ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣೆ ನಡೆದು ಒಂದೂವರೆ ವರ್ಷದ ನಂತರ ಬೆಳಗಾವಿ ಮೇಯರ್, ಉಪಮೇಯರ್ ಹುದ್ದೆಗೆ ಚುನಾವಣೆ ನಡೆಯುತ್ತಿದೆ. ಸೋಮವಾರ ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿ ಮಧ್ಯಾಹ್ನದ ಹೊತ್ತಿಗೆ ಮತದಾನದ ಮೂಲಕ ಆಯ್ಕೆ ನಡೆಯಲಿದೆ.
2021ರ ಸೆಪ್ಟಂಬರ್ 3ರಂದು ಪಾಲಿಕೆಗೆ ಚುನಾವಣೆ ನಡೆದಿತ್ತು. ಬಿಜೆಪಿ 35 ಸ್ಥಾನಗಳನ್ನು ಕಾಂಗ್ರೆಸ್ 10 ಸ್ಥಾನಗಳನ್ನು ಹಾಗೂ ಪಕ್ಷೇತರರು 13 ಸ್ಥಾನಗಳನ್ನು ಗೆದ್ದಿದ್ದಾರೆ. ಆದರೆ ಈವರೆಗೂ ಸದಸ್ಯರ ಪ್ರತಿಜ್ಞೆ ಸ್ವೀಕರವಾಗಲಿ, ಮೇಯರ್, ಉಪಮೇಯರ್ ಆಯ್ಕೆಯಾಗಲಿ ನಡೆದಿರಲಿಲ್ಲ.
ಇದೇ ಮೊದಲಬಾರಿಗೆ ಪಕ್ಷದ ಆಧಾರದ ಮೇಲೆ ಚುನಾವಣೆ ನಡೆದಿರುವುದರಿಂದ ಮೇಯರ್, ಉಪಮೇಯರ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ಸಹಜವಾಗಿಯೆ ಮೂಡಿದೆ. ಮೇಯರ್ ಹುದ್ದೆ ಸಾಮಾನ್ಯ ಮಹಿಳೆಗೆ ಮತ್ತು ಉಪಮೇಯರ್ ಹುದ್ದೆ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ. ಬಹುಮತವಿರುವುದರಿಂದ ಬಿಜೆಪಿಯವರೇ ಮೇಯರ್, ಉಪಮೇಯರ್ ಆಗುವುದು ಖಚಿತ.
ಸೋಮವಾರ ಚುನಾವಣೆ ಇರುವುದರಿಂದ ಇದಕ್ಕೆ ಸಂಬಂಧಿಸಿದಂತೆ ಭಾನುವಾರ ಸಂಜೆ ಬಿಜೆಪಿ ಪ್ರಮುಖರ ಸಭೆ ನಡೆಯಲಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರೊಂದಿಗೆ ಚರ್ಚಿಸಲಿದ್ದಾರೆ. ಆದರೆ ಮೇಯರ್, ಉಪಮೇಯರ್ ಯಾರಾಗಲಿದ್ದಾರೆ ಎನ್ನುವುದು ಸೋಮವಾರವೇ ಬಹಿರಂಗವಾಗಲಿದೆ.
ಕಿಂಗ್ ಮೇಕರ್ ಅಭಯ ಪಾಟೀಲ
ಬೆಳಗಾವಿ ಪಾಲಿಕೆಗೆ ಇದೇ ಮೊದಲ ಬಾರಿಗೆ ಪಕ್ಷದ ಆಧಾರದ ಮೇಲೆ ಚುನಾವಣೆ ನಡೆದಿದೆ. ಈವರೆಗೂ ಕನ್ನಡ- ಮರಾಠಿ ಭಾಷೆಯ ಆಧಾರದ ಮೇಲೆ ಚುನಾವಣೆ ನಡೆಯುತ್ತಿತ್ತು. ಬಹುತೇಕ ಬಾರಿ ಮರಾಠಿ ಭಾಷಿಕರು, ಅದರಲ್ಲೂ ಮಹಾರಾಷ್ಟ್ರ ಏಕೀಕರಣ ಸಮಿತಿಯವರೇ ಅಧಿಕಾರದ ಗದ್ದುಗೆಗೆ ಏರಿದ್ದಾರೆ.
ಈ ಬಾರಿ ಶಾಸಕ ಅಭಯ ಪಾಟೀಲ ಚುನಾವಣೆ ತಂತ್ರಗಾರಿಕೆ ಹೆಣೆದು ಒಟ್ಟೂ 58 ಸ್ಥಾನಗಳಲ್ಲಿ 35 ಸ್ಥಾನಗಳಲ್ಲಿ ಬಿಜೆಪಿ ಆಯ್ಕೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ದಕ್ಷಿಣದ 25ರಲ್ಲಿ 22 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಉತ್ತರದ 33 ಸ್ಥಾನಗಳಲ್ಲಿ ಕೇವಲ 13 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಹಾಗಾಗಿ ಮೇಯರ್, ಉಮೇಪಮೇಯರ್ ಚುನಾವಣೆಯಲ್ಲಿ ಕೂಡ ಶಾಸಕ ಅಭಯ ಪಾಟೀಲ ಅವರೇ ಕಿಂಗ್ ಮೇಕರ್ ಎನ್ನುವುದು ಜಗಜ್ಜಾಹಿರಾಗಿರುವ ವಿಷಯ.
ಈ ಹಿನ್ನೆಲೆಯಲ್ಲಿ ಪ್ರಗತಿವಾಹಿನಿ ಪ್ರಶ್ನೆಗೆ ಶಾಸಕ ಅಭಯ ಪಾಟೀಲ ಅತ್ಯಂತ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.
ಪ್ರಗತಿವಾಹಿನಿ ಪ್ರಶ್ನೆ: ಬೆಳಗಾವಿ ಮೇಯರ್ ಯಾರಾಗಲಿದ್ದಾರೆ? ಒಂದೇ ಮಾತಿನಲ್ಲಿ ಉತ್ತರಿಸಿ.
ಅಭಯ ಪಾಟೀಲ ಉತ್ತರ: ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ!
ಮೇಯರ್, ಉಪಮೇಯರ್ ಆಯ್ಕೆ ಸಂಬಂಧ ಈವರೆಗೂ ಯಾವುದೇ ಚರ್ಚೆ ನಡೆದಿಲ್ಲ. ಯಾವುದೇ ಆಕಾಂಕ್ಷಿಗಳೂ ನನ್ನನ್ನು ಬಂದು ಭೇಟಿ ಮಾಡಿಲ್ಲ. ಈ ಹಿಂದೆ ನಿರ್ಮಲ ಕುಮಾರ ಸುರಾನಾ ಆಗಮಿಸಿದ್ದ ವೇಳೆ ಅಪೇಕ್ಷಿತರು ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸುವಂತೆ ತಿಳಿಸಿದ್ದೆ. ಅದನ್ನು ಬಿಟ್ಟರೆ ಯಾವುದೇ ಹಂತದಲ್ಲೂ ಚರ್ಚೆ ನಡೆದಿಲ್ಲ. ಏನಿದ್ದರೂ ಇಂದು ಸಂಜೆ ನಡೆಯುವ ಸಭೆಯಲ್ಲಿ ಚರ್ಚೆಯಾಗಲಿದೆ. ಬಹುತೇಕ ಸೋಮವಾರ ಬೆಳಗ್ಗೆಯೇ ತೀರ್ಮಾನವಾಗಲಿದೆ ಎಂದು ಅಭಯ ಪಾಟೀಲ ವಿವರಿಸಿದರು.
ಮಾಧ್ಯಮಗಳಲ್ಲಿ ಬರುತ್ತಿರುವುದನ್ನು ನೋಡುತ್ತಿದ್ದೇನೆ. ಆದರೆ ಭಾಷೆ, ಜಾತಿ, ಉತ್ತರ, ದಕ್ಷಿಣ ಯಾವ ವಿಷಯವನ್ನೂ ಇಲ್ಲಿಯವರೆಗೂ ಚರ್ಚಿಸಿಲ್ಲ. ಅಪೇಕ್ಷಿತರು ಎಷ್ಟು ಜನರಿದ್ದಾರೆ ಎನ್ನುವುದು ಕೂಡ ನನಗೆ ಗೊತ್ತಿಲ್ಲ. ಯಾರೊಬ್ಬರೂ ನನ್ನನ್ನು ಬಂದು ಮೇಯರ್ ಮಾಡಿ ಎಂದು ಬೇಡಿಕೆ ಸಲ್ಲಿಸಿಲ್ಲ. ಪಕ್ಷ ಈ ಬಗ್ಗೆ ತೀರ್ಮಾನಿಸಲಿದೆ ಎಂದು ಅವರು ವಿವರಿಸಿದರು.
ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ದಿನಾಂಕ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ