Kannada NewsKarnataka News

ಎನ್ಇಪಿ ಜಾರಿಗೆ ಬೆಳಗಾವಿಯ ಮೊದಲ ಶಾಲೆ ಸಿದ್ಧ; ಡಾ. ಗುರುರಾಜ ಕರ್ಜಗಿ ಅಕಾಡೆಮಿ ಸಹಯೋಗ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೊಸ ಶಿಕ್ಷಣ ನೀತಿ (ಎನ್ಇಪಿ) ಜಾರಿಗೊಳಿಸಲು ಬೆಳಗಾವಿಯ ಸಂಗಮೇಶ ಇಂಗ್ಲೀಷ್ ಮೀಡಿಯಂ ಶಾಲೆ ಸಜ್ಜಾಗಿದೆ. ಖ್ಯಾತ ಶಿಕ್ಷಣ ತಜ್ಞ  ಡಾ.ಗುರುರಾಜ ಕರ್ಜಗಿ ಅವರ ನೇತೃತ್ವದ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಸಹಯೋಗದಲ್ಲಿ ಸಂಗಮೇಶ ಶಾಲೆಯಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ.

ಡಾ.ಗುರುರಾಜ ಕರ್ಜಗಿ ಗುರುವಾರ ಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ನರ್ಸರಿಯಿಂದ ಆರಂಭವಾಗಿ ಎಲ್ ಕೆಜಿ, ಯುಕೆಜಿ, ಮೊದಲ ಮತ್ತು ಎರಡನೇ ತರಗತಿಗಳಿಗೆ ಮೊದಲ ಹಂತದಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೆ ಶಿಕ್ಷಕರು ಅಕಾಡೆಮಿಯಿಂದ ತರಬೇತಿ ಪಡೆಯುತ್ತಿದ್ದಾರೆ.

ಮಕ್ಕಳನ್ನು ಶಾಲೆಯಲ್ಲಿ ಯಾವ ರೀತಿಯಲ್ಲಿ ನೋಡಿಕೊಳ್ಳಬೇಕೆನ್ನುವುದಷ್ಟೆ ಹೊಸ ಶಿಕ್ಷಣ ನೀತಿಯ ಉದ್ದೇಶವಲ್ಲ, ಪಾಲಕರು ಮಕ್ಕಳೊಂದಿಗೆ ಮನೆಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು, ಮನೆಯಲ್ಲಿ ಯಾವ ರೀತಿಯ ವಾತಾವರಣ ನಿರ್ಮಾಣ ಮಾಡಬೇಕೆನ್ನುವುದನ್ನೂ ಹೊಸ ಶಿಕ್ಷಣ ನೀತಿ ಕಲಿಸುತ್ತದೆ. ಸಂಸ್ಕಾರಯುತ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಗುರುರಾಜ ಕರ್ಜಗಿ ತಿಳಿಸಿದರು.

ಹೊಸ ಶಿಕ್ಷಣ ನೀತಿ ಅತ್ಯಂತ ಉತ್ತಮವಾಗಿದೆ. ಇದಕ್ಕೆ ಶಿಕ್ಷಕರೂ ಹೊಂದಿಕೊಳ್ಳಲೇಬೇಕಾಗಿದೆ. ಪಾಲಕರೂ ಮಕ್ಕಳ ಭವಿಷ್ಯಕ್ಕಾಗಿ ಬದಲಾಗಬೇಕಿದೆ. ಮನೆಯ ವಾತಾವರಣ ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಹಾಗಾಗಿ ಈ ಸಂಬಂಧ ಪಾಲಕರಿಗೂ ಕಾರ್ಯಾಗಾರ ಮಾಡಲಾಗುತ್ತದೆ. ಮಕ್ಕಳ ಎದುರು ಏನು ಮಾತನಾಡಬೇಕು, ಹೇಗೆ ವರ್ತಿಸಬೇಕು ಎನ್ನುವುದನ್ನು ಪಾಲಕರಿಗೆ ಕಲಿಸುತ್ತೇವೆ ಎಂದು ಕರ್ಜಗಿ ವಿವರಿಸಿದರು.

ಯಾವುದೇ ಮಕ್ಕಳು ದಡ್ಡರಿರುವುದಿಲ್ಲ. ಅವರಿಗೆ ಒಂದು ವಿಷಯ ಬರದಿರಬಹುದು. ಆದರೆ ಬೇರೆಯದರಲ್ಲಿ ಬುದ್ದಿವಂತನಿರುತ್ತಾನೆ. ಅದನ್ನು ಕಂಡುಹಿಡಿಯಲು ನಾವು ವಿಫಲರಾಗುತ್ತೇವೆ. ಮಕ್ಕಳಲ್ಲಿರುವುದನ್ನು ಎತ್ತಿ ತೋರಿಸುವ ಕೆಲಸವಾಗಬೇಕು. ಆ ಕುರಿತು ತರಬೇತಿ ನೀಡುತ್ತೇವೆ ಎಂದರು.

ಸಣ್ಣ ಸಣ್ಣ ಮಾತುಗಳೂ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಪಾಲಕರೇ ಮಕ್ಕಳಿಗೆ ಮಾದರಿಯಾಗಬೇಕು. ಶಿಕ್ಷಕರು, ಪಾಲಕರು, ಮಕ್ಕಳು ಮೂವರೂ ಸೇರಬೇಕು.  ಮೊದಲು ಶಿಕ್ಷಕರು – ಪಾಲಕರನ್ನು ದಾರಿಗೆ ತರುತ್ತೇವೆ. ನಂತರ ಮಕ್ಕಳು ತನ್ನಿಂದ ತಾನೇ ಕಲಿಯುತ್ತಾರೆ. ಇಡೀ ವಾತಾವರಣವನ್ನು ಪಾಸಿಟಿವ್ ಆಗಿ ಪರಿವರ್ತಿಸುತ್ತೇವೆ ಎಂದು ತಿಳಿಸಿದರು.

ಇಂದಿನ ಶಿಕ್ಷಣ ಜೀವನ ಪರಿವರ್ತನೆಗೆ ಕಾರಣವಾಗುತ್ತಿಲ್ಲ. ಆತ್ಮವಿಶ್ವಾಸ ಮೂಡಿಸುತ್ತಿಲ್ಲ. ಅನಕ್ಷರಸ್ಥರಿಗಿಂತ ಅಕ್ಷರಸ್ಥರಿಂದಲೇ ದೇಶಕ್ಕೆ ಅಪಾಯ ಹೆಚ್ಚು. 15 – 20 ವರ್ಷ ಶಾಲೆಗೆ ಹೋದ ಮಗು ಏನನ್ನು ಕಲಿಯುತ್ತದೆ ಎನ್ನುವುದನ್ನು ಹೇಳುವುದೇ ಕಷ್ಟ. ಕಡಿಮೆ ಶಿಕ್ಷಣ ಪಡೆದವರಿಗೆ ಅವರ ಉದ್ಯೋಗದ, ಭವಿಷ್ಯದ ಭಯವಿಲ್ಲ. ಆದರೆ ಹೆಚ್ಚು ಶಿಕ್ಷಣ ಪಡೆದವರಿಗೆ ಆತ್ಮವಿಶ್ವಾಸವಿಲ್ಲ, ಅವರಿಗೆ ಸದಾ ಭವಿಷ್ಯದ ಭಯ ಕಾಡುತ್ತಿರುತ್ತದೆ ಎಂದು ಅವರು ಹೇಳಿದರು.

ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳಿಗೆ ಬೇಕಾದ ವಿಷಯ ಕಲಿಯಲು ಅವಕಾಶವಿದೆ. ಅವರಿಗೆ ಆಸಕ್ತಿ ಇಲ್ಲದ ವಿಷಯ ಕಲಿಯಬೇಕೆಂದಿಲ್ಲ. ಮಕ್ಕಳಲ್ಲಿ ಏನಿಲ್ಲ ಎಂದು ಹುಡುಕುವ ಬದಲು ಏನಿದೆ ಎನ್ನುವುದನ್ನು ಹುಡುಕಬೇಕು ಎನ್ನುವುದನ್ನು ಕಲಿಸುತ್ತದೆ. ನಾವು ಉತ್ತಮ ಶಿಕ್ಷಕರನ್ನು ತಯಾರಿಸಬೇಕಾಗಿದೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಪ್ರತಿ ತಿಂಗಳು ಇಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಅವರ ಪ್ರತಿಯೊಂದು ಚಟುವಟಿಕೆಗಳನ್ನನ್ನೂ ವೀಕ್ಷಿಸಲಾಗುತ್ತದೆ ಎಂದರು.

ಈಗಿನ ಕಾಲದಲ್ಲಿ ಸರಸ್ವತಿ – ಲಕ್ಷ್ಮೀ ಅತ್ತೆ ಸೊಸೆ ಇದ್ದ ಹಾಗಲ್ಲ, ಅಕ್ಕ ತಂಗಿ ಇದ್ದ ಹಾಗೆ. ಅಕ್ಕ ಇದ್ದಲ್ಲಿ ತಂಗಿ ತನ್ನಿಂದ ತಾನೇ ಬರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

2002ರಲ್ಲಿ ಆರಂಭವಾಗಿರುವ ಸಂಗಮೇಶ ಶಾಲೆ ಆಟೋನಗರದಲ್ಲಿದೆ. ಭಾರತೀಯ ಸಂಸ್ಕೃತಿ ಮತ್ತು ಮಕ್ಕಳ ಸರ್ವತೋಮುಖ ಏಳ್ಗೆ ಆಧಾರಿತ ಶಿಕ್ಷಣವನ್ನು ಇಲ್ಲಿ ಕಲಿಸಲಾಗುತ್ತಿದೆ ಎಂದು ಸಂಗಮೇಶ ಶಾಲೆಯ ಚೇರಮನ್ ವಿ.ಡಿ.ಸಾಲಿಮಠ ತಿಳಿಸಿದರು.

ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ನ ಚೇತನಾ ಎಸ್ ಎಚ್ ಇದ್ದರು.

 

ಡಾ.ಗುರುರಾಜ ಕರ್ಜಗಿ ಅವರ ಮಾತನ್ನು ನೀವೇ ಕೇಳಿ (ಇಲ್ಲಿರುವ 2 ಲಿಂಕ್ ಗಳನ್ನು ಕ್ಲಿಕ್ ಮಾಡಿ):

https://fb.watch/h-RzZ30a33/

 

https://fb.watch/h-RCy4Apv4/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button