Latest

*ಶ್ರೀ ಕ್ಷೇತ್ರ ಮೈಲಾರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ 5 ಕೋಟಿ ರೂ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ವಿಜಯನಗರ (ಹೂವಿನಹಡಗಲಿ): ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾ ಮಠ ಶ್ರೀ ಕ್ಷೇತ್ರ ಮೈಲಾರದಲ್ಲಿ ಸಮುದಾಯ ಭವನವನ್ನು ನಿರ್ಮಾಣಕ್ಕೆ ಸರ್ಕಾರದ ವತಿಯಿಂದ 5 ಕೋಟಿ ರೂ.ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶ್ರೀಕ್ಷೇತ್ರ ಮೈಲಾರ ಇಲ್ಲಿ ಆಯೋಜಿಸಿರುವ ಶ್ರೀ ಏಳು ಕೋಟಿ ವಸತಿ ಶಾಲೆ ಹಾಗೂ ಶ್ರೀ ಗಂಗಮಾಳಮ್ಮದೇವಿ ಯಾತ್ರಿನಿವಾಸ ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ, ದಲಿತ ಮಠಗಳು, ಸಮುದಾಯದ ಮಠಗಳು ಸಾಮಾಜಿಕ , ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗಾಗಿ ನಮ್ಮ ಸರ್ಕಾರ ದೊಡ್ಡ ಪ್ರಮಾಣದ ಅನುದಾನವನ್ನು ನೀಡಿ ಸಹಕರಿಸುತ್ತಿದೆ. ಭೂಮಿಯಿಲ್ಲದ ಕುರಿಗಾಹಿಗಳು ಹಲವು ಸಂಕಷ್ಟಗಳನ್ನು ಅನುಭವಿಸುತ್ತಾರೆ. ಈ ಸಮುದಾಯಕ್ಕೆ ಸಹಾಯ ಹಸ್ತ ಚಾಚಲು ಸರ್ಕಾರ ಕುರಿಗಾಹಿಗಳ ಮನೆ ಕಂ ಶೆಡ್ ನಿರ್ಮಾಣದ ಕಾರ್ಯಕ್ರಮವನ್ನು ರೂಪಿಸಲಾಗಿದೆ. 354 ಕೋಟಿ ರೂ. ವೆಚ್ಚದಲ್ಲಿ 20 ಸಾವಿರ ಕುರಿಗಾಹಿ ಸಂಘಗಳ ಮೂಲಕ ಕುರಿಗಾಹಿಗಳಿಗೆ 20 ಕುರಿ ಮತ್ತು ಒಂದು ಮೇಕೆಯನ್ನು ನೀಡುವ ಯೋಜನೆಗೆ ಸಧ್ಯದಲ್ಲಿಯೇ ಚಾಲನೆ ನೀಡಲಾಗುವುದು. ಸ್ವಾವಲಂಬನೆಯಿಂದ ಮಾತ್ರ ಸ್ವಾಭಿಮಾನದ ಬದುಕು ನಡೆಸಲು ಸಾಧ್ಯ. ಕಮ್ಮಾರ, ಚಮ್ಮಾರ, ಕುಂಬಾರ, ಬಡಿಗರು ಸೇರಿದಂತೆ ವಿವಿಧ ಕುಲಕಸುಬುದಾರರ ಉದ್ಯೋಗವನ್ನು ಉನ್ನತೀಕರಿಸಲು ಕಾಯಕ ಯೋಜನೆಯನ್ನು ರೂಪಿಸಲಾಗಿದೆ. ದುಡಿಯುವ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಕಾಗಿನೆಲೆ ಹಾಗೂ ಬಾಡ ಕ್ಷೇತ್ರದ ಅಭಿವೃದ್ಧಿ :
ಭಕ್ತ ಕನಕದಾಸರ ಜನ್ಮ ಭೂಮಿಯಿಂದ ಬಂದಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಕಾಗಿನೆಲೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ 40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ಬಾಡ ಕ್ಷೇತ್ರದಲ್ಲಿ ಕನಕನ ಅರಮನೆ , ಕೋಟೆಯನ್ನು ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಾತಿ ಮತ ಬೇಧವಿಲ್ಲದೇ ಜನಸಮುದಾಯಕ್ಕೆ ಒಳಿತಾಗುವಂತಹ ಕಾರ್ಯಕ್ರಮಗಳು , ವಿಶೇಷವಾಗಿ ಮಠಗಳ ಮೂಲಕ ಸಮುದಾಯ ಅಭಿವೃದ್ಧಿಗೊಳಿಸುವ ಕಲ್ಪನೆಯನ್ನು ಸಾಧ್ಯವಾಗಿಸಿದ್ದಾರೆ. ಕನಕ ಜಯಂತಿ, ವಾಲ್ಮೀಕಿ ಜಯಂತಿಯನ್ನು ಘೋಷಣೆ ಮಾಡಿ ಸಂತರ ವಿಚಾರಧಾರೆಗಳನ್ನು ಪ್ರಚುರಪಡಿಸುವ ಕೆಲಸವನ್ನು ಮಾಡಿದ್ದಾರೆ ಎಂದರು.

Home add -Advt

ಕನಕಗುರುಪೀಠದಿಂದ ಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿಗೆ ಹೆಚ್ಚಿನ ಒತ್ತು :

ಸಣ್ಣ ಸಮುದಾಯಗಳು ಸರ್ಕಾರದ ಒಟ್ಟು ಕಾರ್ಯಕ್ರಮಗಳ ಲಾಭವನ್ನು ಪಡೆಯಲಾಗುತ್ತಿರಲಿಲ್ಲ. ಮಠಗಳು ಎಲ್ಲ ವರ್ಗದ ಜನರಿಗೆ ಸಹಾಯವನ್ನು ಮಾಡುತ್ತಿವೆ. ಅನ್ನ, ಆಶ್ರಯ , ಶಿಕ್ಷಣ ದಾಸೋಹವನ್ನು ಜಾತಿಬೇಧವಿಲ್ಲದೇ ನೀಡಲಾಗುತ್ತಿದೆ. ಮಠಗಳಿರದಿದ್ದರೆ ಕರ್ನಾಟಕದಲ್ಲಿನ ಹಲವು ಸಮುದಾಯಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದವು. ಕನಕಗುರುಪೀಠದ ಶ್ರೀಗುರುಗಳು, ಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ನಿಗದಿತ ಸಮಯದಲ್ಲಿ ಅನುದಾನವನ್ನು ನ್ಯಾಯಸಮ್ಮತವಾಗಿ ಬಳಕೆ ಮಾಡಿ 2 ಸಾವಿರ ಮಕ್ಕಳಿಗೆ ವಸತಿ ನಿಲಯವನ್ನು ಒಂದೂವರೆ ವರ್ಷದಲ್ಲಿ ನಿರ್ಮಿಸಿರುವ ಕಾಗಿನೆಲೆಯ ಗುರುಪೀಠದ ಪರಮಪೂಜ್ಯರು ಅಭಿನಂದನೆಗಳು. ಇದೊಂದು ದಾಖಲೆ. ಶ್ರೀ ಮೈಲಾರ ಮಠವನ್ನು ಐದು ತಿಂಗಳಲ್ಲಿ ಶ್ರೀಗುರುಗಳು ನಿರ್ಮಿಸಿದ್ದರು ಎಂದರು.

ಸಮುದಾಯದ ಹಿತರಕ್ಷಣೆಗೆ ಸರ್ಕಾರ ಬದ್ಧ :
ಶ್ರೀ ಕ್ಷೇತ್ರದ ಗುರುಗಳು ಸಮುದಾಯದ ಬೇಡಿಕೆ ಈಡೇರಿಕೆಗೆ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಕುಲಶಾಸ್ತ್ರ ಅಧ್ಯಯನ ಅಂತಿಮ ಹಂತದಲ್ಲಿದ್ದು, ವರದಿ ಬಂದ ನಂತರ, ಕಾನೂನು ಇಲಾಖೆಯೊಂದಿಗೆ ಚರ್ಚಿಸಿ , ಸಮುದಾಯಗಳಿಗೆ ನ್ಯಾಯ ಒದಗಿಸಲಾಗುವುದು. ವರದಿಯನ್ನು ಪರಿಶೀಲಿಸಿ ಶಿಫಾರಸ್ಸಿನೊಂದಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಬಗ್ಗೆ ಆದಷ್ಟು ಬೇಗನೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಅವಕಾಶಗಳು ದೊರೆಯಬೇಕು. ಶ್ರೀಗುರುಗಳು ಈ ಭಾಗದಲ್ಲಿ ವಸತಿ ನಿಲಯವನ್ನು ನಿರ್ಮಿಸಿ ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವನ್ನು ಕಲ್ಪಿಸಿದ್ದಾರೆ. ಶ್ರೀ ಮಠದಿಂದ ಸಮುದಾಯದ ಅಭಿವೃದ್ದಿಗೆ ಹೆಚ್ಚಿನ ಶಕ್ತಿ ಒದಗಿಸಿದೆ. ಸಮುದಾಯದ ಹಿತರಕ್ಷಣೆ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.

ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೈದರಾಬಾದ್ ವ್ಯಾಧಿ ನಿವಾರಣಾಶ್ರಮದ ಶ್ರೀ ಡಾ: ಸಾಯಿಕುಮಾರ್ ಬಾಬಾ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಸಚಿವ ಬಿ.ಎ. ಬಸವರಾಜ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮೊದಲಾದವರು ಉಪಸ್ಥಿತರಿದ್ದರು.

*ವಿದ್ಯಾರ್ಥಿ ನಾಯಕನಾಗಿದ್ದಾಗಿನ ದಿನಗಳನ್ನು ನೆನೆದ ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumardevanahalliprajadhwani-congress/

Related Articles

Back to top button