ಮುರಳಿ ಆರ್.
ಜನೇವರಿ 11 ರಂದು ನಡೆದ ಕೇಂದ್ರ ಸಂಪುಟ ಸಚಿವಾಲಯ ಸಭೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸಹಕಾರಿ ಸಂಘಗಳಿಗೆ ಆಶ್ರಯ ಸಂಸ್ಥೆಯಾಗಿ ಮೂರು ಬಹು ರಾಜ್ಯ ಸಹಕಾರಿ ಸಂಘಗಳ ಸ್ಥಾಪನೆಗೆ ಅನುಮೋದನೆ ನೀಡಿತು. 2002 ರ ಬಹುರಾಜ್ಯ ಸಹಕಾರ ಸಂಘಗಳ ಕಾಯಿದೆ ಅಡಿಯಲ್ಲಿ ಬಹುರಾಜ್ಯ ಸಹಕಾರ ರಫ್ತು ಸೊಸೈಟಿ, ಬಹುರಾಜ್ಯ ಸಹಕಾರ ಸಾವಯವ ಸಂಘ ಮತ್ತು ಬಹುರಾಜ್ಯ ಸಹಕಾರಿ ಬೀಜ ಸೊಸೈಟಿ ಅಸ್ತಿತ್ವಕ್ಕೆ ಬರಲಿವೆ. ಸಹಕಾರ ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ನಿರ್ಧಾರವೆಂದು ಹೇಳಬಹುದು. ಈ ಸಂದರ್ಭದಲ್ಲಿ ಸರಣಿ ಟ್ವೀಟ್ ಗಳ ಮೂಲಕ ಮೋದಿ ಸರ್ಕಾರದ ಈ ನಿರ್ಧಾರವನ್ನು ಹೊಗಳಿದ ಸಹಕಾರ ಸಚಿವ ಅಮಿತ್ ಶಾ ಭಾರತದ ರೈತರಿಗೆ ಇದು ಸುವರ್ಣ ಅವಕಾಶಗಳ ಬಾಗಿಲು ತೆರೆಯಲಿದೆ ಎಂದಿದ್ದಾರೆ.
ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳಿಂದ ಅಪೆಕ್ಸ್ ವರೆಗೆ:
ಪ್ರಾಥಮಿಕ ಸಂಘಗಳು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಒಕ್ಕೂಟಗಳು ಮತ್ತು ಬಹುರಾಜ್ಯ ಸಹಕಾರ ಸಂಘಗಳು ಸೇರಿದಂತೆ ಪ್ರಾಥಮಿಕ ಸೊಸೈಟಿಗಳಿಂದ ಹಿಡಿದು ರಾಷ್ಟ್ರ ಮಟ್ಟದ ಸಹಕಾರ ಸಂಘಗಳು ಇದರ ಸದಸ್ಯರಾಗಬಹುದು. ಈ ಎಲ್ಲಾ ಸಹಕಾರಿಗಳು ಸೊಸೈಟಿ ಉಪನಿಯಮಗಳ (ಬೈ ಕಾನೂನು) ಪ್ರಕಾರ, ಸೊಸೈಟಿ ಆಡಳಿತ ಮಂಡಳಿಯಲ್ಲಿ ತಮ್ಮ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತಾರೆ.
ಅಮಿತ ಶಾ ನೇತೃತ್ವದಲ್ಲಿ ನವಚೈತನ್ಯ ಪಡೆದ ಸಹಕಾರಿ ಆಂದೋಲನ
ಭಾರತದ ಆರ್ಥಿಕತೆಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಸಾಕಷ್ಟಿದೆ. ಸುಮಾರು ನೂರು ವರ್ಷಗಳ ಹಿಂದೆ ಆರಂಭವಾದ ಸಹಕಾರಿ ಸಂಘಗಳು, ಸಾಮೂಹಿಕ ಆದಾಯದ ಕನಸನ್ನು ಭಾರತದಲ್ಲಿ ಬಿತ್ತಿದವು. ಭಾರತ ಹಳ್ಳಿಗಳ ದೇಶ, ದೇಶದ 55% ಪ್ರತಿಶತ ಜನರು ತಮ್ಮ ಜೀವನೋಪಾಯವಾಗಿ ಕೃಷಿಯನ್ನು ಆಧರಿಸಿದ್ದಾರೆ. ಅಸಂಘಟಿತ ಈ ವಲಯದಲ್ಲಿ ಒಂದು ಶಿಸ್ತುಬದ್ಧ ಆದಾಯಕ್ಕೆ ಮುನ್ನಡಿ ಬರೆದಿದ್ದು ಸಹಕಾರಿ ಸಂಘಗಳು. ದೇಶದ ಮೊದಲ ಸಹಕಾರಿ ಸಂಘ 1905 ರಲ್ಲಿ ಗದಗದ ಕಣಗಿಣಹಾಳದಲ್ಲಿ ಆರಂಭವಾಗಿದ್ದು ಕನ್ನಡಿಗರು ಹೆಮ್ಮ ಪಡುವ ವಿಷಯ.
ಈ ಮೊದಲು ಸಹಕಾರಿ ವಿಷಯಗಳ ಆಡಳಿತ ಮತ್ತು ಕಾರ್ಯವ್ಯಾಪ್ತಿ, ಕೃಷಿ ಇಲಾಖೆ ಅಡಿಯಲ್ಲಿ ಬರುತ್ತಿತ್ತು. ಹಲವಾರು ವರ್ಷಗಳಿಂದ ಸಹಕಾರಿ ಸಂಘಗಳನ್ನು ಕೃಷಿ ಇಲಾಖೆಯಿಂದ ಬೇರ್ಪಡಿಸಿ, ಒಂದು ಅದರದ್ದೇ ಆದ ಹೊಸ ಸಚಿವಾಲಯವನ್ನು ಸ್ಥಾಪಿಸಬೇಕೆಂಬ ಬೇಡಿಕೆಯಿತ್ತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ಹಲವು ವರ್ಷಗಳ ಕನಸಿಗೆ ಮೂರ್ತರೂಪ ನೀಡಿತು. 2021 ರ ಜುಲೈನಲ್ಲಿ ಕೇಂದ್ರ ಸಹಕಾರಿ ಸಚಿವಾಲಯ ಆರಂಭವಾಯಿತು. ನೂತನ ಸಚಿವಾಲಯದ ಚುಕ್ಕಾಣಿ ಹಿಡಿದ ರಾಜಕೀಯ ಚಾಣಕ್ಯ ಅಮಿತ್ ಶಾ ‘ಸಹಕಾರದಿಂದ ಸಮೃದ್ಧಿಯೆಂಬ’ ಘೋಷ ವಾಕ್ಯ ಹೊರಡಿಸಿದರು. ಸಹಕಾರ ಸಂಘಗಳನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಮತ್ತು ಅವುಗಳ ವಾಣಿಜ್ಯ ವ್ಯವಹಾರ ವ್ಯಾಪ್ತಿಗಳನ್ನು ವಿಸ್ತರಿಸಲು ಅಮಿತ್ ಶಾ ಹಲವು ನಿರ್ಧಾರಗಳನ್ನು ತೆಗೆದುಕೊಂಡರು.
ಪ್ರಸ್ತಾವಿತ ಮೂರು ಬಹುರಾಜ್ಯ ಸಂಸ್ಥೆಗಳು
ಪ್ರಸ್ತುತವಾಗಿ ಭಾರತದಲ್ಲಿ 8.54 ಲಕ್ಷ ಸಹಕಾರಿ ಸಂಘಗಳು ನೋಂದಾವಣೆಯಾಗಿದ್ದು, 29 ಕೋಟಿ ಸದಸ್ಯರಿದ್ದಾರೆ. ಇವುಗಳಲ್ಲಿ ಹೆಚ್ಚಿನವರು ಗ್ರಾಮೀಣ ಭಾಗದ ಉಪೇಕ್ಷಿತ ವರ್ಗದವರು ಮತ್ತು ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಅರ್ಥಿಕ ವ್ಯವಸ್ಥೆಯಲ್ಲಿನ ಎಲ್ಲಾ ಉತ್ಪಾದನಾ ಘಟಕಗಳಲ್ಲಿ ಇವರ ಉಪಸ್ಥಿತಿಯಿಂದ, ಸಹಕಾರಿ ಸಂಘಗಳು ದೇಶದ ಗ್ರಾಮೀಣ ಭಾಗದ ಆರ್ಥಿಕ ವ್ಯವಸ್ಥೆಯನ್ನು, ವಿಶೇಷವಾಗಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಆಮೂಲಾಗ್ರವಾದ ಬದಲಾವಣೆ ತರಲಿವೆ. ವ್ಯಾಪಕವಾದ ಜಾಲ ಮತ್ತು ಆರ್ಥಿಕತೆಗೆ ಅತ್ಯಮೂಲ್ಯ ಕೊಡುಗೆ ನೀಡುತ್ತಿದ್ದರೂ, ಕೇವಲ ಬೆರಳೆಣಿಕೆಯಷ್ಟು ಸಹಕಾರಿ ಸಂಘಗಳು ಮಾತ್ರ ತಮ್ಮ ಉತ್ಪಾದನೆಗಳನ್ನು ವಿದೇಶಕ್ಕೆ ರಫ್ತು ಮಾಡುತ್ತಿವೆ. ರಫ್ತು ಹೆಚ್ಚಾಗಲು, ಉತ್ತಮ ಹಣಕಾಸು ನಿರ್ವಹಣೆ, ರಫ್ತು ಮನೋಭಾವ, ಅವಶ್ಯಕ ಸೌಲಭ್ಯಗಳು, ಮಾರುಕಟ್ಟೆ ಜ್ಞಾನ, ಅಂತರಾಷ್ಟ್ರೀಯ ಮಾನದಂಡಗಳು ಅತ್ಯವಶ್ಯಕ. ಈಗ ಸ್ಥಾಪಿಸಲು ಹೊರಟಿರುವ ಬಹುರಾಜ್ಯ ರಫ್ತು ಸಂಘ ಈ ನಿಟ್ಟಿನಲ್ಲಿ ಬಂಡವಾಳ, ಸರಕು ಸಾಗಾಣಿಕೆ, ತಾಂತ್ರಿಕ ತರಬೇತಿ ಮೂಲಕ ಸಹಾಯ ಮಾಡಲಿದೆ. ಸಹಕಾರಿ ಸಂಘಗಳ ರಫ್ತುಗಳಿಗೆ ಪುನಶ್ಚೇತನ ನೀಡುವುದರೊಂದಿಗೆ ಇದೊಂದು ದೇಶದ ರಫ್ತುಗಳಿಗೆ ಮಾತೃ ಸಂಸ್ಥೆಯಂತೆ ಕಾರ್ಯ ನಿರ್ವಹಿಸಲಿದೆ.
ಮೋದಿ ಸಂಪುಟದ ಇನ್ನೊಂದು ಮಹತ್ವದ ನಿರ್ಧಾರ ರಾಷ್ಟ್ರ ಮಟ್ಟದಲ್ಲಿ ಬಹುರಾಜ್ಯಗಳ ಸಹಕಾರಿ ಬೀಜ ಮಂಡಳಿಯನ್ನು ಆರಂಭಿಸುವುದು. ಈ ಸಂಸ್ಥೆ, ಬೀಜಗಳ ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ, ಬ್ರ್ಯಾಂಡಿಂಗ್, ಪ್ರಮಾಣೀಕರಣ, ಪ್ಯಾಕೇಜಿಂಗ್, ಸಂಗ್ರಹಣೆ ಮತ್ತು ಉತ್ತಮ ಗುಣಮಟ್ಟದ ಬೀಜಗಳ ವಿತರಣೆ ಮಾಡಲಿದೆ. ಹಾಗೇ ಭಾರತೀಯ ತಳಿಯ ಉತ್ತಮ ಬೀಜಗಳ ಸಂರಕ್ಷಣೆ, ಸಂಶೋಧನೆ ಮತ್ತು ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಕೃಷಿ ಮತ್ತು ರೈತಾಭಿವೃದ್ಧಿ ಇಲಾಖೆ, ಭಾರತೀಯ ಕೃಷಿ ಸಂಶೋಧನಾ ನಿಗಮ (ICAR) ಮತ್ತು ರಾಷ್ಟ್ರೀಯ ಬೀಜ ನಿಗಮ (NSC) ಗಳು, ಹಲವು ಯೋಜನೆಗಳು ಮತ್ತು ಏಜೆನ್ಸಿಗಳ ಮೂಲಕ ಈ ಮಂಡಳಿಗೆ ಸಹಾಯ ಮಾಡಲಿವೆ.
ಭಾರತ ದೇಶದಲ್ಲಿ 54.6 % ಪ್ರತಿಶತ ಜನಸಂಖ್ಯೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಕಾರ್ಯ ನಿರ್ವವಹಿಸುತ್ತಿದ್ದಾರೆ. ಜಾಗತಿಕ ಭೂಗೋಳದಲ್ಲಿ ಕೇವಲ 2.3% ಪ್ರತಿಶತ ಭೂ ವಿಸ್ತೀರ್ಣ ಹೊಂದಿರುವ ಭಾರತ ಜಗತ್ತಿನ 17.7 % ಜನಸಂಖ್ಯೆಗೆ ಆಹಾರದ ಸುರಕ್ಷತೆ ನೀಡಬೇಕಾದ ಅನಿವಾರ್ಯತೆಯಿದೆ. ಕೃಷಿ ಭೂಮಿಯನ್ನಂತು ಹೆಚ್ಚಿಗೆ ಮಾಡಲಿಕ್ಕೆ ಬರದ ಕಾರಣ, ಪ್ರತಿ ಯೂನಿಟ್ ಕೃಷಿ ಭೂಮಿಯಲ್ಲಿ ಹೆಚ್ಚು ಬೆಳೆ ಬೆಳೆಯುವ ಕಡೆ ಗಮನ ಹರಿಸಬೇಕು. ಉತ್ತಮ ಇಳುವರಿಗೆ ನೀರು, ರಸಗೊಬ್ಬರ ಮುಂತಾದವುಗಳು ಅವಶ್ಯಕವಾದರೂ, ಬಹುಮುಖ್ಯವಾಗಿ ಬೇಕಾಗಿದ್ದು ಉತ್ತಮ ಗುಣಮಟ್ಟದ ಬೀಜ. ನಾವು ಎಷ್ಟೇ ಉತ್ತಮವಾಗಿ ಉಳಿದ ಕೃಷಿ ಕಾರ್ಯಗಳನ್ನು ಮಾಡಿದರೂ, ಬೀಜ ಕಳಪೆಯಾಗಿದ್ದರೆ, ಎಲ್ಲಾ ಶ್ರಮ ವ್ಯರ್ಥ. ಬಹು ಹಿಂದಿನ ಕಾಲದಿಂದಲೂ ನಮ್ಮ ರೈತಾಪಿ ವರ್ಗ ತಾವೇ ಸರಂಕ್ಷಿಸಿದ ಬೀಜಗಳನ್ನು ಬಿತ್ತನೆಗೆ ಬಳಸುತ್ತಿರುವುದರಿಂದ ಕಾಲ ಕಳೆದಂತೆ ಇಳುವರಿ ಕಡಿಮೆಯಾಗುತ್ತಿದೆ.
ಆಹಾರ ಪದಾರ್ಥಗಳಲ್ಲಿನ ರಾಸಾಯನಿಕ ಅಂಶಗಳಿಂದಾಗುತ್ತಿರುವ ಪರಿಣಾಮಗಳ ಬಗ್ಗೆ ಜನರಲ್ಲಿ ಕಳಕಳಿ ಹೆಚ್ಚುತ್ತಿರುವುದರಿಂದ, ನೈಸರ್ಗಿಕ ಆಹಾರ ಪದಾರ್ಥಗಳ ಕಡೆಗೆ ಜನರ ಒಲವು ಹೆಚ್ಚುತ್ತಿದೆ. ನಿಸರ್ಗ ಸ್ನೇಹಿ ವಾತಾವರಣದಲ್ಲಿ ಬೆಳೆ ಬೆಳೆಯುವ ಸಾವಯವ ಕೃಷಿ ಪದ್ಧತಿ ಇದಕ್ಕೊಂದು ಉತ್ತಮ ಪರಿಹಾರ. ಆರೋಗ್ಯ ಮತ್ತು ನಿಸರ್ಗದ ಬಗ್ಗೆ ಹೆಚ್ಚುತ್ತಿರುವ ಜನಜಾಗೃತಿ ಸಾವಯುವ ಪದಾರ್ಥಗಳ ಮಾರುಕಟ್ಟೆಯನ್ನು ಜಾಗತಿಕವಾಗಿ ಹೆಚ್ಚುವಂತೆ ಮಾಡುತ್ತಿದೆ.
2020ರ ಪ್ರಕಾರ ಜಾಗತಿಕವಾಗಿ ಸಾವಯವ ಆಹಾರ ಮಾರುಕಟ್ಟೆ 10 ಲಕ್ಷ ಕೋಟಿ ಮೌಲ್ಯವನ್ನು ಹೊಂದಿದ್ದರೆ, ಇದರಲ್ಲಿ ಭಾರತದ ಪಾಲು ಸುಮಾರು 27,000 ಕೋಟಿಯಿದೆ. ಜಾಗತಿಕವಾಗಿ ಸುಮಾರು 190 ದೇಶಗಳಲ್ಲಿ 34 ಲಕ್ಷ ಸಾವಯವ ಕೃಷಿಕರು, ಸುಮಾರು 749 ಲಕ್ಷ ಹೇಕ್ಟೇರ್ ಭೂಮಿಯಲ್ಲಿ ಬೆಳೆ ಬೆಳೆಯುತ್ತಿದ್ದಾರೆ (ಇದು ಜಗತ್ತಿನ ಕೃಷಿ ಭೂಮಿಯ 1.6% ಪ್ರತಿಶತ). ಸಾವಯವ ಕೃಷಿ ಭೂಮಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಹಾಗೇ 34 ಲಕ್ಷ ಸಾವಯವ ಕೃಷಿಕರಲ್ಲಿ 16 ಲಕ್ಷ ಜನ ಭಾರತದವರು. ಅತಿ ಹೆಚ್ಚು ಸಾವಯವ ಕೃಷಿಕರು ಭಾರತದಲ್ಲಿದ್ದರೂ, ಅಂತರಾಷ್ಟ್ರೀಯ ಸಾವಯವ ಮಾರುಕಟ್ಟೆಗೆ ನಮ್ಮ ಕೊಡುಗೆ ತುಂಬಾ ಕಡಿಮೆ.
ಕೋವಿಡ್ ನಂತರದ ವಿಶ್ವದಲ್ಲಿ ಜೈವಿಕ ಪದಾರ್ಥಗಳ ಬೇಡಿಕೆ ಹೆಚ್ಚಿರುವುದರಿಂದ, ಭಾರತದ ಸಾವಯವ ಮಾರುಕಟ್ಟೆಯ ಬೆಳವಣಿಗೆ ತೀವ್ರಗತಿಯಲ್ಲಿ ಸಾಗಲಿದೆ. ಈಶಾನ್ಯ ರಾಜ್ಯಗಳಂತೂ ಸಾವಯವ ಕೃಷಿಯಲ್ಲಿ ಮುಂಚೂಣಿಯಲ್ಲಿವೆ. 2016 ರಲ್ಲಿ ಸಿಕ್ಕಿಂ ಸಂಪೂರ್ಣ ಸಾವಯವ ಕೃಷಿ ರಾಜ್ಯವಾಗಿ ಘೋಷಣೆಯಾಯಿತು. ಈ ನಿಟ್ಟಿನಲ್ಲಿ ಈ ಸಂಸ್ಥೆಯ ಸ್ಥಾಪನೆ ಅವಶ್ಯವಾಗಿದೆ. ಈ ಮೂರು ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಸಂಬಂಧಿತ ಸಚಿವಾಲಯಗಳು ಸಹಾಯ ಮಾಡಲಿವೆ. ಅಮೂಲ್ ಸೇರಿದಂತೆ ಮುಂತಾದ ಏಜೆನ್ಸಿಗಳ ಮಾರುಕಟ್ಟೆ ಜಾಲ ಬಳಸಿಕೊಂಡು, ಈ ಎಲ್ಲಾ ಉತ್ಪನ್ನಗಳ ಪೂರೈಕೆ ಮಾಡಲಾಗುವುದು.
ಹೊಸ ಸಹಕಾರ ನೀತಿ
2002 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಸಂದರ್ಭದಲ್ಲಿ ಸಹಕಾರ ನೀತಿ ರಚನೆಯಾಗಿತ್ತು. ಪ್ರಸ್ತುತ ಸಹಕಾರಿ ಸಚಿವ ಅಮಿತ್ ಶಾ ಕಳೆದ ವಾರ ಸುರೇಶ್ ಪ್ರಭು ನೇತೃತ್ವದ ಸಹಕಾರ ನೀತಿ ರಚನಾ ಸಮಿತಿಯ ಜೊತೆ ಸಂವಾದ ನೆಡೆಸಿದ್ದು, ಆರ್ಥಿಕತೆ ಬೆಂಬಲಿತ ಸಹಕಾರ ನೀತಿಯನ್ನು ರಚಿಸುವುದಾಗಿ ಹೇಳಿದ್ದಾರೆ. ದೇಶದಲ್ಲಿ ಸುಮಾರು ಎಂಟುವರೆ ಲಕ್ಷ ಸಹಕಾರಿ ಸಂಘಗಳಿದ್ದು, ಅಂದಾಜು ಮೂವತ್ತು ಕೋಟಿ ಸದಸ್ಯತ್ವ ಹೊಂದಿರುವ ಈ ಸಂಘಗಳಿಗೆ ಒಂದು ಡೇಟಾಬೇಸ್ ನ ಅವಶ್ಯಕತೆಯಿದೆ ಎಂದರು.
ಗಾಂಧೀಜಿಯವರು ಹೇಳಿದ್ದರು, ಹಳ್ಳಿಗಳು ಭಾರತದ ಆತ್ಮವೆಂದು. ಹಾಗೇ ಗಾಂಧಿಯವರ ಗ್ರಾಮ್ ಸ್ವರಾಜ್ ದ ಕನಸು ನನಸಾಗಬೇಕಾದರೆ, ಗ್ರಾಮಗಳ ತಲಾ ಆದಾಯ ಹೆಚ್ಚಿಸುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಸಹಕಾರಿ ಸಚಿವ ಅಮಿತ್ ಶಾ ತೆಗೆದುಕೊಂಡ ಸಹಕಾರಿ ಕ್ಷೇತ್ರದ ಈ ನಿರ್ಧಾರಗಳು ಶ್ಲಾಘನೀಯ ಎಂದು ಹೇಳಬಹುದು. ಗ್ರಾಮಗಳ ಕುರಿತು, ಎನ್ ಆರ್ ಇ ಜಿ ಎ ಯೋಜನೆ ನಂತರ ಮತ್ತೊಂದು ಅರ್ಥಪೂರ್ಣ ಯೋಜನೆ ಮೂಡಿ ಬರುತ್ತಿದೆ ಎಂದರೆ ತಪ್ಪೇನಿಲ್ಲ.
https://pragati.taskdun.com/amit-shahs-arrival-on-saturday-4-assembly-constituencies-target-more-than-75-thousand-people-are-expected/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ