಿ ಆನೆಗಳು, ಚಿರತೆಗಳು ಸೇರಿದಂತೆ ವನ್ಯಜೀವಿಗಳು ಅರಣ್ಯ ಬಿಟ್ಟು ಜನವಸತಿ ಪ್ರದೇಶಗಳಿಗೆ ನುಗ್ಗಿ ಅವಾಂತರ ಎಬ್ಬಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ವನ್ಯಜೀವಿ ಮಂಡಳಿ ಸಭೆ ಕೂಡ ನಡೆದಿತ್ತು. ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳು ಕಚೇರಿ ಬಿಟ್ಟು ಕಾಡಿಗೆ ಹೋಗಲು ಆದೇಶಿಸಿದ್ದರು.
ಆದರೆ ಸಭೆ ನಂತರದಲ್ಲಿ ಸರಕಾರ ಸಾರಾಸಗಟಾಗಿ ಅಧಿಕಾರಿಗಳನ್ನೇ ಎತ್ತಂಗಡಿ ಮಾಡುವ ನಿರ್ಧಾರಕ್ಕೆ ಬಂತು.
ಯಾರು- ಎಲ್ಲಿ?:
*ಎಪಿಸಿಸಿಎಫ್- ಅರಣ್ಯ ಭೂದಾಖಲೆಗಳು- ಶಿವಮೊಗ್ಗ
*ಎಪಿಸಿಸಿಎಫ್- ಅರಣ್ಯ ಕಾನೂನು ಕೋಶ- ಚಿತ್ರದುರ್ಗ
*ಎಪಿಸಿಸಿಎಫ್- ಆನೆ ಯೋಜನೆ- ಹಾಸನ
*ಎಪಿಸಿಸಿಎಫ್- ಅರಣ್ಯ ಮೌಲ್ಯಮಾಪನ- ಮೈಸೂರು
*ಎಪಿಸಿಸಿಎಫ್- ಕಾಂಪಾ ಕಚೇರಿ- ಬಳ್ಳಾರಿ
*ಎಪಿಸಿಸಿಎಫ್- ರಾಷ್ಟ್ರೀಯ ಅರಣ್ಯ ಕ್ರಿಯಾ ಯೋಜನೆ ಕಾರ್ಯಕ್ರಮ ಹಾಗೂ ಬಿದಿರು ಯೋಜನೆ- ಧಾರವಾಡ
*ಎಪಿಸಿಸಿಎಫ್- ಸಾಮಾಜಿಕ ಅರಣ್ಯ ಯೋಜನೆಗಳು- ಧಾರವಾಡ
*ಪಿಸಿಸಿಎಫ್- ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ- ಮೈಸೂರು
*ಪಿಸಿಸಿಎಫ್- ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ- ಹುಬ್ಬಳ್ಳಿ
ಇವುಗಳಲ್ಲಿ ಎಪಿಸಿಸಿಎಫ್ ಹಾಗೂ ಪಿಸಿಸಿಎಫ್ ಹುದ್ದೆಗಳಿದ್ದು ಇವೆಲ್ಲವೂ ಐಪಿಎಸ್ ದರ್ಜೆಯವಾಗಿವೆ. ಅರಣ್ಯ ಜೀವಿಸ್ಥಿತಿ ಮತ್ತು ಪರಿಸರ ಇಲಾಖೆ ಜಂಟಿ ಕಾರ್ಯದರ್ಶಿ ಆರ್. ಇಂದ್ರೇಶ ಆದೇಶ ಹೊರಿಡಿಸಿದ್ದಾರೆ.
ಅಸಮಾಧಾನ:
ಐಎಎಸ್ ಮತ್ತು ಐಪಿಎಸ್ ನ ಶೇ. 50ರಷ್ಟು ಹುದ್ದೆಗಳು ಬೆಂಗಳೂರಿನಲ್ಲೇ ಇವೆ. ಆದಾಗ್ಯೂ ತಮಗೆ ಮಾತ್ರ ಹೀಗೇಕೆ ಎಂಬ ಅಸಮಾಧಾನಗಳು ಎತ್ತಂಗಡಿಯಾದ ಅಧಿಕಾರಿಗಳ ವಲಯದಿಂದ ಕೇಳಿಬಂದಿವೆ.
ಸುವರ್ಣ ವಿಧಾನಸೌಧಕ್ಕೆ ಏಕಿಲ್ಲ?:
ಸುವರ್ಣ ವಿಧಾನಸೌಧದ ನಿರ್ಮಾಣವಾದಾಗಿನಿಂದಲೂ ಕೇವಲ ಅಧಿವೇಶನದ ಸಂದರ್ಭಕ್ಕಷ್ಟೇ ಉಪಯೋಗಿಸಲಾಗುತ್ತಿದೆಯೇ ಹೊರತು ಉಳಿದ ಅವಧಿಗಳಲ್ಲಿ ಇದು ಭೂತಬಂಗಲೆಯಂತಾಗಿರುತ್ತದೆ. ಈ ಕಾರಣಕ್ಕೇ ಉತ್ತರ ಕರ್ನಾಟಕ ಭಾಗದ ಜನತೆ, ಸಂಘಟನೆಗಳು ಇಲ್ಲಿ ಕಚೇರಿಗಳನ್ನು ಸ್ಥಳಾಂತರಿಸಿ ಎಂದು ಒತ್ತಾಯಿಸುತ್ತ ಬಂದರೂ ಸರಕಾರಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ.
ಇದೀಗ ಬೇರೆಬೇರೆ ಅಧಿಕಾರಿಗಳು, ಕಚೇರಿಗಳನ್ನು ಎತ್ತಂಗಡಿ ಮಾಡುವಾಗಲೂ ಸುವರ್ಣ ವಿಧಾನಸೌಧವನ್ನು ಪರಿಗಣಿಸದಿರುವುದು ಅಚ್ಚರಿದಾಯಕವಾಗಿದೆ.
ತಿರುಪತಿ ತಿಮ್ಮಪ್ಪನ ಹುಂಡಿಗೆ ಹರಿದು ಬಂತು ರಾಶಿ ರಾಶಿ ಹಣ
https://pragati.taskdun.com/more-than-thousend-cr-donation-collected-at-tirupati-timmappa-temple/
ಜನವರಿ 12, 13 ರಂದು ಸಂಗೊಳ್ಳಿ ಉತ್ಸವ ವಿಜೃಂಭಣೆಯಿಂದ ಆಚರಣೆ
https://pragati.taskdun.com/sangolli-utsava-will-be-on-janavary-12-and-13/
ಸ್ಮಾರಕ ಬೇಡ…. ಚಿತಾ ಭಸ್ಮವನ್ನು ನದಿಯಲ್ಲಿ ವಿಸರ್ಜಿಸಿ… ಮಂಗಳವಾರ ಸಂಜೆ ಅಂತ್ಯಕ್ರಿಯೆ
https://pragati.taskdun.com/no-memorial-dissolve-cremation-in-river-funeral-tuesday-evening/