LatestUncategorized

*ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ; ಜೂನ್ ತಿಂಗಳಿಂದ ಘೋಷಿಸಿದ ಯೋಜನೆ ಜನರ ಮನೆ ಬಾಗಿಲಿಗೆ; ಡಿ.ಕೆ.ಶಿವಕುಮಾರ್ ಭರವಸೆ*

ಪ್ರಗತಿವಾಹಿನಿ ಸುದ್ದಿ; ಹೊಳಲ್ಕೆರೆ: ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದೆ. ‘ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು’ ಎಂದು ಹೇಳಿದ್ದೆ. ಅದೇ ರೀತಿ ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಟಿಕೆಟ್ ಪಡೆಯಲು ಯಾರೆಲ್ಲಾ ಅರ್ಜಿ ಹಾಕಿದ್ದೀರಿ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಹಿತ ಮುಖ್ಯ ಎಂದು ತ್ಯಾಗ ಮನೋಭಾವದಿಂದ ಚುನಾವಮೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು. ಆಗ ಈ ಬಡವರು ಹಾಗೂ ಕಾರ್ಯಕರ್ತರು ಉಳಿಯಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಚಿತ್ರದುರ್ಗದ ಹೊಳಲ್ಕೆರೆಯ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಕಾರ್ಯಕರ್ತರಿಲ್ಲದಿದ್ದರೆ, ನಾಯಕರಿಲ್ಲ. ನಿಮ್ಮ ಹೊರತಾಗಿ ನಾಯಕರುಗಳು ಶೂನ್ಯ. ನಿಮ್ಮ ಅಭಿಪ್ರಾಯ ನಾವು ಆಲಿಸಬೇಕು. ನಾವು ಇಲ್ಲದಿದ್ದರೂ ಪಕ್ಷದ ಕಾರ್ಯಕ್ರಮ ಸದಾ ಚಿರಸ್ಥಾಯಿಯಾಗಿ ಉಳಿಯಲಿದೆ. ಗಾಂಧೀಜಿ ಅವರ ತ್ಯಾಗ, ನೆಹರೂ ಅವರ ನವಭಾರತ ಪರಿಕಲ್ಪನೆ, ಅಂಬೇಡ್ಕರ್ ಅವರ ಸಂವಿಧಾನ ಈಗಲೂ ಸ್ಮರಿಸುತ್ತೇವೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಕಾರ್ಯಕ್ರಮವನ್ನು ನಾವು ಸ್ಮರಿಸುತ್ತೇವೆ.

ನಮ್ಮ ಪಕ್ಷದ ಕಾರ್ಯಕ್ರಮಗಳ ದೊಡ್ಡ ಪಟ್ಟಿ ಇದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಈಗ ಅಧಿಕಾರದಲ್ಲಿದೆ. ಆದರೂ ನಿಮಗೆ ರಕ್ಷಣೆ ನೀಡುತ್ತಾ ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಒಂದು ಕಾರ್ಯಕ್ರಮ ನೀಡಿಲ್ಲ. ಅವರು ಚುನಾವಣೆಗೂ ಮುನ್ನ ಕೊಟ್ಟ ಯಾವುದೇ ಭರವಸೆ ಈಡೇರಿಸಿಲ್ಲ. ಮೋದಿ ಅವರ ಅಚ್ಛೇದಿನ ನೀಡುತ್ತೇವೆ ಎಂದರು, ನಿಮ್ಮ ಆದಾಯ ಡಡಬಲ್ ಮಾಡುತ್ತೇವೆ ಎಂದರು, ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು, ಈ ಭರವಸೆಗಳನ್ನು ಈಡೇರಿಸಿದ್ದಾರಾ? ಅವರಿಂದ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಆಗಲಿಲ್ಲ.

ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿ, ದೇವರಾಜ ಅರಸು ಅವರು ಸಿಎಂ ಆಗಿದ್ದ ಸಮಯದಲ್ಲಿ ಉಳುವವನೆ ಭೂಮಿಯ ಒಡೆಯ ಎಂದು ರೈತರಿಗೆ ಉಳುಮೆ ಮಾಡಲು ಜಮೀನು ಕೊಟ್ಟರು. ಭಾರತ ಜೋಡೋ ಯಾತ್ರೆ ಸಮಯದಲ್ಲಿ ಸಾಗುವಾಗ ಹಿರಿಯ ಮಹಿಳೆ ಬಂದು ರಾಹುಲ್ ಗಾಂಧಿ ಅವರಿಗೆ ಸೌತೇ ಕಾಯಿ ಕೊಟ್ಟು, ಇದು ನಿಮ್ಮ ಅಜ್ಜಿ ಕೊಟ್ಟ ಜಮೀನಿನಲ್ಲಿ ಬೆಳೆಯಲಾಗಿದೆ ಎಂದು ಹೇಳಿ ಕೊಟ್ಟರು. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಹೀಗೆ ಮನೆ, ವಿದ್ಯಾಭ್ಯಾಸ, ಮೀಸಲಾತಿ ಸೇರಿದಂತೆ ಸಂವಿಧಾನ ಚೌಕಟ್ಟಿನಲ್ಲಿ ನಿಮಗೆ ಶಕ್ತಿ ತುಂಬಿದೆ. ಆ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲಾಗಿದೆ.

ಇಂದು ಪ್ರಜಾಧ್ವನಿ ಯಾತ್ರೆ ಮಾಡುತ್ತಿರುವುದೇ ನಿಮ್ಮ ನೋವು, ಸಂಕಷ್ಟಕ್ಕೆ ಪರಿಹಾರ ನೀಡಲು. ಬೆಳಗಾವಿಯಿಂದ ಈ ಯಾತ್ರೆ ಆರಂಭಿಸಿದ್ದೇವೆ. ಈ ರಾಜ್ಯದ ಬದಲಾವಣೆಗಾಗಿ, ಭ್ರಷ್ಟ ಆಡಳಿತ ತೆಗೆಯಲು ನೀವು ಪಣ ತೊಡಬೇಕು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರದಲ್ಲಿ 40% ಕಮಿಷನ್ ನೀಡಬೇಕು ಎಂದು. ಇನ್ನು ಸ್ವಾಮೀಜಿಗಳು ಈ ಸರ್ಕಾರಕ್ಕೆ 30% ಕಮಿಷನ್ ನೀಡಬೇಕು ಎಂದರು. ಗೂಳಿಹಟ್ಟಿ ಶೇಖರ್ ಅವರು 22 ಸಾವಿರ ನೀರಾವರಿ ಟೆಂಡರ್ ಅಕ್ರಮದ ಬಗ್ಗೆ ಆರೋಪ ಮಾಡಿದ್ದಾರೆ. ಸರ್ಕಾರಿ ಹುದ್ದೆಗಳಿಗೆ ದರ ನಿಗದಿ ಮಾಡಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಮಾಡಲಾಗಿದೆ. ಈ ಬಗ್ಗೆ ಸದನದಲ್ಲಿ ಪ್ರಶ್ನೆ ಕೇಳಿದರೆ ಯಾವುದೇ ಅಕ್ರಮ ನಡೆದಿಲ್ಲ ಎಂದರು. ಪತ್ರಿಕಾಗೋಷ್ಠಿ ಮಾಡಿದ ನಮ್ಮ ನಾಯಕರಿಗೆ ಸಾಕ್ಷಿ ಕೊಡಿ ಎಂದರು. ಕೊನೆಗೆ ಐಪಿಎಸ್ ಅಧಿಕಾರಿ ಸೇರಿದಂತೆ ಅಧಿಕಾರಿಗಳು ಜೈಲು ಸೇರಿರುವುದೇಕೆ? ಯಾವುದೇ ಇಲಾಖೆ ತೆಗೆದುಕೊಂಡರೂ ಭ್ರಷ್ಟಾಚಾರ ನಡೆಯುತ್ತಿದೆ. ಈ ಸರ್ಕಾರ ಎಲ್ಲರ ಜೀವ ಹಿಂಡುತ್ತಿದೆ. ನಾನು ಇಂಧನ ಸಚಿವನಾಗಿದ್ದಾಗ 25 ಸಾವಿರ ಜನರಿಗೆ ಉದ್ಯೋಗ ನೀಡಿದ್ದೆ. ನನ್ನ ವಿರುದ್ಧ ಯಾರಾದರೂ ಲಂಚ ಪಡೆದಿದ್ದೇನೆ ಎಂದು ಹೇಳಿದರೆ ನಾನು ನಿವೃತ್ತಿ ಪಡೆಯುತ್ತೇನೆ.

ಇದಕ್ಕೆಲ್ಲ ಪರಿಹಾರ ಎಂದರೆ ರಾಜ್ಯದಲ್ಲಿ ಬದಲಾವಣೆ ತರಬೇಕು. ಜನ ನೆಮ್ಮದಿಯಾಗಿ ಇರಬೇಕು. ಬೆಲೆಗಳು ಗಗನಕ್ಕೇರಿದ್ದು, ಆದಾಯ ಪಾತಾಳಕ್ಕೆ ಇಳಿದಿದೆ. ನಾನು ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಪಾಪದ ಪುರಾಣ ಎಂಬ ಕಿರುಹೊತ್ತಿಗೆ ತಂದಿದ್ದೇವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾ ನೀಡಲು ಕಾಂಗ್ರೆಸ್ ಪಕ್ಷ ಕೆಲವು ಭರವಸೆ ನೀಡಿದೆ. ಚಿತ್ರದುರ್ಗದಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ, ನೀರಾವರಿ ಯೋಜನೆಗಳಿಗೆ ಭರವಸೆ ನೀಡಿದೆ. ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ಕೆಲಸ ಮಾಡಲಿದೆ.

ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಎರಡು ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ವಿದ್ಯುತ್ ಉಚಿತ, ಆಮೂಲಕ ಇನ್ನು ಮುಂದೆ ನೀವು 200 ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ಕೊಡ್ತೆವೆ. ಜತೆಗೆ 10 ಕೆಜಿ ಅಕ್ಕಿ. ನಾನು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರ್ತದೆ. ಇನ್ನು ಪ್ರತಿ ಮನೆಗೆ ನೀಡಲಾಗುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಕೆ ಮಾಡುತ್ತೇವೆ. ಮೇ ತಿಂಗಳಲ್ಲಿ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ, ಜೂನ್ ತಿಂಗಳಿಂದ ಈ ಯೋಜನೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ನಾವು ಯೋಜನೆ ಜಾರಿ ಮಾಡದಿದ್ದರೆ ನಾನು ಹಾಗೂ ಸಿದ್ದರಾಮಯ್ಯ ಅವರು ಮತ್ತೆ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ ಎಂದು ಹೇಳಿದರು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಹೀಗಾಗಿ ಕಾಂಗ್ರೆಸ್ ಪಕ್ಷದ ಹಸ್ತಕ್ಕೆ ಮತ ಹಾಕಿ ಶಕ್ತಿ ತುಂಬಬೇಕು. ಕಾಂಗ್ರೆಸ್ ಸರ್ಕಾರ ಇದ್ದರೆ ಎಲ್ಲ ವರ್ಗಗಳ ರಕ್ಷಣೆ ಮಾಡಿದಂತೆ. ಹೀಗಾಗಿ ಪಕ್ಷವನ್ನು ಗೆಲ್ಲಿಸಲು ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಮನವಿ ಮಾಡಿದರು.

*ಧ್ವನಿ ಇಲ್ಲದವರ ಸಂಕಷ್ಟ ನಿವಾರಣೆಗೆ ಬಜೆಟ್ ನಲ್ಲಿ ಕಾರ್ಯಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/kartaka-budgetcm-basavaraj-bommaireaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button