ಪ್ರಗತಿವಾಹಿನಿ ಸುದ್ದಿ, ರಾಯಚೂರು:
ಗ್ರಾಮವಾಸ್ತವ್ಯಕ್ಕೆಂದು ಆಗಮಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಭಟನಾಕಾರರ ಮೇಲೆ ಹರಿಹಾಯ್ದರು.
ವೈಟಿಪಿಎಸ್ ಉದ್ಯೋಗಿಗಳು ಮುಖ್ಯಮಂತ್ರಿ ಸಾಗುತ್ತಿದ್ದ ಬಸ್ ತಡೆದು ಪ್ರತಿಭಟಿಸುತ್ತಿದ್ದರು. ಈ ವೇಳೆ ಕೆಂಡಾಮಂಡಲರಾದ ಸಿಎಂ, ನಿಮಗೆ ಓಟು ಹಾಕಲು ಮೋದಿ ಬೇಕು, ಸಮಸ್ಯೆ ಪರಿಹರಿಸಲು ನಾನು ಬೇಕಾ ಎಂದು ಪ್ರಶ್ನಿಸಿದರು.
ನಿಮ್ಮ ಮೇಲೆ ಲಾಠಿಚಾರ್ಜ್ ಮಾಡಿಸ್ಬೇಕಾ ಎಂದೂ ಕಿಡಿಕಾರಿದರು.
ಸಿಎಂ ವರ್ತನೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ರಾಗ, ದ್ವೇಷಗಳಿಲ್ಲದೆ ಆಡಳಿತ ನಡೆಸುವುದಾಗಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಈಗ ಮೋದಿಗೆ ಮತ ಹಾಕಿದ್ದೀರಿ ಎಂದು ದ್ವೇಷದಿಂದ ಮಾತನಾಡಿದ್ದಾರೆ. ಅವರು ತಕ್ಷಣ ರಾಜ್ಯದ ಜನರ ಕ್ಷಮೆ ಯಾಚಿಸಬೇಕೆಂದಿದೆ.
ಆದರೆ ಕ್ಷಮೆ ಕೇಳಲು ನಿರಾಕರಿಸಿರುವ ಸಿಎಂ, ಮೋದಿ ಹೋಗುವಾಗ ಹೀಗೆ ರಸ್ತೆ ತಡೆದರೆ ಮುದ್ದು ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ನಾನು ಸ್ವಲ್ಪ ಹೊತ್ತಿನ ಮೊದಲು ಅವರ ಸಮಸ್ಯೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರೂ ಮತ್ತೆ ರಸ್ತೆ ತಡೆ ಮಾಡುವುದು ಯಾವ ನ್ಯಾಯ, ಇದು ರಾಜಕೀಯ ಪ್ರೇರಿತ ಪ್ರತಿಭಟನೆ ಎಂದೂ ಅವರು ದೂರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ