LatestUncategorized

*ಚಿಕ್ಕಪ್ಪ HDKಗೆ ನೇರಾ ನೇರ ಸವಾಲು ಹಾಕಿದ MLC ಸೂರಜ್ ರೇವಣ್ಣ*

ಪ್ರಗತಿವಾಹಿನಿ ಸುದ್ದಿ; ಹಾಸನ: ಹಾಸನ ಜೆಡಿಎಸ್ ಟಿಕೆಟ್ ಗಾಗಿ ದಳಪತಿಗಳ ಕುಟುಂಬದಲ್ಲಿಯೇ ಬಡಿದಾಟ ತಾರಕಕ್ಕೇರಿದ್ದು, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಟಿಕೆಟ್ ಗಾಗಿ ಪಟ್ಟು ಹಿಡಿಯುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ರೇವಣ್ಣ ಕುಟುಂಬ ಕುಮಾರಸ್ವಾಮಿ ವಿರುದ್ಧ ಗರಂ ಆದಂತಿದೆ. ಹಾಸನದಲ್ಲಿ ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಗೆಲುವು ಖಚಿತ ಎಂಬುದು ಬರೆದಿಟ್ಟುಕೊಳ್ಳಿ ಎಂದು ಹೇಳುವ ಮೂಲಕ ಎಂಎಲ್ ಸಿ ಸೂರಜ್ ರೇವಣ್ಣ ಚಿಕ್ಕಪ್ಪನಿಗೆ ನೇರಾ ನೇರ ಸವಾಲು ಹಾಕಿದ್ದಾರೆ.

ಅರಕಲಗೂಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೂರಜ್ ರೇವಣ್ಣ, ಹಾಸನದಲ್ಲಿ ಭಾವಾನಿ ರೇವಣ್ಣ ನಿಂತರೆ ಗೆಲುವು ಖಚಿತ ಬರೆದಿಟ್ಟುಕೊಳ್ಳಿ. ಕಾರ್ಯಕರ್ತರಿಗೆ ಟಿಕೆಟ್ ಕೊಡ್ತೀವಿ, ಸಾಮಾನ್ಯರನ್ನು ನಿಲ್ಲಿಸ್ತೀವಿ ಎನ್ನುವುದು ಇದೆಲ್ಲವನ್ನು ಬಿಟ್ಟು ಬಿಡಬೇಕು. ಭವಾನಿ ರೇವಣ್ಣ ನಿಂತರೆ ಗೆಲ್ಲುವುದು ನಿಶ್ಚಿತ ಎಂದರು.

15 ವರ್ಷಗಳಿಂದ ರೇವಣ್ಣ ಹಾಸನ ಜಿಲ್ಲೆ ನಿಭಾಯಿಸ್ತಿದ್ದಾರೆ. 6-7 ಶಾಸಕರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ರೇವಣ್ಣ ಬಿಟ್ರೆ ಇನ್ಯಾರಿಗೂ ನಿರ್ಧರಿಸುವ ಅವಕಾಶವಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಹಿರಿಯ ರಾಜಕಾರಣಿ ಅವರ ಅಭಿಪ್ರಾಯ ಹೇಳಿದ್ದಾರಷ್ಟೇ. ಜೆಡಿಎಸ್ ನಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ದೇವೇಗೌಡರೇ ಫೈನಲ್. ಈಗಲೂ ಅವರೇ ನಿರ್ಧಾರ ಮಾಡ್ತಾರೆ ಎಂದು ಹೇಳಿದರು.

ಹಿಂದಿನಿಂದಲೂ ನಮ್ಮ ತಾತ ಅವ್ರೇ ಅಭ್ಯರ್ಥಿ ಆಯ್ಕೆ ಮಾಡುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎಂಬುದನ್ನು ದೇವೇಗೌಡರು ನಿರ್ಧಾರ ಮಾಡ್ತಾರೆ. ನನ್ನನ್ನು ಎಂ ಎಲ್ ಸಿ ಚುನಾವಣೆಗೆ ಅಭ್ಯರ್ಥಿ ಮಾಡಿದ್ದು ದೇವೇಗೌಡ್ರು, ಹಾಸನ ಎಂಪಿ ಚುನಾವಣೆಯಲ್ಲಿ ಪ್ರಜ್ವಲ್ ಗೆ ಟಿಕೆಟ್ ಕೊಟ್ಟವರು ಅವರೇ. ಮುಂದೆಯೂ ಯಾರು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ದೇವೇಗೌಡರೇ ನಿರ್ಧಾರ ಮಾಡ್ತಾರೆ. ಹಾಸನಲ್ಲಿ ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಗೆಲುವು ನಿಶ್ಚಿತ ಇದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.

ಹಾಸನದಿಂದ ಜೆಡಿಎಸ್ ಟಿಕೆಟ್ ನನಗೆ ಕೊಡುವ ಸಾಧ್ಯತೆ ಇದೆ ಎಂದು ಎರಡು ದಿನಗಳ ಹಿಂದೆ ಭವಾನಿ ರೇವಣ್ಣ ಬಹಿರಂಗ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಸನದಲ್ಲಿ ಬೇರೆಸಮರ್ಥ ಅಭ್ಯರ್ಥಿಗಳಿದ್ದಾರೆ ಎಂದು ಹೇಳುವ ಮೂಲಕ ಭವಾನಿ ರೇವಣ್ಣಗೆ ಟಿಕೆಟ್ ನಿರಾಕರಿಸಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ರೇವಣ್ಣ ಕುಟುಂಬ ಟೆಂಪಲ್ ರನ್ ಆರಂಭಿಸಿದೆ. ಅಲ್ಲದೇ ಭವಾನಿ ರೇವಣ್ಣಗೆ ಹಾಸನ ಟಿಕೆಟ್ ನೀಡಬೇಕು ಎಂಬ ನಿಟ್ಟಿನಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

*ಕುಮಾರಣ್ಣ ಪಕ್ಷ ವಿಸರ್ಜನೆ ಮಾಡುತ್ತಿದ್ದಾರೆ; ಎಲ್ಲರೂ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಕರೆ ಕೊಟ್ಟ ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarjdsbjp-govt/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button