*ಕನ್ನಡವನ್ನು ಸಮರ್ಥ ಜ್ಞಾನದಾಯಿನಿ ಭಾಷೆಯಾಗಿ ಬೆಳೆಸುವ ಜವಾಬ್ದಾರಿ ನಮಗಿಲ್ಲವೇ?; ಕನ್ನಡದಲ್ಲಿಯೂ ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣ ನೀಡಿಯೇ ತೀರುತ್ತೇವೆ ಎಂದು ಪಣ ತೊಡಿ; ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಪ್ರೊ.ದೊಡ್ಡರಂಗೇಗೌಡ*
ಪ್ರಗತಿವಾಹಿನಿ ಸುದ್ದಿ; ಹಾವೇರಿ: ಹಾವೇರಿಯಲ್ಲಿ ಕನ್ನಡ ಜಾತ್ರೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಸಿಕ್ಕಿದ್ದು, ಜ.8ವರೆಗೂ ಅಕ್ಷರ ಜಾತ್ರೆ ನಡೆಯಲಿದೆ. ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ, ಪ್ರೊ.ದೊಡ್ಡರಂಗೇಗೌಡರು, ಗಡಿ ವಿಚಾರ, ಕನ್ನಡ ಭಾಷೆ ಬೆಳವಣಿಗೆ, ಕನ್ನಡ ಶಾಲೆಗಳ ಅಭಿವೃದ್ಧಿ, ಕನ್ನಡದಲ್ಲಿಯೂ ಉನ್ನತ ಶಿಕ್ಷಣ ಮೊದಲಾದ ವಿಚಾರಗಳ ಬಗ್ಗೆ ಸರ್ಕಾರದ ಕಣ್ಣು ತೆರೆದರು.
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣದ ಪ್ರಮುಖಾಂಶಗಳು:
ಕನ್ನಡಿಗರು ಎಲ್ಲಿ ಹೋದರೂ ಹೇಗೇ ಇದ್ದರೂ ಮೂಲತಃ ಮೃದು ಸ್ವಭಾವದವರು, ಒಳ್ಳೆಯವರಿಗೆ ಒಳ್ಳೆಯವರು! ಮಧುರವಾಗಿ ಮಾತಾಡುವವರಿಗೆ ಮಧುರವಾಗಿಯೇ ಉತ್ತರ ಕೊಡುವ ಸಹೃದಯರು. ಕನ್ನಡಿಗರತಂಟೆಗೆ ಬಂದರೆ ಮಾತ್ರ ಕನ್ನಡಿಗರುಸುಮ್ಮನಿರುವುದಿಲ್ಲ. ಬಾಧಿಪ್ಪಕಲಿಗಳಿಗೆ ಕಲಿಯುಗ ವಿಪರೀತವಾಗಬಲ್ಲವರು. ಕನ್ನಡ ಜನತೆಗೆ ಕೆಲವು ವಿಶೇಷ ಗುಣಗಳಿವೆ; ಇತರ ಭಾಷೆಯ ಜನರಲ್ಲಿ ಪ್ರೀತಿ ತೋರುವುದು ಮತ್ತು ಪರಧರ್ಮವನ್ನು, ಪರವಿಚಾರವನ್ನುಸಹಿಸಿಕೊಳ್ಳುವುದು. ಪರಧರ್ಮ ಸಹಿಷ್ಣುತೆ ಕನ್ನಡಿಗರ ರಕ್ತದಲ್ಲೇ ಬೆರೆತಿದೆ. ಸಂತ ಶಿಶುನಾಳ ಶರೀಫರ ಸಾಹಿತ್ಯವನ್ನು ನಾವು ಬೇರೆಯೆಂದು ನೋಡಿಯೇ ಇಲ್ಲ. ಇದು ಕನ್ನಡಿಗರ ವೈಶಾಲ್ಯ ಗುಣ.
ನಾವು ಈಗ ಕನ್ನಡ – ಮಹಾರಾಷ್ಟ್ರಗಳ ಗಡಿ ಸಮಸ್ಯೆಯ ಬೆಳಗಾವಿ ಎಲ್ಲಿಗೆ ಸೇರಬೇಕು ಎಂಬ ವಿಷಯಗಳು ಬಂದಾಗ ಕರ್ನಾಟಕದ ಜನ ಒಟ್ಟಾಗಿ ಉತ್ತರ ಕೊಟ್ಟಿದ್ದಾರೆ. ಕನ್ನಡದ ಒಂದು ಅಂಗುಲ ನೆಲವನ್ನೂ ಬೇರೆಯವರಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಖ್ಯಾತೆ ತೆಗೆದು ಬಂದವರ ಖಾತೆಗಳೇಇಲ್ಲವಾಗಿಸಬಲ್ಲರುಕನ್ನಡಿಗರು. ನಾಡಿಗೆಅವಮಾನವಾದರೆ ನಮಗೆ ಅವಮಾನ. ನುಡಿಗೆಅವಮಾನವಾದರೆಕೆರಳುತ್ತದೆ. ನಮ್ಮಭಿಮಾನ ನಾಡು ನುಡಿಗೆಅನ್ಯಾಯವಾಗಲು ನಾವು ಕನ್ನಡಿಗರು ಬಿಡುವುದಿಲ್ಲ. ನಮ್ಮಲ್ಲಿ ಅದಟು ಇದೆ; ಪರಾಕ್ರಮವೂ ಇದೆ. ಎದುರಿಸುವ ಕೆಚ್ಚೂನೆಚ್ಚೂ ಆತ್ಮವಿಶ್ವಾಸ ಇದ್ದೇ ಇದೆ. ಬೆಳಗಾವಿಯನ್ನು ನಾವು ಕನ್ನಡಿಗರು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಇದು ನಮ್ಮ ಇಚ್ಛೆ ಇದು ನಮ್ಮ ಹೃದಯಂತರಾಳದ ವಾಂಛೆ! ನಮ್ಮದಲ್ಲದನೆಲವನ್ನು ನಾವು ಅಪೇಕ್ಷಿಸುವುದಿಲ್ಲ. ನಮ್ಮ ರಾಜ್ಯದ ಸ್ವತ್ತನ್ನು ನಮ್ಮ ಸರ್ಕಾರ ಕೂಡ ಬಿಟ್ಟು ಕೊಡುವುದಿಲ್ಲ. ಇದು ಸತ್ಯದ ಮಾತು! ಇದು ಪ್ರತಿ ನಿತ್ಯದ ಮಾತು!
ಇನ್ನು ಗಡಿನಾಡಿಗೆ ಸಂಬಂಧಿಸಿದಂತೆ ಮತ್ತೊಂದು ವಿಷಯ ನಾನು ಹೇಳಲೇಬೇಕಾಗಿದೆ. ಮಹಾಜನ್ವರದಿಯೇ ಅಂತಿಮ ಎಂದು ನಮ್ಮ ನಲ್ಮೆಯ ಕರ್ನಾಟಕ ಸರ್ಕಾರ ಹೇಳಿದೆ.
ಕಾಸರಗೋಡಿನಲ್ಲಿ ಕನ್ನಡ ಕಲೆ, ಸಂಸ್ಕೃತಿ, ಭಾಷೆಯ ಉಳಿವಿಗೆ ತೀವ್ರವಾದ ಗಮನವನ್ನು ಕೊಡಬೇಕಾಗಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಥೆಗಳನ್ನು ಉಳಿಸುವಕೆಲಸವಾಗಬೇಕು. ಅಲ್ಲೀಗಮಲೆಯಾಳೀಕರಣ ಭರದಿಂದ ನಡೆದಿದೆ. ಕನ್ನಡ ವಿದ್ಯಾರ್ಥಿಗಳು ಕನ್ನಡ ಬಾರದ ಅಧ್ಯಾಪಕರಿಂದ ಪಾಠ ಕೇಳಬೇಕಾದವಿಪರ್ಯಾಸದ ಪರಿಸ್ಥಿತಿ ಅಲ್ಲಿದೆ. ಇತ್ತ ಕಡೆ ನಮ್ಮ ಪ್ರೀತಿಯ ಸರ್ಕಾರ ಆದ್ಯ ಗಮನ ನೀಡಬೇಕಿದೆ.
ಮಹಾಜನ ವರದಿ ರೂಪಿತವಾದ ಕಾಲಕ್ಕೆ ಮದರಾಸುಆಡಳಿತದಲ್ಲಿದ್ದ ದಕ್ಷಿಣ ಕನ್ನಡ ಪ್ರದೇಶವನ್ನುಮೈಸೂರಿನೊಂದಿಗೆ ಸೇರಿಸುವ ವೇಳೆ, ಕಾಸರಗೋಡುಪ್ರದೇಶವನ್ನುಕೈಬಿಡಲಾಯಿತು. ಆ ಕಾರಣ ಉದ್ಭವವಾದ ಸಮಸ್ಯೆ ಇದು. ಭಾಷಾ ಅಲ್ಪಸಂಖ್ಯಾತ ಗುಂಪಿನ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಒದಗಿಸಲು ಸಾಕಷ್ಟು ವ್ಯವಸ್ಥೆಯನ್ನು ಮಾಡಿಕೊಡಬೇಕಾದ ಹೊಣೆ ಪ್ರತಿ ರಾಜ್ಯ ಹಾಗೂ ಸ್ಥಳೀಯ ಆಡಳಿತಗಳದ್ದು. ರಾಷ್ಟçಪತಿಗಳು ಇಂತಹ ಸವಲತ್ತುಗಳನ್ನುಒದಗಿಸಲು ಯಾವುದೇ ರಾಜ್ಯಕ್ಕೆ ನಿರ್ದೇಶನ ನೀಡಬಹುದು. ಎಲ್ಲಾ ರಾಜ್ಯಗಳಲ್ಲೂ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ರಾಷ್ಟ್ರಪತಿಗಳು ನೇಮಿಸಿದ ವಿಶೇಷ ಅಧಿಕಾರಿಯೊಬ್ಬರು ಇರುತ್ತಾರೆ. ಅವರು ರಾಷ್ಟçಪತಿಗಳಿಗೆ ವರದಿ ಸಲ್ಲಿಸುತ್ತಿರುತ್ತಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ವಿಷಯವನ್ನು ಪರಾಮರ್ಶಿಸಿ ಹೇಳುವುದಾದರೆ- ಕೇರಳದಲ್ಲಿನ ಶಾಲೆಗಳಲ್ಲಿ ಕನ್ನಡ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಅನ್ಯಾಯವಾಗುತ್ತಿದೆ. ಕಾಸರಗೋಡಿನ ಕನ್ನಡಿಗರು“ ಎಂದಿದ್ದರೂ ಕಾಸರಗೋಡು ಕರ್ನಾಟಕಕ್ಕೆ ಸೇರಿಯೇ ಸೇರುತ್ತೆ” ಎಂಬ ಆಶಾವಾದದಲ್ಲಿದ್ದಾರೆ.
ಈ ಬಗ್ಗೆ ನಮ್ಮ ರಾಜ್ಯ ಸರ್ಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕೆಂದು ನನ್ನ ಆಗ್ರಹ. ಅಲ್ಲಿ ಮಲೆಯಾಳೀಕರಣದ ದಾಳಿ ನಡೆದಿದೆ. ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಅವರು ಆ ಕಡೆ ಆದ್ಯ ಗಮನ ಕೊಡುವುದು ಒಳಿತು.
ರಾಜ್ಯದ ಹೊರಭಾಗದ ಗಡಿಯಲ್ಲಿ ಅವಶ್ಯವಿರುವಷ್ಟು ಕನ್ನಡ ಶಾಲೆಗಳನ್ನು ತೆರೆಯಲು ಸಹಾಯ ಒದಗಿಸುವುದು, ನೆರೆ ರಾಜ್ಯದವರು ಕನ್ನಡ ಶಾಲೆಗಳನ್ನು ಮುಚ್ಚಿರುವಂಥಾ ಗ್ರಾಮಗಳಲ್ಲಿ ಕನ್ನಡಿಗರಿಗೆ ಕನ್ನಡ ಮಾಧ್ಯಮದ ಮೂಲಕ ಶಿಕ್ಷಣ ನೀಡಲು ಕನ್ನಡ ಮಾಧ್ಯಮದ ಶಾಲೆಗಳನ್ನು ತೆರೆಯುವುದು ಅತ್ಯಗತ್ಯ. ಇಲ್ಲಿ ನಮ್ಮ ಒಳನಾಡಿನಲ್ಲಿ ಹಿಂದಿನ ಸರ್ಕಾರ ಆತುರದ ನಿರ್ಧಾರ ತೆಗೆದುಕೊಂಡು ಕೆಲವು ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದೆ. ಅಂಥ ಮುಚ್ಚಿದ ಶಾಲೆಗಳನ್ನು ನಮ್ಮ ಘನ ಸರ್ಕಾರ ಮತ್ತೆ ತೆರೆದು ಅವುಗಳಿಗೆ ಶೈಕ್ಷಣಿಕವಾಗಿ ಪುನರುಜ್ಜೀವನ ನೀಡುವುದು ಆಡಳಿತದ ಜವಾಬ್ದಾರಿಯುತ ನಡೆಯಾಗುತ್ತದೆ.
ಸಾವಿರದ ಸಮಸ್ಯೆಗಳು ಕನ್ನಡಿಗರನ್ನು ಕಿತ್ತು ತಿನ್ನುತ್ತಿವೆ. ಅದರಲ್ಲಿ ಬೇರೆ ರಾಜ್ಯಗಳಿಂದ ಬಂದ ವಲಸಿಗರ ಸಮಸ್ಯೆ ಉಲ್ಬಣವಾಗುತ್ತಿದೆ. ಕನ್ನಡೇತರರು ಇಲ್ಲಿಗೆ ಕೆಲಸ ಅರಸಿ ಬಂದು ಇಲ್ಲಿ ನೆಲೆ ನಿಂತರೆ ಹಾಗೆ ನೆಲೆಗೊಂಡವರುಕನ್ನಡವನ್ನು ಪ್ರೀತಿಯಿಂದ ಕಲಿಯಬೇಕು, ಇಲ್ಲವಾದರೆ ಕನ್ನಡ ಕಾರ್ಯಕರ್ತರು ಕನ್ನಡವನ್ನುಕಲಿಸುತ್ತಾರೆ. ಅವರಿಗೆ ಇಲ್ಲಿಯ ನೆಲ ಬೇಕು; ಇಲ್ಲಿಯ ಜಲ ಬೇಕು. ಇಲ್ಲಿಯ ಸಕಲ ಸಂಪನ್ಮೂಲ ಬೇಕು, ಅದರೆಅಂಥವರಿಗೆ ಕನ್ನಡ ಬೇಕಾಗಿಲ್ಲ! ಹೀಗೆ ಹೇಳಿದರೆ ಹೇಗೆ? ಕನ್ನಡಿಗರ ಜೊತೆ ಸ್ನೇಹ ಪ್ರೀತಿ ವಿಶ್ವಾಸಗಳಿಂದಕನ್ನಡೇತರರು ಒಂದಾಗಿ ಸೌಹಾರ್ದದಿಂದ ಬಾಳಿ ಬದುಕಬೇಕು. ಐ.ಎ.ಎಸ್. ಮುಂತಾದ ಹಿರಿಯ ಅಧಿಕಾರಿಗಳು ಕನ್ನಡ ಕಲಿಯಬೇಕು. ಸರ್ಕಾರ ಅಂಥವರಿಗೆ ಮೂರು ತಿಂಗಳ ಅಥವಾ ಆರು ತಿಂಗಳ “ಕನ್ನಡ ಕಲಿ-ನಲಿ” ಎಂಬ ಪ್ರಶಿಕ್ಷಣ ಕೊಡಬೇಕು.
ಅನೇಕರು ಇನ್ನೂ ಆಂಗ್ಲ ಭಾಷೆಯಲ್ಲೇ ಟಿಪ್ಪಣಿ ಬರೆಯುತ್ತಾರೆ. ಅವರಿಗೆ ಕನ್ನಡಿಗರ ಎಚ್ಚರಿಕೆಯ ಮಾತು ಇಷ್ಟೇ; ನಿಯತ್ತಿನಿಂದ ಕನ್ನಡ ಕಲಿತು ಆಡಳಿತ ನಡೆಸಿ. ಕನ್ನಡ ನಾಡಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೇ ಆದ್ಯತೆ! ಇಲ್ಲಿ ಕನ್ನಡಕ್ಕೆ ಮೊದಲ ಮಣೆ ಸಂದಾಯ ಆಗಬೇಕು. ಇನ್ನೆಲ್ಲವೂ ಗೌಣ. ಕನ್ನಡ ಕಲಿಯುವುದೆಂದರೆ ಕರ್ನಾಟಕದ ದೇಸಿ ಭಾಷೆಯ ಆಳ ಅಗಲಗಳ ಅರಿಯುವುದು. ಕನ್ನಡ ಸಂಸ್ಕೃತಿ ತಿಳಿಯುವುದು.
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡಕ್ಕೆ ನಾವೆಲ್ಲರೂ ಆದ್ಯತೆಯನ್ನು ಕೊಡಬೇಕು. ಇಲ್ಲಿಯ ಪ್ರಾದೇಶಿಕ ಭಾಷೆ ಕನ್ನಡ ಅದು ಮೊದಲು! ಆ ಮೇಲೆ – ಉಳಿದುದೆಲ್ಲಾ! ಮಗು ಚೆನ್ನಾಗಿ ವಿಷಯ ಗ್ರಹಿಸಬೇಕಾದರೆ ಕನ್ನಡ ಅತಿ ಮುಖ್ಯ. ಗ್ರಹಿಸಿದ ವಿಷಯವನ್ನು ಬರೆಯಬೇಕಾದರೂ ಅಷ್ಟೇ.
ಐದನೇತರಗತಿವರೆಗೆ ಕನ್ನಡ ಕಲಿಕೆಯನ್ನು ಸರ್ಕಾರ ಕಡ್ಡಾಯ ಗೊಳಿಸಬೇಕು, ಆ ಮೇಲೆ ಆ ಮಗುವಿನ ಬೌದ್ಧಿಕ ಸಾಮರ್ಥ್ಯದ ಮೇಲೆ ಎಷ್ಟು ಭಾಷೆಗಳನ್ನಾದರೂಕಲಿಯಲಿ. ನಮ್ಮ ವಿರೋಧವಿಲ್ಲ. ಇದು ಸೈದ್ಧಾಂತಿಕ ತರ್ಕ. ಆಗಲೇ ಬೇಕಾದ ಕಾರ್ಯ. ಈ ಬಗ್ಗೆ ಗಮನಕೊಡಲಿ ನಮ್ಮ ನಲ್ಮೆಯ ಸರ್ಕಾರ.
ಭಾಷೆ ಎನ್ನುವುದು ಇಂದು ಭಾವಕೋಶದ, ನೆಲ ಜಲದ, ಸಾಮುದಾಯಿಕ ಸಂಸ್ಕೃತಿಯದನಿಯಾಗಿ ಮಾತ್ರವೇ ಉಳಿದಿಲ್ಲ. ಜಾಗತೀಕರಣದ ಫಲವಾಗಿ ರೂಪುಗೊಂಡಿರುವ ಇಂದಿನ ಅರ್ಥವ್ಯವಸ್ಥೆ ಮತ್ತು ತಂತ್ರಜ್ಞಾನಗಳುದೇಶಭಾಷೆಗಳಗಡಿಗಳನ್ನು ಮೀರಿ ಎಲ್ಲರನ್ನೂ, ಎಲ್ಲವನ್ನೂ ಆವರಿಸಿಕೊಂಡಿವೆ. ಹಾಗಾಗಿ, ಸಹಜವಾಗಿಯೇ ಭಾಷೆ ಎನ್ನುವುದು ವ್ಯಾವಹಾರಿಕ ಸಾಧನವಾಗಿ, ದುಡಿಮೆಯ ಮಾರ್ಗವಾಗಿ ತನ್ನ ಸ್ವರೂಪವನ್ನು ಹಿಗ್ಗಿಸಿಕೊಂಡಿದೆ. ಸಾಮುದಾಯಿಕ ಬದುಕಿನಿಂದ ದೂರವಾಗಿ ವ್ಯಕ್ತಿ ಕೇಂದ್ರಿತ ಬದುಕು ಮುನ್ನೆಲೆಗೆ ಬಂದಿರುವ ಇಂದಿನ ವಾಸ್ತವದ ಜಗತ್ತಿನಲ್ಲಿ ‘ಅನ್ನ ನೀಡುವ’ ಭಾಷೆಯ ಬಗ್ಗೆ ಜನಸಮುದಾಯದಲ್ಲಿ ವಿಶೇಷ ಸೆಳೆತ ಕಂಡು ಬರುತ್ತಿರುವುದಕ್ಕೆ ನಾವು ಕುರುಡಾಗಬಾರದು.
ನಗರಗಳು, ಗ್ರಾಮಗಳು ಎನ್ನುವ ಭೇದವಿಲ್ಲದೆ ನಮ್ಮನ್ನು ಆವರಿಸಿರುವ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಹಿಂದಿನ ಹಂಬಲವೂ ಇದೇ ಅಗಿರುವುದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಕನ್ನಡ ಅಥವಾ ಭಾರತೀಯ ಭಾಷೆಗಳು ಮಾತ್ರವೇ ಅಲ್ಲ, ಜಾಗತಿಕವಾಗಿ ಎಲ್ಲ ಅಭಿವೃದ್ಧಿಶೀಲದೇಶಗಳಲ್ಲಿಯೂ‘ಅನ್ನದ ಭಾಷೆ’ಯಾಗಿ ಅನ್ಯ ಭಾಷೆಯೊಂದಕ್ಕೆ ಮುಖ ಮಾಡಿರುವ ವಾಸ್ತವ ನಮ್ಮ ಮುಂದೆ ಕಂಡುಬರುತ್ತದೆ. ಇಪ್ಪತ್ತೊಂದನೆಯ ಶತಮಾನದ, ಎರಡನೆಯ ದಶಕದಲ್ಲಿ ನಿಂತು ಕನ್ನಡದ ನನ್ನ ಬಂಧುಬಾಂಧವರನ್ನುಉದ್ದೇಶಿಸುವಾಗ ನನಗೆ ಇಂದಿನ ಕಟುವಾಸ್ತವಗಳಿಗೆ ಬೆನ್ನು ಹಾಕುವ ಮನಸ್ಸಿಲ್ಲ. ಏಳೂವರೆದಶಕವನ್ನು ಮೀರಿದ ನನ್ನ ಬದುಕಿನ ಅನುಭವಕ್ಕೆ ಇಪ್ಪತ್ತು-ಮೂವತ್ತರ ವಯೋಮಾನದ ಇಂದಿನ ಯುವಕ-ಯುವತಿಯರತಲ್ಲಣಗಳಅರಿವಿಲ್ಲದೇಹೋದೀತೇ? ನನ್ನ ಮಕ್ಕಳು, ಮೊಮ್ಮಕ್ಕಳು, ಅವರನ್ನೂ ಮೀರಿದ ಸಾವಿರಾರು ಸಂಖ್ಯೆಯ ಹಿರಿ, ಕಿರಿಯ ವಿದ್ಯಾರ್ಥಿಗಳ ತಲ್ಲಣಗಳಿಗೆ ಮುಖಾಮುಖಿ ಯಾಗುತ್ತಲೇ ಬಂದವನು ನಾನು.
ಹಾಗಾಗಿಯೇ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿರುವ, ಜಗತ್ತಿನ ಶ್ರೇಷ್ಠ ಸಂಸ್ಕೃತಿ, ಚಿಂತನೆಯನ್ನು ಪೊರೆದಿರುವ ಈ ನನ್ನ ಭಾಷೆ ಕನ್ನಡ ಮುಂದಿನ ದಿನಗಳಲ್ಲಿಯೂ ತನ್ನ ಪಾರಮ್ಯವನ್ನು ಮೆರೆಯಬೇಕೆಂದರೆ ಅದು ಮನೆ, ಮನದಭಾಷೆಯಾಗಿಉಳಿಯಬೇಕು. ಜೊತೆಗೆ ಕನ್ನಡಿಗರ ಭವ್ಯ ಭವಿತವ್ಯದಭಾಷೆಯೂ ಆಗಬೇಕು. ಕನ್ನಡಿಗರಿಗೆ ಅನ್ನವಿಕ್ಕುವ ಭಾಷೆಯಾಗಿ, ಕರುನಾಡಿನಭವಿತವ್ಯವನ್ನುಮುನ್ನಡೆಸುವಕಹಳೆಯಾಗಿಕಂಗೊಳಿಸಬೇಕು. ಹೃದಯಕ್ಕೆ ಒಂದು ಭಾಷೆ, ಬದುಕಲಿಕ್ಕೆ, ದುಡಿಮೆಗೆ ಇನ್ನೊಂದು ಭಾಷೆ ಎನ್ನುವ ಇಂದಿನ ಇಬ್ಬಂದಿತನದ ಪರಿಸ್ಥಿತಿಯನ್ನು ತೊಡೆದು ನಲಿಯಲು, ಕಲಿಯಲು, ದುಡಿಯಲು, ಬದುಕಲು, ಬಾಳಲು, ನಮ್ಮದೆಲ್ಲವನ್ನೂಜಗತ್ತಿನೊಂದಿಗೆ ಹಂಚಿಕೊಳ್ಳಲು, ಜಗತ್ತಿನ ಎಲ್ಲದನ್ನೂನಮ್ಮೊಳಗೆತಂದುಕೊಳ್ಳಲು ಇರುವ ಸಶಕ್ತ, ಸಮರ್ಥ ಭಾಷೆಯಾಗಿ ಕನ್ನಡ ರಾರಾಜಿಸಬೇಕು. ನನ್ನ ಕನ್ನಡ ನಾಲ್ಕು ಗೋಡೆಗಳ ನಡುವೆ ಉಳಿಯುವ ಭಾಷೆ ಎಂದೂ ಆಗಿರಲಿಲ್ಲ. ಹಾಗೆ ಅದು ಇಂದೂ, ಮುಂದೂ, ಎಂದೂ ಆಗಬಾರದು ಕೂಡ. ನನ್ನ ಕನ್ನಡ ಜಗತ್ತಿನ ಅಷ್ಟೂ ತಿಳಿವನ್ನು ನನಗೆ ಉಣಬಡಿಸುವ ಜ್ಞಾನದ, ಕೌಶಲದಭಾಷೆಯಾಗಿ ಈ ಹಿಂದೆಯೂವಿಜೃಂಭಿಸಿತ್ತು, ಇಂದೂ, ಮುಂದೂ ಅದು ಹಾಗೆಯೇ ವಿಜೃಂಭಿಸಬೇಕು. ಕನ್ನಡವೆನ್ನುವುದು ಸಭ್ಯತೆಯ, ಸಜ್ಜನಿಕೆಯ ಗುರುತು ಮಾತ್ರವೇ ಅಲ್ಲ, ಅದು ಮಹತ್ವಾಕಾಂಕ್ಷೆಯ, ಮಹಾನ್ ಅನ್ವೇಷಣೆಯ ಭಾಷೆಯೂ ಕೂಡ ಎನ್ನುವುದನ್ನು ನನ್ನ ಜನ ಮರೆಯಬಾರದು.
ಜ್ಞಾನಕೋಶದಭಾಷೆಯಾಗಿ ಕನ್ನಡಕನ್ನಡವೆನ್ನುವುದುಕಪ್ಪೆಚಿಪ್ಪಿನಲ್ಲಿ ಅಡಗಿ ಕೂರಬೇಕಾದಭಾಷೆಯಲ್ಲ. ನನ್ನ ಗೆಳೆಯರೇ, ನನ್ನ ಯುವ ಗೆಳೆಯರೇ… ಅದು ಮಹತ್ವಾಕಾಂಕ್ಷೆಯನೂಲಿನಲ್ಲಿ ತನ್ನ ಸುತ್ತ ಗೂಡುಕಟ್ಟಿಕೊಂಡು ಬಣ್ಣ ಬಣ್ಣದ ರೆಕ್ಕೆಗಳನ್ನುಬಲಿಸಿಕೊಂಡುಜಗತ್ತನ್ನುನಿಬ್ಬೆರಗಾಗಿಸುವಸಾಮರ್ಥ್ಯವಿರುವ ಮಹಾನ್ ಭಾಷೆ, ಮೇರು ಭಾಷೆ ಕನ್ನಡ. ಹಾಗಾಗಿಯೇ, ಇದು ಸತ್ತಂತಿಹರನ್ನೂಬಡಿದೆಚ್ಚರಿಸುವ ಭಾಷೆ ಎನ್ನುವ ಕವಿವಾಣಿಯನ್ನು ಮರೆಯದಿರೋಣ.
ಈ ಕರ್ನಾಟದೇಶದೊಳ್ ಆಳುವ ಸರ್ಕಾರಗಳು ಯಾವುದೇ ಇರಲಿ, ಎಡ-ಬಲ-ಮಧ್ಯಮ ಮಾರ್ಗಗಳೇನೇ ಇರಲಿ, ಕನ್ನಡವೆಂಬುದುಕನ್ನಡಿಗರಅನ್ನದಹಕ್ಕಿನ ಭಾಷೆ ಎನ್ನುವುದನ್ನು ನಾವು ಮರೆಯಬಾರದು. ಆಳುವ ಸರ್ಕಾರಗಳು ಯಾವುದೇ ಇರಲಿ, ಯಾವುದೇ ಬರಲಿ ಅವುಗಳ ಮುಂದೆ ನನ್ನ ಬಿನ್ನಹವೊಂದೇ. “ಕನ್ನಡವನ್ನು ಬರಿದೇ ಭಾವಕೋಶದ ಭಾಷೆಯಾಗಿ ಮಾತ್ರವೇ ಕಾಣಬೇಡಿ, ಅದು ಜ್ಞಾನಕೋಶದ ಭಾಷೆ, ಕೌಶಲದ ಭಾಷೆ, ಕನ್ನಡಿಗರಮಹತ್ವಾಕಾಂಕ್ಷೆಯ ಭಾಷೆ, ಕ್ರಿಯಾಶೀಲತೆ, ಉದ್ಯೋಗಶೀಲತೆಯ ಭಾಷೆ ಎನ್ನುವುದನ್ನು ಮರೆಯದಿರಿ. ನನ್ನ ಜನರಿಗೆ ಅವರಾಡುವ ಭಾಷೆಯಲ್ಲಿಯೇ ಜಗತ್ತಿನ ಜ್ಞಾನವನ್ನು ಕೊಡಲು ಪಣ ತೊಡಿ.”
ಇಲ್ಲಿ ಒಂದು ವಿಚಾರವನ್ನು ಸರಳವಾಗಿ, ನೇರವಾಗಿ ಹೇಳುತ್ತೇನೆ ಕೇಳಿ: ನಮ್ಮ ಜನತೆ, ಬಹುಮುಖ್ಯವಾಗಿ ನಮ್ಮ ಯುವಪೀಳಿಗೆ ತಮ್ಮ ಜೀವನದಲ್ಲಿ ಒಂದಕ್ಷರವನ್ನೂಕೇಳಿರದ ಒಂದು ಭಾಷೆಯಲ್ಲಿ ಅದು ಜರ್ಮನ್, ಜಪಾನೀಸ್, ಸ್ಪಾನಿಷ್, ರಷಿಯನ್, ಮ್ಯಾಂಡರೀನ್ ಮುಂತಾದ ಯಾವುದೇ ಆಗಿರಲಿ, ಆ ಭಾಷೆಗಳನ್ನಾಡುವ ದೇಶಗಳಿಗೆ ಶಿಕ್ಷಣಕ್ಕೆಂದು ತೆರಳಿದಾಗ ಅಲ್ಪ ಅವಧಿಯಲ್ಲಿಯೇ ಆ ಭಾಷೆಗಳನ್ನುಅರೆಬರೆಯಾಗಿ ಕಲಿತು, ಆ ಭಾಷೆಗಳ ಶಿಕ್ಷಣ ಮಾಧ್ಯಮದಲ್ಲಿಯೇ ವೈದ್ಯಕೀಯ ಶಿಕ್ಷಣವನ್ನೂ, ಇಂಜಿನಿಯರಿಂಗ್ಶಿಕ್ಷಣವನ್ನೋ ಅಥವಾ ಮತ್ತಾವುದೋ ಉನ್ನತ ಶಿಕ್ಷಣ, ಪದವಿಗಳನ್ನೋನಿರಾಯಾಸವಾಗಿ ಪಡೆಯುತ್ತಾರೆ. ಹೀಗೆ ಆ ಭಾಷೆಗಳನ್ನೇ ತಿಳಿಯದ ಇಲ್ಲಿಂದ ಹೋದವರುವರ್ಷಗಟ್ಟಲೆ ವಿವಿಧ ವಿಷಯಗಳಲ್ಲಿ ಸಂಶೋಧನೆಗಳನ್ನು ನಡೆಸಿ ಆ ಭಾಷೆಗಳಲ್ಲಿ ಪ್ರಬಂಧಗಳನ್ನುಮಂಡಿಸಿದವರಿದ್ದಾರೆ. ಹೀಗಿರುವಾಗ ಹುಟ್ಟಾರಭ್ಯ ತಾವು ಆಡಿರುವ, ನಲಿದಾಡಿರುವ ತಮ್ಮದೇ ಭಾಷೆಯಲ್ಲಿ ವೈದ್ಯಕೀಯ, ತಂತ್ರಜ್ಞಾನ ಮುಂತಾದ ವೃತ್ತಿಪರ ಶಿಕ್ಷಣಗಳನ್ನಾಗಲಿ, ವಿವಿಧ ಉನ್ನತ ಶಿಕ್ಷಣಗಳನ್ನಾಗಲಿ ತಮ್ಮದೇ ಭಾಷೆಯಲ್ಲಿ ಪಡೆಯುವ ಸಾಧ್ಯತೆ ಇದ್ದರೆ ಅವರು ಅದನ್ನು ನಿರಾಕರಿಸುವರೇ?
ಈ ಹಿನ್ನೆಲೆಯಲ್ಲಿ ನಮ್ಮ ಮುಂದಿರುವ ಬೃಹತ್ ಪ್ರಶ್ನೆ ಎಂದರೆ ಕನ್ನಡದಲ್ಲಿಯೇ ಉನ್ನತ ಶಿಕ್ಷಣವನ್ನು ನೀಡಲು, ಪಡೆಯಲು ನಮಗೇಕೆ ಸಾಧ್ಯವಾಗಿಲ್ಲ ಎನ್ನುವುದು? ಒಂದೊಮ್ಮೆ ಅದು ಸಾಧ್ಯವಿಲ್ಲ ಎನ್ನುವ ಭಾವನೆಯನ್ನು ಹೇಡಿಗಳಾರಾದರೂತುಂಬಿದ್ದರೆ ಅವರನ್ನು ಕನ್ನಡಿಗರು ಎಂದಾದರೂ ಕರೆಯಲಾದೀತೇ?
ಮಾನ್ಯ ಮುಖ್ಯಮಂತ್ರಿಗಳೇ, ಇಂದಿನ ಈ ಶುಭ ಸಂದರ್ಭದಲ್ಲಿ ಸಮಸ್ತ ಕನ್ನಡಿಗರ ಪರವಾಗಿ ಒಂದು ಗಟ್ಟಿ ನಿರ್ಧಾರ ಮಾಡಿ ನಾನು ಓರ್ವ ಸಾಹಿತಿಯಾಗಿ ಆಗಲಿ, ಓರ್ವ ಕನ್ನಡ ಭಾಷಾಪ್ರಾಚಾರ್ಯನಾಗಿ ಆಗಲಿ, ಕನ್ನಡದ ಮೇಲಿನ ಅಭಿಮಾನಕ್ಕಾಗಿಯಾಗಲಿ ನಿಮ್ಮ ಮುಂದೆ ಈ ಮಾತು ಹೇಳುತ್ತಿಲ್ಲ. ಬದಲಿಗೆ, ಶಿಕ್ಷಣ ವ್ಯವಸ್ಥೆಯನ್ನು ಬಹುಕಾಲ ಕಂಡಿರುವ, ಅದರ ಒಳಹೊರಗನ್ನುಅರಿತವನಾಗಿ ಹೇಳುತ್ತಿದ್ದೇನೆ. ಕನ್ನಡದಲ್ಲಿಯೂ ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣ ನೀಡಿಯೇತೀರುತ್ತೇವೆ ಎನ್ನುವ ಪಣ ತೊಡಿ ಎಂದು ಕರೆ ನೀಡಿದರು.
ನಮ್ಮ ಯುವಪೀಳಿಗೆ ತಮ್ಮ ಕಿವಿಗಳಿಗೆ ಎಂದೂ ಬಿದ್ದೇ ಇರದ, ಯಾವುದೋ ದೂರ ದೇಶದ ಕಂಡು ಕೇಳರಿಯದ ಭಾಷೆಯಲ್ಲಿ ಆ ದೇಶಗಳಿಗೆ ತೆರಳಿ ವೈದ್ಯಕೀಯ, ವೃತ್ತಿಪರ, ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ ಎನ್ನುವುದಾದರೆ ನಮ್ಮದೇ ಭಾಷೆಯಲ್ಲಿ ನಗರ-ಹಳ್ಳಿ ಎಂಬ ಹಂಬಲವಿಲ್ಲದ ಈ ನಮ್ಮ ಕರುನಾಡ ಮಕ್ಕಳು ವೈದ್ಯಕೀಯ, ವೃತ್ತಿಪರ, ಉನ್ನತ ಶಿಕ್ಷಣಗಳನ್ನುಪಡೆಯಲಾಗುವುದಿಲ್ಲವೇ? ಏಕೆ ನಮಗೆ ನಮ್ಮ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನುಕೊಡಲಾಗುತ್ತಿಲ್ಲ? ನಮ್ಮ ವಿಶ್ವವಿದ್ಯಾಲಯಗಳನ್ನು ನಾನು ಈ ವೇದಿಕೆಯಲ್ಲಿ ನಿಂತು, ಸಮಸ್ತ ಕನ್ನಡಿಗರ ಪರವಾಗಿ ಕೇಳುತ್ತಿದ್ದೇನೆ, ನಾವು ಕೇವಲ ಎಡ, ಬಲದ ವಾದ-ವಿವಾದಗಳಿಗೆ ಮಾತ್ರವೇ ನಮ್ಮ ಬೌದ್ಧಿಕತೆಯನ್ನು ಸೀಮಿತಗೊಳಿಸಿಕೊಳ್ಳಬೇಕೆ? ಕನ್ನಡವನ್ನು ಸಮರ್ಥ ಜ್ಞಾನದಾಯಿನಿ ಭಾಷೆಯಾಗಿ ಬೆಳೆಸುವ ಜವಾಬ್ದಾರಿ ನಮಗಿಲ್ಲವೇ? ಎಂದು ಪ್ರಶ್ನಿಸಿದರು.
ನಾನು ಇಲ್ಲಿ ಯಾವುದೇ ಒಂದು ಪಕ್ಷ, ಸಿದ್ಧಾಂತದ ಪರವಾಗಿ ಮಾತನಾಡಲು ಬಂದು ನಿಂತಿಲ್ಲ. ಸಮಷ್ಟಿ ಪ್ರಜ್ಞೆಯನ್ನುಉಸಿರಾಗಿ ಕೊಟ್ಟ ಕನ್ನಡವೇ ನನ್ನ ಸಿದ್ಧಾಂತ, ನಮ್ಮ ನಡುವಿನ ಎಲ್ಲ ವಿಚಾರಭೇದಗಳನ್ನುಬದಿಗಿರಿಸೋಣ, ನಾನು ಕೇಳುವ ಪ್ರಶ್ನೆ ಒಂದೇ, ಕನ್ನಡಿಗರಾದ ನಮಗೆ ನಮ್ಮ ಮುಂದಿನ ಪೀಳಿಗೆಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನವನ್ನು ಕನ್ನಡದಲ್ಲಿ ಕಲಿಸಲು ಸಾಧ್ಯವಿಲ್ಲವೇ? ಜಪಾನ್, ದಕ್ಷಿಣ ಕೊರಿಯಾ, ತೈವಾನ್, ಜರ್ಮನಿ, ಸ್ಪೇನ್, ಚೀನಾ, ಫ್ರಾನ್ಸ್, ರಷಿಯಾ ಮುಂತಾದ ಅನೇಕ ದೇಶಗಳಲ್ಲಿ ಇದು ಸಾಧ್ಯವಿದ್ದ ಮೇಲೆ ಏಳು ಕೋಟಿ ಕನ್ನಡಿಗರಿಗೆ ತಮ್ಮದೇ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಸಾಮರ್ಥ್ಯ, ಇಚ್ಛಾಶಕ್ತಿ ನಮ್ಮ ಸರ್ಕಾರಗಳಿಗಿಲ್ಲವೇ? ಅಗಾಧ ಪ್ರತಿಭೆ, ಅನ್ವೇಷಣೆ, ಕುತೂಹಲವನ್ನುಳ್ಳ ನನ್ನ ಜನ ಭಾಷೆಯ ಕಾರಣವೊಂದರಿಂದಾಗಿಯೇ ಶುದ್ಧ ವಿಜ್ಞಾನ, ವೃತ್ತಿಪರ ಶಿಕ್ಷಣಗಳಿಂದ ದೂರ ಉಳಿಯಬೇಕೆ? ಕನ್ನಡದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯುವುದು ನಮಗೆ ಅಪಹಾಸ್ಯದ ವಿಷಯವೇ? ಆಳುವ ಸರ್ಕಾರಕ್ಕೆ, ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳಿಗೆ ನಾನು ಹೇಳುವುದೊಂದೇಕನ್ನಡವನ್ನು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಭಾಷೆಯಾಗಿ ನೀವು ರೂಪಿಸದೆ ಹೋದರೆ ನೀವು ಈ ನಾಡಿಗೆ, ಇಲ್ಲಿನ ಜನತೆಗೆ ಅಖಂಡ ದ್ರೋಹ ಬಗೆದಂತೆ.
ಕನ್ನಡದಲ್ಲಿ ಎಷ್ಟೆಲ್ಲಾ ಗಹನ, ವಿಚಾರಪೂರ್ಣ ವಿಷಯಗಳನ್ನು ಹತ್ತಾರು ಶತಮಾನಗಳ ಹಿಂದೆಯೇ ಬೆಡಗಿನ, ಒನಪಿನ, ಒಡಪಿನ ಭಾಷೆಯಲ್ಲಿ ಕಟ್ಟಿಕೊಡಲಾಗಿದೆ. ತತ್ವ, ಅನುಭಾವ, ಅಧ್ಯಾತ್ಮವನ್ನು ಒಂದು ಭಾಷೆ ಸರಳವಾಗಿ, ಸುಲಲಿತವಾಗಿ, ಸಿಪ್ಪೆ ಸುಲಿದಂತೆಹೇಳಬಲ್ಲುದಾದರೆ ಅದು ವಿಜ್ಞಾನ, ತಂತ್ರಜ್ಞಾನಗಳವಿಷಯವನ್ನೂ ಅಷ್ಟೇ ಸರಳವಾಗಿ, ಸುಲಲಿತವಾಗಿ ಹೇಳಬಲ್ಲರು ಎಂದೇ ಅರ್ಥ. ತಿಳಿಗನ್ನಡವೆಂಬುದು ತಿಳಿವಿನಗನ್ನಡವೂ, ಶುದ್ಧ, ಪರಿಶುದ್ಧ ಜ್ಞಾನವನ್ನು ಅಭಿವ್ಯಕ್ತಿಸಬಲ್ಲ ಸ್ಫಟಿಕದ ಶಲಾಕೆಯ ಕನ್ನಡವೂ ಹೌದು, ಕನ್ನಡವೆಂಬುದು ಭಾವಕೋಶದ ಭಾಷೆಯಾಗಿ ಮಾತ್ರವಲ್ಲದೆ ಜ್ಞಾನ, ಕ್ರಿಯಾಶೀಲತೆ, ಅನ್ವೇಷಣೆಯ ಭಾಷೆಯಾಗಿಯೂ ಸಮರ್ಥವಾಗಿ ಎದೆಯುಬ್ಬಿಸಬಲ್ಲದು, ಆದರೆ, ನಾವು ಅದನ್ನು ಹಾಗೆ ನಿರೂಪಿಸುವಲ್ಲಿ ಸೋತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣಗಳಲ್ಲಿ ಕನ್ನಡ ಒಂದು ಶಿಕ್ಷಣ ಮಾಧ್ಯಮವಾಗಿರಾರಾಜಿಸುವಂತೆ ಮಾಡಲು ನಾವು ಪಣ ತೊಡಬೇಕು. ಇಂಗ್ಲಿಷ್‌ನಲ್ಲಿಯೇ ಉನ್ನತ ಶಿಕ್ಷಣವನ್ನುಪಡೆಯುತ್ತೇನೆ ಎನ್ನುವವರು ಅದರಲ್ಲಿಯೇಪಡೆಯಲಿ, ಅವರ ನಿರ್ಧಾರದ ಬಗ್ಗೆ ನನಗೆ ತಕರಾರಿಲ್ಲ. ಆದರೆ, ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಎನ್ನುವ ಕೊರಗು ಯಾವುದೇ ಕನ್ನಡಿಗನಿಗೆ ಇರಬಾರದು. ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಕಲಿಯಲು ಸಾಧ್ಯವಾಗದ ಕಾರಣಕ್ಕೆ ಈ ನಾಡಿನ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ತನಗಿಷ್ಟವಿಲ್ಲದಮತ್ತಾವುದೋಶಿಕ್ಷಣವನ್ನುಪಡೆಯುವಂತಾಗಬಾರದು. ವೃತ್ತಿಪರ, ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ನೀಡುವುದು ಒಂದು ವ್ಯರ್ಥ ಕಸರತ್ತು ಎಂದು ಹಲವರು ಟೀಕೆ ಮಾಡಬಹುದು. ಆದರೆ, ಎಲ್ಲ ಮಹತ್ವಾಕಾಂಕ್ಷೆಗಳನ್ನೂ ಜಗತ್ತು ವ್ಯರ್ಥ ಕಸರತ್ತು ಎಂದೇ ಕರೆದಿದೆ ಎನ್ನುವುದನ್ನು ವಿದ್ವಜ್ಜನರಿಗೆ ನಾನು ಜ್ಞಾಪಿಸಬೇಕಿಲ್ಲ. ಸಮಕಾಲೀನ ಜಗತ್ತಿನಲ್ಲಿ ಭಾಷೆಯೊಂದು ತನ್ನ ಪಾರಮ್ಯತೆಯನ್ನುಮೆರೆಯಬೇಕೆಂದರೆ ಅದು ಮನೆಯಂಗಳದಭಾಷೆಯಾಗಿ, ದೈನಂದಿನ ವ್ಯಾವಹಾರಿಕ ಭಾಷೆಯಾಗಿ ಮಾತ್ರವೇ ಉಳಿದರೆ ಸಾಲದು. ಅದು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಭಾಷೆಯಾಗಿಯೂವಿಕಸಿತಗೊಳ್ಳಬೇಕು. ಹಾಗಾಗಿ, ಉನ್ನತ ಶಿಕ್ಷಣದಲ್ಲಿಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ರೂಪಿಸಲು ನಾವು ಇಂದು ಸ್ಪಷ್ಟ ಕಾರ್ಯಸೂಚಿಯೊಂದನ್ನುರೂಪಿಸಿಕೊಂಡು ಆ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇರಿಸಬೇಕಿದೆ. ಅಂತಿಮ ಪದವಿ ತರಗತಿಗಳಲ್ಲಿ ಸಾಮಾನ್ಯ ಕನ್ನಡ ಪಠ್ಯ ಕಲಿಕೆಯನ್ನು ಮುಂದುವರೆಸುವಂತಾಗಬೇಕು. ಇದರಿಂದಾಗಿ ಮತ್ತಷ್ಟು ಕನ್ನಡದ ಅಧ್ಯಾಪಕರಿಗೆ ಉದ್ಯೋಗದ ಅವಕಾಶಗಳು ಸಿಕ್ಕಂತೆ ಆಗುತ್ತದೆ ಎಂದರು.
ಈ ನಿಟ್ಟಿನಲ್ಲಿ ಮೊದಲಿಗೆ ನಾವು ಪರಿಹರಿಸಿಕೊಳ್ಳಬೇಕಾದವಿಷಯವೆಂದರೆ, ವೃತ್ತಿಪರ ಶಿಕ್ಷಣ, ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಭಾಷೆಯಲ್ಲಿಯೇ ನೀಡಬೇಕು ಎಂದು ಶಿಕ್ಷಣ ಮಾಧ್ಯಮ ನೀತಿಯಲ್ಲಿ ಏನಾದರೂ ನಿಯಂತ್ರಣವಿದೆಯೇ ಎನ್ನುವುದನ್ನು. ನನಗೆ ತಿಳಿದಂತೆ ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಭಾಷೆಯಲ್ಲಿಯೇ ನೀಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಾವಳಿ ಇದೆ. ಒಂದು ವೇಳೆ ಇಂತಹ ನಿಯಂತ್ರಣಗಳಿದ್ದರೆ ಅವು ಕನ್ನಡವನ್ನು ಮಾತ್ರವೇ ಅಲ್ಲ ಯಾವುದೇ ಭಾರತೀಯ ಭಾಷೆಯ ಮಹತ್ವಾಕಾಂಕ್ಷೆಯನ್ನು ಚಿವುಟಿ ಹಾಕುವಂಥದ್ದು. ಇಂತಹ ನಿಯಮಗಳು, ನಿಯಂತ್ರಣಗಳನ್ನು ನಾವು ರಾಜಕೀಯ ಇಚ್ಛಾಶಕ್ತಿಯಿಂದಲೇಪರಿಹರಿಸಿಕೊಳ್ಳಬೇಕು. ಆದರೆ, ಯಾವುದೇ ಕಾರಣಕ್ಕೂ ಇಂತಹ ನಿಯಂತ್ರಣ ಗಳನ್ನು ನೆಪವಾಗಿರಿಸಿಕೊಂಡು ನಮ್ಮ ಗುರಿಯಿಂದ ಹಿಂದೆಗೆಯಬಾರದು.
ನಮ್ಮ ರಾಜ್ಯದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡುವ ತಲಾ ಒಂದೊಂದು ಕಾಲೇಜನ್ನಾದರೂ ಮುಂದಿನ ಮೂರು ವರ್ಷದ ಅವಧಿಯಲ್ಲಿ ನಾವು ಆರಂಭಿಸಬೇಕು. ಇದಕ್ಕಾಗಿ `ಕನ್ನಡ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕಾರ್ಯಪಡೆ’ಯೊಂದನ್ನು ಮೊದಲು ರಾಜ್ಯ ಸರ್ಕಾರ ರಚಿಸಬೇಕು, ಕನ್ನಡವೆಂದಾಕ್ಷಣ ಕೇವಲ ಸಾಹಿತಿಗಳು, ಕವಿಪುಂಗವರನ್ನು ನೆನೆಯುವ ಸೀಮಿತ ಕಲ್ಪನೆಯಿಂದ ನಾವು ಇಂದು ಹೊರಬಂದು ವಿಜ್ಞಾನ, ತಂತ್ರಜ್ಞಾನ, ಜೀವಶಾಸ್ತ್ರ, ವೈದ್ಯಕೀಯ, ಗಣಿತಶಾಸ್ತ್ರ, ಅರ್ಥಶಾಸ್ತ್ರ, ಮಾನವಿಕ ಶಾಸ್ತ್ರಗಳಲ್ಲಿರುವ ಕನ್ನಡದ ಮಹಾನ್ ಸಾಧಕರನ್ನುಮುನ್ನೆಲೆಗೆ ತರಬೇಕು. ಅವರನ್ನು ಮುಂದಿರಿಸಿಕೊಂಡುಕನ್ನಡವನ್ನು ಜ್ಞಾನದ ಭಾಷೆಯಾಗಿ ರೂಪಿಸಲು, ಕಲಿಸಲು ಗಟ್ಟಿಯಾದ ತಳಪಾಯ ಸೃಷ್ಟಿಸಬೇಕು, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿನ ಪಾರಿಭಾಷಿಕ ಪದಗಳಿಗೆ ಸಂವಾದಿಯಾಗಿ ಕನ್ನಡ, ಕಂಗ್ಲಿಷ್ ಪದಗಳನ್ನು ರೂಪಿಸುವುದರೊಟ್ಟಿಗೆ ಇವುಗಳಲ್ಲಿ ಏಕರೂಪತೆಯನ್ನು ತರುವ ನಿಟ್ಟಿನಲ್ಲಿ ಒಂದು ‘ಸಮಗ್ರ ಪಾರಿಭಾಷಿಕ ಪದಕೋಶ’ವನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
https://pragati.taskdun.com/86th-kannada-sahitya-sammelanacm-basavaraj-bommaihaveri/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ