ತಳಕಟ್ನಾಳಕ್ಕೆ 20 ಕೋಟಿ ರೂ.ಗಳಷ್ಟು ವಿವಿಧ ಅಭಿವೃದ್ಧಿ ಕಾರ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ :
ತಳಕಟ್ನಾಳ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಇಲ್ಲಿಯವರೆಗೆ ಸುಮಾರು 20 ಕೋಟಿ ರೂ.ಗಳಷ್ಟು ವಿವಿಧ ಅಭಿವೃದ್ಧಿಪರ ಕಾರ್ಯಗಳನ್ನು ಮಾಡಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ತಳಕಟ್ನಾಳ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಈಚೆಗೆ ಲೋಕಸಭಾ ಚುನಾವಣೆ ನಿಮಿತ್ಯ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದೆಯೂ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ಸುವರ್ಣ ಗ್ರಾಮೋದಯ, ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ದೇವಸ್ಥಾನಗಳ ಜೀರ್ಣೋದ್ಧಾರ, ಸಮುದಾಯ ಭವನಗಳ ನಿರ್ಮಾಣ, ಡಾ.ಬಿ.ಆರ್. ಅಂಬೇಡ್ಕರ ಭವನ ನಿರ್ಮಾಣ, ಲಕ್ಷ್ಮೀದೇವಿ ದೇವಸ್ಥಾನದ ಬಳಿ ಯಾತ್ರಿ ನಿವಾಸ ನಿರ್ಮಾಣ, ಗಿರಿಜನ ಉಪಯೋಜನೆಯಡಿ 2.30 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ, ಸರ್ಕಾರಿ ಪ್ರೌಢ ಶಾಲೆ ಕಟ್ಟಡಗಳ ನಿರ್ಮಾಣ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರದ ಹಲವಾರು ಯೋಜನೆಗಳನ್ನು ತಳಕಟ್ನಾಳ ಗ್ರಾಮದ ಅಭಿವೃದ್ಧಿಗೆ ನೀಡಲಾಗಿದೆ ಎಂದು ಯೋಜನೆಗಳನ್ನು ವಿವರಿಸಿದರು.
ಗ್ರಾಮಸ್ಥರ ಬೇಡಿಕೆಯಂತೆ ತಳಕಟ್ನಾಳದಿಂದ ದಂಡಿನಮಾರ್ಗ ಕೂಡು ರಸ್ತೆ, ತಳಕಟ್ನಾಳದಿಂದ ಕಪರಟ್ಟಿ ಮತ್ತು ತಳಕಟ್ನಾಳದಿಂದ ತಿಗಡಿವರೆಗಿನ ಕೂಡು ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಹೇಳಿದರು. ಅಲ್ಲದೇ ತಳಕಟ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ವಸತಿ ಗೃಹಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸುರೇಶ ಅಂಗಡಿ ಅವರಿಗೆ ಹೆಚ್ಚಿನ ಮತಗಳ ಅಂತರದ ಗೆಲುವಿಗೆ ಕಾರಣೀಕರ್ತರಾದ ಕಾರ್ಯಕರ್ತರನ್ನು ಅಭಿನಂದಿಸಿದ ಅವರು, ನಿಮ್ಮೆಲ್ಲರ ಆಶೀರ್ವಾದದಿಂದ ಲೋಕಸಭೆಗೆ ಆಯ್ಕೆಯಾದ ಸುರೇಶ ಅಂಗಡಿ ಅವರು ಕೇಂದ್ರದಲ್ಲಿ ಈಗ ರೈಲ್ವೆ ಖಾತೆ ಸಚಿವರಾಗಿದ್ದಾರೆ. ಅವರಿಂದ ಅರಭಾವಿ ಕ್ಷೇತ್ರಕ್ಕೆ ಹೆಚ್ಚಿನ ಸೇವೆಯನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸತ್ಕರಿಸಿದರು.
ತಾಪಂ ಸದಸ್ಯ ಲಕ್ಷ್ಮಣ ಮಸಗುಪ್ಪಿ, ಮುಖಂಡರಾದ ಲಕ್ಷ್ಮಣಗೌಡ ಪಾಟೀಲ, ನಿಂಗಪ್ಪ ದೊಡಮನಿ, ತಿಮ್ಮಾಜಿ ನಾಯಿಕ, ಗ್ರಾಪಂ ಅಧ್ಯಕ್ಷ ಅಪ್ಪಾಸಾಬ ನದಾಫ, ದುಂಡಪ್ಪ ಹುಲಕುಂದ, ಲಕ್ಷ್ಮಣ ಹುಲ್ಲಾರ, ಪುಂಡಲೀಕ ಹುಚನಟ್ಟಿ, ವಿರುಪಾಕ್ಷಿ ಮುಂಗರವಾಡಿ, ಯಲ್ಲಪ್ಪ ಕೌಜಲಗಿ, ಪಿಕೆಪಿಎಸ್ ಅಧ್ಯಕ್ಷ ಗುರುಸಿದ್ದಪ್ಪ ಕಲ್ಲವ್ವಗೋಳ, ರಾಮಣ್ಣಾ ಬಾಣಿ, ನಾಗಪ್ಪ ಕುದರಿ, ಲಕ್ಕಪ್ಪ ಹರಿಜನ, ನಾಗಪ್ಪ ಮಾದರ, ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ