Latest

*ಮುಂಬರುವ ಬಜೆಟ್ ನಲ್ಲಿ ನೇಕಾರರಿಗೆ ಇನ್ನಷ್ಟು ಬೆಂಬಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:  ಮುಂಬರುವ ಬಜೆಟ್ ನಲ್ಲಿ ನೇಕಾರರಿಗೆ ಇನ್ನಷ್ಟು ಬೆಂಬಲ ನೀಡಲು, ಕಚ್ಚಾ ವಸ್ತುವಿನಿಂದ ಹಿಡಿದು, ತಂತ್ರಜ್ಞಾನ ಅಭಿವೃದ್ಧಿಯವರಿಗೆ ಸಹಾಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕರ್ನಾಟಕ ರಾಜ್ಯ ತೊಗಟವೀರ ಕ್ಷತ್ರಿಯ ನೇಕಾರ ಸಂಘದ ವತಿಯಿಂದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿರುವ ಸಂಘದ “ಅಮೃತ ಮಹೋತ್ಸವ 2023” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನೇಕಾರರ ಮೂಲ ವೃತ್ತಿ ಉಳಿಯಬೇಕು ಬೆಳೆಯಬೇಕು:
ಕಾಯಕ, ಕರ್ತವ್ಯನಿಷ್ಠ, ಸಮಾಜಕ್ಕೆ ಮಾರ್ಯಾದೆ ತುಂಬುವ ಸಮಾಜ ನೇಕಾರರ ಸಮಾಜ. ಮಾನವನಿಗೆ ಗೌರವ ಕೊಡುವ ನೇಕಾರ, ಅನ್ನ ನೀಡುವ ರೈತ ಕುಲ ಅನಾದಿ ಕಾಲದಿಂದ ಮನುಷ್ಯನನ್ನು ರಕ್ಷಿಸಿಕೊಂಡು ಬಂದಿವೆ. ನೇಕಾರರ ಮೂಲ ವೃತ್ತಿ ಉಳಿಯಬೇಕು ಬೆಳೆಯಬೇಕು. ಅದರ ಜೊತೆಗೆ ನೇಕಾರರು ಬೆಳೆಯಬೇಕು ಅವರ ಮಕ್ಕಳು ಬೇರೆ ಬೇರೆ ವೃತ್ತಿಗೆ ಹೋಗಬೇಕು. 1990 ರ ನಂತರ ಜಾಗತಿಕರಣ ಆದ ಮೇಲೆ ನೇಕಾರರ ವೃತ್ತಿ ಗೆ ಹೊಡೆತ ಬಿದ್ದಿದೆ. ಅದಕ್ಕೆ ನೇಕಾರರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆತಾಗ ಮಾತ್ರ ನೇಕಾರರು ಬೆಳೆಯಲು ಸಾಧ್ಯ. ಪಾಲಿಯಸ್ಟರ್ ಬಟ್ಟೆಗಳ ಉತ್ಪಾದನೆಯಾಗುತ್ತಿದ್ದಂತೆ ಮೂಲ ನೇಕಾರಿಕೆಗೆ ತೊಂದರೆಯಾಗಿದೆ. ಸರ್ಕಾರಗಳು ಹಲವಾರು ಸಂದರ್ಭಗಳಲ್ಲಿ ಸಹಾಯ ಮಾಡಿವೆ. ಶಾಶ್ವತವಾಗಿ ಸಹಾಯವಾಗಲು ನೇಕಾರರ ಬಟ್ಟೆಗಳಿಗೆ ನಿರಂತರವಾಗಿ ಮಾರುಕಟ್ಟೆ ದೊರೆಯಬೇಕು ಎಂದರು.

ನೇಕಾರರು ಉತ್ಪಾದಿಸುವ ಅಷ್ಟೂ ಬಟ್ಟೆಯನ್ನು ಖರೀದಿಸಲು ಆದೇಶ:
ಹಿಂದೆ ನಮ್ಮ ತಂದೆ ಕೈಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಜನತಾ ಧೋತಿ, ಸಮವಸ್ತ್ರ, ಸೀರೆ ನೀಡುವ ಕಾರ್ಯಕ್ರಮ ರೂಪಿಸಿದ್ದರು. ಮೈಮುಚ್ಚಿಕೊಳ್ಳಲು ಸಾಧ್ಯವಿಲ್ಲದ ಬಡವರಿಗೆ ಗೌರವ ನ್ಯೂಡುವ ಕೆಲಸ ಮಾಡುತ್ತಿದ್ದೇವೆ. ನೇಕಾರರಿಂದ ನೆಯಿಸಿ ಬಡವಾಯಿಗೆ ನೀಡಿದರೆ ನೇಕಾರರೂ ಉಳಿದು ಬಡವರ ಗೌರವವೂ ಉಳಿಯಲಿದೆ ಎಂದಿದ್ದರು. ಅದೇ ತತ್ವ ಆಧರಿಸಿ ನಾವು ಶಾಲಾ ಮಕ್ಕಳಿಗೆ ಸಮವಸ್ತ್ರ ಒದಗಿಸುತ್ತಿದ್ದು, ನೇಕಾರರ ಮಂಡಳಿಯಿಂದ ಪಡೆಯಲು ತೀರ್ಮಾನ ಮಾಡಲಾಗಿದೆ. ಪ್ರತಿ ವರ್ಷ ನೇಕಾರರು ಉತ್ಪಾದಿಸುವ ಅಷ್ಟೂ ಬಟ್ಟೆಯನ್ನು ಖರೀದಿಸಲು ಆದೇಶ ನೀಡಲಾಗಿದೆ. ಆರು ತಿಂಗಳು ಮೊದಲೇ ನೇಕಾರರಿಗೆ ಆದೇಶ ನೀಡಲು ಸೂಚಿಸಿದ್ದೇನೆ ಎಂದರು.

ಎಲ್ಲಾ ಬೇಡಿಕೆಗಳ ಈಡೇರಿಕೆ:
ನೇಕಾರರೊಂದಿಗೆ ಈವರೆಗೆ ಎರಡು ಸಭೆಗಳು ಜರುಗಿದ್ದು ಕೈಮಗ್ಗ ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಅನುದಾನ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನು ಒಪ್ಪಿ 5 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಎಲ್ಲಾ ನೇಕಾರರಿಗೆ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ಮತ್ತೊಂದು ಸಭೆಯಲ್ಲಿ ಸಲ್ಲಿಸಿದ ಎಲ್ಲಾ ಬೇಡಿಕೆಗಳನ್ನು ನಾವು ಈಡೇರಿಸಿದ್ದೇವೆ‌. ನೇಕಾರರನ್ನು ಉಳಿಸಬೇಕೆಂಬ ಪ್ರಬಲ ಭಾವನೆ ಹೃದಯದಲ್ಲಿದೆ. ಈ ಕುಲಕಸುಬುಗಳು ಕಂಬಾರರು, ಕುಂಬಾರರರು, ಬಡಿಗೇರರು, ವಿಶ್ವಕರ್ಮರು ಇವರನ್ನು ಉಳಿಸಿದಾಗ ಗ್ರಾಮೀಣ ಪ್ರದೇಶದ ಬಡವರ ಆರ್ಥಿಕ ಅಭಿವೃದ್ಧಿ ಯಾಗುತ್ತದೆ. ದುಡಿಯುವ ವರ್ಗಕ್ಕೆ ಶಕ್ತಿಯನ್ನು ತುಂಬಿದಾಗ ಮಾತ್ರ ದೇಶವನ್ನು ಉಳಿಸಲು ಸಾಧ್ಯ. ದೊಡ್ಡ ಪ್ರಮಾಣದಲ್ಲಿ ಕಾರ್ಖಾನೆಗಳಿಂದ ಉತ್ಪಾದನೆ ಅಗತ್ಯವಿಲ್ಲ. ಆದರೆ ದೊಡ್ಡ ಪ್ರಮಾಣದ ಜನರಿಂದ ಉತ್ಪಾದನೆಯಾಗಬೇಕು. ಎಲ್ಲರ ಕೈಗೆ ಕೆಲಸ ಸಿಗಬೇಕು ಎಂದು ಮಹಾತ್ಮಾ ಗಾಂಧಿಯವರು ಹೇಳಿದ್ದರು ಎಂದರು.

ಜವಳಿ ಉದ್ದಿಮೆ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರ:
ಇಂದು ಜವಳಿ ಕ್ಷೇತ್ರ, ನೇಕಾರರು ಗಾರ್ಮೆಂಟ್ಸ್ ದೇಶದಲ್ಲಿಯೇ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ದಿಮೆಗಳು. ಇದನ್ನು ಸರಿಯಾಗಿ ಉಪಯೋಗಿಸಿದರೆ ದೇಶದಲ್ಲಿಯೇ ಉದ್ಯೋಗ ನೀಡಬಹುದು. ಬಾಂಗ್ಲಾ ದೇಶ ನೇಕಾರಿಕೆಯಿಂದಲೇ ತನ್ನ ಆರ್ಥಿಕತೆಯನ್ನು ನಿಭಾಯಿಸುತ್ತಿದೆ. ಅದೇ ರೀತಿ ನಮ್ಮ ದೇಶ ಹಾಗೂ ಕರ್ನಾಟಕದಲ್ಲಿ ವಿಶೇಷವಾಗಿ ಆಗಬೇಕಿದೆ. ಅದಕ್ಕಾಗಿ ಎಲ್ಲಾ ಬೇಡಿಕೆಗಳನ್ನು ಒಪ್ಪಲಾಗಿದೆ. ಪವರ್ ಲೂಮ್ ಗೆ ಸಹ 5 ಸಾವಿರ ರೂ. ಪ್ರತಿ ಯೂನಿಟ್ ಗೆ ನೇಕಾರರಿಗೆ ನೀಡುವ ವಿದ್ಯುತ್ ಮೊತ್ತವನ್ನು ಇಳಿಸಲಾಗಿದೆ. 2 ಲಕ್ಷ ರೂ.ಗಳವರೆಗೆ ಸಹಾಯಧನವನ್ನು 30% ರಿಂದ ಶೇ 50% ಕ್ಕೆ ಹೆಚ್ಚಳ ಮಾಡುವಂತೆ ಮಾಡಿರುವ ಮನವಿಯನ್ನು ಪರಿಗಣಿಸಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ 2 ಲಕ್ಷ ರೂ.ಗಳ ಸಾಲ, ಕಾಟೇಜ್ ಉದ್ದಿಮೆ ಮಾಡಲು ಒಪ್ಪಲಾಗಿದೆ ಎಂದರು. ಬೇಡಿಕೆಗಳನ್ನು ಈಡೇರಿಸಿ ಇಲ್ಲಿಗೆ ಬಂದಿದ್ದು, ಈ ಸಮುದಾಯದ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ಸಮುದಾಯಕ್ಕೆ ಶಾಶ್ವತವಾಗಿ ಗೌರವ, ಆದಾಯ ಬರಬೇಕು, ಸ್ವಾವಲಂಬಿ, ಸ್ವಾಭಿಮಾನಿ ಬದುಕುಕಟ್ಟಿಕೊಡಲು ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ. ಅದೇ ರೀತಿ ಸಣ್ಣ ಕಸುಬು ಮಾಡುವ ಮೀನುಗಾರಿಕೆ, ಚಾಲಕರು ಸೇರಿದಂತೆ ಸಣ್ಣ ಸಣ್ಣ ಸಮುದಾಯಗಳಿಗೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು. ಸರ್ಕಾರ ದುಡಿಯುವ ವರ್ಗಕ್ಕೆ ಮಹತ್ವ ನೀಡಿದೆ. ಅದು ನಮ್ಮ ಕರ್ತವ್ಯ. ದುಡಿಮೆಗೆ ಗೌರವ ನೀಡುವ ದೇಶ ಉದ್ದಾರವಾಗುತ್ತದೆ. ಈಗ ದುಡಿಮೆಯೇ ದೊಡ್ಡಪ್ಪ ಎನ್ನುವ ಮಾತಿಗೆ ಚಾಲನೆ ದೊರೆತಿದೆ. ದುಡಿಯುವ ಸಮುದಾಯ ನೇಕಾರರದ್ದಾಗಿದೆ. ಇನ್ನಷ್ಟು ಆರ್ಥಿಕ, ಸಾಮಾಜಿಕವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವ ನೀಡಿ, ಸಮುದಾಯದ ಮಕ್ಕಳು ಬೇರೆ ಬೇರೆ ವೃತ್ತಿಯಲ್ಲಿ ತೊಡಗಿ ಬೆಳೆಯುವಂತಾಗಬೇಕು. ಆಧುನಿಕ ಮಗ್ಗಗಳಿದ್ದು, ಉತ್ಕೃಷ್ಟವಾದ ಬಟ್ಟೆಗಳನ್ನು ನೀಯುತ್ತವೆ. ಇವುಗಳ ಬಳಕೆ ಮಾಡಿಕೊಳ್ಳಬೇಕು ಎಂದರು.

ಮಾರುಕಟ್ಟೆ ಸೃಷ್ಟಿಸಿ,ನೇಕಾರರಿಗೆ ಲಾಭ ದೊರೆಯಬೇಕು:
ದೊಡ್ಡ ಪ್ರಮಾಣದಲ್ಲಿ ಗ್ರಾಮೀಣ ಮತ್ತು ನಗರದ ಕೊಳಗೇರಿಗಳಲ್ಲಿ ಮಹಿಳೆಯರಿಗೆ ನೇಕಾರಿಕೆ ತರಬೇತಿ ನೀಡಿದರೆ ಅವರ ಮನೆ ಉದ್ಧಾರವಾಗುತ್ತದೆ. ಶಿಡ್ಲಘಟ್ಟ, ಮೊಳಕಾಲ್ಮೂರು ಪ್ರದೇಶದಲ್ಲಿ ಹೀಗೆ ಮಾಡುತ್ತಾರೆ. ಮಹಿಳಾ ಸಂಘಗಳು ತಯಾರಿಸುವ ಉತ್ಪನ್ನ ಗಳಿಗೆ ಈಗಾಗಲೇ ಅಮೆಜಾನ್, ಪ್ಲಿಪ್ ಕಾರ್ಟ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ನೇಕಾರರು ನೇಯ್ದ ಸೀರೆಗಳನ್ನು ಮಹಾನಗರಗಳಲ್ಲಿ ನಾಲ್ಕು ಐದು ಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡುತ್ತಾರೆ. ನಾವೇ ಮಾರುಕಟ್ಟೆ ಸೃಷ್ಟಿಸಿದರೆ, ಅದರ ಲಾಭ ನೇಕಾರರಿಗೆ ಸಿಗಬೇಕು. ಬೆಂಗಳೂರಿನಲ್ಲಿ ಸ್ಥಳಾವಕಾಶ ಕೋರಿದ್ದು, ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಈ ವೃತ್ತಿಯನ್ನು ಉಳಿಸಿ, ನೀವು ಆತ್ಮ ಸ್ಥೈರ್ಯದಿಂದ ಮುನ್ನುಗ್ಗಿ, ಮುನ್ನಡೆಸಿ, ನಿಮ್ಮ ಜೊತೆಗೆ ಸರ್ಕಾರವಿದೆ. ಕೈಹಿಡಿಯುವುದಲ್ಲದೆ ಹೆಜ್ಜೆಗೆ ಹೆಜ್ಜೆ ಹಾಕಲಾಗುವುದು ಎಂದರು.

ಈ ಸಂದರ್ಭದಲ್ಲಿ ಶ್ರೀ ದಿವ್ಯಾನಂದ ಗಿರಿ ಮಹಾಸ್ವಾಮಿಗಳು, ಪೂರ್ಣಾನಂದ ಸ್ವಾಮೀಜಿ, ಸಚಿವ ಕೆ.ಸಿ.ನಾರಾಯಣಗೌಡ, ಸಂಸದ ಪಿ.ಸಿ.ಮೋಹನ್, ರಾಜ್ಯ ತೊಗಟವೀರ ಕ್ಷತ್ರಿಯ ನೇಕಾರ ಸಂಘ ಅಧ್ಯಕ್ಷ ಬಿ.ಎಸ್.ಸೋಮಶೇಖರ್.ಎಸ್. ಹರೀಶ್, ಎಂ.ಡಿ ಹರೀಶ್, ಲಕ್ಷ್ಮೀ ನಾರಾಯಣ, ಅಶ್ವತ್ಥ್ ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು.

*BJP ಅಧಿಕಾರಕ್ಕೆ ಬರಲ್ಲ ಎಂದು ಪ್ರಧಾನಿ ಮೋದಿಗೂ ಖಾತ್ರಿಯಾಗಿದೆ: ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarudupiprajadhwani/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button