LatestUncategorized

*ಮನೆ ಮಗನಾಗಿ ಬಂದಿದ್ದೇನೆ; ನನಗೆ ಅಧಿಕಾರದ ಶಕ್ತಿ ನೀಡಿ; ಸಿಎಂ ಹುದ್ದೆಯ ಇಂಗಿತ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಈ ಐತಿಹಾಸಿಕ ಪ್ರಜಾಧ್ವನಿ ಯಾತ್ರೆಯನ್ನು ಜ. 11ರಂದು ಮಹಾತ್ಮ ಗಾಂಧಿಜಿ ಅವರು ಬ್ರಿಟೀಷರ ವಿರುದ್ಧ ಹೋರಾಡಲು ಕಾಂಗ್ರೆಸ್ ನೇತೃತ್ವ ವಹಿಸಿದ ಬೆಳಗಾವಿಯಲ್ಲಿ ಆರಂಭಿಸಿದೆವು. ಈ ರಾಜ್ಯದ ದುರಾಡಳಿತ, ಕೊಳೆ, ಕಳಂಕ ತೊಳೆದು ಹಾಕಲು ಬೆಳಗಾವಿಯ ವೀರಸೌಧದಲ್ಲಿರುವ ಗಾಂಧಿ ಬಾವಿಯ ನೀರಿನಿಂದ ಅಲ್ಲಿನ ರಸ್ತೆ ಸ್ವಚ್ಛತೆ ಮಾಡಿ ಈ ಯಾತ್ರೆ ಆರಂಭಿಸಿದ್ದೇವೆ. ರಾಜ್ಯದಲ್ಲಿ ದಕ್ಷ ಆಡಳಿತ ನೀಡುವ ಸಂಕಲ್ಪ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಡ್ಯ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಯಾತ್ರೆ ಕೇವಲ ಕಾಂಗ್ರೆಸ್ ಯಾತ್ರೆಯಲ್ಲ, ಜನರ ಧ್ವನಿ, ಅವರ ನೋವು, ಸಮಸ್ಯೆ ಅರಿತು ಪರಿಹಾರ ನೀಡಲು ಈ ಯಾತ್ರೆ ಹಮ್ಮಿಕೊಂಡಿದ್ದೇವೆ. ರಾಜ್ಯದ ಜನರಿಗೆ ಆಗಿರುವ ಅನ್ಯಾಯ ಸರಿಪಡಿಸಿ, ನ್ಯಾಯ ಒದಗಿಸಲು ಈ ಯಾತ್ರೆ ಮಾಡುತ್ತಿದ್ದೇವೆ ಎಂದರು.

ನನಗೂ ಮಂಡ್ಯಕ್ಕೂ 40 ವರ್ಷಗಳಿಂದ ಸಂಬಂಧವಿದೆ. ಮಂಡ್ಯ, ರಾಮನಗರ, ಕನಕಪುರ ಒಂದೇ ಎಂದು ಭಾವಿಸಿ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಎಸ್.ಎಂ ಕೃಷ್ಣ, ಮಾದೇಗೌಡರ ಕಾಲದಿಂದ ಈ ಜಿಲ್ಲೆಯ ಪ್ರತಿ ತಾಲೂಕಿನೊಂದಿಗೆ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುತ್ತಾ ಬಂದಿದ್ದೇನೆ. ಮಂಡ್ಯ ತಮ್ಮ ಹಕ್ಕಿಗಾಗಿ ಹೋರಾಡುವ ಗಂಡು ಭೂಮಿ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀವೆಲ್ಲರೂ ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದೀರಿ. ಮಾದೇಗೌಡರು, ಎಸ್.ಎಂ. ಕೃಷ್ಣ ಅವರು ಕಾವೇರಿ ನದಿ ಹಾಗೂ ಮಂಡ್ಯ ಜನರ ರಕ್ಷಣೆಗಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ.

ಮಂಡ್ಯ ಜನರು ದೇಶಕ್ಕೆ ಮಾದರಿ ರೈತಾಪಿ ಜೀವನ ನಡೆಸುತ್ತಿದ್ದೀರಿ. ರೈತನಿಗೆ ಲಂಚ, ಕಮಿಷನ್, ಬಡ್ತಿ, ವೇತನ, ನಿವೃತ್ತಿ ಯಾವುದೂ ಇಲ್ಲ. ಈ ರೈತನ ರಕ್ಷಣೆ ಮಾಡಬೇಕಿದೆ. ಬಿಜೆಪಿ ಸರ್ಕಾರ ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿತ್ತು. ನೂರಾರೂ ಆಶ್ವಾಸನೆ ನೀಡಿದ್ದು, ಯಾವುದನ್ನು ಈಡೇರಿಸಿಲ್ಲ. ಜಾತ್ಯಾತೀತ ಜನತಾದಳ ಕೂಡ ಬೇಕಾದಷ್ಟು ಆಶ್ವಾಸನೆ ನೀಡಿತ್ತು. ನಿಮ್ಮ ಜಿಲ್ಲೆಯ 7 ರಲ್ಲಿ 7 ಕ್ಷೇತ್ರದಲ್ಲೂ ಜೆಡಿಎಸ್ ಗೆಲ್ಲಿಸಿದ್ದೀರಿ. ನೀವು ಕೊಟ್ಟ ತೀರ್ಮಾನವನ್ನು ನಾವು ಒಪ್ಪಿಕೊಂಡಿದ್ದೇವೆ. ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜಾತ್ಯಾತೀತ ಜನತಾದಳಕ್ಕೆ ಅಧಿಕಾರ ನೀಡಿದೆವು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಆಡಳಿತ ಮಾಡಲು ನಾವು ಸಂಪೂರ್ಣ ಸಹಕಾರ ನೀಡಿದೆವು. ನಾವು ಎಲ್ಲಾ ರೀತಿಯ ಬೆಂಬಲ ಪ್ರೋತ್ಸಾಹ ನೀಡಿದರೂ ಅಧಿಕಾರ ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ರೈತರು, ಬಡವರ ಕಲ್ಯಾಣಕ್ಕಾಗಿ ನಾವು ಎಂದೂ ಮುಖ್ಯಮಂತ್ರಿ ಸ್ಥಾನ ಬಯಸದೇ, ಯಾವುದೇ ಷರತ್ತು ಹಾಕದೇ ಸಂಪೂರ್ಣ ಬೆಂಬಲ ನೀಡಿದ್ದೆವು. ನಾವು ಅವರಿಗೆ ಮೋಸ, ತೊಂದರೆ ಮಾಡಿದ್ದೆವಾ? ಅವರ ಮಗ ಚುನಾವಣೆಗೆ ನಿಂತಾಗ ಹಲವರು ಒಪ್ಪದಿದ್ದರೂ ನಾನು ಹಾಗೂ ನಮ್ಮ ನಾಯಕರು ಇಲ್ಲಿಗೆ ಬಂದು ಅವರ ಪರವಾಗಿ ಪ್ರಾಮಾಣಿಕವಾಗಿ ಪ್ರಚಾರ ಮಾಡಿದ್ದೇವೆ. ಆದರೆ ಅವರು ಅದನ್ನು ಉಳಿಸಿಕೊಳ್ಳಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷ ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಅವರ ಅಧಿಕಾರವನ್ನು ನೀವು ನೋಡಿದ್ದೀರಿ. ನಾನು ನಿಮ್ಮ ಮನೆ ಮಗನಾಗಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನನಗೆ ಅಧಿಕಾರದ ಶಕ್ತಿ ನೀಡುವಂತೆ ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಸಿಎಂ ಹುದ್ದೆಯ ಇಂಗಿತ ವ್ಯಕ್ತಪಡಿಸಿದರು.

ನಾವು ಮೇಕೆದಾಟು ಪಾದಯಾತ್ರೆಯನ್ನು ಕಾವೇರಿ ಪ್ರದೇಶದ ಜನರಿಗಾಗಿ ಮಾಡಿದೆವು. ಈ ವರ್ಷ 646 ಟಿಎಂಸಿ ನೀರು ರಾಜ್ಯದಿಂದ ತಮಿಳುನಾಡಿಗೆ ಹೋಗಿದ್ದು, ಅದರಲ್ಲಿ 469 ಟಿಎಂಸಿ ನೀರು ಸಮುದ್ರ ಸೇರಿದೆ. ಅದನ್ನು ಶೇಖರಿಸಿ, ಮಂಡ್ಯ, ಮೈಸೂರು, ಹಾಸನದ ರೈತರಿಗೆ ನೀರು ನೀಡಲು ಮೇಕೆದಾಟು ಆಣೆಕಟ್ಟು ಕಟ್ಟಬೇಕಿದೆ. ಬೆಂಗಳೂರು ಜನರಿಗೆ ಕುಡಿಯುವ ನೀರು ನೀಡಲು ಪಾದಯಾತ್ರೆ ಮಾಡಿದೆವು. ಸುಮಾರು 170 ಕಿ.ಮೀ ಪಾದಯಾತ್ರೆ ಮಾಡಿದೆವು.

ಈ ಯಾತ್ರೆ ತಡೆಯಲು ನಮ್ಮ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಮಾಡಿದರು. ಅವರ ನಾಯಕರ ಮೇಲೆ ಯಾವುದೇ ಕೇಸ್ ಹಾಕಿಲ್ಲ. ನನ್ನ ಮೇಲೆ 25 ಕೇಸ್ ಹಾಕಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ, ಕರಾಳ ಕಾಯ್ದೆ ವಿರುದ್ಧ ರೈತರ ಪರವಾಗಿ ಹೋರಾಟ ಮಾಡಿದ್ದಕ್ಕೂ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಇದು ಬಿಜೆಪಿ ಸರ್ಕಾರದ ನೀತಿ. ಐಟಿ, ಇಡಿ, ಸಿಬಿಐ ಮೂಲಕ ನಮ್ಮನ್ನು ನಿಯಂತ್ರಣ ಮಾಡಬಹುದು ಎಂದು ಬಿಜೆಪಿಯವರ ಭಾವಿಸಿದ್ದರೆ ಅದು ಅವರ ಭ್ರಮೆ ಎಂದು ಕಿಡಿಕಾರಿದರು.

ಇದು ಬಸವಣ್ಣ, ಕುವೆಂಪು, ಶಿಶುನಾಳ ಷರೀಫರು, ಕನಕದಾಸರ ಕರ್ನಾಟಕ. ಎಲ್ಲ ಜಾತಿ, ಧರ್ಮದವರನ್ನು ನಾವು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ರೈತರ ಬದುಕು ಹಸನ ಮಾಡಲು ನಮ್ಮ ಪಕ್ಷ ಬದ್ಧವಾಗಿದೆ. ಬೆಂಬಲ ಬೆಲೆ ಸಿಗಬೇಕು, ಕೆರೆಗಳು ತುಂಬಬೇಕು. ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ರಾಗಿಗೆ 50 ಕ್ವಿಂಟಾಲ್ ಗೆ ಬೆಂಬಲ ಬೆಲೆ ನೀಡುತ್ತಿದ್ದೆವು. ಬಿಜೆಪಿ ಸರ್ಕಾರ ಅದನ್ನು 20 ಕ್ವಿಂಟಾಲ್ ಗೆ ಇಳಿಸಿದೆ. ರೈತರ ಯಾವುದೇ ಬೆಳೆಯಾದರೂ ಬೆಂಬಲ ನೀಡಲು ನಮ್ಮದೇ ಆದ ನೀತಿ ರೂಪಿಸುತ್ತಿದ್ದೇವೆ. ಕೃಷ್ಣ ಭೈರೇಗೌಡರು ಕೃಷಿ ಸಚಿವರಾಗಿದ್ದಾಗ ಅತಿ ಹೆಚ್ಚು ಕೃಷಿ ಹೊಂಡ ಮಾಡಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದರು.

ಬೆಂಗಳೂರು ಮೈಸೂರು ಹೆದ್ದಾರಿ ಯೋಜನೆ ಆರಂಭಿಸಿದವರು ಯಾರು? ಆಸ್ಕರ್ ಫರ್ನಾಂಡೀಸ್ ಅವರು ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಮಂತ್ರಿಯಾಗಿದ್ದಾಗ ಈ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು. ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈ ಕಾಮಗಾರಿ ಆರಂಭಿಸಿತು. ಇದು ಬಿಜೆಪಿಯ ಯೋಜನೆಯಲ್ಲ. ಇದನ್ನು ಯಾರೇ ಉದ್ಘಾಟನೆ ಮಾಡಿದರೂ ಇದನ್ನು ಆರಂಭಿಸಿದ್ದು ಕಾಂಗ್ರೆಸ್. ಲೋಕಸಭಾ ಸದಸ್ಯರಾದ ಸುರೇಶ್, ಮಾಜಿ ಸಂಸದ ಧೃವನಾರಾಯಣ್ ಅವರು ರೈತರಿಗೆ ಸೂಕ್ತ ಪರಿಹಾರ ಸಿಗುವಂತೆ ಮಾಡಲು ಹೋರಾಟ ಮಾಡಿದ್ದಾರೆ.

ಕೋವಿಡ್ ನಿಂದಾಗಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಕಷ್ಟದ ಪರಿಸ್ಥಿತಿಯಿಂದ ಮೇಲೆತ್ತಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಎರಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ. ಬೆಳಗಾವಿಯಲ್ಲಿ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದೆವು. ಈ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಆ ಮೂಲಕ ಪ್ರತಿ ತಿಂಗಳಿಗೆ 1500ರಂತೆ ವರ್ಷಕ್ಕೆ 18 ಸಾವಿರದಷ್ಟು ಹಣವನ್ನು ಪ್ರತಿ ಕುಟುಂಬ ಉಳಿಸಬಹುದಾಗಿದೆ. ನನ್ನ ಅವಧಿಯಲ್ಲಿ ರಾಜ್ಯದಲ್ಲಿದ್ದ 10 ಸಾವಿರ ಮೆ.ವ್ಯಾಟ್ ವಿದ್ಯುತ್ ಅನ್ನು 21 ಸಾವಿರ ಮೆ.ವ್ಯಾ ಗೆ ಹೆಚ್ಚಿಸಿದೆವು. ಆ ಮೂಲಕ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಬೇರೆ ರಾಜ್ಯಗಳಿಗೆ ಮಾರುವಂತೆ ಮಾಡಿದ್ದೇವೆ.

ಇನ್ನು ಎರಡನೇ ಗ್ಯಾರೆಂಟಿ ಯೋಜನೆಯಾಗಿ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ಗೃಹಲಕ್ಷ್ಮಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿರುವ ಸಂದರ್ಭದಲ್ಲಿ ಅವರಿಗೆ ನೆರವಾಗಲು ರಾಜ್ಯದ ಪ್ರತಿ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಆ ಮೂಲಕ ವರ್ಷಕ್ಕೆ 24 ಸಾವಿರ ನೆರವು ನೀಡಲಾಗುವುದು. ಹೀಗೆ ಈ ಎರಡೂ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರದಷ್ಟು ಆರ್ಥಿಕ ಹೊರೆಯನ್ನು ತಗ್ಗಿಸಲು ಕಾಂಗ್ರೆಸ್ ಈ ಕಾರ್ಯಕ್ರಮ ರೂಪಿಸಿದೆ. ಐದು ವರ್ಷಗಳಲ್ಲಿ 2 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಇದು ಲಂಚ ಅಲ್ಲ. ಸರ್ಕಾರದಿಂದ ನಿಮಗೆ ನೀಡುವ ಯೋಜನೆಗಳು. ಕಾಂಗ್ರೆಸ್ ಪಕ್ಷದ ಈ ಯೋಜನೆಗಳನ್ನು ಪಕ್ಷದ ಎಲ್ಲ ಕಾರ್ಯಕ್ರತರು ಪ್ರತಿ ಮನೆ ಮನೆಗೆ ತಲುಪಿಸಬೇಕು ಎಂದರು.

ನೀವೆಲ್ಲರೂ ಬಿಜೆಪಿ ಆಡಳಿತವನ್ನು ನೋಡಿದ್ದೀರಿ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಧಳದ ನಾಯಕರು, ಕುಮಾರಣ್ಣ ಈ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಯಾವುದೇ ಹೋರಾಟ ಮಾಡಲಿಲ್ಲ. ಸರ್ಕಾರದ ಎಲ್ಲ ಇಲಾಖೆ ಹುದ್ದೆಗಳ ನೇಮಕದಲ್ಲಿ ಹಗರಣ ನಡೆಯುತ್ತಿವೆ. ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳುವ ಪ್ರಕಾರ ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಹುದ್ದೆಗೆ ಕನಿಷ್ಠ 4-5 ಕೋಟಿ ಲಂಚ ನೀಡಬೇಕಂತೆ. ನೀವು ಜೆಡಿಎಸ್ ಗೆ ಮತ ಹಾಕಿದರೆ, ಬಿಜೆಪಿಯನ್ನು ಗೆಲ್ಲಿಸಿದಂತೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ.

ನಿಮ್ಮ ಮಗನಾಗಿರುವ ನಾನು ಕಾಂಗ್ರೆಸ್ ಅಧ್ಯಕ್ಷನಾಗಿದ್ದು, ನನ್ನ ಕೈ ಬಲಪಡಿಸಲು 7ಕ್ಕೆ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡಬೇಕು. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಅದಕ್ಕೆ ನೀವು ಅವಕಾಶ ಮಾಡಿಕೊಡಬೇಕು. ನಾವೆಲ್ಲರೂ ನಿಮ್ಮ ಜತೆಯಲ್ಲಿ ನಿಂತು ಬದುಕು ಕಟ್ಟಲು ಶ್ರಮಿಸುತ್ತೇವೆ. ನಾವು ನಿಮ್ಮ ಭಾವನೆ ಜತೆ ರಾಜಕೀಯ ಮಾಡುವುದಿಲ್ಲ. ನಮಗೆ ನಿಮ್ಮ ಹೊಟ್ಟೆಪಾಡು ಮುಖ್ಯ. ಯುವಕರಿಗೆ ಉದ್ಯೋಗ ನೀಡುವುದು ಮುಖ್ಯ. ರಾಜ್ಯಕ್ಕೆ ಬಂದಿರುವ ಭ್ರಷ್ಟಾಚಾರದ ಕಳಂಕ ತೆಗೆದುಹಾಕಬೇಕು ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಮಂಡ್ಯದಲ್ಲಿ ನಮ್ಮ ಪಕ್ಷ ಸೋತಿದ್ದರೂ ನಂತರ ನಡೆದ ಪದವಿಧರರ ವಿಧಾನ ಪರಿಷತ್ ಚುನಾವಣೆಯಲ್ಲಿ ಮಾದೇಗೌಡರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿಸಿದೆವು. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಸೇರಿ ಅತಿ ಹೆಚ್ಚು ಮತದಿಂದ 50 ವರ್ಷಗಳ ನಂತರ ಗೆಲ್ಲಿಸಿದ್ದೀರಿ. ಇದರ ಜತೆಗೆ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳ ಆಯ್ಕೆ ಮಾಡುವ ವಿಧಾನಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ದಿನೇಶ್ ಗೂಳಿಗೌಡ ಅವರನ್ನು ಗೆಲ್ಲಿಸಿದ್ದೀರಿ. ಇದಕ್ಕಾಗಿ ನಿಮಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ.

ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು, ಪದವಿಧರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಅವರೆಲ್ಲರೂ ದಡ್ಡರೇ? ಮಧು ಬಂಗಾರಪ್ಪ, ವೈಎಸ್ ವಿ ದತ್ತಾ, ಕೋಲಾರ ಶ್ರೀನಿವಾಸ ಗೌಡರು, ಗುಬ್ಬಿ ಶ್ರೀನಿವಾಸ್, ಕಾಂತರಾಜ್, ಮನೋಹರ್ ಸೇರಿದಂತೆ 20 ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಹೆಚ್. ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂದು ಮಾತು ನೀಡಿದ್ದಾರೆ. ಇವರೆಲ್ಲಾ ದಡ್ಡರೇ? ಎಂದು ನೀವು ಆಲೋಚಿಸಬೇಕು. ಜೆಡಿಎಸ್ ನಿಮ್ಮ ಮನೆಯ ಆಲದಮರವಲ್ಲ. ಚೆಲುವರಾಯ ಸ್ವಾಮಿ, ಬಂಡಿಸಿದ್ದೇಗೌಡರು, ಇವರಿಗೆಲ್ಲ ರಾಜಕೀಯ ಪ್ರಜ್ಞೆ ಇಲ್ಲವೇ? ಜೆಡಿಎಸ್ ನಿಂದ ರಾಜ್ಯಕ್ಕೆ ಭವಿಷ್ಯವಿಲ್ಲ ಎಂದು ತೀರ್ಮಾನಿಸಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಕೈ ಹಿಡಿದು ನಡೆಯೋಣ,
ಕೈ ಹಿಡಿದು ಬೆಳೆಯೋಣ,
ಕೈ ಜತೆ ಕೈ ಜೋಡಿಸೋಣ,
ಹೊಸ ನಾಡು ಕಟ್ಟೋಣ,
ಹಸ್ತ ಎಂದರೆ ಸಮಸ್ತ ಭಾರತ. ಹೀಗಾಗಿ ನೀವು ನಮ್ಮ ಕೈ ಹಿಡಿದು ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕು ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.

*ಬಿಜೆಪಿಯಿಂದ ವಿಭಿನ್ನ ಚುನಾವಣಾ ತಂತ್ರ: ಜನಪರ ಬಜೆಟ್ ನಿರೀಕ್ಷಿಸಿ ಎಂದ ಸಿಎಂ ಬೊಮ್ಮಾಯಿ*

https://pragati.taskdun.com/karnataka-budgetcm-basavaraj-bommaimysorereaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button