ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಸುಳೇಬಾವಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕೆಟ್ಟ ಹುಳ ಎಂಬ ಪದವನ್ನು ಬಳಕೆ ಮಾಡಿದ್ದನ್ನು ಪಂಚಮಸಾಲಿ ಸಮಾಜ ತೀವ್ರವಾಗಿ ಖಂಡಿಸಿದೆ.
ರಮೇಶ ಜಾರಕಿಹೊಳಿ ಅವರು ಕೂಡಲೇ ಈ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಪಂಚಮಸಾಲಿ ಸಮಾಜದ ಬೆಳಗಾವಿ ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವಿದೆ. ಯಾವುದೇ ಸಮುದಾಯದ ಮಹಿಳೆಯರಿಗೆ ಈ ರೀತಿ ಪದ ಬಳಸಬಾರದು ಎಂದರು.
ಗುಂಡು ಪಾಟೀಲ ಮಾತನಾಡಿ, ಹೆಣ್ಣು ಮಕ್ಕಳಿಗೆ ಈ ರೀತಿಯ ಶಬ್ದ ಬಳಕೆ ಖಂಡನೀಯ. ಕೇವಲ ಪಂಚಮಸಾಲಿ ಸಮಾಜದ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಯಾವುದೇ ಸಮಾಜದ ಹೆಣ್ಣು ಮಕ್ಕಳಿಗೆ ಈ ರೀತಿ ಶಬ್ದ ಬಳಸುವುದನ್ನು ಖಂಡಿಸುತ್ತೇವೆ ಎಂದರು.
ಮಾಜಿ ಕಾಡಾ ಅಧ್ಯಕ್ಷ ಅಡಿವೇಶ ಇಟಗಿ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ಕ್ಷೇತ್ರದಲ್ಲಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹವರ ಬಗ್ಗೆ ಥೂ ಎಂದು ಉಗುಳುವುದು, ಕೀಳುಮಟ್ಟದ ಪದ ಬಳಕೆ ಸರಿಯಲ್ಲ. ರಮೇಶ ಜಾರಕಿಹೊಳಿ ಕೂಡಲೇ ಕ್ಷಮೆ ಯಾಚಿಸಲಿ ಎಂದು ಒತ್ತಾಯಿಸಿದರು.
ಬಸನಗೌಡ ಪಾಟೀಲ್ ಯತ್ನಾಳ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಕೀಳು ಶಬ್ದ ಬಳಕೆ ಮಾಡಿದ್ದು ಗಮನಕ್ಕೆ ಬಂದಿಲ್ಲ. ಒಂದೊಮ್ಮೆ ಅವರು ಹಾಗೆ ಮಾತಾಡಿದ್ದರೆ ಅದನ್ನೂ ಸಹ ಖಂಡಿಸುತ್ತೇವೆ. ಮುರುಗೇಶ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರಸ್ಪರವಾಗಿ ಕೆಟ್ಟ ಶಬ್ದ ಬಳಸಿ ಆರೋಪ, ಪ್ರತ್ಯಾರೋಪ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು.
ರಾಜು ಮಗದುಮ್ಮ ರಾಮನಗೌಡ ಪಾಟೀಲ, ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಇದ್ದರು.
*ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿಗೆ ಸಾಲು ಸಾಲು ಪ್ರಶ್ನೆ ಮುಂದಿಟ್ಟ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ